ಶಿಖರ್ ಧವನ್ ಕಂಬ್ಯಾಕ್? ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI
May 01, 2024 07:03 AM IST
ಶಿಖರ್ ಧವನ್ ಕಂಬ್ಯಾಕ್? ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI
- CSK vs PBKS Playing XI: 17ನೇ ಆವೃತ್ತಿಯ ಐಪಿಎಲ್ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ ನೋಡಿ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಹೈವೋಲ್ಟೇಜ್ ಸಮರಕ್ಕೆ ಚೆನ್ನೈನ ಚಿದಂಬರಂ ಮೈದಾನವು ಆತಿಥ್ಯ ವಹಿಸಲಿದೆ. ಟೂರ್ನಿಯಲ್ಲಿ ಆರು ಸೋಲು ಕಂಡರೂ ಪ್ಲೇಆಫ್ ರೇಸ್ನಲ್ಲಿರುವ ಪಂಜಾಬ್, ಈ ಗೆಲುವಿನೊಂದಿಗೆ ತನ್ನ ಆಸೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಜ್ಜಾಗಿದೆ. ಮತ್ತೊಂದೆಡೆ ಸಿಎಸ್‌ಕೆ ತವರಿನ ಲಾಭ ಪಡೆದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಡಲು ಸಿದ್ಧವಾಗಿದೆ.
ಉಭಯ ತಂಡಗಳು 28 ಬಾರಿ ಮುಖಾಮುಖಿಯಾಗಿವೆ. ಆದರೆ, ಸಿಎಸ್‌ಕೆ ಹೆಚ್ಚು ಪಂದ್ಯ ಗೆದ್ದಿದೆೆ. ಉಳಿದಂತೆ ಚೆನ್ನೈ 15, ಪಿಬಿಕೆಎಸ್ 13 ಜಯ ಸಾಧಿಸಿದೆ. ಗೆಲುವಿನ ಸಂಖ್ಯೆ ವಿಸ್ತಿರಿಸಿಕೊಳ್ಳಲು ಸಜ್ಜಾಗಿರುವ ಉಭಯ ತಂಡಗಳಿಂದ ಹೈವೋಲ್ಟೇಜ್ ಕದನವನ್ನೇ ನಿರೀಕ್ಷಿಸಲಾಗಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ 262 ರನ್ಗಳ ವಿಶ್ವದಾಖಲೆ ಚೇಸಿಂಗ್ ನಡೆಸಿದ ಪಂಜಾಬ್, ಪ್ಲೇಆಫ್ ಪ್ರವೇಶಿಸಲು ಎಲ್ಲಾ ಪಂದ್ಯಗಳನ್ನು ಗೆಲ್ಲಲು ಎದುರು ನೋಡುತ್ತಿದೆ. ಹಾಗಾಗಿ, ಆಕ್ರಮಣಕಾರಿ ಆಟಕ್ಕೆ ಕೈ ಹಾಕುತ್ತಿದೆ. ಆದರೆ ಧೋನಿ ಚಾಣಾಕ್ಷತೆ ಮತ್ತು ಸಿಎಸ್‌ಕೆ ಬೌಲರ್ಗಳ ಎದುರು ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಶಿಖರ್ ಧವನ್ ಕಂಬ್ಯಾಕ್?
ಗಾಯದ ಸಮಸ್ಯೆಯಿಂದ ಹಲವು ಪಂದ್ಯಗಳಿಗೆ ಅಲಭ್ಯರಾಗಿರುವ ಶಿಖರ್ ಧವನ್, ಸಿಎಸ್‌ಕೆ ಕದನಕ್ಕೆ ಫಿಟ್ ಆಗಿದ್ದಾರೆ ಎಂದು ಹೇಳಲಾಗಿದೆ. ಕಳೆದ ವಾರ ಪಿಬಿಕೆಎಸ್ ಸ್ಪಿನ್ ಬೌಲಿಂಗ್ ಕೋಚ್ ಸುನಿಲ್ ಜೋಶಿ ಸಿಎಸ್‌ಕೆ ಪಂದ್ಯಕ್ಕೆ ಲಭ್ಯರಾಗಬಹುದು ಎಂದು ವಿಶ್ವಾಸ ನೀಡಿದ್ದರು. ಆದರೆ, ಫಿಟ್ ಆಗಿರುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಅವರು ಫಿಟ್ ಇಲ್ಲದಿದ್ದರೆ, ಸ್ಯಾಮ್ ಕರನ್ ಅವರೇ ಮತ್ತೆ ತಂಡವನ್ನು ಮುನ್ನಡೆಸಲಿದ್ದಾರೆ.
ಮುಸ್ತಾಫಿಜುರ್ಗೆ ಇದೇ ಕೊನೆಯ ಪಂದ್ಯ
ಇದು ಮುಸ್ತಾಫಿಜುರ್ ಅವರ ಕೊನೆಯ ಪಂದ್ಯವಾಗಿದೆ. ಮೇ 3 ರಿಂದ ಜಿಂಬಾಬ್ವೆ ವಿರುದ್ಧ ಬಾಂಗ್ಲಾದೇಶದ ಟಿ20ಐ ಸರಣಿ ಆರಂಭವಾಗುವ ಕಾರಣ ತವರಿಗೆ ಮರಳಲು ಸಿದ್ಧವಾಗಿದ್ದಾರೆ. ಅಜಿಂಕ್ಯ ರಹಾನೆ ಫಾರ್ಮ್ನಲ್ಲಿ ಇಲ್ಲದಿರುವುದು ಚೆನ್ನೈ ತಲೆನೋವು ಹೆಚ್ಚಿಸಿದೆ. ಶಿವಂ ದುಬೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಲಿದ್ದಾರೆ. ಆದರೆ, ಯಾವುದೇ ಬದಲಾವಣೆಯನ್ನು ನಿರೀಕ್ಷಿಸಲಾಗಿಲ್ಲ.
ಸಿಎಸ್‌ಕೆ ಸಂಭಾವ್ಯ ಪ್ಲೇಯಿಂಗ್ XI
ಅಜಿಂಕ್ಯ ರಹಾನೆ, ಋತುರಾಜ್ ಗಾಯಕ್ವಾಡ್ (ನಾಯಕ), ಡ್ಯಾರಿಲ್ ಮಿಚೆಲ್, ಮೊಯೀನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮುಸ್ತಫಿಜುರ್ ರೆಹಮಾನ್, ಮತೀಶಾ ಪತಿರಾಣ.
ಪಿಬಿಕೆಎಸ್ ಸಂಭಾವ್ಯ ಪ್ಲೇಯಿಂಗ್ XI
ಪ್ರಭುಸಿಮ್ರಾನ್ ಸಿಂಗ್, ಜಾನಿ ಬೈರ್ಸ್ಟೋ, ರಿಲಿ ರೋಸೋ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕರನ್ (ನಾಯಕ), ಶಶಾಂಕ್ ಸಿಂಗ್, ಆಶುತೋಷ್ ಶರ್ಮಾ, ಹರ್ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ಅರ್ಷದೀಪ್ ಸಿಂಗ್.
ಅಂಕಪಟ್ಟಿಯಲ್ಲಿ ಸ್ಥಾನ
ಚೆನ್ನೈ ಸೂಪರ್ ಕಿಂಗ್ಸ್: 4ನೇ ಸ್ಥಾನ (9 ಪಂದ್ಯ, 5 ಗೆಲುವು, 4 ಸೋಲು, 10 ಅಂಕ, ನೆಟ್ ರನ್ ರೇಟ್ +0.810)
ಪಂಜಾಬ್ ಕಿಂಗ್ಸ್: 8ನೇ ಸ್ಥಾನ (9 ಪಂದ್ಯ, 3 ಗೆಲುವು, 6 ಸೋಲು, 6 ಅಂಕ, ನೆಟ್ ರನ್ ರೇಟ್ -0.187)
ಅಂಕಿ-ಅಂಶಗಳು
- 250 ಐಪಿಎಲ್ ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು ಎಂಎಸ್ ಧೋನಿಗೆ ಮೂರು ಸಿಕ್ಸರ್‌ಗಳ ಅಗತ್ಯವಿದೆ. 100 ಸಿಕ್ಸರ್‌ಗಳನ್ನು ತಲುಪಲು ಶಿವಂ ದುಬೆಗೆ ಇನ್ನೂ ಒಂದು ಸಿಕ್ಸರ್ ಅಗತ್ಯವಿದೆ.
- ಪಿಬಿಕೆಎಸ್ 2021 ರಿಂದ ಸಿಎಸ್‌ಕೆ ವಿರುದ್ಧ 4-1 ಹೆಡ್-ಟು-ಹೆಡ್ ದಾಖಲೆ ಹೊಂದಿದೆ. ಕೊನೆಯ ಐದು ಪಂದ್ಯಗಳಲ್ಲಿ ಸಿಎಸ್‌ಕೆ ವಿರುದ್ಧ ಪಂಜಾಬ್ 4 ಸೋತಿದೆ.
- ಋತುರಾಜ್ ಗಾಯಕ್ವಾಡ್ ವಿರುದ್ಧ ಕಗಿಸೊ ರಬಾಡ ಮತ್ತೆ ಮಿಂಚಿನ ದಾಳಿ ನಡೆಸಲು ಸಿದ್ಧರಾಗಿದ್ದಾರೆ. ರಬಾಡ ಎದುರು 48 ಎಸೆತಗಳಲ್ಲಿ 56 ರನ್ ಗಳಿಸಿರುವ ಗಾಯಕ್ವಾಡ್ 3 ಬಾರಿ ಔಟಾಗಿದ್ದಾರೆ.
- ಇತ್ತೀಚೆಗೆ ಡೆತ್ ಓವರ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಹರ್ಷಲ್ ಪಟೇಲ್, ಧೋನಿ ವಿರುದ್ಧ ಪ್ರಭಾವಶಾಲಿ ದಾಖಲೆ ಹೊಂದಿದ್ದಾರೆ. 32 ಎಸೆತಗಳಲ್ಲಿ 25 ರನ್ ಬಾರಿಸಿ 1 ಸಲ ಔಟಾಗಿದ್ದಾರೆ.
ಪಿಚ್ ವರದಿ
ಚೆಪಾಕ್‌ನಲ್ಲಿ ನಡೆದ ಕೊನೆಯ ನಾಲ್ಕು ಪಂದ್ಯಗಳಲ್ಲಿ ಬ್ಯಾಟರ್‌ಗಳು ಮಿಂಚಿದ್ದಾರೆ. ತಂಡಗಳು ನಿಯಮಿತವಾಗಿ 200 ರನ್ಗಳ ಮಾರ್ಕ್ ಮುಟ್ಟುತ್ತಿವೆ. ಮೊದಲು ಬ್ಯಾಟಿಂಗ್ ಮತ್ತು ಚೇಸಿಂಗ್ ಮಾಡಿದ ತಂಡಗಳು ತಲಾ ಎರಡು ಪಂದ್ಯಗಳನ್ನು ಗೆದ್ದಿವೆ. ಇಷ್ಟಿದ್ದರೂ ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ಕೆ ಮಾಡುವ ಆದ್ಯತೆಯೇ ಹೆಚ್ಚಿದೆ. ಪ್ರಸ್ತುತ ಚೆನ್ನೈನಲ್ಲಿ ಬಿಸಿ ಗಾಳಿಯ ವಾತಾವರಣ ಇದೆ. ತಾಪಮಾನವು ಭಾರೀ ಆರ್ದ್ರತೆಯೊಂದಿಗೆ 37 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆ ಇದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.