ಕಾಮೆಂಟರಿ ವೇಳೆ ಜಸ್ಪ್ರೀತ್ ಬುಮ್ರಾ ನಿಂದಿಸಿದ ಇಸಾ ಗುಹಾ; ವ್ಯಾಪಕ ಖಂಡನೆ ಬೆನ್ನಲ್ಲೇ ಕ್ಷಮೆಯಾಚನೆ, ಮೆಚ್ಚಿದ ರವಿಶಾಸ್ತ್ರಿ
Dec 16, 2024 09:57 AM IST
ಜಸ್ಪ್ರೀತ್ ಬುಮ್ರಾ ನಿಂದಿಸಿದ ಇಸಾ ಗುಹಾ; ವ್ಯಾಪಕ ಖಂಡನೆ ಬೆನ್ನಲ್ಲೇ ಕ್ಷಮೆಯಾಚನೆ,
- ಜಸ್ಪ್ರೀತ್ ಬುಮ್ರಾ ಬಗ್ಗೆ 'ಪ್ರೈಮೇಟ್' ಎಂಬ ಪದಬಳಸಿ ನಿಂದಿಸಿದ್ದ ಕಾಮೆಂಟಿಯೇಟರ್ ಇಸಾ ಗುಹಾ ಬಹಿರಂಗ ಕ್ಷಮೆಯಾಚಿಸಿದ್ದಾರೆ. ನನ್ನ ಉದ್ದೇಶ ನಿಂದಿಸುವುದು ಆಗಿರಲಿಲ್ಲ ಎಂದು ಹೇಳಿದ್ದಾರೆ. ಅವರ ಕ್ಷಮೆಯಾಚನೆ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಗುಹಾ ಅವರನ್ನು ಧೈರ್ಯಶಾಲಿ ಮಹಿಳೆ ಎಂದು ಕರೆದಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸ್ಲೆಡ್ಜಿಂಗ್ ಹೊಸ ವಿಷಯವೇನಲ್ಲ. ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರ ನಡುವೆ ಸ್ಲೆಡ್ಜಿಂಗ್, ಮೈಂಡ್ ಗೇಮ್ ಸಹಜ. ಆದರೆ, ಉಭಯ ತಂಡಗಳ ನಡುವಿನ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಇದಕ್ಕೂ ಮೀರಿದ ವಿವಾದ ಶುರುವಾಗಿದೆ. ಫಾಕ್ಸ್ ಕ್ರಿಕೆಟ್ ಪರ ಕಾಮೆಂಟರಿ ಮಾಡುತ್ತಿರುವ ಇಂಗ್ಲೆಂಡ್‌ನ ಮಾಜಿ ವೇಗಿ ಇಸಾ ಗುಹಾ ಅವರು, ಭಾರತದ ಬೆಂಕಿ ಚೆಂಡು ಜಸ್ಪ್ರೀತ್ ಬುಮ್ರಾ ಅವರ ಬಗ್ಗೆ ನಿಂದನಾತ್ಮಕ ಪದ ಬಳಕೆ ಮಾಡಿದ್ದಾರೆ. ಗಬ್ಬಾ ಟೆಸ್ಟ್‌ನ ಎರಡನೇ ದಿನದಾಟದಂದು ಮಾಜಿ ಆಟಗಾರ್ತಿ ಜನಾಂಗೀಯ ನಿಂದನೆ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ವ್ಯಾಪಕ ವಿರೋಧ ಹಾಗೂ ಟೀಕೆ ಕೇಳಿಬಂದಿದೆ. ಅದರ ಬೆನ್ನಲ್ಲೇ ಇಸಾ ಗುಹಾ ಕ್ಷಮೆ ಯಾಚಿಸಿದ್ದಾರೆ.
ಗಬ್ಬಾ ಟೆಸ್ಟ್‌ನ 2ನೇ ದಿನದಾಟದಲ್ಲಿ ಬುಮ್ರಾ ಅಬ್ಬರದಾಟವಾಡಿದರು. ಬಲಿಷ್ಠ ಆಸ್ಟ್ರೇಲಿಯಾ ತಂಡದ ಪ್ರಮುಖ 5 ವಿಕೆಟ್ ಕಬಳಿಸಿದರು. ಬುಮ್ರಾ ಬೆಂಕಿ ದಾಳಿಗೆ ಕಾಂಗರೂಗಳು ನಲುಗಿದರು. ಈ ವೇಳೆ ಕಾಮೆಂಟರಿ ಪ್ಯಾನೆಲ್‌ನಲ್ಲಿದ್ದ ಇಸಾ ಗುಹಾ, ಬುಮ್ರಾ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕ್ಷಣ ಮಾತ್ರದಲ್ಲೇ ಅವರ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳನ್ನು ಕೆರಳಿಸಿತು.
ಜಸ್ಪ್ರೀತ್ ಬುಮ್ರಾ ಅವರನ್ನು ಇಸಾ “ಎಂವಿಪಿ” ಎಂದು ಕರೆದರು. ಹಾಗೆಂದರೆ ಅತ್ಯಂತ ಮೌಲ್ಯಯುತ ಆಟಗಾರ ಎಂದಲ್ಲ. "ಮೋಸ್ಟ್ ವ್ಯಾಲ್ಯೂಯೇಬಲ್ ಪ್ರೈಮೇಟ್" ಎಂದು ಇಸಾ ಗುಹಾ ವ್ಯಂಗ್ಯವಾಡಿದ್ದಾರೆ. ಅದಕ್ಕೂ ಮುಂದುವರೆದು ಮಾತನಾಡಿ, “ಅವರು ಭಾರತದ ಪರ ಎಲ್ಲರಿಂದ ಹೊಗಳಿಸಿಕೊಳ್ಳುತ್ತಾರೆ. ಈ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರ ಮೇಲೆ ಏಕೆ ಅಷ್ಟೊಂದು ಗಮನ ಹರಿಸಲಾಗಿದೆ” ಎಂದು ಹೇಳಿಕೊಂಡರು.
ಪ್ರೈಮೇಟ್ ಎಂಬ ಪದ ಬಳಕೆಯು ನೆಟ್ಟಿಗರ ವಿರೋಧಕ್ಕೆ ಕಾರಣವಾಗಿದೆ. ಪ್ರೈಮೇಟ್ ಎಂದರೆ ವಾನರ ಜಾತಿಯ ಸಸ್ತನಿಗಳಿಗೆ ಹೇಳಲಾಗುತ್ತದೆ. ಅಂದರೆ ಪರೋಕ್ಷವಾಗಿ ಬುಮ್ರಾರನ್ನು ಪ್ರಾಣಿಗೆ ಹೋಲಿಸಿದ್ದಾರೆ. ಈ ನಿಂದಾನಾತ್ಮಕ ಪದಬಳಕೆಯು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಯಿತು ಮತ್ತು ನೆಟ್ಟಿಗರು ಇದನ್ನು 2008ರಲ್ಲಿ ಸಿಡ್ನಿ ಟೆಸ್ಟ್ ಸಮಯದಲ್ಲಿ ಹರ್ಭಜನ್ ಸಿಂಗ್ ಮತ್ತು ಆಂಡ್ರ್ಯೂ ಸೈಮಂಡ್ಸ್ ನಡುವಿನ 'ಮಂಕಿ-ಗೇಟ್' ವಿವಾದಕ್ಕೆ ಹೋಲಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಸಾ ಕುರಿತು ವ್ಯಾಪಕ ಆಕ್ರೋಶ ಕೇಳಿಬಂದ ಬೆನ್ನಲ್ಲೇ ಅವರು ಕ್ಷಮೆ ಯಾಚಿಸಿದ್ದಾರೆ.
ಕ್ಷಮೆ ಯಾಚನೆ
ಗಬ್ಬಾದಲ್ಲಿ 3ನೇ ದಿನದಾಟ ಪ್ರಾರಂಭವಾಗುವ ಮೊದಲು ಫಾಕ್ಸ್ ಕ್ರಿಕೆಟ್ ಪ್ರಸಾರದ ಬಗ್ಗೆ ಮಾತನಾಡಿದ ಗುಹಾ, “ನಿನ್ನೆ ನಾನು ವೀಕ್ಷಕವಿವರಣೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಬಹುದಾದ ಪದವನ್ನು ಬಳಸಿದ್ದೇನೆ. ನನ್ನಿಂದ ಆಗಿರುವ ಯಾವುದೇ ರೀತಿಯ ತಪ್ಪಿಗೆ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ಇನ್ನೊಬ್ಬರ ಗೌರವದ ವಿಷಯಕ್ಕೆ ಬಂದಾಗ ನನ್ನ ಮಾನದಂಡಗಳು ನಿಜಕ್ಕೂ ಉನ್ನತ ಮಟ್ಟದಲ್ಲಿರುತ್ತವೆ,” ಎಂದು ಹೇಳಿದರು.
“ನೀವು ನನ್ನ ಪೂರ್ಣ ಮಾತುಗಳನ್ನು ಕೇಳಿದರೆ, ನಾನು ಭಾರತದ ಶ್ರೇಷ್ಠ ಆಟಗಾರನನ್ನು ಸಾಕಷ್ಟು ಹೊಗಳಿದ್ದೇನೆ. ನಾನು ತುಂಬಾ ಮೆಚ್ಚುವ ವ್ಯಕ್ತಿ ಅವರು. ನಾನು ಸಮಾನತೆಯ ಪ್ರತಿಪಾದಕಿ. ಆಟದಲ್ಲಿ ಒಳಗೊಳ್ಳುವಿಕೆ ಮತ್ತು ತಿಳುವಳಿಕೆಯ ಬಗ್ಗೆ ಯೋಚಿಸುತ್ತಾ ವೃತ್ತಿಜೀವನವನ್ನು ಕಳೆದಿದ್ದೇನೆ,” ಎಂದು ಅವರು ಹೇಳಿದ್ದಾರೆ.
ಜಸ್ಪ್ರೀತ್ ಬುಮ್ರಾ ಬಗ್ಗೆ ಇಂತಹ ಹೇಳಿಕೆ ನೀಡಿದ್ದಕ್ಕಾಗಿ ತಾನು ವಿಷಾದಿಸುತ್ತೇನೆ ಎಂದು ಇಸಾ ಗುಹಾ ಹೇಳಿದ್ದಾರೆ. ಆದರೆ, ಯಾರೊಬ್ಬರ ಭಾವನೆಗಳನ್ನು ನೋಯಿಸುವ ಉದ್ದೇಶ ನನಗಿಲ್ಲ ಎಂದು ಅವರು ಹೇಳಿದರು.
ರವಿ ಶಾಸ್ತ್ರಿ ಪ್ರತಿಕ್ರಿಯೆ
ಗುಹಾ ಕ್ಷಮೆಯಾಚಿಸಿದ ಕೂಡಲೇ ಮಾತನಾಡಿದ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ, "ಪ್ರೈಮೇಟ್" ಹೇಳಿಕೆಗೆ ಕ್ಷಮೆಯಾಚಿಸುವ ಮೂಲಕ ಗುಹಾ ಅವರ "ಧೈರ್ಯಶಾಲಿ" ಕ್ರಮವನ್ನು ಶ್ಲಾಘಿಸಿದರು. “ನೀವು ಧೈರ್ಯಶಾಲಿ ಮಹಿಳೆ. ಲೈವ್ ವೇಳೆ ಕ್ಷಮೆಯಾಚಿಸಲು ಸ್ವಲ್ಪ ಧೈರ್ಯ ಬೇಕು. ತಪ್ಪು ಮಾಡುವುದು ಸಹಜ. ಏಕೆಂದರೆ ನಾವೆಲ್ಲರೂ ಮನುಷ್ಯರು. ಕೆಲವೊಮ್ಮೆ ಕೈಯಲ್ಲಿ ಮೈಕ್ ಇದ್ದಾಗ ಹೀಗೆಲ್ಲಾ ಆಗುವ ಸಾಧ್ಯತೆ ಇವೆ. ಆದರೆ ನಾವು ಮುಂದುವರಿಯೋಣ,” ಎಂದು ಶಾಸ್ತ್ರಿ ಹೇಳಿದ್ದಾರೆ.