VIDEO: ಗಂಡಿನಿಂದ ಮುದ್ದಾದ ಹೆಣ್ಣಾದ ಭಾರತದ ದಿಗ್ಗಜ ಕ್ರಿಕೆಟಿಗನ ಮಗ; ಆರ್ಸಿಬಿ ಮಾಜಿ ಕೋಚ್ ಪುತ್ರ ಆರ್ಯನ್ ಈಗ ಅನಾಯಾ!
Nov 11, 2024 05:12 PM IST
ಗಂಡಿನಿಂದ ಮುದ್ದಾದ ಹೆಣ್ಣಾದ ಭಾರತದ ದಿಗ್ಗಜ ಕ್ರಿಕೆಟಿಗನ ಮಗ; ಆರ್ಸಿಬಿ ಮಾಜಿ ಕೋಚ್ ಪುತ್ರ ಆರ್ಯನ್ ಈಗ ಅನಾಯಾ!
- Sanjay Bangar: ಭಾರತ ತಂಡದ ಮಾಜಿ ಆಲ್‌ರೌಂಡರ್ ಹಾಗೂ ಆರ್ಸಿಬಿ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರ ಪುತ್ರ ಆರ್ಯನ್ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದು, ಹೆಣ್ಣಾಗಿ ಪರಿವರ್ತನೆ ಆಗಿದ್ದಾರೆ. ಇದರ ಫೋಟೋಸ್ ಮತ್ತು ವಿಡಿಯೋಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಭಾರತದ ಮಾಜಿ ಕ್ರಿಕೆಟಿಗ ಮತ್ತು ಆರ್ಸಿಬಿ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ (Sanjay Bangar) ಅವರ ಪುತ್ರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿದ್ದಾರೆ. ಅದಕ್ಕೆ ಕಾರಣ ಅವನಿಂದ ಅವಳಾಗಿದ್ದು! ಮೈದಾನದ ಒಳಗೆ ಮತ್ತು ಹೊರಗೆ ಅದ್ಭುತವಾದ ಕ್ರೀಡಾ ಸ್ಪೂರ್ತಿಗೆ ಹೆಸರುವಾಸಿಯಾಗಿದ್ದ ರೈಲ್ವೇಸ್ ಆಲ್‌ರೌಂಡರ್ ಹಾಗೂ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಆಗಿದ್ದ ಸಂಜಯ್ ಬಂಗಾರ್ ಪುತ್ರ ಆರ್ಯನ್ ಈಗ ಅನಾಯಾ ಆಗಿ ಪರಿವರ್ತನೆಯಾಗಿದ್ದಾರೆ!
ಆರ್ಯನ್ ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಹಂಚಿಕೊಂಡ ಪೋಸ್ಟ್ ಇದೀಗ ಭಾರಿ ಸದ್ದು ಮಾಡುತ್ತಿದೆ. ಇದರಲ್ಲಿ ನಾನು ’ಅವಳಾಗಿ’ ಬದಲಾಗಿದ್ದೇನೆ ಎಂದು ಹೇಳಿದ್ದಾರೆ. ಆರ್ಯನ್ ಎನ್ನುವ ಹೆಸರನ್ನು ಅನಾಯಾ ಬಂಗಾರ್ ಎಂದು ಬದಲಿಸಿಕೊಂಡಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಲಿಂಗ ಬದಲಾವಣೆಗೆ ತಾನು ಪಟ್ಟ ಕಷ್ಟವನ್ನು ವಿವರಿಸಿದ್ದಾರೆ. ಲಿಂಗ ಬದಲಾವಣೆಗೆ 10 ತಿಂಗಳ ಹಾರ್ಮೋನ್ ರೂಪಾಂತರ ಕಾರ್ಯವಿಧಾನ ಹಾಗೂ ಪರಿಣಾಮಗಳನ್ನು ಹೇಳಿಕೊಂಡಿದ್ದಾರೆ. ಲಿಂಗ ಬದಲಾವಣೆಯ ಹಿಂದಿನ ದಿನ ಫೋಟೋ ಹಂಚಿಕೊಂಡಿದ್ದು, ವೈರಲ್ ಆಗಿದೆ. ವೈರಲ್ ಆದ ಬಳಿಕ ಪೋಸ್ಟ್ ಅಳಿಸಿದ್ದಾರೆ.
ನನ್ನ ದಿಟ್ಟ ನಿರ್ಧಾರ ಇದು ಎಂದ ಅಯಾನಾ
23 ವರ್ಷದ ಅನಾಯಾ, ಇಂಗ್ಲೆಂಡ್ನ ಮ್ಯಾಂಚೆಸ್ಟರ್‌ನಲ್ಲಿ ವಾಸ ಮಾಡುತ್ತಿದ್ದಾರೆ. ಅನಾಯಾ ಹಂಚಿಕೊಂಡ ಪೋಸ್ಟ್ನಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರೊಂದಿಗೆ ತೆಗೆಸಿಕೊಂಡ ಫೋಟೋಗಳೂ ಇವೆ. ವೃತ್ತಿಪರವಾಗಿ ಕ್ರಿಕೆಟ್ ಆಡುವ ನನ್ನ ಕನಸನ್ನು ತ್ಯಾಗ ಮಾಡುತ್ತಿದ್ದೇನೆ. ಇದು ಸ್ಥಿತಿಸ್ಥಾಪಕತ್ವ ಮತ್ತು ಅಚಲ ಸಮರ್ಪಣೆಯಿಂದ ತುಂಬಿದ ಪ್ರಯಾಣವಾಗಿದೆ. ಮೈದಾನದಲ್ಲಿ ಮುಂಜಾನೆಯಿಂದ ಇತರರ ಅನುಮಾನಗಳು ಮತ್ತು ತೀರ್ಪುಗಳನ್ನು ಎದುರಿಸುವವರೆಗೆ, ಪ್ರತಿ ಹೆಜ್ಜೆಯು ಶಕ್ತಿಯನ್ನು ಬಯಸುತ್ತದೆ ಎಂದು ಅನಾಯಾ ವಿಡಿಯೋ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಆದರೆ, ಆಟದ ಹೊರತಾಗಿಯೂ ನಾನು ಇನ್ನೊಂದು ಸುಂದರವಾದ ಪ್ರಯಾಣ ಹೊಂದಿದ್ದೇನೆ. ಅದನ್ನು ನಾನೇ ತೆಗೆದುಕೊಂಡ ನಿರ್ಧಾರವಾಗಿದೆ. ಇದಕ್ಕಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಆತ್ಮಸಾಕ್ಷಿಯನ್ನು ಒಪ್ಪಿಸುವುದು ಕಠಿಣವಾದ ಕೆಲಸವಾಗಿತ್ತು. ಹೊಂದಿಕೊಳ್ಳುವುದು ಸಹ ಸುಲಭವಾಗಿರಲಿಲ್ಲ. ನಾನು ಯಾವುದೇ ಮಟ್ಟದಲ್ಲಿ ಅಥವಾ ವರ್ಗದಲ್ಲಿ ಪ್ರೀತಿಸುವ ಕ್ರೀಡೆಯ ಭಾಗವಾಗಲು ಹೆಮ್ಮೆಪಡುತ್ತೇನೆ. ಆತ್ಮಸಾಕ್ಷಿ ಗೆಲ್ಲುವುದು ಎಲ್ಲಕ್ಕಿಂತ ದೊಡ್ಡ ವಿಜಯವಾಗಿದೆ ಎಂದು ಅವರು ಹೇಳಿದ್ದಾರೆ.
ಕ್ಲಬ್ ಕ್ರಿಕೆಟ್ ಆಡಿದ್ದ ಆರ್ಯನ್
ಸಂಜಯ್ ಬಂಗಾರ್ ಅವರಂತೆಯೇ ಅನಾಯಾ ಕೂಡ ಸ್ಥಳೀಯ ಕ್ಲಬ್ ಕ್ರಿಕೆಟ್‌ನಲ್ಲಿ ಇಸ್ಲಾಂ ಜಿಮ್ಖಾನಾವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ, ಎಡಗೈ ಬ್ಯಾಟರ್ ಲೀಸೆಸ್ಟರ್‌ಶೈರ್‌ನ ಹಿಂಕ್ಲೆ ಕ್ರಿಕೆಟ್ ಕ್ಲಬ್‌ಗಾಗಿಯೂ ಆಡಿದ್ದಾರೆ. ಆದಾಗ್ಯೂ, ನವೆಂಬರ್ 2023ರಲ್ಲಿ, ಇಂಟರ್‌ನ್ಯಾಶನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟ್ರಾನ್ಸ್‌ಜೆಂಡರ್ ಅಥ್ಲೀಟ್‌ಗಳನ್ನು ಮಹಿಳಾ ಕ್ರಿಕೆಟ್‌ನಲ್ಲಿ ಭಾಗವಹಿಸಲು ಅನುಮತಿಸುವುದನ್ನು ನಿಷೇಧಿಸಿದೆ. ಇನ್ಸ್ಟಾಗ್ರಾಂನಲ್ಲಿ 16 ಪೋಸ್ಟ್ ಹಾಕಿರುವ ಅನಾಯಾ ಅವರನ್ನು 6 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ.
ಬಾಲ್ಯದಿಂದಲೇ ಕ್ರಿಕೆಟ್ ತರಬೇತಿ ಪಡೆದಿದ್ದ ಇವರು, ದೇಹದಲ್ಲಿ ಆಗುತ್ತಿದ್ದ ಪರಿವರ್ತನೆಯಿಂದ ಆಪರೇಷನ್ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರು. ಆದರೆ ನನ್ನ ನಿರ್ಧಾರ ತೃಪ್ತಿಯಾಗಿದೆ ಎಂದು ಅನಾಯಾ ಬಂಗಾರ್ ಹೇಳಿದ್ದಾರೆ. ತಂದೆ ಸಂಜಯ್ ಬಂಗಾರ್ ತನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ 12 ಟೆಸ್ಟ್, 15 ಏಕದಿನ ಮತ್ತು 165 ಫಸ್ಟ್ ಕ್ಲಾಸ್ ಕ್ರಿಕೆಟ್ ಆಡಿದ್ದಾರೆ. ಸದ್ಯ ಐಪಿಎಲ್ನಲ್ಲಿ ಪಂಜಾಬ್ ಕೀಂಗ್ಸ್ ಫ್ರಾಂಚೈಸಿಗೆ ಕ್ರಿಕೆಟ್ ಅಭಿವೃದ್ದಿ ಮುಖ್ಯಸ್ಥರಾಗಿದ್ದಾರೆ. ಇದಕ್ಕೂ ಮುನ್ನ ಆರ್ಸಿಬಿ ಬ್ಯಾಟಿಂಗ್ ಕೋಚ್ ಆಗಿದ್ದರು.