ನಿಮ್ಮ ತಾಯಿ, ತಂಗಿಯರನ್ನ ಉಳಿಸಿದ್ದೇ ಸಿಖ್ಖರು; ಅರ್ಷದೀಪ್ ಧರ್ಮ ನಿಂದಿಸಿದ್ದ ಅಕ್ಮಲ್ಗೆ ನಾಲಾಯಕ್ ಎಂದ ಹರ್ಭಜನ್ ಸಿಂಗ್
Jun 12, 2024 02:37 PM IST
ನಿಮ್ಮ ತಾಯಿ, ತಂಗಿಯರನ್ನ ಉಳಿಸಿದ್ದೇ ಸಿಖ್ಖರು; ಅರ್ಷದೀಪ್ ಧರ್ಮ ನಿಂದಿಸಿದ್ದ ಅಕ್ಮಲ್ಗೆ ನಾಲಾಯಕ್ ಎಂದ ಹರ್ಭಜನ್ ಸಿಂಗ್
- Harbhajan Singh: ಟೀಮ್ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ ಅವರ ಸಿಖ್ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಮ್ರಾನ್ ಅಕ್ಮಲ್ ಅವರ ವಿರುದ್ದ ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ.
ಸಿಖ್ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಮ್ರಾನ್ ಅಕ್ಮಲ್ ವಿರುದ್ಧ ಹರ್ಭಜನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಪಂದ್ಯ ಮುಕ್ತಾಯಗೊಂಡ ಒಂದು ದಿನದ ಹಿಂದೆ ಅಕ್ಮಲ್ ಅವರು ಸಾರ್ವಜನಿಕ ಕ್ಷಮೆಯಾಚಿಸಿದರೂ ಬಿಡದ ಭಾರತದ ಮಾಜಿ ಆಫ್ ಸ್ಪಿನ್ನರ್, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ಮಲ್ ನೀಡಿದ್ದ ಹೇಳಿಕೆಯಿಂದ ಆಗಿರುವ ಹಾನಿ ಏನು ಎಂಬುದನ್ನು ಹರ್ಭಜನ್ ಪುನರುಚ್ಚರಿಸಿದ್ದಾರೆ. ಪಾಕ್ ಮಾಜಿ ಕೀಪರ್ ನೀಡಿದ ಹೇಳಿಕೆಯು ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದ ಸಮಯದಲ್ಲಿ ಎಆರ್ವೈ ನ್ಯೂಸ್ನಲ್ಲಿ ಡಿಬೇಟ್ನಲ್ಲಿ ಕೂತಿದ್ದ ಅಕ್ಮಲ್, ಪಂದ್ಯದ ಅಂತಿಮ ಓವರ್ ಎಸೆಯುತ್ತಿದ್ದ ಅರ್ಷದೀಪ್ ಸಿಂಗ್ ಅವರ ಧರ್ಮವನ್ನು ಗುರಿಯಾಗಿಸಿ ಟೀಕಿಸಿದ್ದರು. ಏನು ಬೇಕಾದರೂ ಆಗಬಹುದು. ಅರ್ಷದೀಪ್ ಕೊನೆಯ ಓವರ್ ಎಸೆಯಲಿದ್ದಾರೆ. ಆದರೆ ಆತ ಫಾರ್ಮ್ನಲ್ಲಿಲ್ಲ. ಈಗಾಗಲೇ ಸಮಯ 12 ದಾಟಿದೆ. ಸಿಖ್ ವ್ಯಕ್ತಿ 12 ಗಂಟೆಯ ನಂತರ ಏನು ಮಾಡಲು ಸಾಧ್ಯ ಎಂದು ವ್ಯಂಗ್ಯವಾಗಿ ನಗುತ್ತಾ ಮಾತನಾಡಿದ್ದರು.
ಹರ್ಭಜನ್ ಸಿಂಗ್ ಮತ್ತು ಇತರ ಖ್ಯಾತ ಮಾಜಿ ಕ್ರಿಕೆಟಿಗರಿಂದ ಆಕ್ಷೇಪ ಎದುರಾದ ಬೆನ್ನಲ್ಲೇ ಕಮ್ರಾನ್ ಅಕ್ಮಲ್ ಕ್ಷಮೆಯಾಚಿಸಿದ್ದರು. ನನ್ನ ಇತ್ತೀಚಿನ ಟೀಕೆಗಳಿಗೆ ತೀವ್ರವಾಗಿ ವಿಷಾದಿಸುತ್ತೇನೆ. ಹರ್ಭಜನ್ ಮತ್ತು ಸಿಖ್ ಸಮುದಾಯಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನನ್ನ ಮಾತುಗಳು ಅನುಚಿತ ಮತ್ತು ಅಗೌರವದಿಂದ ಕೂಡಿದ್ದವು. ಸಿಖ್ಖರ ಬಗ್ಗೆ ನನಗೆ ಅಪಾರ ಗೌರವ ಇದೆ. ಯಾರನ್ನೂ ನೋಯಿಸುವ ಉದ್ದೇಶ ನಾನು ಎಂದಿಗೂ ಹೊಂದಿಲ್ಲ. ನನ್ನನ್ನು ನಿಜವಾಗಿಯೂ ಕ್ಷಮಿಸಿ ಎಂದು ಅಕ್ಮಲ್ ಹೇಳಿದ್ದರು.
ನಾಲಾಯಕ್ ಎಂದ ಹರ್ಭಜನ್ ಸಿಂಗ್
ಹರ್ಭಜನ್ ಅವರು ಈ ವಿಷಯದ ಗಂಭೀರತೆಯನ್ನು ನೆನಪಿಸುವ ಮೂಲಕ ಅಕ್ಮಲ್ಗೆ ತಮ್ಮ ಮನಸ್ಸಿನ ನೋವನ್ನು ವ್ಯಕ್ತಪಡಿಸಿ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದು ತುಂಬಾ ಅಸಂಬದ್ಧ ಮತ್ತು ಬಾಲಿಶ ಹೇಳಿಕೆಯಾಗಿದ್ದು, ಇಂತಹ ಹೇಳಿಕೆಗಳನ್ನು ‘ನಾಲಾಯಕ್’ಗಳು ಮಾತ್ರ ನೀಡಬಲ್ಲರು. ಯಾರ ಧರ್ಮದ ಬಗ್ಗೆಯೂ ಏನನ್ನೂ ಹೇಳುವ ಮತ್ತು ಅದನ್ನು ಗೇಲಿ ಮಾಡುವ ಅಗತ್ಯವಿಲ್ಲ ಎಂದು ಕಮ್ರಾನ್ ಅಕ್ಮಲ್ ಅರ್ಥಮಾಡಿಕೊಳ್ಳಬೇಕು ಎಂದು ಹರ್ಭಜನ್ ಕಿಡಿಕಾರಿದ್ದಾರೆ.
ನಾನು ಕಮ್ರಾನ್ ಅಕ್ಮಲ್ ಅವರಿಗೆ ಇಷ್ಟೇ ಕೇಳಲು ಬಯಸುತ್ತೇನೆ. ಸಿಖ್ಖರ ಇತಿಹಾಸ ಮತ್ತು ನಿಮ್ಮ ಸಮುದಾಯವನ್ನು ನಿಮ್ಮ ತಾಯಂದಿರು, ಸಹೋದರಿಯರನ್ನು ಉಳಿಸಲು ಸಿಖ್ಖರು ಮಾಡಿದ ಎಲ್ಲಾ ಕೆಲಸಗಳು ನಿಮಗೆ ತಿಳಿದಿದೆಯೇ?. ನಿಮ್ಮ ಪೂರ್ವಜರಿಂದ ಇದನ್ನು ಕೇಳಿ ತಿಳಿದುಕೊಳ್ಳಿ. 12 ಗಂಟೆಗೆ ಸಿಖ್ಖರು ಮೊಘಲರ ಮೇಲೆ ದಾಳಿ ಮಾಡಿ ನಿಮ್ಮ ತಾಯಂದಿರು ಮತ್ತು ಸಹೋದರಿಯರನ್ನು ರಕ್ಷಿಸಿದ್ದರು. ಹಾಗಾಗಿ ಅಸಂಬದ್ಧವಾಗಿ ಮಾತನಾಡುವುದನ್ನು ನಿಲ್ಲಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇಷ್ಟು ಬೇಗ ಅರ್ಥಮಾಡಿಕೊಂಡು ಕ್ಷಮೆಯಾಚಿಸಿದ್ದು, ಒಳ್ಳೆಯದು. ಆದರೆ, ಮತ್ತೆ ಸಿಖ್ ಅಥವಾ ಯಾವುದೇ ಧರ್ಮ ನೋಯಿಸಲು ಪ್ರಯತ್ನಿಸಬಾರದು. ಹಿಂದೂ ಧರ್ಮ, ಇಸ್ಲಾಂ ಧರ್ಮ, ಸಿಖ್ ಧರ್ಮ ಅಥವಾ ಕ್ರಿಶ್ಚಿಯನ್ ಧರ್ಮವಾಗಿರಲಿ ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ. ಹರ್ಭಜನ್ ಸಿಂಗ್ ಮಾತ್ರವಲ್ಲದೆ, ಇಡೀ ಸಿಖ್ ಸಮುದಾಯವೇ ಅಕ್ಮಲ್ ವಿರುದ್ಧ ತಿರುಗಿ ಬಿದ್ದಿದೆ. ಅವರ ಹೇಳಿಕೆಯನ್ನು ಖಂಡಿಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಭಾರತದೊಂದಿಗಿನ ಕಮ್ರಾನ್ ಅಕ್ಮಲ್ ಅವರ ಇತಿಹಾಸ
ಹರ್ಭಜನ್ ಮತ್ತು ಅಕ್ಮಲ್ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳಲ್ಲಿ ಒಟ್ಟಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಹರ್ಭಜನ್ ಸಿಂಗ್ 2009ರ ಏಷ್ಯಾಕಪ್ ಪಂದ್ಯದ ಭಾಗವಾಗಿದ್ದರು. ಅಲ್ಲಿ ಅಕ್ಮಲ್ ಮತ್ತು ಗೌತಮ್ ಗಂಭೀರ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಕಮ್ರಾನ್ ಭಾರತೀಯ ಕ್ರಿಕೆಟಿಗರೊಂದಿಗೆ ವಾಗ್ವಾದಕ್ಕೆ ಇಳಿದ ಏಕೈಕ ಉದಾಹರಣೆ ಇದೊಂದೇ ಅಲ್ಲ, ಇದಾಗಿ 3 ವರ್ಷಗಳ ನಂತರ ಪಾಕಿಸ್ತಾನವು ಟಿ20ಐ ಸರಣಿಗೆ ಭಾರತ ಪ್ರವಾಸ ಕೈಗೊಂಡಿದ್ದ ವೇಳೆ ಅಕ್ಮಲ್ ಮತ್ತು ಇಶಾಂತ್ ಶರ್ಮಾ ಇನ್ನೂ ತೀವ್ರವಾಗಿತ್ತು. ಇದಕ್ಕೆ ಇಬ್ಬರಿಗೂ ದಂಡ ವಿಧಿಸಲಾಗಿತ್ತು.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ