logo
ಕನ್ನಡ ಸುದ್ದಿ  /  ಕ್ರಿಕೆಟ್  /  Rcb Hosa Adhyaya: ಸಿಎಸ್​ಕೆ ವಿರುದ್ಧ ಪರಾಕ್ರಮ ಮೆರೆದು ಪ್ಲೇಆಫ್ ಹೆಬ್ಬಾಗಿಲು ದಾಟಲು ಪ್ರಮುಖ 6 ಕಾರಣಗಳು

RCB Hosa Adhyaya: ಸಿಎಸ್​ಕೆ ವಿರುದ್ಧ ಪರಾಕ್ರಮ ಮೆರೆದು ಪ್ಲೇಆಫ್ ಹೆಬ್ಬಾಗಿಲು ದಾಟಲು ಪ್ರಮುಖ 6 ಕಾರಣಗಳು

Prasanna Kumar P N HT Kannada

May 19, 2024 01:51 PM IST

google News

ಸಿಎಸ್​ಕೆ ವಿರುದ್ಧ ಪರಾಕ್ರಮ ಮೆರೆದು ಪ್ಲೇಆಫ್ ಹೆಬ್ಬಾಗಿಲು ದಾಟಲು ಪ್ರಮುಖ 6 ಕಾರಣಗಳು

    • RCB Hosa Adhyaya: ನಿರ್ಣಾಯಕ ಫೈಟ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರೋಚಕ 27 ರನ್​ಗಳ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್​ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಗೆಲುವಿಗೆ ಪ್ರಮುಖ ಕಾರಣಗಳೇನು? ಇಲ್ಲಿದೆ ವಿವರ.
ಸಿಎಸ್​ಕೆ ವಿರುದ್ಧ ಪರಾಕ್ರಮ ಮೆರೆದು ಪ್ಲೇಆಫ್ ಹೆಬ್ಬಾಗಿಲು ದಾಟಲು ಪ್ರಮುಖ 6 ಕಾರಣಗಳು
ಸಿಎಸ್​ಕೆ ವಿರುದ್ಧ ಪರಾಕ್ರಮ ಮೆರೆದು ಪ್ಲೇಆಫ್ ಹೆಬ್ಬಾಗಿಲು ದಾಟಲು ಪ್ರಮುಖ 6 ಕಾರಣಗಳು

ಆರಂಭಿಕ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಜಯಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಂತರ ಸತತ 6 ಗೆಲುವಿನ ವಿನೂತನ ದಾಖಲೆಯೊಂದಿಗೆ ಐಪಿಎಲ್-2024 ಪ್ಲೇಆಫ್​ಗೆ ರಾಜನಡಿಗೆಯಲ್ಲಿ ದಾಪುಗಾಲಿಟ್ಟಿದೆ. ಸಿಎಸ್​ಕೆ ತಂಡವನ್ನು ಕೆಲವೇ ದಿನಗಳ ಹಿಂದೆ ಅಸಂಭವ ಎನಿಸಿದ್ದ ಗುರಿಯನ್ನು ಸಾಕಾರಗೊಳಿಸಿದೆ.

ರೋಚಕ ಫೈಟ್​ನಲ್ಲಿ ಬದ್ಧ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಪ್ಲೇಆಫ್​​ಗೆ ಲಗ್ಗೆ ಇಟ್ಟ ಆರ್​ಸಿಬಿ, ನಿರ್ಣಾಯಕ ಪಂದ್ಯದಲ್ಲಿ 27 ರನ್​ಗಳಿಂದ ಗೆದ್ದು ಪ್ಲೇಆಫ್​​ ಹೆಬ್ಬಾಗಿಲು ದಾಟಿದೆ. ಟೂರ್ನಿಯಲ್ಲಿ ಸತತ 6 ಸೋಲುಗಳಿಂದ ಸತತ 6 ಗೆಲುವುಗಳ ತನಕ ಆರ್​​ಸಿಬಿ ಪ್ಲೇಆಫ್​ ಹಾದಿಯೇ ರೋಚಕವಾಗಿದೆ. ಚೆನ್ನೈ ವಿರುದ್ಧ ಆರ್​ಸಿಬಿ ಗೆಲುವಿನ ಕಾರಣಗಳೇನು?

ಫಾಫ್​-ಕೊಹ್ಲಿ ಉತ್ತಮ ಜೊತೆಯಾಟ

ಪಂದ್ಯ ಗೆಲ್ಲಲು ಪ್ರಮುಖ ಕಾರಣಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಜೊತೆಯಾಟವೂ ಒಂದು. ಸಿಎಸ್​ಕೆ ಬೌಲರ್​​ಗಳ ಎದುರು ದಿಟ್ಟ ಹೋರಾಟ ನಡೆಸಿದ ಕೊಹ್ಲಿ-ಫಾಫ್, ಮೊದಲ ವಿಕೆಟ್​​ಗೆ 78 ರನ್​​ ಕಲೆ ಹಾಕಿದರು. ಪವರ್​​ಪ್ಲೇನಲ್ಲಿ ಸ್ಪಿನ್ನರ್ಸ್​ ಎದುರು ತತ್ತರಿಸಿದರೂ ಪವರ್​​ಪ್ಲೆ ನಂತರ ಪುಟಿದೆದ್ದ ಕೊಹ್ಲಿ, 29 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಿತ 47 ರನ್​ ಗಳಿಸಿದರು. ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟ ಕಾರಣ ಉಳಿದ ಆಟಗಾರರು ಮಿಂಚಿನ ಬ್ಯಾಟಿಂಗ್ ನಡೆಸಲು ಸಾಧ್ಯವಾಯಿತು.

ಆರ್​ಸಿಬಿ ಬ್ಯಾಟರ್​ಗಳ ಅಬ್ಬರ

ಭರ್ಜರಿ ಆರಂಭ ಪಡೆದ ನಂತರ ಉಳಿದ ಬ್ಯಾಟರ್​​ಗಳು ಸ್ಪೋಟಕ ಬ್ಯಾಟಿಂಗ್ ನಡೆಸಲು ನೆರವಾಯಿತು. ಎನರ್ಜಿ ಬೂಸ್ಟ್​ ಸಿಕ್ಕಂತಾಯಿತು. ನಿಧಾನವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಫಾಫ್ (54) ಕೂಡ ಘರ್ಜಿಸಲು ಶುರುವಿಟ್ಟು ಅರ್ಧಶತಕ ಚಚ್ಚಿದರೆ, ರಜತ್ ಪಾಟೀದಾರ್ (41)​​ ಮತ್ತೊಮ್ಮೆ ಆಕರ್ಷಕ ಇನ್ನಿಂಗ್ಸ್​​ ಕಟ್ಟಿದರು. ಕೊನೆಯಲ್ಲಿ ಕ್ಯಾಮರೂನ್ ಗ್ರೀನ್ (38*) ಸ್ಫೋಟಕ ಬ್ಯಾಟಿಂಗ್ ಮಾಡಿದರು. ಹೊಡಿಬಡಿ ದಾಂಗುಡಿ ಆಟದ ಅಬ್ಬರಕ್ಕೆ ತಂಡದ ಮೊತ್ತಕ್ಕೆ 200ರ ಗಡಿ ದಾಟಿತು. ಇದು ಬೌಲರ್​​ಗಳ ಆತ್ಮವಿಶ್ವಾಸ ಹೆಚ್ಚಿಸಿತು.

ಫಾಫ್ ಡು ಪ್ಲೆಸಿಸ್ ಬೆಂಕಿ ಕ್ಯಾಚ್​​

ಪಂದ್ಯದ ಟರ್ನಿಂಗ್​​​ಗೆ ನಾಯಕ ಫಾಫ್ ಡು ಪ್ಲೆಸಿಸ್ ಹಿಡಿದ ಬೆಂಕಿ ಕ್ಯಾಚ್ ಕೂಡ ಒಂದು. 15ನೇ ಓವರ್​ನ ಅಂತಿಮ ಎಸೆತದಲ್ಲಿ ಮಿಚೆಲ್ ಸ್ಯಾಂಟ್ನರ್ ಫುಲ್ ಟಾಸ್ ಅನ್ನು ಮಿಡ್​ ಆಫ್​​​ನಲ್ಲಿ ಬೌಂಡರಿ ಸಿಡಿಸಲು ಯತ್ನಿಸಿದರು. ಆದರೆ ಗಾಳಿಯಲ್ಲಿ ಹೋಗುತ್ತಿದ್ದ ಚೆಂಡನ್ನು ಚಿರತೆಯಂತೆ ಹಾರಿ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದರು. ಇದು ತಂಡಕ್ಕೆ ತಿರುವು ಕೊಟ್ಟ ಕ್ಯಾಚ್​ ಎಂದರೆ ತಪ್ಪಾಗಲ್ಲ. ಹಾಗೆಯೇ ಅಜಿಂಕ್ಯ ರಹಾನೆ ಅವರ ಅತ್ಯಂತ ಕಷ್ಟದ ಕ್ಯಾಚ್​ ಗೇಮ್​ ಚೇಂಜಿಂಗ್​ ಕ್ಯಾಚ್​. 

ಯಶ್ ದಯಾಳ್ ಅದ್ಭುತ ಬೌಲಿಂಗ್

ಯಶ್​ ದಯಾಳ್​ರನ್ನು ಆರ್​ಸಿಬಿ ಖರೀದಿಸಿದಾಗ, ಹೀಯಾಳಿಸಿದ್ದರು. 2023ರ ಐಪಿಎಲ್​ನಲ್ಲಿ ಕೊನೆಯ ಓವರ್​​​ನಲ್ಲಿ ಸತತ 5 ಸಿಕ್ಸರ್​ ಚಚ್ಚಿಸಿಕೊಂಡು ಟ್ರೋಲ್ ಆಗಿದ್ದ ದಯಾಳ್, ಈ ವರ್ಷ ಆರ್​ಸಿಬಿ ಪರ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಸಿಎಸ್​ಕೆ ವಿರುದ್ಧವೂ ಸೊಗಸಾದ ಬೌಲಿಂಗ್​ ನಡೆಸಿ ಡ್ಯಾರಿಲ್ ಮಿಚೆಲ್ ಮತ್ತು ಎಂಎಸ್ ಧೋನಿ ಔಟ್ ಮಾಡಿ ತಂಡಕ್ಕೆ ಪಂದ್ಯಕ್ಕೆ ತಿರುವು ಕೊಟ್ಟರು. ಕೊನೆಯ ಓವರ್​ನಲ್ಲಿ 17 ರನ್​ಗಳನ್ನು ಡಿಫೆಂಡ್ ಮಾಡಿಕೊಂಡರು. ಆ ಮೂಲಕ ಹೀರೋ ಆದರು.

ರಚಿನ್ ರವೀಂದ್ರ ರನೌಟ್

ಸಿಎಸ್​ಕೆ ಬ್ಯಾಟರ್​ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸುತ್ತಿದ್ದರೂ ಆಧಾರವಾಗುತ್ತಿದ್ದ ರಚಿನ್ ರವೀಂದ್ರ ರನೌಟ್ ಆಗಿದ್ದು, ಪಂದ್ಯ ಹೆಚ್ಚು ಟರ್ನ್​ ಆಗಲು ಕಾರಣವಾಯಿತು. 37 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 61 ರನ್ ​ಗಳಿಸಿ ಔಟಾದರು. ಶಿವಂ ದುಬೆ ಅವರು ರಚಿನ್ ರನ್ ಬೇಡವೆಂದರೂ ನೋಡದೆಯೇ ರನ್​​ಗಾಗಿ ಓಡಿದ್ದರಿಂದ ರಚಿನ್​ ವಿಕೆಟ್​ ಕಳೆದುಕೊಂಡರು. ಋತುರಾಜ್ ಗಾಯಕ್ವಾಡ್, ಡ್ಯಾರಿಲ್ ಮಿಚೆಲ್, ಶಿವಂ ದುಬೆ ಬೇಗನೇ ಔಟಾಗಿದ್ದು ಕೂಡ ಆರ್​ಸಿಬಿ ಗೆಲುವಿಗೆ ಪ್ರಮುಖ ಕಾರಣವಾಯಿತು.

ಅಭಿಮಾನಿಗಳೇ ದೇವರು

ತಂಡದ ಪ್ರದರ್ಶನವು ಒಂದು ತಕ್ಕಡಿಯಲ್ಲಿ ತೂಗಿದರೆ, ಅಭಿಮಾನಿಗಳ ಬೆಂಬಲ ಬೆಂಬಲ ಮತ್ತೊಂದು ತಕ್ಕಡಿಯಲ್ಲಿ ತೂಗಿದೆ ಅಂದರೆ ತಪ್ಪಾಗಲ್ಲ. ದೊಡ್ಮನೆ ಕುಟುಂಬ ಹೇಳಿದಂತೆ ಆರ್​ಸಿಬಿ ಪಾಲಿಗೆ ಅಭಿಮಾನಿಗಳೇ ನಮ್ಮನೆ ದೇವರು. ಸತತ ಸೋಲುಗಳಿಂದ ಉಸಿರುಗಟ್ಟಿದ್ದ ಆರ್​ಸಿಬಿ ತಂಡವನ್ನು ಕೈಬಿಡದ ಅಭಿಮಾನಿಗಳು, ಸಿಎಸ್​ಕೆ ವಿರುದ್ಧ ತಮ್ಮ ಜೋಶ್ ಅನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಈ ಪ್ರೀತಿಯಿಂದಲೇ ಪ್ಲೇಆಫ್ ಪ್ರವೇಶಿಸಲು ಕಾರಣವಾಯಿತು.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ