ಐಪಿಎಲ್‌​​ಗಿಂತ ದೇಶಕ್ಕಾಗಿ ಆಡುವುದೇ ಮುಖ್ಯ ಎಂದಿದ್ದ ಸ್ಟಾರ್ಕ್‌ಗೆ ಹಣದ ಹೊಳೆ ಹರಿಸಿದ ಕೆಕೆಆರ್​
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್‌​​ಗಿಂತ ದೇಶಕ್ಕಾಗಿ ಆಡುವುದೇ ಮುಖ್ಯ ಎಂದಿದ್ದ ಸ್ಟಾರ್ಕ್‌ಗೆ ಹಣದ ಹೊಳೆ ಹರಿಸಿದ ಕೆಕೆಆರ್​

ಐಪಿಎಲ್‌​​ಗಿಂತ ದೇಶಕ್ಕಾಗಿ ಆಡುವುದೇ ಮುಖ್ಯ ಎಂದಿದ್ದ ಸ್ಟಾರ್ಕ್‌ಗೆ ಹಣದ ಹೊಳೆ ಹರಿಸಿದ ಕೆಕೆಆರ್​

Mitchell Starc: ಐಪಿಎಲ್ ಹರಾಜು ಇತಿಹಾಸದಲ್ಲೇ ಆಸೀಸ್‌ ವೇಗಿ ಮಿಚೆಲ್ ಸ್ಟಾರ್ಕ್ ಅತ್ಯಂತ ದುಬಾರಿ ಆಟಗಾರನಾದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ವೇಗಿಗೆ 24.70 ಕೋಟಿ ರೂಪಾಯಿ ಸುರಿದಿರುವುದು ಅಭಿಮಾನಿಗಳು ಸೇರಿದಂತೆ ಕ್ರಿಕೆಟ್‌ ಪಂಡಿತರ ಅಚ್ಚರಿಗೆ ಕಾರಣವಾಗಿದೆ. ಐಪಿಎಲ್‌ಗಿಂತ ದೇಶವೇ ಮುಖ್ಯ ಎಂದಿದ್ದ ಆಟಗಾರನಿಗೆ ಕೆಕೆಆರ್‌ ಭಾರಿ ಹಣ ಸುರಿದಿದೆ.

ಮಿಚೆಕ್‌ ಸ್ಟಾರ್ಕ್
ಮಿಚೆಕ್‌ ಸ್ಟಾರ್ಕ್ (PTI)

ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್​ ಮಿಚೆಲ್ ಸ್ಟಾರ್ಕ್ (Mitchell Starc)​, ಐಪಿಎಲ್‌ ಹರಾಜಿನಲ್ಲಿ ದಾಖಲೆಯ 24.70 ಕೋಟಿಗೆ ರೂಪಾಯಿಗೆ ಖರೀದಿಯಾಗಿದ್ದಾರೆ. ಆ ಮೂಲಕ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಕೋಲ್ಕತ್ತಾ ನೈಟ್​ ರೈಡರ್ಸ್ ತಂಡವು, ಏಕದಿನ ವಿಶ್ವಕಪ್‌ನಲ್ಲಿ ಮಿಂಚಿದ್ದ ಆಸೀಸ್‌ ವೇಗಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಐಪಿಎಲ್‌ನಲ್ಲಿ ಈ ಹಿಂದೆ ಮಿಚೆಲ್‌ ಸ್ಟಾರ್ಕ್‌ ಅರ್‌ಸಿಬಿ ಪರ ಆಡಿದ್ದರು. ಆ ಬಳಿಕ ಐಪಿಎಲ್‌ನಿಂದ ಹಿಂದೆ ಸರಿದು ರಾಷ್ಟ್ರೀಯ ತಂಡದ ಪರ ಮಾತ್ರವೇ ಕಾಣಿಸಿಕೊಂಡಿದ್ದರು. ಇದೀಗ ಬರೋಬ್ಬರಿ 8 ವರ್ಷಗಳ ನಂತರ ಐಪಿಎಲ್‌ ಹರಾಜಿಗೆ ನಿಂತ ವೇಗಿಯ ಖರೀದಿಗೆ ಫ್ರಾಂಚೈಸಿಗಳು ಮುಗಿಬಿದ್ದಿರುವುದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

2015ರಲ್ಲಿ ಆರ್‌ಸಿಬಿ ಪರ ಆಡಿದ್ದ ಸ್ಟಾರ್ಕ್‌

2015ರ ಐಪಿಎಲ್‌ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸ್ಟಾರ್ಕ್ ಕೊನೆಯ ಬಾರಿಗೆ ಆಡಿದ್ದರು. ಅವರು ಆ ವರ್ಷ 13 ಪಂದ್ಯಗಳಲ್ಲಿ ಆಡಿ 20 ವಿಕೆಟ್‌ ಪಡೆದು ಮಿಂಚಿದ್ದರು. 6.76ರ ಎಕಾನಮಿಯಲ್ಲಿ ಬೌಲಿಂಗ್‌ ಮಾಡಿ ತಂಡದ ಪ್ರಮುಖ ವೇಗಿಯಾಗಿ ಮಿಂಚಿದ್ದರು. 2015ರ ನಂತರ ಗಾಯ ಸೇರಿದಂತೆ ವಿವಿಧ ಕಾರಣಗಳಿಂದ ಎಡಗೈ ವೇಗಿ ಟೂರ್ನಿಯಲ್ಲಿ‌ ಆಡಿಲ್ಲ.‌

ಇದನ್ನೂ ಓದಿ | ಕೆಲವೇ ನಿಮಿಷಗಳಲ್ಲಿ ಕಮಿನ್ಸ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಮಿಚೆಲ್ ಸ್ಟಾರ್ಕ್; 24.75 ಕೋಟಿ ಸುರಿದ ಈ ಫ್ರಾಂಚೈಸಿ

ಇದೀಗ 2024ರ ಜೂನ್‌ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೆ ಸಿದ್ಧತೆ ನಡೆಸುವ ಸಲುವಾಗಿ ಸ್ಟಾರ್ಕ್​ ಎಂಟು ವರ್ಷಗಳ ನಂತರ ಐಪಿಎಲ್‌ಗೆ ಮರಳಿದ್ದಾರೆ. 2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ನಿಂತಿದ್ದ ಸ್ಟಾರ್ಕ್​ ಖರೀದಿಗೆ ನಾಲ್ಕು ತಂಡಗಳು ಭಾರಿ ಪೈಪೋಟಿ ನಡೆಸಿದವು. ಕೊನೆಗೆ ಗುಜರಾತ್ ಹಿಂದಿಕ್ಕಿ ಕೆಕೆಆರ್​ ತಂಡವು ತನ್ನ ಪರ್ಸ್‌ನಲ್ಲಿದ್ದ ಬಹುತೇಕ 75 ಪ್ರತಿಶತ ಹಣವನ್ನು ಸ್ಟಾರ್ಕ್‌ಗೆ ಸುರಿದಿದೆ. ಇದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

ರಾಷ್ಟ್ರೀಯ ತಂಡದ ಪರ ಆಡುವುದೇ ಮೊದಲ ಆದ್ಯತೆ

ಆಸ್ಟ್ರೇಲಿಯಾ ತಂಡದ ಕಾಯಂ ಸದಸ್ಯನಾಗಿರುವ ಸ್ಟಾರ್ಕ್‌, ಕೆಲವು ವರ್ಷಗಳಿಂದ ಫ್ರಾಂಚೈಸಿ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಈ ಕುರಿತು ಮಾತನಾಡಿದ್ದ ಅವರು, ಐಪಿಎಲ್‌ಗಿಂತ ದೇಶಕ್ಕಾಗಿ ಆಡುವುದೇ ಮುಖ್ಯ ಎಂದು ಹೇಳಿದ್ದರು. “ನಾನು ಐಪಿಎಲ್ ಆಡುವುದನ್ನು ಎಂಜಾಯ್ ಮಾಡಿದ್ದೆ. ಆದರೆ ಆಸ್ಟ್ರೇಲಿಯಾ ಪರ ಆಡುವುದಕ್ಕೆ ನಾನು ಎಂದಿಗೂ ಪ್ರಾಧಾನ್ಯತೆ ನೀಡುತ್ತೇನೆ. ನಾನು ಯಾವುದಕ್ಕೂ ವಿಷಾದಿಸುವುದಿಲ್ಲ. ಹಣ ಇಂದು ಬರುತ್ತದೆ ನಾಳೆ ಹೋಗುತ್ತದೆ. ಆದರೆ ನನಗೆ ಸಿಕ್ಕಿರುವ ಅವಕಾಶಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ,” ಎಂದು ಸ್ಟಾರ್ಕ್ ಕೆಲವು ತಿಂಗಳ ಹಿಂದೆ ಹೇಳಿದ್ದರು.

ಮುಂದಿನ ವರ್ಷ ಮಹತ್ವದ ಟಿ20 ವಿಶ್ವಕಪ್‌ ನಡೆಯುತ್ತಿರುವುದರಿಂದ ಈ ಬಾರಿ ಐಪಿಎಲ್‌ ಆಡುವಲ್ಲಿ ಘಟಾನುಘಟಿ ಆಟಗಾರರು ಆಸಕ್ತಿ ತೋರಿದ್ದಾರೆ. ಹೀಗಾಗಿ ಸ್ಟಾರ್ಕ್‌ ಕೂಡಾ ಹರಾಜಿಗೆ ನಿಂತಿದ್ದರು. ಅದರಂತೆಯೇ ಫ್ರಾಂಚೈಸಿಗಳು ಅವರ ಖರೀದಿಗೆ ಮುಗಿ ಬಿದ್ದಿವೆ. ಆದರೆ, 24.70 ಕೋಟಿ ಮೊತ್ತ ಬಲು ದುಬಾರಿಯಾದಂತೆ ಕಾಣುತ್ತಿದೆ.

Whats_app_banner