logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್‌ನಲ್ಲಿ ಸಚಿನ್, ರೋಹಿತ್ ಮಾತ್ರ ಮಾಡಿದ್ದ ವಿಶೇಷ ದಾಖಲೆ ನಿರ್ಮಿಸಿದ ಡೇವಿಡ್ ವಾರ್ನರ್

ವಿಶ್ವಕಪ್‌ನಲ್ಲಿ ಸಚಿನ್, ರೋಹಿತ್ ಮಾತ್ರ ಮಾಡಿದ್ದ ವಿಶೇಷ ದಾಖಲೆ ನಿರ್ಮಿಸಿದ ಡೇವಿಡ್ ವಾರ್ನರ್

Jayaraj HT Kannada

Nov 17, 2023 08:29 AM IST

google News

ರೋಹಿತ್ ಮತ್ತು ಸಚಿನ್ ದಾಖಲೆ ಪುನರ್ನಿರ್ಮಿಸಿದ ವಾರ್ನರ್

    • David Warner: ವಿಶ್ವಕಪ್‌ನಲ್ಲಿ ಡೇವಿಡ್ ವಾರ್ನರ್ ವಿಶೇಷ ಸಾಧನೆ ಮಾಡಿದ  ಆಸ್ಟ್ರೇಲಿಯಾದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ಮಾತ್ರ ಈ ದಾಖಲೆ ನಿರ್ಮಿಸಿದ್ದರು.
ರೋಹಿತ್ ಮತ್ತು ಸಚಿನ್ ದಾಖಲೆ ಪುನರ್ನಿರ್ಮಿಸಿದ ವಾರ್ನರ್
ರೋಹಿತ್ ಮತ್ತು ಸಚಿನ್ ದಾಖಲೆ ಪುನರ್ನಿರ್ಮಿಸಿದ ವಾರ್ನರ್ (AP-PTI-ANI)

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಗುರುವಾರ ನಡೆದ ಏಕದಿನ ವಿಶ್ವಕಪ್ 2023ರ (ICC ODI World Cup 2023) ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ (South Africa vs Australia) ರೋಚಕ ಜಯ ಸಾಧಿಸಿತು. ಪಂದ್ಯದಲ್ಲಿ ಆಸೀಸ್‌ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ವಿಶೇಷ ದಾಖಲೆ ಮಾಡಿದ್ದಾರೆ. ಕಾಂಗರೂ ಬಳಗದ ರನ್ ಮಷಿನ್, ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಸ್ಟ್ರೇಲಿಯಾ ಆಟಗಾರನಾಗಿದ್ದಾರೆ.

ದಕ್ಷಿಣ ಆಫ್ರಿಕಾ ನೀಡಿದ 213 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಆಸೀಸ್‌ ಪರ, ಆರಂಭಿಕರಾದ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಮೊದಲ ವಿಕೆಟ್‌ಗೆ 60 ರನ್‌ಗಳ ಜೊತೆಯಾಟ ನೀಡಿದರು. ಆರಂಭದಲ್ಲೇ ಅಬ್ಬರಿಸಿದ ವಾರ್ನರ್‌, ನಾಲ್ಕು ಸ್ಫೋಟಕ ಸಿಕ್ಸರ್‌ ಮತ್ತು ಬೌಂಡರಿ ಸಹಿತ 29 ರನ್‌ ಗಳಿಸಿದರು. ಆದರೆ, ಆರನೇ ಓವರ್‌ನಲ್ಲಿ ಔಟಾದರು.

ಪ್ರಸಕ್ತ ವಿಶ್ವಕಪ್‌ ಆವೃತ್ತಿಯಲ್ಲಿ ವಾರ್ನರ್ ಆಡಿರುವ 10 ಪಂದ್ಯಗಳಲ್ಲಿ ಒಟ್ಟು 528 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ಎರಡು ಅರ್ಧ ಶತಕಗಳು ಕೂಡಾ ಸಿಡಿದಿವೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅವರು ಆರನೇ ಸ್ಥಾನದಲ್ಲಿದ್ದಾರೆ.

ಇತಿಹಾಸ ನಿರ್ಮಿಸಿದ ವಾರ್ನರ್‌

ಬರೋಬ್ಬರಿ 161.11 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ವಾರ್ನರ್, ಕೇವಲ 18 ಎಸೆತಗಳಲ್ಲಿ 29 ರನ್ ಸಿಡಿಸಿದರು. ಆ ಮೂಲಕ ಆಸೀಸ್ ಆರಂಭಿಕ ಆಟಗಾರ ವಿಶ್ವಕಪ್‌ ಟೂರ್ನಿಯೊಂದರಲ್ಲಿ ಎರಡನೇ ಬಾರಿಗೆ 500 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾದರು. 2019ರ ವಿಶ್ವಕಪ್‌ ಆವೃತ್ತಿಯಲ್ಲಿ ಮೊದಲ ಬಾರಿಗೆ 500ರ ಗಡಿ ತಲುಪಿದ್ದ ಅವರು, ಈ ಬಾರಿ ಮತ್ತೆ ಅದೇ ಸಾಧನೆಯನ್ನು ಪುನರಾವರ್ತಿಸಿದರು. ಆಸೀಸ್‌ ಪರ ವಾರ್ನರ್ ಹೊರತುಪಡಿಸಿ, ರಿಕಿ ಪಾಂಟಿಂಗ್ (2007), ಮ್ಯಾಥ್ಯೂ ಹೇಡನ್ (2007) ಮತ್ತು ಆರನ್ ಫಿಂಚ್ (2019) ಈ ಹಿಂದೆ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 500ಕ್ಕೂ ರನ್ ಕಲೆ ಹಾಕಿದ್ದರು.

ರೋಹಿತ್ ಮತ್ತು ಸಚಿನ್ ಬಳಿಕ ಈ ಸಾಧನೆ ಮಾಡಿದ ಮೂರನೇ ಆಟಗಾರ

ಎರಡು ವಿಶ್ವಕಪ್‌ಗಳಲ್ಲಿ 500ಕ್ಕಿಂತ ಅಧಿಕ ರನ್ ಗಳಿಸಿದ ಮೂರನೇ ಬ್ಯಾಟರ್ ವಾರ್ನರ್. ಇದಕ್ಕೂ ಮುನ್ನ ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ ಅವರು 1996 ಮತ್ತು 2003ರ ವಿಶ್ವಕಪ್‌ ಟೂರ್ನಿಯಲ್ಲಿ ಈ ಅದ್ಭುತ ಸಾಧನೆ ಮಾಡಿದ್ದರು. ಆ ಬಳಿಕ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಎರಡು ವಿಶ್ವಕಪ್ ಅಭಿಯಾನಗಳಲ್ಲಿ 500ಕ್ಕಿಂತ ಹೆಚ್ಚು ರನ್ ಪೇರಿಸಿದ್ದಾರೆ. ಆರಂಭಿಕ ಆಟಗಾರ 2019 ಮತ್ತು 2023ರ ಪ್ರಸಕ್ತ ವಿಶ್ವಕಪ್‌ ಆವೃತ್ತಿಯಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ