ಕಿವೀಸ್ ವಿರುದ್ಧದ ಸೇಡಿನ ಸಮರದಲ್ಲಿ ಗೆದ್ದು 4ನೇ ಬಾರಿಗೆ ವಿಶ್ವಕಪ್ ಫೈನಲ್ಗೇರಿದ ಭಾರತ
Nov 15, 2023 11:16 PM IST
4ನೇ ಬಾರಿಗೆ ವಿಶ್ವಕಪ್ ಫೈನಲ್ಗೇರಿದ ಭಾರತ.
- India vs New Zealand 1st Semi-Final: ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯಿಸಿದ ಭಾರತ, 4ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. 2011ರ ನಂತರ ಫೈನಲ್ಗೆ ಎಂಟ್ರಿಕೊಟ್ಟಿದೆ.
ನ್ಯೂಜಿಲೆಂಡ್ ಎದುರಿನ ರೋಚಕ ಸೆಮಿಫೈನಲ್ ಕದನದಲ್ಲಿ ಗೆದ್ದು ಬೀಗಿದ ಭಾರತ ತಂಡ, ಐತಿಹಾಸಿಕ 4ನೇ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪ್ರವೇಶಿಸಿದೆ. 1983, 2003, 2011ರ ವಿಶ್ವಕಪ್ ಬಳಿಕ ಭಾರತ ಮತ್ತೊಮ್ಮೆ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ 2019ರ ವಿಶ್ವಕಪ್ ಸೆಮಿಫೈನಲ್ ಸೋಲಿನ ಸೇಡನ್ನು ರೋಹಿತ್ ಪಡೆ, ತೀರಿಸಿಕೊಂಡಿದೆ. ಕೊನೆಯ ಬಾರಿ 2011ರಲ್ಲಿ ಫೈನಲ್ಗೇರಿದ್ದ ಭಾರತ ಪ್ರಶಸ್ತಿ ಗೆದ್ದಿತ್ತು. 140 ಕೋಟಿ ಭಾರತೀಯರ ಕನಸಿಗೆ ಇನ್ನೊಂದೆ ಹೆಜ್ಜೆ ಬಾಕಿ ಇದೆ.
ತದನಂತರ 2015, 2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಸೋಲನುಭವಿಸಿ ಫೈನಲ್ ಪ್ರವೇಶಿಸಲು ವಿಫಲವಾಗಿದ್ದ ಮೆನ್ ಇನ್ ಬ್ಲೂ, 12 ವರ್ಷಗಳ ನಂತರ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಮೊಹಮ್ಮದ್ ಶಮಿ ಅವರ ಬೆಂಕಿ-ಬಿರುಗಾಳಿ ಬೌಲಿಂಗ್ಗೆ ನ್ಯೂಜಿಲೆಂಡ್ ಶರಣಾಯಿತು. ಶಮಿ 7 ವಿಕೆಟ್ ಪಡೆದು ಗೆಲುವಿನ ರೂವಾರಿ ಎನಿಸಿದರು. ಭಾರತ 70 ರನ್ಗಳ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ರೋಹಿತ್ ಪಡೆ ಅಜೇಯ ಗೆಲುವಿನ ಓಟ ಮುಂದುವರೆಸಿತು.
ವಾಂಖೆಡೆ ಮೈದಾನದಲ್ಲಿ ನಡೆದ ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು. ವಿರಾಟ್ ಕೊಹ್ಲಿ 117 ರನ್, ಶ್ರೇಯಸ್ ಅಯ್ಯರ್ 105 ರನ್, ಶುಭ್ಮನ್ ಗಿಲ್ ಅಜೇಯ 80 ರನ್ ಗಳಿಸಿದರು. ಈ ಗುರಿ ಬೆನ್ನಟ್ಟಿದ ನಿಗದಿತ 48.5 ಓವರ್ಗಳಲ್ಲಿ 327 ರನ್ಗಳಿಗೆ ಆಲೌಟ್ ಆಯಿತು. ಡೇರಿಲ್ ಮಿಚೆಲ್ 134 ರನ್ ಗಳಿಸಿದರು. ಭಾರತದ ಪರ ಶಮಿ 7 ವಿಕೆಟ್ ಪಡೆದು ಮಿಂಚಿದರು.
ಕಿವೀಸ್ ದಿಟ್ಟ ಹೋರಾಟ
398 ರನ್ಗಳ ಬೃಹತ್ ಗುರಿಯನ್ನು ಹಿಂಬಾಲಿಸಿದ ಕಿವೀಸ್, ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ತಂಡದ ಮೊತ್ತ 39 ರನ್ ಆಗುವಷ್ಟರಲ್ಲಿ ಆರಂಭಿಕರನ್ನು ಕಳೆದುಕೊಂಡಿತು. ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ತಲಾ 13 ರನ್ ಸಿಡಿಸಿ ಮೊಹಮ್ಮದ್ ಶಮಿ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ ಈ ವೇಳೆ ನಾಯಕ ಕೇನ್ ವಿಲಿಯಮ್ಸನ್ ಮತ್ತು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡ್ಯಾರಿಲ್ ಮಿಚೆಲ್ ತುಂಬಾ ಕಾಡಿದರು.
3ನೇ ವಿಕೆಟ್ಗೆ 181 ರನ್ಗಳ ಜೊತೆಯಾಟ
ಮೊದಲ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ರಕ್ಷಣಾತ್ಮಕ ಆಟವಾಡಿದ ವಿಲಿಯಮ್ಸನ್ ಮತ್ತು ಮಿಚೆಲ್ ಭಾರತೀಯ ಬೌಲರ್ಗಳಿಗೆ ಬೆಂಡೆತ್ತಿದರು. ತಂಡವನ್ನು ರಕ್ಷಿಸಿದ ಈ ಜೋಡಿ 3ನೇ ವಿಕೆಟ್ಗೆ 149 ಎಸೆತಗಳಲ್ಲಿ 181 ರನ್ ಕಲೆ ಹಾಕಿತು. ಇದು ಭಾರತ ತಂಡದ ಆತಂಕ ಹೆಚ್ಚಿಸಿತು. ಬೌಲರ್ಗಳು ವಿಕೆಟ್ ಪಡೆಯಲು ಪರದಾಡಿದರು. ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿದರು. ಪಂದ್ಯಕ್ಕೆ ಗೆಲುವಿನ ಭರವಸೆ ಮೂಡಿಸಿದರು.
ಮಿಚೆಲ್ ಶತಕ, ವಿಲಿಯಮ್ಸನ್ ಅರ್ಧಶತಕ
ಭಾರತದ ಬೌಲರ್ಗಳನ್ನು ಕಾಡಿದ ಮಿಚೆಲ್, ಭರ್ಜರಿ ಶತಕ ಸಿಡಿಸಿದರು. ಆ ಮೂಲಕ ಕಿವೀಸ್ಗೆ ಜೀವ ತುಂಬಿದರು. ಮತ್ತೊಂದೆಡೆ ನಾಯಕ ವಿಲಿಯಮ್ಸನ್ ಅರ್ಧಶತಕ ಸಿಡಿಸಿ, ಮಿಚೆಲ್ಗೆ ಸಾಥ್ ನೀಡಿದರು. ಮೊದಲು ನಿಧಾನವಾಗಿ ಬ್ಯಾಟಿಂಗ್ ನಡೆಸಿದ ಈ ಜೋಡಿ, ಟೀಮ್ ಇಂಡಿಯಾ ಪಾಳಯದಲ್ಲಿ ಆತಂಕ ಇಮ್ಮಡಿಗೊಳಿಸಿತು. ವಿಲಿಯಮ್ಸನ್ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ 32.2ನೇ ಓವರ್ನಲ್ಲಿ ಮೊಹಮ್ಮದ್ ಶಮಿ, ಭಾರತಕ್ಕೆ ತಿರುವು ನೀಡಿದರು. ಒಂದೇ ಓವರ್ನಲ್ಲಿ 2 ವಿಕೆಟ್ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು. ವಿಲಿಯಮ್ಸನ್ 69 ರನ್ ಗಳಿಸಿ ಔಟಾದರೆ, ಟಾಮ್ ಲಾಥಮ್ ಡಕೌಟ್ಗೆ ಬಲಿಯಾದರು.
ಸತತ ವಿಕೆಟ್ ಕಳೆದುಕೊಂಡರೂ ಮಿಚೆಲ್ ಆರ್ಭಟ ನಿಲ್ಲಲ್ಲಿಲ್ಲ. ಏಕಾಂಗಿಯಾಗಿ ಹೋರಾಟ ನಡೆಸಿದರು. ಮಿಚೆಲ್ಗೆ ಸಖತ್ ಸಾಥ್ ನೀಡಿದ ಗ್ಲೆನ್ ಫಿಲಿಪ್ಸ್, ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಈ ಜೋಡಿ ಭಾರತದ ಪಾಳಯದಲ್ಲಿ ಮತ್ತೆ ಆತಂಕ ಹೆಚ್ಚಿಸಿತು. ಆದರೆ ಈ ವೇಳೆ ಬುಮ್ರಾ ಮತ್ತು ಕುಲ್ದೀಪ್ ವಿಕೆಟ್ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಫಿಲಿಪ್ಸ್ 41 ರನ್ ಗಳಿಸಿ ಔಟಾದರೆ, ಮಾರ್ಕ್ ಚಾಪ್ಮನ್ 2 ರನ್ ಗಳಿಸಿ ನಿರಾಸೆ ಮೂಡಿಸಿದರು.
ಸತತ ವಿಕೆಟ್ ಕಳೆದುಕೊಂಡರೂ ಏಕಾಂಗಿಯಾಗಿ ತಂಡಕ್ಕೆ ಆಸರೆಯಾಗುತ್ತಿದ್ದ ಮಿಚೆಲ್ಗೆ ಶಮಿ ಗೇಟ್ಪಾಸ್ ನೀಡಿದರು. 119 ಎಸೆತಗಳಲ್ಲಿ 9 ಬೌಂಡರಿ, 7 ಸಿಕ್ಸರ್ ಸಹಿತ 134 ರನ್ ಗಳಿಸಿ ಔಟಾದರು. ಇದು ಭಾರತದ ಆಟಗಾರರ ಮೊಗದಲ್ಲಿ ಮಂದಹಾಸ ಹೆಚ್ಚಿಸಿತು. ಪಂದ್ಯಕ್ಕೆ ಪ್ರಮುಖ ತಿರುವು ನೀಡಿದ ಶಮಿ, ಕೊನೆಯ ಎರಡೂ ವಿಕೆಟ್ ಪಡೆದು ದಾಖಲೆ ಬರೆದರು. ಒಟ್ಟು 7 ವಿಕೆಟ್ ಪಡೆದು ಸಂಭ್ರಮಿಸಿದರು. ಅಲ್ಲದೆ, ವಿಶ್ವಕಪ್ನಲ್ಲಿ 3ನೇ ಬಾರಿ 5+ ವಿಕೆಟ್ ಸಾಧನೆ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ರನ್ ಶಿಖರ ನಿರ್ಮಿಸಿದ ಭಾರತ
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಭರ್ಜರಿ ಆರಂಭ ಪಡೆಯಿತು. ರೋಹಿತ್ ಶರ್ಮಾ ಆಕ್ರಮಣಕಾರಿ ಆಟದ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ 47 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿ ಎಡವಿದರು. ಮೊದಲ ವಿಕೆಟ್ಗೆ 71 ರನ್ಗಳು ಹರಿದು ಬಂದವು. ಬಳಿಕ ಮತ್ತೊಬ್ಬ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಕಿವೀಸ್ ಬೌಲರ್ಗಳಿಗೆ ಬೆಂಡೆತ್ತಿದರು. ಈ ಜೋಡಿ ಅಜೇಯ 93 ರನ್ ಪೇರಿಸಿತು. ಈ ವೇಳೆ ಶುಭ್ಮನ್ ಗಿಲ್ ಅರ್ಧಶತಕ ಸಿಡಿಸಿ ಮಿಂಚಿದರು.
ಆದರೆ 79 ರನ್ ಗಳಿಸಿದ್ದ ವೇಳೆ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿ ರಿಟೈರ್ಡ್ ಹರ್ಟ್ ಆದರು. ಆ ಬಳಿಕ ಕೊಹ್ಲಿಗೆ ಜೊತೆಯಾದ ಶ್ರೇಯಸ್ ಅಯ್ಯರ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಈ ಜೋಡಿ 2ನೇ ವಿಕೆಟ್ಗೆ 128 ಎಸೆತಗಳಲ್ಲಿ 163 ರನ್ಗಳ ಜೊತೆಯಾಟದವಾಡಿತು. ಅಲ್ಲದೆ ಇಬ್ಬರೂ ಶತಕ ಸಿಡಿಸಿ ತಂಡದ ಮೊತ್ತವನ್ನು 400ರ ಸಮೀಪಕ್ಕೆ ತಂದು ನಿಲ್ಲಿಸಿದರು. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 50ನೇ ಶತಕ ಸಿಡಿಸಿ ವಿಶ್ವದಾಖಲೆ ಬರೆದರು.
ಕೊಹ್ಲಿ 113 ಎಸೆತಗಳಲ್ಲಿ 117 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 70 ಎಸೆತಗಳಲ್ಲಿ 105 ರನ್ಗಳಿಸಿದರು. ಮತ್ತೊಂದೆಡೆ ರಿಟೈರ್ಡ್ ಹರ್ಟ್ ಆಗಿದ್ದ ಶುಭ್ಮನ್ ಕೊನೆಯಲ್ಲಿ ಕಣಕ್ಕಿಳಿದು ಅಜೇಯರಾಗಿ ಉಳಿದರು. ಕೆಎಲ್ ರಾಹುಲ್ ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿದರು. ಪರಿಣಾಮ 20 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು. ಇದರೊಂದಿಗೆ ಭಾರತ ಸ್ಕೋರ್ ಬೋರ್ಡ್ನಲ್ಲಿ 397 ರನ್ಗಳ ಬೃಹತ್ ಮೊತ್ತ ಪೇರಿಸಿತು.