logo
ಕನ್ನಡ ಸುದ್ದಿ  /  ಕ್ರಿಕೆಟ್  /  Explainer: ಭಾರತದ ಸತತ ಮೂರನೇ ಡಬ್ಲ್ಯುಟಿಸಿ ಫೈನಲ್ ಕನಸಿಗೆ ಅಡ್ಡಿಯಾಗುತ್ತಾ ಬೆಂಗಳೂರು ಮಳೆ? ಹೀಗಿದೆ ಲೆಕ್ಕಾಚಾರ

Explainer: ಭಾರತದ ಸತತ ಮೂರನೇ ಡಬ್ಲ್ಯುಟಿಸಿ ಫೈನಲ್ ಕನಸಿಗೆ ಅಡ್ಡಿಯಾಗುತ್ತಾ ಬೆಂಗಳೂರು ಮಳೆ? ಹೀಗಿದೆ ಲೆಕ್ಕಾಚಾರ

Jayaraj HT Kannada

Oct 16, 2024 04:31 PM IST

google News

ಭಾರತದ ಸತತ ಮೂರನೇ ಡಬ್ಲ್ಯುಟಿಸಿ ಫೈನಲ್ ಕನಸಿಗೆ ಅಡ್ಡಿಯಾಗುತ್ತಾ ಬೆಂಗಳೂರು ಮಳೆ?

    • India WTC Final: ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ ಪಂದ್ಯ ನಡೆಯುವುದು ಅನುಮಾನವಾಗಿದೆ. ಒಂದು ವೇಳೆ ಪಂದ್ಯ ರದ್ದಾದರೆ, ಭಾರತದ ಡಬ್ಲ್ಯುಟಿಸಿ ಫೈನಲ್‌ ಹಾದಿ ತುಸು ದುರ್ಗಮವಾಗಲಿದೆ.
ಭಾರತದ ಸತತ ಮೂರನೇ ಡಬ್ಲ್ಯುಟಿಸಿ ಫೈನಲ್ ಕನಸಿಗೆ ಅಡ್ಡಿಯಾಗುತ್ತಾ ಬೆಂಗಳೂರು ಮಳೆ?
ಭಾರತದ ಸತತ ಮೂರನೇ ಡಬ್ಲ್ಯುಟಿಸಿ ಫೈನಲ್ ಕನಸಿಗೆ ಅಡ್ಡಿಯಾಗುತ್ತಾ ಬೆಂಗಳೂರು ಮಳೆ? (AFP)

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ ಪಂದ್ಯ ನಡೆಯುವುದೇ ಅನುಮಾನ ಎಂಬಂತಾಗಿದೆ. ಪಂದ್ಯದ ಮೊದಲ ದಿನದಾಟವು ಮಳೆಯಿಂದಾಗಿ ಸಂಪೂರ್ಣ ರದ್ದುಗೊಂಡಿದೆ. ನಗರದಲ್ಲಿ ಈ ವಾರವಿಡೀ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಪಂದ್ಯದ ಮುಂದಿನ ನಾಲ್ಕು ದಿನಗಳ ಆಟವು ನಡೆಯುತ್ತೋ ಇಲ್ಲವೋ ಎಂಬ ಕುರಿತು ಖಚಿತವಾಗಿ ಹೇಳಲಾಗದು. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಆದರೆ ಕೊನೆಯ ಎರಡು ದಿನಗಳಲ್ಲಿ ಚಾಣಾಕ್ಷ ಆಟವಾಡಿದ ಭಾರತ ಗೆಲ್ಲುವಲ್ಲಿ ಯಶಸ್ವಿಯಾಯ್ತು. ಇದೀಗ ಬೆಂಗಳೂರಿನ ಮಳೆ ಭಾರತಕ್ಕೆ ನೆರವಾಗದಿದ್ದರೆ, ಡಬ್ಲ್ಯುಟಿಸಿ ಫೈನಲ್‌ ಹಾದಿ ತುಸು ದುರ್ಗಮವಾಗಲಿದೆ.

ಇದು 2024/25ರಲ್ಲಿ ಭಾರತದ ಟೆಸ್ಟ್ ಋತುವಿನ ಎರಡನೇ ಹಂತವಾಗಿದೆ. 2025ರಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೆ ಅರ್ಹತೆ ಪಡೆಯಲ ಭಾರತ ಇನ್ನೂ ಕೆಲವು ಪಂದ್ಯಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಸದ್ಯ ಭಾರತ ತಂಡವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ, ಫೈನಲ್‌ನಲ್ಲಿ ಸ್ಥಾನ ಪಡೆಯುವುದು ಇನ್ನೂ ಖಚಿತವಾಗಿಲ್ಲ ಎಂಬುವುದು ಗಮನಾರ್ಹ.

ಡಬ್ಲ್ಯುಟಿಸಿ ಅಂಕಪಟ್ಟಿ ಹೀಗಿದೆ

ಭಾರತವು ಈವರೆಗೆ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 74.24 ಶೇಕಡಾವಾರು ಅಂಕ (ಪಿಸಿಟಿ) ಹೊಂದಿದೆ. 12 ಟೆಸ್ಟ್ ಪಂದ್ಯಗಳಲ್ಲಿ 62.50 ಶೇಕಡಾ ಅಂಕ ಗಳಿಸಿರುವ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು, ಭಾರತದೊಂದಿಗೆ ಡಬ್ಲ್ಯುಟಿಸಿ ಫೈನಲ್ ತಲುಪುವ ಫೇವರೆಟ್ ತಂಡ ಎನಿಸಿಕೊಂಡಿದೆ. ಅತ್ತ ಶ್ರೀಲಂಕಾ 9 ಟೆಸ್ಟ್ ನಂತರ 55.56 ಪಿಸಿಟಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 45.59 ಪಾಯಿಂಟ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 38.89 ಪಿಸಿಟಿಯೊಂದಿಗೆ ಅಗ್ರ ಐದನೇ ಸ್ಥಾನದಲ್ಲಿದೆ.

ಭಾರತವು ಇಲ್ಲಿಯವರೆಗೆ ನಡೆದ ಎರಡೂ ಬಾರಿಯ ಡಬ್ಲ್ಯುಟಿಸಿ ಫೈನಲ್‌ ಪಂದ್ಯಗಳನ್ನು ಆಡಿದ ಏಕೈಕ ತಂಡ. ಆದರೂ ಟೀಮ್‌ ಇಂಡಿಯಾ ಪ್ರಶಸ್ತಿ ಗೆದ್ದಿಲ್ಲ. 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತು 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು. ಈ ಬಾರಿ ಭಾರತ ತಂಡಕ್ಕೆ ಇತರ ತಂಡಗಳ ಸೋಲು ಗೆಲುವುಗಳು ಕೂಡಾ ಫೈನಲ್‌ ಹಾದಿಗೆ ನೆರವಾಗಬಹುದು. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಪ್ರಬಲ ಸರಣಿ ಗೆಲುವು ಸಾಧಿಸಿ ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ, ಅಗ್ರ ಎರಡು ಸ್ಥಾನಗಳಲ್ಲಿರುವ ತಂಡಗಳಿಗೆ ಬೆದರಿಕೆಯಾಗಿದೆ. ಆದರೆ, ಲಂಕಾ ತಂಡವು ಈ ಡಬ್ಲ್ಯುಟಿಸಿ ಋತುವಿನಲ್ಲಿ ಮುಂದೆ ಏಕೈಕ ಸರಣಿಯಲ್ಲಿ ಆಡಲಿದೆ. ಅದು ದಕ್ಷಿಣ ಆಫ್ರಿಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳು. ಅತ್ತ ತವರಿನಲ್ಲಿ ಗೆಲುವು ಕಾಣಲು ಹೆಣಗಾಡುತ್ತಿರುವ ಪಾಕಿಸ್ತಾನ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದೆ. ಹೀಗಾಗಿ ಆಂಗ್ಲರು ಹಾಗೂ ಲಂಕಾ ತಂಡ ಭಾರತಕ್ಕೆ ಅಪಾಯಕಾರಿಯಾಗಿವೆ.

ಕಿವೀಸ್‌ ವಿರುದ್ಧದ ಸರಣಿ ನಿರ್ಣಾಯಕ

ಭಾರತವು ಎದುರಾಳಿ ತಂಡಗಳ ಫಲಿತಾಂಶಗಳನ್ನು ಲೆಕ್ಕಿಸದೆ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಿದೆ. ಪ್ರಸ್ತುತ ಚಕ್ರದಲ್ಲಿ ಭಾರತವು ಮುಂದೆ 8 ಟೆಸ್ಟ್‌ ಆಡಲಿದೆ. ಇದರಲ್ಲಿ ಕಿವಿಸ್‌ ವಿರುದ್ಧದ ಮೊದಲ ಟೆಸ್ಟ್‌ ಕೂಡಾ ಸೇರಿದೆ. ಈ ಎಂಟರಲ್ಲಿ ಐದು ಪಂದ್ಯಗಳಲ್ಲಿ ಗೆದ್ದರೆ ಭಾರತವು ಫೈನಲ್‌ ತಲುಪಲಿದೆ. ಹೀಗಾಗಿ ಕಿವೀಸ್‌ ವಿರುದ್ಧದ ಮೂರು ಪಂದ್ಯಗಳ ಸರಣಿ ಭಾರತಕ್ಕೆ ನಿರ್ಣಾಯಕ ಎನಿಸಿದೆ.

ಕಿವೀಸ್‌ ತಂಡ ಇತ್ತೀಚೆಗೆ ಕಳಪೆ ಫಾರ್ಮ್‌ನಿಂದ ಕಂಗಾಲಾಗಿದ್ದು, ನ್ಯೂಜಿಲೆಂಡ್ ವಿರುದ್ಧ ಕ್ಲೀನ್‌ ಸ್ವೀಪ್‌ ಸಾಧಿಸುವ ಲೆಕ್ಕಾಚಾರ ಭಾರತದ್ದು.‌ ಹೀಗಾಗಿ ಭಾರತಕ್ಕೆ ಎಲ್ಲಾ ಮೂರು ಪಂದ್ಯಗಳೂ ಮುಖ್ಯ. ಸದ್ಯ ಮಳೆಯಿಂದಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ ರದ್ದಾಗುವ ಭೀತಿಯಿದೆ. ಒಂದು ವೇಳೆ ಪಂದ್ಯ ರದ್ದು ಅಥವಾ ಡ್ರಾಗೊಂಡರೆ, ಭಾರತಕ್ಕೆ ಭಾರಿ ನಷ್ಟವಾಗಲಿದೆ. ಮೊದಲ ಪಂದ್ಯದ ಬಳಿಕ ನಡೆಯುವ ಎರಡು ಪಂದ್ಯಗಳನ್ನು ಗೆದ್ದರೂ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐದು ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕಠಿಣ ಶ್ರಮ ಹಾಕಬೇಕಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ