ಕ್ರಿಕೆಟ್ ಸ್ಟೇಡಿಯಂಗಳಲ್ಲಿ ತಂಬಾಕು ಜಾಹೀರಾತು ಪ್ರದರ್ಶನ ನಿಲ್ಲಿಸುವಂತೆ ಬಿಸಿಸಿಐಗೆ ಆರೋಗ್ಯ ಸಚಿವಾಲಯ ಸೂಚನೆ
ಆರೋಗ್ಯ ಸಚಿವಾಲಯದ ಆಶ್ರಯದಲ್ಲಿ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯವು ತಂಬಾಕು ಸೇವನೆ ಉತ್ತೇಜಿಸುವ ಜಾಹೀರಾತುಗಳನ್ನು ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಪ್ರದರ್ಶಿಸುವುದನ್ನು ನಿಲ್ಲಿಸುವಂತೆ ಬಿಸಿಸಿಐಗೆ ಹೇಳಲಿದೆ.
ಭಾರತದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುವಾಗ, ಸ್ಟೇಡಿಯಂಗಳಲ್ಲಿ ಬಗೆಬಗೆಯ ಜಾಹೀರಾತು ಫಲಕಗಳು ಕಂಡುಬರುತ್ತವೆ. ಕೆಲವೊಂದು ಹೊಗೆರಹಿತ ತಂಬಾಕು ಜಾಹೀರಾತುಗಳನ್ನು ದೊಡ್ಡ ಅಕ್ಷರ ಹಾಗೂ ಚಿತ್ರಗಳೊಂದಿಗೆ ಪ್ರದರ್ಶಿಸಲಾಗುತ್ತದೆ. ಗುಟ್ಕಾ ತಯಾರಕ ಸಂಸ್ಥೆ ಜಾಹೀರಾತುಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಮಾಜಿ ಕ್ರಿಕೆಟಿಗರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಯುವ ಜನತೆ ಕೂಡಾ ಅದರತ್ತ ಬೇಗನೆ ಆಕರ್ಷಿತರಾಗುತ್ತಾರೆ. ಕ್ರೀಡಾಂಗಣಗಳಲ್ಲಿ ಇಂಥಾ ಹೊಗೆರಹಿತ ತಂಬಾಕು ಜಾಹೀರಾತುಗಳನ್ನು ಹಾಕುವುದನ್ನು ನಿಲ್ಲಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಬಿಸಿಸಿಐಗೆ ಮನವಿ ಮಾಡಲು ಯೋಜಿಸುತ್ತಿದೆ.
ಇತ್ತೀಚಿನ ಜಾಹೀರಾತುಗಳಲ್ಲಿ, ಸೆಲೆಬ್ರಿಟಿಗಳು ಹೊಗೆರಹಿತ ತಂಬಾಕು ಉತ್ಪನ್ನ ತಯಾರಕರ ಕಂಪನಿಗಳ ತಯಾರಿಸಿದ 'ಏಲಕ್ಕಿ' ಮೌತ್ ಫ್ರೆಶನರ್ ಬಳಕೆ ಉತ್ತೇಜಿಸುತ್ತಿರುವುದನ್ನು ತೋರಿಸಲಾಗಿದೆ. ಇದೇ ರೀತಿ ಹಲವು ಉತ್ಪನ್ನಗಳ ಜಾಹೀರಾತುಗಳು ಮೈದಾನಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ಜಾಗತಿಕ ಆರೋಗ್ಯ ಸಂಸ್ಥೆಯಾದ ವೈಟಲ್ ಸ್ಟ್ರಾಟಜಿಸ್ ನಡೆಸಿದ ಅಧ್ಯಯನದ ಪ್ರಕಾರ, 2023ರಲ್ಲಿ ಹೊಗೆರಹಿತ ತಂಬಾಕು ಬ್ರಾಂಡ್‌ಗಳ ಎಲ್ಲಾ ಜಾಹೀರಾತುಗಳಲ್ಲಿ 41.3 ಶೇಕಡದಷ್ಟು ಜಾಹೀರಾತನ್ನು ಕ್ರಿಕೆಟ್ ವಿಶ್ವಕಪ್‌ನ ಕೊನೆಯ 17 ಪಂದ್ಯಗಳಲ್ಲಿ ಪ್ರದರ್ಶಿಸಲಾಗಿದೆ ಎಂದು ಹೇಳಿದೆ.
ಬಿಸಿಸಿಐಗೆ ಆರೋಗ್ಯ ಸಚಿವಾಲಯದ ಸೂಚನೆ
ಸದ್ಯ, ಹೊಗೆರಹಿತ ತಂಬಾಕು ಜಾಹೀರಾತುಗಳನ್ನು ವಿಶೇಷವಾಗಿ ಕ್ರಿಕೆಟ್ ಮೈದಾನಗಳಲ್ಲಿ, ಮುಖ್ಯವಾಗಿ 'ಗುಟ್ಕಾ' ಜಾಹೀರಾತುಗಳನ್ನು ತೋರಿಸುವುದನ್ನು ನಿಲ್ಲಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಕೇಳಲು ಯೋಜಿಸುತ್ತಿದೆ. ಐಪಿಎಲ್ ಸೇರಿದಂತೆ ಜನಪ್ರಿಯ ಪಂದ್ಯಾವಳಿಗಳನ್ನು ಆಯೋಜಿಸುವ ಹಲವಾರು ಕ್ರಿಕೆಟ್ ಮೈದಾನಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶನವಾಗುತ್ತದೆ. ಇದರಲ್ಲಿ ಪಾನ್ ಮಸಾಲಾ ಮತ್ತು ಟೊಬಾಕೊ ಮಿಶ್ರಣದ ಗುಟ್ಕಾ ಕೂಡಾ ಸೇರಿದೆ.
ಆರೋಗ್ಯ ಸಚಿವಾಲಯದ ಆಶ್ರಯದಲ್ಲಿ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯವು ತಂಬಾಕು ಪೋರ್ಮೋಟಿಂಗ್ ಮಾಡುವ ಬಾಡಿಗೆ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಬಿಸಿಸಿಐಯನ್ನು ಕೇಳಲಿದೆ.
“ಕ್ರಿಕೆಟ್ ಪಂದ್ಯಗಳು ಯುವ ಸಮುದಾಯವನ್ನು ವ್ಯಾಪಕವಾಗಿ ಆಕರ್ಷಿಸಿದೆ. ಕ್ರಿಕೆಟ್ ಪಂದ್ಯಗಳ ಸಮಯದಲ್ಲಿ ಹೊಗೆರಹಿತ ತಂಬಾಕು ಜಾಹೀರಾತುಗಳನ್ನು ಪ್ರದರ್ಶಿಸುತ್ತಿರುವ ಅನೇಕ ಉದಾಹರಣೆಗಳಿವೆ. ಇದು ಪರೋಕ್ಷವಾಗಿ ಯುವಕರನ್ನು ಆಕರ್ಷಿಸುತ್ತದೆ. ಆರೋಗ್ಯ ಸಚಿವಾಲಯದ ಡಿಜಿಹೆಚ್ಎಸ್, ಬಿಸಿಸಿಐ ಜೊತೆಗೆ ಮಾತನಾಡಿ ಯಾವುದೇ ರೂಪದಲ್ಲಿ ತಂಬಾಕು ಸಂಬಂಧಿತ ಜಾಹೀರಾತುಗಳನ್ನು ತೋರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಬಹುದು” ಎಂದು ಅಧಿಕಾರಿಯೊಬ್ಬರು ಎಚ್‌ಟಿ ಕನ್ನಡದ ಮಾತೃಸಂಸ್ಥೆ ಲೈವ್ ಮಿಂಟ್‌ಗೆ ತಿಳಿಸಿದ್ದಾರೆ.
ಗುಟ್ಕಾವನ್ನು 'ಪಾನ್ ಮಸಾಲಾ' ಎಂದು ತೋರಿಸುತ್ತಿರುವ ಕಂಪನಿಗಳು
ಹೊಗೆರಹಿತ ತಂಬಾಕು ಉತ್ಪನ್ನಗಳ ಬಳಕೆ ನಿಭಾಯಿಸಲು ಭಾರತವು ಈವರೆಗೆ ಸಮಗ್ರ ವಿಧಾನ ಅನುಸರಿಸಿಲ್ಲ. ಹೀಗಾಗಿ ತಂಬಾಕು ಜಾಹೀರಾತನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಅವರು ಹೇಳಿದರು. ತಂಬಾಕು ಉತ್ಪಾದನಾ ಕಂಪನಿಗಳು ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧದಿಂದ ತಪ್ಪಿಸಿಕೊಳ್ಳಲು ಗುಟ್ಕಾವನ್ನು 'ಪಾನ್ ಮಸಾಲಾ' ಎಂಬ ರೂಪದಲ್ಲಿ ತಪ್ಪಾಗಿ ಜಾಹೀರಾತು ನೀಡುತ್ತಿವೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಗಿದೆ.
ಈ ವಿಚಾರವಾಗಿ ಆರೋಗ್ಯ ಸಚಿವಾಲಯ ಮತ್ತು ಬಿಸಿಸಿಐ ವಕ್ತಾರರ ಬಳಿ ಸ್ಪಷ್ಟನೆ ಕೇಳಲಾಗಿದೆ. ಆದರೆ, ಸುದ್ದಿ ಪ್ರಕಟವಾಗುವವರೆಗೆ ಉತ್ತರ ಬಂದಿಲ್ಲ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪಾಕಿಸ್ತಾನದಲ್ಲಿ ಆಡಲು ಭಾರತ ಸರ್ಕಾರದ ಅನುಮತಿ ಇಲ್ಲವಾದರೆ ಲಿಖಿತ ಪುರಾವೆ ನೀಡಿ: ಬಿಸಿಸಿಐಗೆ ಪಿಸಿಬಿ ಖಡಕ್ ಸಂದೇಶ