ಟೀಂ ಇಂಡಿಯಾ ವಿಶ್ವಕಪ್ ಫೈನಲ್ ಪಂದ್ಯ ಎಲ್ಲಿ ನಡೆಯುತ್ತೆ, ಸಮಯ, ಪಿಚ್, ಹವಾಮಾನ, ಸಂಭಾವ್ಯ ಎದುರಾಳಿ ಯಾರಾಗ್ತಾರೆ?
Nov 15, 2023 11:47 PM IST
ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್ ಗೆದ್ದ ಬಳಿಕ ಟೀಂ ಇಂಡಿಯಾ ಆಟಗಾರರು ಸಂಭ್ರಮಿಸಿದರು.
ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನ ಮಣಿಸಿರುವ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯ ಎಲ್ಲಿ ನಡೆಯುತ್ತೆ, ಸಮಯ, ಪಿಚ್, ಹವಾಮಾನ, ಸಂಭಾವ್ಯ ಎದುರಾಳಿ ಮಾಹಿತಿ ಇಲ್ಲಿದೆ.
ಮುಂಬೈ (ಮಹಾರಾಷ್ಟ್ರ): ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಮೊದಲ ಸೆಮಿ ಫೈನಲ್‌ನಲ್ಲಿ (ICC ODI World Cup Semi Final) ನ್ಯೂಜಿಲೆಂಡ್ (New Zealand) ತಂಡವನ್ನು 70 ರನ್‌ಗಳಿಂದ ಸೋಲಿಸಿರುವ ಟೀಂ ಇಂಡಿಯಾ (Team India) ಅದ್ಧೂರಿಯಾಗಿ ಫೈನಲ್ ಪ್ರವೇಶಿಸಿದೆ.
ಎರಡನೇ ಸೆಮಿ ಫೈನಲ್‌ನಲ್ಲಿ ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನವೆಂಬರ್ 16 ರಂದು (ಗುರುವಾರ) ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ (Australia vs South Africa) ಸೆಣಸಾಟ ನಡೆಸಲಿದ್ದು, ಇಲ್ಲಿ ಗೆಲ್ಲುವ ತಂಡ ನೇರವಾಗಿ ಟೀಂ ಇಂಡಿಯಾ ವಿರುದ್ಧ ವಿಶ್ವಕಪ್ ಫೈನಲ್ (ODI World Cup Final) ಪೈಪೋಟಿಗೆ ಬರಲಿದೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಗ್ರೂಪ್ ಹಂತದಲ್ಲಿ ಒಂದೇ ಒಂದು ಪಂದ್ಯವನ್ನೂ ಸೋಲದೆ ಆಡಿದ 9 ಪಂದ್ಯಗಳಲ್ಲೂ ಭರ್ಜರಿ ಗೆಲುವಿನೊಂದಿಗೆ 18 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಮತ್ತು ಮೊದಲ ತಂಡವನ್ನು ಸೆಮೆ ಫೈನಲ್ ಪ್ರವೇಶಿಸಿತ್ತು. ಇಂದು (ನವೆಂಬರ್ 15, ಬುಧವಾರ) ಮುಂಬೈನಲ್ಲಿ ನಡೆದ ಕಿವೀಸ್ ವಿರುದ್ಧ ಪಂದ್ಯದಲ್ಲಿ 70 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದೆ. ಅಲ್ಲದೆ, 2019ರಲ್ಲಿನ ನ್ಯೂಜಿಲೆಂಡ್ ವಿರುದ್ಧದ ಸೆಮಿ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದೆ.
2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಎಲ್ಲಿ ನಡೆಯುತ್ತೆ, ಪಿಚ್ ರಿಪೋರ್ಟ್ ಏನು ಹೇಳುತ್ತೆ, ಪಂದ್ಯಗಳ ಮಳೆ ಅಡ್ಡಿಯಾಗುವ ಸಾಧ್ಯತೆ ಇದಿಯಾ, ಟೀಂ ಇಂಡಿಯಾ ಸಂಭಾವ್ಯ ತಂಡ, ಫೈನಲ್‌ಗೆ ಬರಲಿರುವ ಸಂಭಾವ್ಯ ತಂಡದ ಮಾಹಿತಿ, ಪಂದ್ಯದ ಲೈವ್ ಎಲ್ಲಿ ನೋಡುವುದು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ.
ವಿಶ್ವಕಪ್ ಫೈನಲ್ ಪಂದ್ಯ ಎಲ್ಲಿ ನಡೆಯುತ್ತೆ?
ನ್ಯೂಜಿಲೆಂಡ್ ತಂಡವನ್ನು ಸೆಮಿ ಫೈನಲ್‌ನಲ್ಲಿ ಸೋಲಿಸಿರುವ ಟೀಂ ಇಂಡಿಯಾ ನವೆಂಬರ್ 19ರ ಭಾನುವಾರ ಫೈನಲ್ ಪಂದ್ಯವನ್ನು ಅಹಮದಾಬಾದ್‌ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯವನ್ನು ಆಡಲಿದೆ. ಇದು ಜಗತ್ತಿನಲ್ಲೇ ಅತಿ ದೊಡ್ಡ ಕ್ರೀಡಾಂಗಣದಲ್ಲಿ ಒಂದಾಗಿದೆ. ವಿಶ್ವಕಪ್ ಉದ್ಘಾಟನಾ ಪಂದ್ಯ ಕೂಡ ಇಲ್ಲೇ ನಡೆದಿತ್ತು. ಇದೀಗ ಫೈನಲ್‌ಗೂ ವೇದಿಕೆಯನ್ನು ಕಲ್ಪಿಸಿದೆ.
ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ?
ರೋಹಿತ್ ಶರ್ಮಾ ಅಂಡ್ ಟೀಂ ಆಡಲಿರುವ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯ ಬಗ್ಗೆ ಅಭಿಮಾನಿಗಳು ಯಾವುದೇ ಆತಂಕ ಪಡಬೇಕಾದ ಅಗತ್ಯವಿಲ್ಲ. ಯಾಕೆಂದರೆ ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗಾಳಿ ಗಂಟೆಗೆ 11 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ. ಆದ್ರತೆ ಶೇಕಡಾ 39 ರಷ್ಟು ಇರಲಿದೆ. ಹೀಗಾಗಿ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವು ಸಾಧ್ಯತೆ ಇಲ್ಲ.
ಅಹಮದಾಬಾದ್ ಪಿಚ್ ರಿಪೋರ್ಟ್
ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ಜಗತ್ತಿನಲ್ಲಿ ಅತಿ ದೊಡ್ಡ ಮೈದಾನಗಳಲ್ಲಿ ಒಂದಾಗಿದ್ದು, ಇಧು ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಇಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸುವ ಅವಕಾಶ ತುಂಬಾ ಕಡಿಮೆ ಇದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬಿನಿಯಿಂದ ಬೌಲರ್‌ಗಳು ವಿಕೆಟ್ ಪಡೆಯುವುದು ಸ್ವಲ್ಪ ಕಷ್ಟವಾಗಬಹುದು. ದೊಡ್ಡ ಮೊತ್ತವನ್ನು ಪೇರಿಸುವ ನಿರೀಕ್ಷೆ ಇದೆ.
ಲೈವ್ ಸ್ಟ್ರೀಮಿಂಗ್
ಐಸಿಸಿ ಏಕಿದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಪಂದ್ಯವನ್ನು ಉಚಿತವಾಗಿ ನೋಡಲು ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಷನ್ ಮೂಲಕ ಅಥವಾ ವೆಬ್‌ಸೈಟ್‌ನಲ್ಲಿ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸಬಹುದು.
ವಿಶ್ವಕಪ್ ಫೈನಲ್‌ಗೆ ಟೀಂ ಇಂಡಿಯಾ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.
ಟೀಂ ಇಂಡಿಯಾ ವಿರುದ್ಧ ವಿಶ್ವಕಪ್ ಫೈನಲ್‌ಗೆ ಬರುವ ತಂಡ ಯಾವುದು?
ವಿಶ್ವಕಪ್ ಗ್ರೂಪ್ ಹಂತದಲ್ಲಿ ಫಲಿತಾಂಶಗಳನ್ನು ಗಮಿಸಿದರೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಆಡಿರುವ ತಲಾ 9 ಪಂದ್ಯಗಳಲ್ಲಿ 2 ರಲ್ಲಿ ಸೋತು 7ರಲ್ಲಿ ಗೆಲುವು ಕಂಡಿವೆ. ಆದರೆ ಹರಿಣಗಳು ನೆಟ್ ರನ್‌ರೇಟ್ ಜಾಸ್ತಿ ಇದ್ದ ಕಾರಣ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ. ನಾಳೆ (ನವೆಂಬರ್ 16, ಗುರುವಾರ) ನಡೆಯಲಿರುವ ಎರಡನೇ ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲುವ ಸಾಧ್ಯತೆ ಹೆಚ್ಚಿದೆ.