ಸ್ಟಾರ್ಕ್ ಪತ್ನಿ ಗರ್ಭಿಣಿಯೇ, 24.75 ಕೋಟಿ ಒಡೆಯ ಐಪಿಎಲ್ ಆಡುವುದು ಅನುಮಾನವೇ; ಇಲ್ಲಿದೆ ಸತ್ಯಾಸತ್ಯತೆ
Dec 21, 2023 10:41 AM IST
ಮಿಚೆಲ್ ಸ್ಟಾರ್ಕ್ ಮತ್ತು ಪತ್ನಿ ಅಲೀಸಾ ಹೀಲಿ.
- Mitchell Starc To Miss IPL 2024: ಹರಾಜಿನಲ್ಲಿ 24.75 ಕೋಟಿಗೆ ಸೇಲ್ ಆಗಿರುವ ಮಿಚೆಲ್ ಸ್ಟಾರ್ಕ್ ಮುಂದಿನ ಐಪಿಎಲ್ನಲ್ಲಿ ಕಣಕ್ಕಿಳಿಯುವುದು ಅನುಮಾನ ಎಂದು ವರದಿಯಾಗಿದೆ. ಆದರೆ ಈ ವರದಿಯ ಸತ್ಯಾಸತ್ಯತೆ ಇಲ್ಲಿದೆ.
ಐಪಿಎಲ್ 2024ರ ಮಿನಿ ಹರಾಜು (IPL 2024) ಮುಕ್ತಾಯಗೊಂಡಿದೆ. ಮುಂದಿನ ವರ್ಷ ಮಾರ್ಚ್ 22ರಂದು ಲೀಗ್ ಆರಂಭದ ಸಾಧ್ಯತೆ ಇದೆ. ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ ಎನಿಸಿದ್ದಾರೆ. 24.75 ಕೋಟಿ ಪಡೆದು ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿದ ಸ್ಟಾರ್ಕ್, ಹಿಂದಿನ ಹರಾಜು ದಾಖಲೆಗಳನ್ನು ಧೂಳೀಪಟಗೊಳಿಸಿದ್ದಾರೆ. ಹೀಗಾಗಿ ಆಸೀಸ್ ವೇಗಿ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಆದರೆ ಇದರ ನಡುವೆ ಆಘಾತವೊಂದು ಎದುರಾಗಿದೆ.
ಐಪಿಎಲ್ ಚರಿತ್ರೆಯಲ್ಲಿ ದುಬಾರಿ ಆಟಗಾರ ಎನಿಸಿಕೊಂಡ ಸ್ಟಾರ್ಕ್ 2024ರ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಕಣಕ್ಕಿಳಿಯುವುದು ಅನುಮಾನ ಎಂದು ಸುದ್ದಿಯಾಗುತ್ತಿದೆ. ಕೌಟುಂಬಿಕ ಕಾರಣದಿಂದ ಶ್ರೀಮಂತ ಲೀಗ್‌ನಲ್ಲಿ ಆಡುವುದು ಅನುಮಾನ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಹಲವರು ಪೋಸ್ಟ್ ಮಾಡಿದ್ದು ಕೂಡ ವಿಶೇಷ. ಇದು ಟ್ರೆಂಡ್ ಆಗಿತ್ತು. ವಿಶೇಷ. ಹೀಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಟೆನ್ಶನ್ ಶುರುವಾಗಿದೆ.
ಪತ್ನಿ ಅಲೀಸಾ ಹೀಲಿ ಗರ್ಭಿಣಿಯೇ?
ಆಸ್ಟ್ರೇಲಿಯಾ ತಂಡದ ನಾಯಕಿ ಹಾಗೂ ಮಿಚೆಲ್ ಸ್ಟಾರ್ಕ್ ಪತ್ನಿ ಅಲೀಸಾ ಹೀಲಿ (Alyssa Healy) ಅವರು ಗರ್ಭಿಣಿ. ಸದ್ಯ ಅವರು ಐದು ತಿಂಗಳ ಗರ್ಭಿಣಿ. ಹಾಗಾಗಿ ಈ ದಂಪತಿ ಐಪಿಎಲ್ ನಡೆಯುವ ಸಂದರ್ಭದಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವೇಳೆ ತನ್ನ ಪತ್ನಿಯೊಂದಿಗೆ ಇರುವ ಸಲುವಾಗಿ ಮುಂಬರುವ ಐಪಿಎಲ್ ತಪ್ಪಿಸಿಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಇದರಿಂದ ಸ್ಟಾರ್ಕ್ ಐಪಿಎಲ್ನಲ್ಲಿ ಕಣಕ್ಕಿಳಿಯುವುದು ಅನುಮಾನ ಎಂದು ಹಲವು ಸುದ್ದಿ ಸಂಸ್ಥೆಗಳು ಸುದ್ದಿ ಮಾಡಿವೆ.
ಇದು ನಕಲಿ ಸುದ್ದಿ
ಹೌದು, ಇದು ನಕಲಿ ಸುದ್ದಿ. ಸ್ಟಾರ್ಕ್ ಪತ್ನಿ ಅಲಿಸ್ಸಾ ಹೀಲಿ ಐದು ತಿಂಗಳ ಗರ್ಭಿಣಿ ಆಗಿದ್ದರೆ, ಅವರು ಭಾರತ ಮಹಿಳಾ ತಂಡದ ವಿರುದ್ಧದ ಟೆಸ್ಟ್, ಏಕದಿನ, ಟಿ20 ಸರಣಿಗೆ ಆಸ್ಟ್ರೇಲಿಯಾದ ನಾಯಕಿಯಾಗಿ ಏಕೆ ಭಾರತ ಪ್ರವಾಸ ಕೈಗೊಳ್ಳುತ್ತಿದ್ದರು? ಪ್ರಸ್ತುತ ಹೀಲಿ ಭಾರತ ಪ್ರವಾಸ ಕೈಗೊಂಡಿದ್ದು, 3 ಮಾದರಿ ಕ್ರಿಕೆಟ್ನ ನಾಯಕಿಯಾಗಿ ಕಣಕ್ಕಿಳಿದಿದ್ದಾರೆ. 5 ತಿಂಗಳ ಗರ್ಭಿಣಿ ಆಗಿದ್ದರೆ ಆಡಲು ಅವಕಾಶವೇ ಆಗುತ್ತಿರಲಿಲ್ಲ. ಗರ್ಭಿಣಿ ಮೈದಾನದಲ್ಲಿ ಆಡಲು ಸಾಧ್ಯವೇ? ಇಂತಹ ಅನಗತ್ಯ ಸುದ್ದಿಗಳನ್ನು ಹರಡಿದವರನ್ನು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಹಾಗಾಗಿ ಈ ಸುದ್ದಿ ನಿಜವಲ್ಲ.
ಫೆಬ್ರವರಿಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಸ್ ತಂಡವನ್ನೂ ಸಹ ಅವರು ಮುನ್ನಡೆಸಲಿದ್ದಾರೆ. ಕೆಕೆಆರ್ ಸೇರಿದಂತೆ ಅನೇಕ ಫ್ರಾಂಚೈಸಿಗಳು ಈಗಾಗಲೇ ಸ್ಟಾರ್ಕ್‌ನ ಲಭ್ಯತೆಯ ಬಗ್ಗೆ ವಿಚಾರಣೆ ನಡೆಸಿಯೇ ಖರೀದಿ ಮಾಡಿವೆ. ಸ್ಟಾರ್ಕ್ ಭರವಸೆ ಒದಗಿಸಿದ ನಂತರವೇ ಬಿಡ್ಡಿಂಗ್ ವಾರ್ಗೆ ಇಳಿದಿದ್ದಾರೆ. ಆದರೆ ವದಂತಿ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹರಡಲಾಗಿದೆ. ಇದು ವ್ಯಾಪಕವಾಗಿ ಸುದ್ದಿ ಹರಡಿದ್ದು, ಕೋಲ್ಕತ್ತಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು.