logo
ಕನ್ನಡ ಸುದ್ದಿ  /  ಕ್ರಿಕೆಟ್  /  ತವರು ನೆಲ ವಡೋದರಾದಲ್ಲಿ ಹಾರ್ದಿಕ್ ಪಾಂಡ್ಯ ರೋಡ್ ಶೋ; ವಿಶ್ವಕಪ್ ಹೀರೋ ಪರ ಅಭಿಮಾನಿಗಳ ಜಯಘೋಷ

ತವರು ನೆಲ ವಡೋದರಾದಲ್ಲಿ ಹಾರ್ದಿಕ್ ಪಾಂಡ್ಯ ರೋಡ್ ಶೋ; ವಿಶ್ವಕಪ್ ಹೀರೋ ಪರ ಅಭಿಮಾನಿಗಳ ಜಯಘೋಷ

Jayaraj HT Kannada

Jul 16, 2024 06:40 AM IST

google News

ತವರು ನೆಲ ವಡೋದರಾದಲ್ಲಿ ಹಾರ್ದಿಕ್ ಪಾಂಡ್ಯ ರೋಡ್ ಶೋ

    • ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಹಾರ್ದಿಕ್ ಪಾಂಡ್ಯ, ಟೂರ್ನಿಯಲ್ಲಿ 150ರ ಸ್ಟ್ರೈಕ್ ರೇಟ್‌ನಲ್ಲಿ 144 ರನ್ ಹಾಗೂ 11 ವಿಕೆಟ್ ಕಬಳಿಸಿದ್ದರು. ಫೈನಲ್‌ ಪಂದ್ಯ ಗೆದ್ದ ಬಳಿಕ ಭಾವುಕರಾಗಿದ್ದ ವಿಶ್ವಕಪ್‌ ಹೀರೋ, ಈಗಲೂ ತವರಿನಲ್ಲಿ ಗೆಲುವಿನ ಪಾರ್ಟಿ ಮುಂದುವರೆಸಿದ್ದಾರೆ.
ತವರು ನೆಲ ವಡೋದರಾದಲ್ಲಿ ಹಾರ್ದಿಕ್ ಪಾಂಡ್ಯ ರೋಡ್ ಶೋ
ತವರು ನೆಲ ವಡೋದರಾದಲ್ಲಿ ಹಾರ್ದಿಕ್ ಪಾಂಡ್ಯ ರೋಡ್ ಶೋ (PTI)

ಟಿ20 ವಿಶ್ವಕಪ್‌ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ತವರು ನಗರ ವಡೋದರಾಕ್ಕೆ ಆಗಮಿಸಿದ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು, ತವರಿನ ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಐಪಿಎಲ್‌ ಪಂದ್ಯಾವಳಿ ಸಮಯದಲ್ಲಿ ಎಲ್ಲೆಡೆಯಿಂದ ಟೀಕೆ ಹಾಗೂ ವಿರೋಧಗಳನ್ನು ಎದುರಿಸಿದ್ದ ಪಾಂಡ್ಯ, ಇದೀಗ ಮತ್ತೆ ತಮ್ಮದೇ ಜನರಿಂದ ಅಗಣಿತ ಪ್ರೀತಿ ಸಂಪಾದಿಸಿದ್ದಾರೆ. ಬಾರ್ಬಡೋಸ್‌ನಲ್ಲಿ ಕಳೆದ ತಿಂಗಳು ನಡೆದ ಟಿ20 ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಗೆಲುವಿನ ಕ್ಷಣಕ್ಕೆ ಸಾಕ್ಷಿಯಾಗಿ ಭಾವುಕರಾಗಿದ್ದ ಹಾರ್ದಿಕ್, ದೇಶವೇ ಸಂಭ್ರಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರಂತೆ ಪಾಂಡ್ಯ ವಿರುದ್ಧ ಘೋಷಣೆ‌ ಕೂಗುತ್ತಿದ್ದ ಅಭಿಮಾನಿಗಳು ಇದೀಗ ಅವರ ಪರ ಘೋಷಣೆ ಕೂಗುತ್ತಿದ್ದಾರೆ.

ವೆಸ್ಟ್‌ ಇಂಡೀಸ್‌ನಿಂದ ಭಾರತಕ್ಕೆ ಬಂದ ಬಳಿಕ ಭಾರತ ತಂಡ ಮುಂಬೈನಲ್ಲಿ ಅದ್ಧೂರಿ ವಿಜಯ ಯಾತ್ರೆ ನಡೆಸಿತ್ತು. ಆ ಬಳಿಕ, ಇದೀಗ ಸೋಮವಾರ ವಡೋದರಾದಲ್ಲಿ ಮತ್ತೊಮ್ಮೆ ಹಾರ್ದಿಕ್ ಪಾಂಡ್ಯ ವಿಜಯ ಯಾತ್ರೆ ನಡೆಸಿದರು. ಹಾರ್ದಿಕ್ ಪಾಂಡ್ಯರನ್ನು ತಮ್ಮ ತವರಿಗೆ ಸ್ವಾಗತಿಸಲು ರೋಡ್ ಶೋ ಆಯೋಜಿಸಲಾಗಿತ್ತು. ತೆರೆದ ಬಸ್‌ನಲ್ಲಿ ನಿಂತು ತವರಿಗೆ ಎಂಟ್ರಿ ಕೊಟ್ಟ ಪಾಂಡ್ಯ, ಅಭಿಮಾನಿಗಳತ್ತ ಕೈಬೀಸಿದರು.

ವಡೋದರದಲ್ಲಿ ರೋಡ್ ಶೋ ಸಮಯದಲ್ಲಿ, ಸಹೋದರ ಕೃನಾಲ್ ಪಾಂಡ್ಯ ಕೂಡಾ ಜೊತೆಗಿದ್ದರು. ಬಸ್ಸಿನಲ್ಲಿದ್ದ ಹಾರ್ದಿಕ್‌ಗೆ ಆತ್ಮೀಯ ಸ್ವಾಗತ ನೀಡಲು ಅನೇಕ ಅಭಿಮಾನಿಗಳು ಜಮಾಯಿಸಿದ್ದರು. "ಹಾರ್ದಿಕ್ ಪಾಂಡ್ಯ - ಪ್ರೈಡ್ ಆಫ್ ವಡೋದರಾ" ಎಂಬ ಬ್ಯಾನರ್ ಅಳವಡಿಸಲಾಗಿದ್ದ ಓಪನ್-ಟಾಪ್ ಬಸ್ ರಸ್ತೆಯುದ್ದಕ್ಕೂ ಸಂಚರಿಸಿತು.

ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಉಪನಾಯಕರಾಗಿದ್ದ ಪಾಂಡ್ಯ, ಆರು ಇನ್ನಿಂಗ್ಸ್‌ಗಳಲ್ಲಿ 48.00ರ ಸರಾಸರಿ ಮತ್ತು 151.57ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿ 144 ರನ್ ಗಳಿಸಿದರು. ಆ ಮೂಲಕ ಐಪಿಎಲ್‌ನಲ್ಲಿ ಅನುಭವಿಸಿದ್ದ ಟೀಕೆಗೆ ತಮ್ಮ ಬ್ಯಾಟ್‌ನಿಂದಲೇ ಉತ್ತರಿಸಿದರು. ಮುಖ್ಯವಾಗಿ ತಂಡಕ್ಕೆ ಬೌಲಿಂಗ್‌ನಲ್ಲಿ ನೆರವಾದರು. ವೆಸ್ಟ್ ಇಂಡೀಸ್‌ನಲ್ಲಿ ನಡೆದ ಪಂದ್ಯಗಳಲ್ಲಿ ನಿರ್ಣಾಯಕ ಪ್ರದರ್ಶನ ನೀಡಿದರು. ಆಡಿದ ಒಟ್ಟು ಎಂಟು ಪಂದ್ಯಗಳಲ್ಲಿ 17.36ರ ಸರಾಸರಿ ಮತ್ತು 7.64ರ ಎಕಾನಮಿ ರೇಟ್‌ನಲ್ಲಿ ಬೌಲಿಂಗ್‌ ಮಾಡಿ ಪ್ರಮುಖ 11 ವಿಕೆಟ್‌ ಕಬಳಿಸಿದರು.

ಫೈನಲ್‌ ಪಂದ್ಯದಲ್ಲಿ ಹಾರ್ದಿಕ್‌ ಆರ್ಭಟ ಇನ್ನೂ ಆಕರ್ಷಕವಾಗಿತ್ತು. ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್ ಮತ್ತು ಕಗಿಸೊ ರಬಾಡ ಅವರ ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸುವ ಮೂಲಕ 11 ವರ್ಷಗಳ ನಂತರ ಭಾರತವು ಐಸಿಸಿ ಟ್ರೋಫಿಯನ್ನು ಎತ್ತಿಹಿಡಿಯಲು ನೆರವಾದರು. ಕೊನೆಯ ಓವರ್‌ ಎಸೆದ ಪಾಂಡ್ಯ, ಭಾರತ ತಂಡ ಗೆಲ್ಲುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತರು. ಅದುವರೆಗೂ ಎಲ್ಲಾ ನೋವುಗಳನ್ನು ಹೊಟ್ಟೆಯೊಳಗೆ ಅದುಮಿಟ್ಟು ನಾಟಕೀಯವಾಗಿ ನಗುತ್ತಿದ್ದ ಪಾಂಡ್ಯಾ ಅವರ ಭಾವನೆಯ ಕಟ್ಟೆ ಅಂದು ಒಡೆಯಿತು. ಪಾಂಡ್ಯ ಅವರ ಕಣ್ಣಿರು ನೋಡಿದ ಅಭಿಮಾನಿಗಳ ಮನಸ್ಸು ಭಾರವಾಗಿದ್ದು ಸುಳ್ಳಲ್ಲ.

ವಿಂಡೀಸ್‌ನಿದ ಭಾರತಕ್ಕೆ ಮರಳಿದ ಬಳಿಕ ಮುಂಬೈನಲ್ಲಿ ಟೀಮ್‌ ಇಂಡಿಯಾ ಅದ್ಧೂರಿ ರೋಡ್‌ ಶೋ ನಡೆಸಿತ್ತು. ಸಾವಿರಾರು ಜನರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಸಿತ್ತು. 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ