ರೊಮಾರಿಯೋ ಶೆಫರ್ಡ್ ಭಯಾನಕ ಆಟ; 13 ನಿಮಿಷದ ರೌದ್ರಾವತಾರದ ಬ್ಯಾಟಿಂಗ್ಗೆ ಸಚಿನ್-ಹಾರ್ದಿಕ್ ರಿಯಾಕ್ಷನ್ ಹೇಗಿತ್ತು ನೋಡಿ
Apr 08, 2024 06:03 AM IST
ರೊಮಾರಿಯೋ ಶೆಫರ್ಡ್ ರೌದ್ರಾವತಾರದ ಬ್ಯಾಟಿಂಗ್ಗೆ ಸಚಿನ್-ಹಾರ್ದಿಕ್ ರಿಯಾಕ್ಷನ್ ಹೇಗಿತ್ತು ನೋಡಿ
- Romario Shepherd : ವೆಸ್ಟ್ ಇಂಡೀಸ್ನ ರೊಮಾರಿಯೊ ಶೆಫರ್ಡ್ ವಿಧ್ವಂಸಕ ಬ್ಯಾಟಿಂಗ್ ನಡೆಸಿ ಸಂಚಲನ ಸೃಷ್ಟಿಸಿದ್ದಾರೆ. ಕೇವಲ 10 ಎಸೆತಗಳಲ್ಲಿ 39 ರನ್ ಬಾರಿಸಿ ಗಮನ ಸೆಳೆದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಪರ ಮತ್ತೊಮ್ಮೆ ಅವಕಾಶ ಪಡೆದ ವೆಸ್ಟ್ ಇಂಡೀಸ್ನ ರೊಮಾರಿಯೊ ಶೆಫರ್ಡ್ (Romario Shepherd), ಕ್ರೀಸ್ನಲ್ಲಿ ಬ್ಯಾಟಿಂಗ್ ನಡೆಸಿದ್ದು 13 ನಿಮಿಷವೇ ಆದರೂ ಒಂದು ಕ್ಷಣ ಅಲ್ಲೋಲ ಕಲ್ಲೋಲ ಸೃಷ್ಟಿಸಿದರು. ವಿಧ್ವಂಸಕ ಬ್ಯಾಟಿಂಗ್ ನಡೆಸಿ ಕ್ರಿಕೆಟ್ ಲೋಕವನ್ನೇ ದಂಗಾಗುವಂತೆ ಮಾಡಿಬಿಟ್ಟರು. ಶೆಫರ್ಡ್ ಕೇವಲ 10 ಎಸೆತಗಳಲ್ಲಿ ಬರೋಬ್ಬರಿ 390ರ ಸ್ಟ್ರೈಕ್ರೇಟ್ನಲ್ಲಿ ಭರ್ಜರಿ 39 ರನ್ ಗಳಿಸಿದರು. ಅಲ್ಪಾವಧಿಗೆ 4 ಸಿಕ್ಸರ್, 3 ಬೌಂಡರಿಗಳನ್ನು ಚಚ್ಚಿದರು.
ಆನ್ರಿಚ್ ನೋಕಿಯಾ ವಿರುದ್ಧದ ಕೊನೆಯ ಓವರ್‌ನಲ್ಲಿ 32 ರನ್ ಚಚ್ಚಿದರು. ಎದುರಿಸಿದ ಆರು ಎಸೆತಗಳಲ್ಲಿ 4, 6, 6, 6, 4, 6 ಬಾರಿಸಿ ಡೆಲ್ಲಿ ತಂಡದ ನಿದ್ದೆಗಡಿಸಿದರು. ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 234 ರನ್ನುಗಳ ಬೃಹತ್ ಮೊತ್ತ ಗಳಿಸಿದರು. ಹಾರ್ದಿಕ್ ಪಾಂಡ್ಯ ಅವರ ವಿಕೆಟ್ ಪತನದ ವೇಳೆ 18ನೇ ಓವರ್‌ನಲ್ಲಿ ತಂಡದ ಸ್ಕೋರ್ 5 ವಿಕೆಟ್‌ಗೆ 181 ರನ್ ಆಗಿತ್ತು. ಪವರ್-ಹಿಟಿಂಗ್ ಮೂಲಕ ಬೆರಗುಗೊಳಿಸುವ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದರು.
ಸಂಭ್ರಮದಲ್ಲಿ ಮಿಂದೆದ್ದ ಹಾರ್ದಿಕ್-ಸಚಿನ್
ಅಕ್ಷರಶಃ ರಾಕ್ಷಸನಾದ ಶೆಫರ್ಡ್ ಅವರ ಬ್ಯಾಟಿಂಗ್ ನೋಡಿದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಸಚಿನ್ ತೆಂಡೂಲ್ಕರ್ (Sachin Tendulkar) ದಿಗ್ಭ್ರಮೆಗೊಂಡರು. ಡ್ರೆಸ್ಸಿಂಗ್ ರೂಮ್ನಲ್ಲಿ ಸಚಿನ್ ನಿಂತು ಚಪ್ಪಾಳೆ ತಟ್ಟುತ್ತಿದ್ದರೆ, ಅತ್ತ ಧಗಧಗನೆ ಉರಿಯುತ್ತಿದ್ದ ಶೆಫರ್ಡ್ರ ಬ್ಯಾಟಿಂಗ್ ವೈಭವ ನೋಡಿ ಹಾರ್ದಿಕ್ ಪಾಂಡ್ಯ ಅವರಿಗೆ ಸಂತಸ ತಡೆಯಲಾಗಲಿಲ್ಲ. ತಲೆ ಮೇಲೆ ಅಚ್ಚರಿ ವ್ಯಕ್ತಪಡಿಸಿದರು. ಪಕ್ಕದಲ್ಲಿದ್ದ ಸೂರ್ಯಕುಮಾರ್ ಮತ್ತು ಇಶಾನ್ ಅವರಿಗೆ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದರು.
ಅಲ್ಲದೆ, ತನ್ನ ಅದ್ಭುತ ಬ್ಯಾಟಿಂಗ್ ನಂತರ ಡ್ರೆಸ್ಸಿಂಗ್ ರೂಮ್ಗೆ ಬಂದ ರೊಮಾರಿಯೊ ಶೆಫಾರ್ಡ್ ಅವರನ್ನು ನಾಯಕ ಹಾರ್ದಿಕ್ ಪಾಂಡ್ಯ ಗ್ರ್ಯಾಂಡ್ ವೆಲ್ಕಮ್ ಮಾಡಿಕೊಂಡರು. ಶೆಫರ್ಡ್ರನ್ನು ಅಪ್ಪಿಕೊಂಡು ಅಭಿನಂದನೆ ಸಲ್ಲಿಸಿದರು. ತಂಡದ ಸಹ ಆಟಗಾರರಿಂದ ಅದ್ಭುತವಾದ ಸ್ವಾಗತ ಪಡೆದಿರುವ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ಶೆಫರ್ಡ್ ಬ್ಯಾಟಿಂಗ್ ಮಾಡುತ್ತಿದ್ದಾಗ ಹಾರ್ದಿಕ್ ಕುಣಿಯುತ್ತಿದ್ದ ವಿಡಿಯೋಗಳು ಸಹ ವೈರಲ್ ಆಗಿವೆ.
ಸಂಕ್ಷಿಪ್ತ ಸ್ಕೋರ್
ಮುಂಬೈನ ವಾಂಖೆಡೆ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಪರ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಬಿರುಸಿನ ಆಟವಾಡಿದರು. ಏಳು ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 80 ರನ್ ಸೇರಿಸಿದರು. ರೋಹಿತ್ 49 ರನ್ ಗಳಿಸಿ ನಿರ್ಗಮಿಸುವ ಮೊದಲು ಎಂಐ ಬೃಹತ್ ಸ್ಕೋರ್ ಕಲೆ ಹಾಕಲು ಉತ್ತಮ ಭದ್ರಬುನಾದಿ ಹಾಕಿತ್ತು. ಆದರೆ 13ನೇ ಓವರ್‌ನಲ್ಲಿ ಎಂಐ 121ಕ್ಕೆ 4 ವಿಕೆಟ್‌ಗೆ ಕುಸಿಯಿತು.
ಆದರೆ ಈ ವೇಳೆ ಹಾರ್ದಿಕ್ ಪಾಂಡ್ಯ (39) ಮತ್ತು ಟಿಮ್ ಡೇವಿಡ್ (45) ತಂಡಕ್ಕೆ ಜೀವ ತುಂಬಿದರು. ಇನ್ನೇನು 200ರ ಸಮೀಪಕ್ಕೆ ಬಂತು ಎನ್ನುವಷ್ಟರಲ್ಲಿ ಹಾರ್ದಿಕ್ 18ನೇ ಓವರ್‌ನಲ್ಲಿ ಪತನಗೊಂಡರು. ಬಳಿಕ ಅತ್ಯಂತ ಕ್ರೂರವಾಗಿ ಬ್ಯಾಟಿಂಗ್ ನಡೆಸಿದ ಶೆಫರ್ಡ್ ತಂಡದ ಮೊತ್ತವನ್ನು 20 ಓವರ್‌ಗಳಲ್ಲಿ 5 ವಿಕೆಟ್‌ಗೆ ನಷ್ಟಕ್ಕೆ 234 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ, ಪೃಥ್ವಿ ಶಾ ಮತ್ತು ಟ್ರಿಸ್ಟಾನ್ಸ್ ಸ್ಟಬ್ಸ್ ಅವರ ಹೋರಾಟದ ನಡುವೆ ಶರಣಾಯಿತು. 29 ರನ್ಗಳಿಂದ ಗೆದ್ದ ಮುಂಬೈ ಐಪಿಎಲ್ನಲ್ಲಿ ಗೆಲುವಿನ ಖಾತೆ ತೆರೆಯಿತು. ಅಲ್ಲದೆ, ಅಂಕಪಟ್ಟಿಯಲ್ಲಿ 10ರಿಂದ 8ಕ್ಕೆ ಲಗ್ಗೆ ಇಟ್ಟಿತು.