ಎಲ್ಲಿಸ್ ಪೆರ್ರಿ ಸೌಂದರ್ಯದ ಜೊತೆಗೆ ಶ್ರೀಮಂತಿಕೆಯಲ್ಲೂ ನಂಬರ್ 1; ಆರ್‌ಸಿಬಿ ಸ್ಟಾರ್ ಎಷ್ಟು ಕೋಟಿಗೆ ಒಡತಿ?
Mar 22, 2024 04:02 PM IST
ಎಲ್ಲಿಸ್ ಪೆರ್ರಿ ಸೌಂದರ್ಯದ ಜೊತೆಗೆ ಶ್ರೀಮಂತಿಕೆಯಲ್ಲೂ ನಂಬರ್ 1
- Ellyse Perry : ಮಹಿಳಾ ಕ್ರಿಕೆಟ್ ಲೋಕದ ಅತ್ಯಂತ ಸುಂದರ ಆಟಗಾರ್ತಿಯರ ಪೈಕಿ ಒಬ್ಬರಾಗಿರುವ ಎಲ್ಲಿಸ್ ಪೆರ್ರಿ ಅವರು ಶ್ರೀಮಂತಿಕೆಯಲ್ಲೂ ನಂಬರ್ 1 ಆಗಿದ್ದಾರೆ. ಹಾಗಾದರೆ ಆರ್‌ಸಿಬಿ ಸ್ಟಾರ್ ಎಷ್ಟು ಕೋಟಿಗೆ ಒಡತಿ.
ಆಸ್ಟ್ರೇಲಿಯಾ ತಂಡದ ವಿಶ್ವ ಶ್ರೇಷ್ಠ ಆಟಗಾರ್ತಿ ಎಲ್ಲಿಸ್ ಪೆರ್ರಿ (Ellyse Perry) ಕ್ರಿಕೆಟ್ ಲೋಕದ ಅತ್ಯಂತ ಸುಂದರ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರು. ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟ ಎಲ್ಲಿಸ್ ಪೆರ್ರಿ, ತನ್ನ ಸೌಂದರ್ಯದೊಂದಿಗೆ ಮಾತ್ರವಲ್ಲದೆ, ಶ್ರೀಮಂತಿಕೆಯಲ್ಲೂ ನಂಬರ್ 1 ಆಟಗಾರ್ತಿಯಾಗಿದ್ದಾರೆ.
ಎಲ್ಲಿಸ್ ಪೆರ್ರಿ ಆಸ್ಟ್ರೇಲಿಯಾ ಮತ್ತು ವಿಶ್ವದ ಅತ್ಯಂತ ಶ್ರೀಮಂತ ಮಹಿಳಾ ಕ್ರಿಕೆಟಿಗರಾಗಿದ್ದಾರೆ. 2023ರ ವರದಿ ಪ್ರಕಾರ ಸ್ಟಾರ್ ಆಲ್ರೌಂಡರ್ ನಿವ್ವಳ ಮೌಲ್ಯವು 14 ಮಿಲಿಯನ್ ಡಾಲರ್ ಆಗಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 83 ಕೋಟಿಗೂ ಅಧಿಕ. ವಾರ್ಷಿಕ 0.13 ಮಿಲಿಯನ್ ಡಾಲರ್ಗೂ ಅಧಿಕ ಹಣವನ್ನು ಸಂಪಾದನೆ ಮಾಡುತ್ತಾರೆ. ಡಬ್ಲ್ಯುಪಿಎಲ್ನಲ್ಲಿ ಅವರಿಗೆ ಒಂದು ಸೀಸನ್ನಲ್ಲೇ 1.75 ಕೋಟಿ ಕೈ ಸೇರುತ್ತದೆ ಎಂಬುದು ಗಮನಾರ್ಹ.
2023ರ ವರದಿಯಂತೆ 83 ಕೋಟಿ ನಿವ್ವಳ ಮೌಲ್ಯ ಹೊಂದಿರುವ ಪೆರ್ರಿ, ಇದೀಗ ಆಸ್ತಿ ಮೌಲ್ಯ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ. ಕ್ರಿಕೆಟ್ ಆಸ್ಟ್ರೇಲಿಯಾದಿಂದ (Cricket Australia) ಪೆರಿಯ ವಾರ್ಷಿಕ ವೇತನವು ಸುಮಾರು 200,000 ಡಾಲರ್ ವೇತನ ಅಂದರೆ 1.66 ಕೋಟಿಗೂ ಅಧಿಕ ಮೊತ್ತ ಸಿಗಲಿದೆ. ಮಹಿಳೆಯರ ಬಿಗ್ ಬ್ಯಾಷ್ ಲೀಗ್ನ (WBBL) ಸಿಡ್ನಿ ಸಿಕ್ಸರ್ಸ್ ತಂಡದೊಂದಿಗೆ ಒಪ್ಪಂದದಿಂದ ಸುಮಾರು 100,000 ಡಾಲರ್ ಅಂದರೆ 83 ಲಕ್ಷ ಪಡೆಯುತ್ತಾರೆ.
ಹಾಗೆಯೇ ಇಂಗ್ಲೆಂಡ್ ಆಯೋಜಿಸುತ್ತಿರುವ ದಿ ಹಂಡ್ರೆಡ್ ಲೀಗ್ನಿಂದ 31,000 ಡಾಲರ್ ಅಂದರೆ 25 ಲಕ್ಷವನ್ನು ವೇತನ ಪಡೆಯುತ್ತಾರೆ. ಇನ್ನು ಭಾರತದಲ್ಲಿ ನಡೆಯುವ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಪೆರ್ರಿ ವಾರ್ಷಿಕ 1.75 ಕೋಟಿ ವೇತನ ಪಡೆಯುತ್ತಾರೆ. ಇದಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡುವ ಪಂದ್ಯದ ಶುಲ್ಕ, ಪಂದ್ಯಶ್ರೇಷ್ಠ ಪ್ರಶಸ್ತಿಗಳಿಂದ ಸಂಪಾದಿಸುತ್ತಾರೆ.
ಕ್ರಿಕೆಟ್ ಹೊರತಾಗಿ ಆಸೀಸ್ ಆಲ್ರೌಂಡರ್ ಅಡಿಡಾಸ್, ಕಾಮನ್‌ವೆಲ್ತ್ ಬ್ಯಾಂಕ್, ವೀಟ್-ಬಿಕ್ಸ್, ಪ್ರೈಸ್‌ಲೈನ್ ಸೇರಿದಂತೆ ಜನಪ್ರಿಯ ಬ್ರ್ಯಾಂಡ್ಗಳಿಗೂ ಪ್ರಚಾರ ಮಾಡುತ್ತಾರೆ. ಅದರಿಂದಲೂ ಕೋಟಿಗಟ್ಟಲೆ ದುಡ್ಡು ಗಳಿಸುತ್ತಾರೆ. ಇನ್ಸ್ಟಾಗ್ರಾಂನಲ್ಲೂ 1 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದು, ಬ್ರ್ಯಾಂಡ್ ಪ್ರಚಾರ ಮಾಡಲು 50 ಲಕ್ಷದಿಂದ 1 ಕೋಟಿವರೆಗೆ ಶುಲ್ಕ ವಿಧಿಸುತ್ತಾರೆ ಎಂದು ವರದಿಯಾಗಿದೆ.
ಫುಟ್ಬಾಲ್ ಕೂಡ ಆಡಿದ್ದಾರೆ ಪೆರ್ರಿ
ಪೆರ್ರಿ ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು. ಫಿಫಾ ಟೂರ್ನಿಯಲ್ಲೂ ಗೋಲು ಗಳಿಸಿದ ಕೀರ್ತಿ ಅವರಿಗಿದೆ. 16ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾಕ್ಕೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಹಾಗೂ ಐಸಿಸಿ ಮತ್ತು ಫಿಫಾ ಈವೆಂಟ್ಗಳಲ್ಲಿ ಕಾಣಿಸಿಕೊಂಡ ಏಕೈಕ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.
ಪೆರ್ರಿ ಅವರು ಐಷಾರಾಮಿ ಕಾರು ಹೊಂದಿಲ್ಲ. ಅವರ ಗ್ಯಾರೇಜ್‌ನಲ್ಲಿ ಟೊಯೋಟಾ ಮತ್ತು ಲೆಕ್ಸಸ್ ಕಾರುಗಳಿವೆ. 2015ರಲ್ಲಿ ಮ್ಯಾಟ್ ಟೂಮುವಾರನ್ನು ಮದುವೆಯಾದ ಪೆರ್ರಿ 2020ರಲ್ಲಿ ಇಬ್ಬರಿಗೂ ಡಿವೋರ್ಸ್ ಆದರು. ತನ್ನ ಬಾಯ್ಫ್ರೆಂಡ್ ಬಂಗಲೆಯಲ್ಲಿ ವಾಸಿಸುತ್ತಿದ್ದ ಪೆರ್ರಿ 2021ರಲ್ಲಿ 2.1 ಮಿಲಿಯನ್‌ಗೆ ವಿಲ್ಲಾವನ್ನು ಮಾರಾಟ ಮಾಡಿದ್ದರು.
ಇತ್ತೀಚಿನ ವರದಿಗಳ ಪ್ರಕಾರ, ಪೆರ್ರಿ ಅವರು ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ನಲ್ಲಿ (AFL) ಆಡುವ ಆಸ್ಟ್ರೇಲಿಯನ್ ರೂಲ್ಸ್ ಫುಟ್ಬಾಲ್ ಆಟಗಾರ ನ್ಯಾಟ್ ಫೈಫ್ ಅವರನ್ನು ಪ್ರೀತಿಸುತ್ತಿದ್ದರು ಎಂದು ವದಂತಿಗಳಿದ್ದವು. ಪಂದ್ಯದ ಸಂದರ್ಭದಲ್ಲಿ ಫೈಫ್ ಅವರು ಪೆರ್ರಿಯನ್ನು ಬೆಂಬಲಿಸಿದ್ದರು. ಹಾಥಾರ್ನ್ ವಿರುದ್ಧ ಫೈಫ್‌ನ 200ನೇ ಪಂದ್ಯದ ನಂತರ ಪೆರ್ರಿ ಡಾಕರ್ಸ್ ಚೇಂಜ್-ರೂಮ್‌ಗೆ ಭೇಟಿ ನೀಡಿದ್ದರು. ನಂತರ ರಗ್ಬಿ ಆಟಗಾರ ಮ್ಯಾಟ್ ಟೂಮುವಾ ಅವರನ್ನು 2015ರಲ್ಲಿ ವಿವಾಹವಾದರು. 2020ರಲ್ಲಿ ವಿಚ್ಛೇದನ ಪಡೆದರು.