ಬೆಂಗಳೂರಿನಲ್ಲಿ ನಿರಂತರ ಮಳೆ; ಭಾರತ vs ನ್ಯೂಜಿಲೆಂಡ್ ಟೆಸ್ಟ್ ಮೊದಲ ದಿನದಾಟ ರದ್ದು, ಎರಡನೇ ದಿನ ಆಟದ ಅವಧಿಯಲ್ಲಿ ಬದಲಾವಣೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಬೆಂಗಳೂರಿನಲ್ಲಿ ನಿರಂತರ ಮಳೆ; ಭಾರತ Vs ನ್ಯೂಜಿಲೆಂಡ್ ಟೆಸ್ಟ್ ಮೊದಲ ದಿನದಾಟ ರದ್ದು, ಎರಡನೇ ದಿನ ಆಟದ ಅವಧಿಯಲ್ಲಿ ಬದಲಾವಣೆ

ಬೆಂಗಳೂರಿನಲ್ಲಿ ನಿರಂತರ ಮಳೆ; ಭಾರತ vs ನ್ಯೂಜಿಲೆಂಡ್ ಟೆಸ್ಟ್ ಮೊದಲ ದಿನದಾಟ ರದ್ದು, ಎರಡನೇ ದಿನ ಆಟದ ಅವಧಿಯಲ್ಲಿ ಬದಲಾವಣೆ

ಬೆಂಗಳೂರಿನಲ್ಲಿ ಬಿಡದೆ ಮಳೆ ಸುರಿಯತ್ತಿದ್ದು, ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವಿನ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟ ರದ್ದುಪಡಿಸಲಾಗಿದೆ. ಎರಡನೇ ದಿನದಾಟಕ್ಕೂ ಮಳೆ ಅಡ್ಡಿಪಡಿಸುವ ಮುನ್ಸೂಚನೆ ಇದೆ. ಆದರೂ, ಗುರುವಾರದ ಆಟದ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ನಿರಂತರ ಮಳೆ; ಭಾರತ vs ನ್ಯೂಜಿಲೆಂಡ್ ಟೆಸ್ಟ್ ಮೊದಲ ದಿನದಾಟ ರದ್ದು
ಬೆಂಗಳೂರಿನಲ್ಲಿ ನಿರಂತರ ಮಳೆ; ಭಾರತ vs ನ್ಯೂಜಿಲೆಂಡ್ ಟೆಸ್ಟ್ ಮೊದಲ ದಿನದಾಟ ರದ್ದು (PTI)

ಉದ್ಯಾನ ನಗರಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಭಾರತ ಮತ್ತು ನ್ಯೂಜಿಲೆಂಡ್ (India vs New Zealand 1st Test) ನಡುವಿನ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟಕ್ಕೂ ಅಡ್ಡಿಯಾಗಿದೆ. ಭಾರಿ ಮಳೆಯ ಮುನ್ಸೂಚನೆ ಇದ್ದ ಕಾರಣದಿಂದಾಗಿ, ಪಂದ್ಯ ಆರಂಭವಾಗುವುದು ವಿಳಂಬವಾಗುವ ಸಾಧ್ಯತೆ ಮೊದಲೇ ಇತ್ತು. ಅದರಂತೆಯೇ ಬಿಟ್ಟುಬಿಡದೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದ ಕಾರಣದಿಂದಾಗಿ ಮೊದಲ ದಿನದಾಟವನ್ನು ರದ್ದುಪಡಿಸಲಾಗಿದೆ. ಕನಿಷ್ಠ ಪಕ್ಷ ಟಾಸ್‌ ಪ್ರಕ್ರಿಯೆಗೂ ಮಳೆ ಅವಕಾಶ ನೀಡಲಿಲ್ಲ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಳಗ್ಗೆ ಪಂದ್ಯ ಆರಂಭಕ್ಕೂ ಮುನ್ನವೇ ಸಿಲಿಕಾನ್‌ ಸಿಟಿಯಲ್ಲಿ ಮಳೆಯಾಗುತ್ತಿತ್ತು. ಜೋರಾಗಿ ಸುರಿಯದಿದ್ದರೂ, ಸಣ್ಣ ಪ್ರಮಾಣದ ಮಳೆ ಪಂದ್ಯ ಆರಂಭವನ್ನು ವಿಳಂಬಗೊಳಿಸಿತು. ಸುಸಜ್ಜಿತ ಡ್ರೈನೇಜ್‌ ವ್ಯವಸ್ಥೆ ಹೊಂದಿರುವ ಎಂ ಚಿನ್ನಸ್ವಾಮಿ ಮೈದಾನದ ಪಿಚ್‌ಗಳಿಗೆ ಕವರ್‌ ಹಾಕಲಾಗಿತ್ತು. ನಡುವೆ ಒಂದೆರಡು ಬಾರಿ ಮಳೆ ನಿಂತು ಟಾಸ್‌ ಪ್ರಕ್ರಿಯೆ ಆರಂಭವಾಗುವ ಸೂಚನೆ ನೀಡಿತಾದರೂ, ಮತ್ತೆ ಮಳೆ ಬಂದು ಅಭಿಮಾನಿಗಳ ನಿರೀಕ್ಷೆ ಹುಸಿಯಾಯ್ತು. ನಗರದಲ್ಲಿ ಭಾರಿ ಮಳೆಯ ಮುನ್ಸೂಚನೆಯಿಂದ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಆದರೂ, ಅಭಿಮಾನಿಗಳು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದರು. ಕೊನೆಗೂ ಪಂದ್ಯ ಆರಂಭವಾಗಲಿಲ್ಲ.

ಮಳೆ ನಿಲ್ಲದ ಕಾರಣ ಮಧ್ಯಾಹ್ನ 2:30ರ ಸುಮಾರಿಗೆ ದಿನದಾಟವನ್ನು ಮೊಟಕುಗೊಳಿಸಲಾಯ್ತು. ಸದ್ಯ ನಾಳೆ ನಗರದಲ್ಲಿ ಮಳೆ ನಿಲ್ಲಲಿ ಎಂಬ ಕೋರಿಕೆ ಅಭಿಮಾನಿಗಳದ್ದು. ಹವಾಮಾನ ಮುನ್ಸೂಚನೆಯ ಪ್ರಕಾರ ಅಕ್ಟೋಬರ್‌ 17ರ ಗುರುವಾರವೂ ನಗರದಲ್ಲಿ ಮಳೆಯಾಗುವ ಸಂಭವವಿದೆ. ಒಂದು ವೇಳೆ ವಾತಾವರಣ ಸ್ವಚ್ಛವಾಗಿದ್ದರೆ ಎರಡನೇ ದಿನದಾಟ ಬೇಗನೆ ಶುರುವಾಗಲಿದೆ.

ಎರಡನೇ ದಿನದಾಟ ಸಮಯದಲ್ಲಿ ವಿಸ್ತರಣೆ

ಮೊದಲ ದಿನದಾಟ ಸಂಪೂರ್ಣ ಮೊಟಕುಗೊಂಡ ಹಿನ್ನೆಲೆಯಲ್ಲಿ ಎರಡನೇ ದಿನದಾಟದ ಸಮಯ ವಿಸ್ತರಿಸಲು ಅಂಪೈರ್‌ಗಳು ನಿರ್ಧರಿಸಿದ್ದಾರೆ. ಹೀಗಾಗಿ ಅರ್ಧ ಗಂಟೆಯ ಆಟ ಹೆಚ್ಚುವರಿಯಾಗಿ ನಡೆಯಲಿದೆ. ಬೆಳಗ್ಗೆ ಪಂದ್ಯ 15 ನಿಮಿಷ ಮುಂಚಿತವಾಗಿ ಆರಂಭವಾಗಿ 15 ನಿಮಿಷ ತಡವಾಗಿ ಮುಗಿಯಲಿದೆ.

2ನೇ ದಿನದ ಪರಿಷ್ಕೃತ ಸೆಷನ್‌ ಅವಧಿಗಳು

  • ಬೆಳಗಿನ ಅವಧಿ: 9:15 ರಿಂದ 11:30
  • ಮಧ್ಯಾಹ್ನದ ಅವಧಿ: 12:10 - 02:25
  • ಸಂಜೆ ಅಧಿವೇಶನ: 02:45 - 04:45

ಎಂ ಚಿನ್ನಸ್ವಾಮಿ ಕ್ರೀಡಾಂಗಣ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಇದ್ದು, ಮಳೆ ಸಂಪೂರ್ಣವಾಗಿ ನಿಂತ 20 ನಿಮಿಷಗಳ ಒಳಗೆ ಪಂದ್ಯ ಆರಂಭವಾಗಲಿದೆ. ಹೀಗಾಗಿ ಸಾಧಾರಣ ಮಳೆಯಾದರೆ ಯಾವುದೇ ಸಮಸ್ಯೆ ಇಲ್ಲ

ವಾರವಿಡೀ ಮಳೆ

ಇಂಡೋ-ಕಿವೀಸ್ ನಡುವಿನ ಮೊದಲ ಟೆಸ್ಟ್‌ ಪಂದ್ಯಕ್ಕೆ ಬೆಂಗಳೂರು ಹವಾಮಾನ ಅಡ್ಡಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾರವಿಡೀ ನಗರದಲ್ಲಿ ಮಳೆಯಾಗಲಿದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಕಾರಣದಿಂದ ಸಿಲಿಕಾನ್‌ ಸಿಟಿಯಲ್ಲಿ ವರ್ಷಧಾರೆಯಾಗಲಿದೆ. ಈಗಾಗಲೇ ನಗರದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬುಧವಾರ, ಗುರುವಾರ ಮತ್ತು ಶುಕ್ರವಾರ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

2 ದಿನ ಶೇ 40ರಷ್ಟು, 3ನೇ ದಿನ ಶೇ 67ರಷ್ಟು, ನಾಲ್ಕನೇ ದಿನ 25ರಷ್ಟು, 5ನೇ ದಿನ 40 ರಷ್ಟು ಮಳೆ ಸುರಿಯುವ ಸಾಧ್ಯತೆಯಿದೆ. ಹಾಗಾಗಿ ಪಂದ್ಯ ಬಹುತೇಕ ನಡೆಯುವುದೇ ಡೌಟ್ ಎಂಬುದು ಹವಾಮಾನ ಮುನ್ಸೂಚನೆ ತಿಳಿಸುತ್ತಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

Whats_app_banner