ಯುಎಐ ವಿರುದ್ಧ 10 ವಿಕೆಟ್ ಗೆಲುವು; ಅಂಡರ್ 19 ಏಷ್ಯಾಕಪ್ ಸೆಮಿಫೈನಲ್ ಲಗ್ಗೆ ಇಟ್ಟ ಭಾರತ ಕಿರಿಯರ ತಂಡ
Dec 04, 2024 03:48 PM IST
ಯುಎಐ ವಿರುದ್ಧ 10 ವಿಕೆಟ್ ಗೆಲುವು; ಅಂಡರ್ 19 ಏಷ್ಯಾಕಪ್ ಸೆಮಿಫೈನಲ್ ಲಗ್ಗೆ ಇಟ್ಟ ಭಾರತ
- ಭಾರತ ಕಿರಿಯರ ತಂಡವು ಅಂಡರ್ 19 ಏಷ್ಯಾಕಪ್ ಸೆಮಿಫೈನಲ್ ಪ್ರವೇಶಿಸಿದೆ. ಡಿಸೆಂಬರ್ 06ರಂದು ಶಾರ್ಜಾದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಅಂಡರ್ 19 ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾರತ ಕಿರಿಯರ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಆತಿಥೇಯ ಯುಎಇ (India U19 vs United Arab Emirates U19) ತಂಡದ ವಿರುದ್ಧದ ಗ್ರೂಪ್ ಹಂತದ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿರುವ ತಂಡವು, ಡಿಸೆಂಬರ್ 6ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಅಂಡರ್ 19 ತಂಡದ ವಿರುದ್ಧ ಸೆಣಸಲಿದೆ.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಯುನೈಟೆಡ್ ಅರಬ್ ಎಮಿರೇಟ್ಸ್ ಕಿರಿಯರ ತಂಡ 44 ಓವರ್‌ಗಳವರೆಗೂ ಬ್ಯಾಟಿಂಗ್ ನಡೆಸಿ ಕೇವಲ 137 ರನ್ ಮಾತ್ರ ಗಳಿಸಿತು. ಇದಕ್ಕೆ ಪ್ರತಿಯಾಗಿ ಸ್ಫೋಟಕ ಇನ್ನಿಂಗ್ಸ್ ಆಡಿದ ಭಾರತೀಯ ಆರಂಭಿಕರು, ವಿಕೆಟ್ ನಷ್ಟವಿಲ್ಲದೆ ಚೇಸಿಂಗ್ ಪೂರ್ಣಗೊಳಿಸಿದರು. ಕೇವಲ 16.1 ಓವರ್‌ಗಳಲ್ಲಿ ಭಾರತ ತಂಡ 143 ರನ್ ಗಳಿಸಿ ಗುರಿ ತಲುಪಿತು.
ಅಬ್ಬರಿಸಿದ ಆಯುಷ್ ಮಾತ್ರೆ 51 ಎಸೆತಗಳಲ್ಲಿ 67 ರನ್ ಸಿಡಿಸಿದರು. 131.37ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದರು. ಅಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಿಡಿದ ವೈಭವ್ ಸೂರ್ಯವಂಶಿ
ಇದೇ ವೇಳೆ, ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹರಾಜಾಗಿ ಜಾಗತಿಕ ಮಟ್ಟದಲಲ್ಲಿ ಸೆನ್ಸೇಷನ್ ಸೃಷ್ಟಿಸಿರುವ 13ರ ಹರೆಯದ ವೈಭವ್ ಸೂರ್ಯವಂಶಿ, ಕೊನೆಗೂ ಅಬ್ಬರದಾಟವಾಡಿದರು. ಕೇವಲ 46 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 6 ಸ್ಫೋಟಕ ಸಿಕ್ಸರ್ ಸಹಿತ 76 ರನ್ ಪೇರಿಸಿದರು. 165.22ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಅವರು, ಸಿಕ್ಸರ್ ಮೂಲಕವೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಾಕ್ ವಿರುದ್ಧ ಸೋಲು
ಅಂಡರ್ 19 ಏಷ್ಯಾಕಪ್‌ನ ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿತ್ತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 44 ರನ್‌ಗಳ ಹೀನಾಯ ಸೋಲು ಕಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 7 ವಿಕೆಟ್ ಕಳೆದುಕೊಂಡು 281 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡ 237 ರನ್‌ಗಳಿಗೆ ಆಲೌಟ್ ಆಯ್ತು. ಆ ಬಳಿಕ ಜಪಾನ್ ವಿರುದ್ಧದ ಎರಡನೇ ಪಂದ್ಯದಲ್ಲಿ 211 ರನ್‌ಗಳ ಭರ್ಜರಿ ಜಯ ಸಾಧಿಸಿತು.
ಭಾರತ ತಂಡ
ಆಯುಷ್ ಮಾತ್ರೆ, ವೈಭವ್ ಸೂರ್ಯವಂಶಿ, ಆಂಡ್ರೆ ಸಿದ್ದಾರ್ಥ್ ಸಿ, ಮೊಹಮ್ಮದ್ ಅಮಾನ್ (ನಾಯಕ), ಕೆಪಿ ಕಾರ್ತಿಕೇಯ, ನಿಖಿಲ್ ಕುಮಾರ್, ಹರ್ವಂಶ್ ಸಿಂಗ್ (ವಿಕೆಟ್ ಕೀಪರ್), ಹಾರ್ದಿಕ್ ರಾಜ್, ಸಮರ್ಥ್ ನಾಗರಾಜ್, ಚೇತನ್ ಶರ್ಮಾ, ಯುಧಾಜಿತ್ ಗುಹಾ.
ಲೈವ್ ಸ್ಟ್ರೀಮಿಂಗ್ ವಿವರ
ಅಂಡರ್ 19 ಪುರುಷರ ಏಷ್ಯಾಕಪ್ 2024 ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು SonyLIV ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಟಿವಿ ಮೂಲಕ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ.