ಯುಜ್ವೇಂದ್ರ ಚಹಲ್-ಮೊಹಮ್ಮದ್ ಸಿರಾಜ್ ಔಟ್; ಟಿ20 ವಿಶ್ವಕಪ್‌ಗೆ ಭಾರತ ಬಲಿಷ್ಠ ಸಂಭವನೀಯ ಪ್ಲೇಯಿಂಗ್ XI
May 01, 2024 08:03 AM IST
ಯುಜ್ವೇಂದ್ರ ಚಹಲ್-ಮೊಹಮ್ಮದ್ ಸಿರಾಜ್ ಔಟ್; ಟಿ20 ವಿಶ್ವಕಪ್‌ಗೆ ಭಾರತ ಬಲಿಷ್ಠ ಸಂಭವನೀಯ ಪ್ಲೇಯಿಂಗ್ XI
- India Playing XI : ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆದರೆ ಟೂರ್ನಿಯಲ್ಲಿ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದನ್ನು ಈ ಮುಂದೆ ನೋಡೋಣ.
ಭಾರತ ತಂಡವು (Team India) 11 ವರ್ಷಗಳ ನಂತರ ಮೊದಲ ಐಸಿಸಿ ಟ್ರೋಫಿಗಾಗಿ (ICC Trophy) ತಮ್ಮ ಅನ್ವೇಷಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಜೂನ್ 5ರಂದು ಐರ್ಲೆಂಡ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ. ಬಹುನಿರೀಕ್ಷಿತ ಟೂರ್ನಿಗೆ 15 ಸದಸ್ಯರ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಲಾಗಿದೆ. ನಾಲ್ವರು ಮೀಸಲು ಆಟಗಾರರನ್ನೂ ಪ್ರಕಟಿಸಲಾಗಿದೆ. ಹಾರ್ದಿಕ್ ಪಾಂಡ್ಯ (Hardik Pandya), ರಿಷಭ್ ಪಂತ್ (Rishabh Pant) ಸೇರಿದಂತೆ ದೊಡ್ಡ ಹೆಸರುಗಳೇ ತಂಡಕ್ಕೆ ಹಿಂತಿರುಗಿವೆ. ಆದರೆ ರಿಂಕು ಸಿಂಗ್ ಮತ್ತು ಶುಭ್ಮನ್ ಗಿಲ್ ಅವರನ್ನು ಹೊರಗಿಡಲಾಗಿದೆ. ಟೂರ್ನಿಯಲ್ಲಿ ಆಡುವ 11ರ ಬಳಗ ಹೇಗಿರಲಿದೆ ಎಂಬುದನ್ನು ನೋಡೋಣ.
ನಾಯಕನಾಗಿರುವ ರೋಹಿತ್ ಶರ್ಮಾ ಆರಂಭಿಕರಾಗಿ ಬ್ಯಾಟಿಂಗ್ ಮಾಡುವುದು ಖಚಿತ. ಯಶಸ್ವಿ ಜೈಸ್ವಾಲ್ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು 4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನಡೆಸಲಿದ್ದಾರೆ. ಒಂದು ವೇಳೆ ವಿರಾಟ್ ಓಪನರ್ ಆದರೆ, ಹೆಚ್ಚುವರಿ ಬ್ಯಾಟರ್ನನ್ನು ಕಣಕ್ಕಿಳಿಸಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿದೆ. ಆಗ ಯಶಸ್ವಿ ಜೈಸ್ವಾಲ್ ಬೆಂಚ್ ಬಿಸಿ ಮಾಡಬೇಕಾಗುತ್ತದೆ. ಆದರೆ ಇದು ಅಸಾಧ್ಯ ಎಂದೇ ಹೇಳಬಹುದು. ಕೊಹ್ಲಿ ಐಪಿಎಲ್ನಲ್ಲಿ ಆರಂಭಿಕರಾಗಿ ಮಿಂಚಿದರೂ ಅವರು 3ನೇ ಕ್ರಮಾಂಕದಲ್ಲೇ ಬ್ಯಾಟ್ ಬೀಸಲಿದ್ದಾರೆ.
ವೆಸ್ಟ್ ಇಂಡೀಸ್ ಮತ್ತು ಯುಎಸ್ಎಗಳಲ್ಲಿ ನಿಧಾನಗತಿಯ ಪಿಚ್ಗಳಾಗಿದ್ದು, ವಿರಾಟ್ ಕೊಹ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವುದು ಖಚಿತ. ಆ ಬಳಿಕ ಸ್ಪಿನ್ನರ್ಗಳ ವಿರುದ್ಧ ಅಬ್ಬರಿಸುವ ಶಿವಂ ದುಬೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ವಿಕೆಟ್ ಕೀಪರ್ ಸ್ಥಾನಕ್ಕಾಗಿ ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ನಡುವೆ ಪೈಪೋಟಿ ಇದೆ. ಆದರೆ, ರಿಷಭ್ ಮೊದಲ ಆದ್ಯತೆ ಎಂದು ಹೇಳಲಾಗುತ್ತಿದೆ. ಪಂತ್ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವುದು ಖಚಿತ. ಇಬ್ಬರು ಸಹ ಐಪಿಎಲ್ನಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ.
ಆ ಬಳಿಕ ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡಲಿದ್ದಾರೆ. ಅವರು 5ನೇ ಬೌಲರ್ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ. ರವೀಂದ್ರ ಜಡೇಜಾ ಭಾರತದ ಪ್ರಾಥಮಿಕವಾಗಿ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಆಗಿರಲಿದ್ದಾರೆ. ನಂ.8 ರಲ್ಲಿ ಜಡೇಜಾ ಬ್ಯಾಟಿಂಗ್ ಮಾಡಲಿದ್ದಾರೆ. ಇದು ಬ್ಯಾಟಿಂಗ್ ಡೆಪ್ತ್ ಹೇಗಿದೆ ಎಂಬುದನ್ನು ತೋರಿಸುತ್ತದೆ. ಬಳಿಕ ಕುಲ್ದೀಪ್ ಯಾದವ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿರಲಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರು ಅರ್ಷದೀಪ್ ಸಿಂಗ್ ಅವರೊಂದಿಗೆ ವೇಗಿ ದಾಳಿಯನ್ನು ಮುನ್ನಡೆಸಲಿದ್ದಾರೆ. ಆದರೆ ರೋಹಿತ್ ಶರ್ಮಾ ಯಾವ ರೀತಿಯ ಪ್ಲೇಯಿಂಗ್ XI ಕಟ್ಟಲಿದ್ದಾರೆ ಎಂಬುದನ್ನು ಕಾದುನೋಡೋಣ.
ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಸಂಭಾವ್ಯ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್.
ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.