ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ನಲ್ಲಿ ಬಿದ್ದಲ್ಲೇ ಪರಿಹಾರ ಕಂಡುಕೊಂಡ ಭಾರತ ತಂಡಕ್ಕೆ 295 ರನ್‌ಗಳ ದಾಖಲೆ ಗೆಲುವು
Nov 25, 2024 02:41 PM IST
ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ನಲ್ಲಿ ಭಾರತ ತಂಡಕ್ಕೆ 295 ರನ್‌ಗಳ ಭರ್ಜರಿ ಗೆಲುವು
- India vs Australia 1st Test: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ನೇತೃತ್ವದ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್‌ಗಳ ಅಂತರದಿಂದ ದೊಡ್ಡ ಗೆಲುವು ಸಾಧಿಸಿದೆ. ಪರ್ತ್ನ ಆಪ್ಟಸ್ ಮೈದಾನದಲ್ಲಿ ಜರುಗಿದ ಹೈವೋಲ್ಟೇಜ್ ಟೆಸ್ಟ್ನಲ್ಲಿ ಜಸ್ಪ್ರೀತ್ ಬುಮ್ರಾ ನಾಯಕತ್ವದ ಭಾರತ ತಂಡ ಬೌಲಿಂಗ್-ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆ ದಾಖಲೆಯ ಗೆಲುವಿಗೆ ಸಾಕ್ಷಿಯಾಗಿದೆ.47 ವರ್ಷಗಳ ಬಳಿಕ ಆಸೀಸ್ ನೆಲದಲ್ಲಿ ದೊಡ್ಡ ಜಯ ಸಾಧಿಸಿದೆ. ಇದಕ್ಕೂ ಮುನ್ನ ಇದಕ್ಕೂ ಮುನ್ನ 1977ರಲ್ಲಿ ಮೆಲ್ಬೋರ್ನ್ ಟೆಸ್ಟ್ನಲ್ಲಿ ಭಾರತ 222 ರನ್ಗಳಿಂದ ಜಯಿಸಿತ್ತು. ಆಸೀಸ್ ತನ್ನ ತವರಿನ ಪ್ರೇಕ್ಷಕರ ಎದುರೇ ಹೀನಾಯ ಸೋಲಿನೊಂದಿಗೆ ಮುಖಭಂಗಕ್ಕೆ ಒಳಗಾಗಿದೆ. 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಡಬ್ಲ್ಯುಟಿಸಿ ಫೈನಲ್ ಆಸೆಯೂ ಜೀವಂತವಾಗಿರಿಸಿದೆ.
ಭಾರತ vs ಆಸ್ಟ್ರೇಲಿಯಾ ಸಂಕ್ಷಿಪ್ತ ಸ್ಕೋರ್
ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ - 150/10
ಮೊದಲ ಇನ್ನಿಂಗ್ಸ್ ಆಸ್ಟ್ರೇಲಿಯಾ ತಂಡ - 104/10
ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ - 487/6 ಡಿಕ್ಲೇರ್
ಎರಡನೇ ಇನ್ನಿಂಗ್ಸ್ ಆಸ್ಟ್ರೇಲಿಯಾ ತಂಡ - 238/10
ಬುಮ್ರಾ, ರಾಹುಲ್, ಜೈಸ್ವಾಲ್ ಕೊಹ್ಲಿ, ಸಿರಾಜ್ ಅಬ್ಬರ
ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೂ ಬೌಲಿಂಗ್ನಲ್ಲಿ ತಂಡವನ್ನು ರಕ್ಷಿಸಿದ್ದು ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್. ಮಾರಕ ದಾಳಿ ನಡೆಸಿ ಎದುರಾಳಿಗೆ ನಡುಕ ಹುಟ್ಟಿಸಿ 46 ರನ್‌ಗಳ ಮುನ್ನಡೆಯನ್ನೂ ತಂದುಕೊಟ್ಟರು. ಹರ್ಷಿತ್ ರಾಣಾ ಕೂಡ ಸಾಥ್ ಕೊಟ್ಟರು. ಎರಡನೇ ಇನ್ನಿಂಗ್ಸ್ನಲ್ಲೂ ಈ ಮೂವರು ಮತ್ತೆ ಮಿಂಚಿದರು. 2ನೇ ಇನ್ನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಶತಕಗಳೊಂದಿಗೆ ಆಸೀಸ್ಗೆ ಬೃಹತ್ ಗುರಿ ನೀಡಲು ಪ್ರಮುಖ ಪಾತ್ರವಹಿಸಿದರು. ರಾಹುಲ್ ಎರಡೂ ಇನ್ನಿಂಗ್ಸ್ನಲ್ಲಿ ರಕ್ಷಣಾತ್ಮಕ ಆಟದ ಮೂಲಕ ಗಮನ ಸೆಳೆದರು.
ಬಿದ್ದಲ್ಲೆ ಪರಿಹಾರ ಕಂಡುಕೊಂಡ ಭಾರತ
ಭಾರತ ತಂಡವು ಬಿದ್ದಲ್ಲೇ ಪರಿಹಾರ ಕಂಡುಕೊಂಡು ಭರ್ಜರಿ ಗೆಲುವು ಸಾಧಿಸಿತು. ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದ ಭಾರತ ಸಂಕಷ್ಟಕ್ಕೆ ಸಿಲುಕಿತು. ಆದರೆ ಬ್ಯಾಟಿಂಗ್ನಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಪುಟಿದೆದ್ದು ಬಂದ ಭಾರತ 2ನೇ ಇನ್ನಿಂಗ್ಸ್ನಲ್ಲಿ 487 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದರೊಂದಿಗೆ ಆತಿಥೇಯರ ಹೆಡೆಮುರಿ ಕಟ್ಟಲು ನೆರವಾಯಿತು. ಬಿದ್ದಲ್ಲೇ ಪರಿಹಾರ ಕಂಡುಕೊಂಡ ಭಾರತ ಗೆಲುವಿನ ನಗೆ ಬೀರಿದ್ದು, ಸರಣಿಯಲ್ಲಿ ಮುನ್ನಡೆಯನ್ನು ಪಡೆದುಕೊಂಡಿದೆ. ವಿಶೇಷ ಏನೆಂದರೆ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಫಾರ್ಮ್ ಮರಳಿದ್ದಾರೆ.
ಪರ್ತ್‌ನಲ್ಲಿ ಟೆಸ್ಟ್ ಗೆದ್ದ ಏಷ್ಯಾದ ನಾಯಕರು
ಅನಿಲ್ ಕುಂಬ್ಳೆ 2008ರಲ್ಲಿ ಪರ್ತ್ನ ಡಬ್ಲ್ಯುಎಸಿಎ ಮೈದಾನದಲ್ಲಿ ಗೆದ್ದಿದ್ದರು.
ಜಸ್ಪ್ರೀತ್ ಬುಮ್ರಾ 2024ರಲ್ಲಿ ಪರ್ತ್ನ ಆಪ್ಟಸ್ ಮೈದಾನದಲ್ಲಿ ಜಯಿಸಿದ್ದಾರೆ.
ಏಷ್ಯಾದ ಹೊರಗೆ ಭಾರತದ ಅತಿದೊಡ್ಡ ಗೆಲುವುಗಳು (ಟೆಸ್ಟ್)
ವೆಸ್ಟ್ ಇಂಡೀಸ್ ವಿರುದ್ಧ 318 ರನ್‌ಗಳ ಗೆಲುವು, ನಾರ್ತ್ ಸೌಂಡ್, 2019
ಆಸ್ಟ್ರೇಲಿಯಾ ವಿರುದ್ಧ 295 ರನ್‌ಗಳ ಜಯ, ಪರ್ತ್, 2024 (ಇಂದು)
ಇಂಗ್ಲೆಂಡ್ ವಿರುದ್ಧ 279 ರನ್‌ಗಳ ದಿಗ್ವಿಜಯ, ಹೆಡಿಂಗ್ಲಿ, 1986
ನ್ಯೂಜಿಲೆಂಡ್ ವಿರುದ್ಧ 272 ರನ್‌ಗಳ ಗೆಲುವು, ಆಕ್ಲೆಂಡ್, 1968
ವೆಸ್ಟ್ ಇಂಡೀಸ್ ವಿರುದ್ಧ 257 ರನ್‌ಗಳ ಜಯ, ಕಿಂಗ್ಸ್ಟನ್, 2019
ಆಸ್ಟ್ರೇಲಿಯಾ ವಿರುದ್ಧ ಭಾರತದ ದೊಡ್ಡ ಗೆಲುವುಗಳು
320 ರನ್‌ಗಳ ಗೆಲುವು - ಮೊಹಾಲಿ, 2008
295 ರನ್‌ಗಳ ಜಯ - ಪರ್ತ್, 2024 (47 ವರ್ಷಗಳ ನಂತರ)
222 ರನ್‌ಗಳ ಜಯ - ಮೆಲ್ಬೋರ್ನ್, 1977
179 ರನ್‌ಗಳ ಗೆಲುವು - ಚೆನ್ನೈ, 1998
172 ರನ್‌ಗಳ ಜಯ - ನಾಗ್ಪುರ, 2008