logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬಿಸಿಸಿಐ-ಪಿಸಿಬಿ ಜಗಳದ ನಡುವೆ ಈ ವಾರ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ ಸಾಧ್ಯತೆ; ಪಾಕಿಸ್ತಾನಕ್ಕೆ ತೆರಳುತ್ತಾ ಭಾರತ?

ಬಿಸಿಸಿಐ-ಪಿಸಿಬಿ ಜಗಳದ ನಡುವೆ ಈ ವಾರ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ ಸಾಧ್ಯತೆ; ಪಾಕಿಸ್ತಾನಕ್ಕೆ ತೆರಳುತ್ತಾ ಭಾರತ?

Jayaraj HT Kannada

Nov 19, 2024 04:56 PM IST

google News

ಬಿಸಿಸಿಐ-ಪಿಸಿಬಿ ಜಗಳದ ನಡುವೆ ಈ ವಾರ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ ಸಾಧ್ಯತೆ

    • ಈ ವಾರದ ಅಂತ್ಯದ ವೇಳೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಟೂರ್ನಿಯ ಆಯೋಜನೆ ಕುರಿತಂತೆ ಇದುವರೆಗೂ ಸ್ಪಷ್ಟನೆ ಸಿಕ್ಕಿಲ್ಲ. ಪಾಕಿಸ್ತಾನಕ್ಕೆ ಆತಿಥ್ಯ ಹಕ್ಕು ಸಿಕ್ಕಿದ್ದರೂ, ಭಾರತವು ಪಾಕ್‌ ಪ್ರವಾಸ ಮಾಡಲ್ಲ ಎಂದು ಬಿಸಿಸಿಐ ಹೇಳಿದೆ.
ಬಿಸಿಸಿಐ-ಪಿಸಿಬಿ ಜಗಳದ ನಡುವೆ ಈ ವಾರ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ ಸಾಧ್ಯತೆ
ಬಿಸಿಸಿಐ-ಪಿಸಿಬಿ ಜಗಳದ ನಡುವೆ ಈ ವಾರ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ ಸಾಧ್ಯತೆ (PTI)

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಾವಳಿ ನಡೆಯಲು ಇನ್ನು ಮೂರು ತಿಂಗಳಷ್ಟೇ ಬಾಕಿ ಉಳಿದಿವೆ. ಪಂದ್ಯಾವಳಿಗೆ ಪಾಕಿಸ್ತಾನ ಆತಿಥ್ಯ ನೀಡಬೇಕಿದೆ. ಆದರೆ ಪಂದ್ಯಗಳು ನಡೆಯುವ ಸ್ಥಳಗಳು ಮತ್ತು ವೇಳಾಪಟ್ಟಿ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಎಂಟು ತಂಡಗಳು ಭಾಗವಹಿಸುವ ಪ್ರಮುಖ ಪಂದ್ಯಾವಳಿಯಲ್ಲಿ ಆಡಲು ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಭಾರತ ಒಪ್ಪುತ್ತಿಲ್ಲ. ಈ ಐಸಿಸಿ ಈವೆಂಟ್ ಪಾಕಿಸ್ತಾನದ ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯಲ್ಲಿ ನಡೆಯಬೇಕಿತ್ತು. ಆದರೆ ಭಾರತವು ಪಾಕಿಸ್ತಾನದ ಗಡಿಯಾಚೆಗೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಕಡ್ಡಿಮುರಿದಂತೆ ಹೇಳಿದೆ. ಇದನ್ನು ಐಸಿಸಿಗೆ ದೃಢಪಡಿಸಿದ ನಂತರ ಪಂದ್ಯಾವಳಿಯ ಆತಿಥ್ಯ ಏನಾಗಲಿದೆ ಎಂಬ ಬಗ್ಗೆ ಮತ್ತಷ್ಟು ಗೊಂದಲವಿದೆ.

ಭಾರತವು ಪಾಕಿಸ್ತಾನ ಪ್ರವಾಸ ಮಾಡಲು ಸಿದ್ಧವಿಲ್ಲ ಎಂದು ಹೇಳಿದ ಬಳಿಕ, ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಪಿಸಿಬಿಯನ್ನು ಮನವೊಲಿಸಲು ಐಸಿಸಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಪಾಕಿಸ್ತಾನದಲ್ಲಿ ಆಡಲು ಬಯಸದ ಭಾರತ, ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಡಲು ಎದುರು ನೋಡುತ್ತಿದೆ.

ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯನ್ನು ಈ ವಾರದ ಅಂತ್ಯದ ವೇಳೆಗೆ ಘೋಷಿಸುವ ನಿರೀಕ್ಷೆಯಿದೆ ಎಂದು ಇಂಡಿಯಾ ಟುಡೇ ವರದಿ ಹೇಳಿದೆ. “ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯ ಬಗ್ಗೆ ನಾವು ಇನ್ನೂ ಆತಿಥೇಯ ಪಾಕಿಸ್ತಾನ ಮತ್ತು ಭಾಗವಹಿಸುವ ಸದಸ್ಯ ರಾಷ್ಟ್ರಗಳೊಂದಿಗೆ ಚರ್ಚಿಸುತ್ತಿದ್ದೇವೆ. ಇದು ಶೀಘ್ರದಲ್ಲೇ ಹೊರಬರಬಹುದು. ಬಹುಶಃ ಒಂದೆರಡು ದಿನಗಳಲ್ಲಿ ವೇಳಾಪಟ್ಟಿ ಬಹಿರಂಗವಾಗಲಿದೆ” ಎಂದು ಮೂಲವನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

ಹೈಬ್ರಿಡ್ ಮಾದರಿಯಲ್ಲಿ ನಡೆಸಲ್ಲ

ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಪಂದ್ಯಾವಳಿಯನ್ನು ಸಂಪೂರ್ಣವಾಗಿ ಪಾಕ್‌ ನೆಲದಲ್ಲೇ ನಡೆಸುವ ವಿಶ್ವಾಸದಲ್ಲಿದ್ದಾರೆ. ನವೆಂಬರ್‌ 18ರ ಸೋಮವಾರ ಸಂಜೆ ಮಾತನಾಡಿದ ಅವರು, ಇಡೀ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಡಲಾಗುವುದು ಎಂದು ಹೇಳಿದರು. ಅಲ್ಲದೆ 'ಹೈಬ್ರಿಡ್ ಮಾದರಿ' ಕಲ್ಪನೆಯನ್ನು ನಿರಾಕರಿಸಿದರು.

ಟೂರ್ನಿ ಆಯೋಜನೆ ಕುರಿತು ಬಿಸಿಸಿಐ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡುವೆ ವಾಕ್ಸಮರ ಮುಂದುವರೆದಿದೆ. ಇತ್ತೀಚೆಗೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿಗೆ ಪತ್ರ ಬರೆದು, ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಪಾಕಿಸ್ತಾನ ಪ್ರವಾಸಕ್ಕೆ ಮಾಡಲು ಭಾರತ ನಿರಾಕರಿಸಿದ್ದರ ಹಿಂದಿನ ಕಾರಣಗಳನ್ನು ಕೇಳಿದ್ದಾರೆ.

ಭಾರತಕ್ಕೆ ಯಾವುದೇ ಸಮಸ್ಯೆ ಇದ್ದರೂ ನಾವು ಬಗೆಹರಿಸುತ್ತೇವೆ

ಸುದ್ದಿಗಾರರೊಂದಿಗೆ ಮಾತನಾಡಿದ ನಖ್ವಿ, “ಭಾರತವನ್ನು ಹೊರತುಪಡಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ ಎಲ್ಲಾ ತಂಡಗಳು ಪಾಕಿಸ್ತಾನಕ್ಕೆ ಬರಲು ಸಿದ್ಧವಾಗಿವೆ. ಯಾವ ತಂಡಕ್ಕೂ ಯಾವುದೇ ಸಮಸ್ಯೆ ಇಲ್ಲ. ಭಾರತಕ್ಕೆ ಯಾವುದೇ ಸಮಸ್ಯೆಗಳಿದ್ದರೆ ಅವರು ನಮ್ಮೊಂದಿಗೆ ಮಾತನಾಡಬೇಕು ಎಂದು ನಾನು ಇಂದಿಗೂ ಹೇಳುತ್ತೇನೆ. ನಾವು ಭಾರತದ ಯಾವುದೇ ಕಳವಳಗಳನ್ನು ಪರಿಹರಿಸುತ್ತೇವೆ. ಎಲ್ಲಾ ತಂಡಗಳು ಪಾಕಿಸ್ತಾನಕ್ಕೆ ಬರುತ್ತವೆ,” ಎಂದು ಅವರು ಹೇಳಿದರು.

ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಪಾಕಿಸ್ತಾನದ ಮಾಧ್ಯಮಗಳ ವರದಿಗಳ ಪ್ರಕಾರ, ಪಂದ್ಯಾವಳಿಯು ಹೈಬ್ರಿಡ್ ಮಾದರಿಯಲ್ಲಿ ಮುಂದುವರಿದರೆ ಅಥವಾ ಬೇರೆಡೆಗೆ ಸ್ಥಳಾಂತರಿಸಿದರೆ ಪಿಸಿಬಿ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯಬಹುದು.

“ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ. ನಾವು ಇದನ್ನು ಮೊದಲೇ ಹೇಳಿದ್ದೇವೆ. ಐಸಿಸಿ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಬೇಕಿದೆ. ವೇಳಾಪಟ್ಟಿಯನ್ನು ಘೋಷಿಸಲು ನಾವು ಕಾಯುತ್ತಿದ್ದೇವೆ. ವೇಳಾಪಟ್ಟಿಯನ್ನು ಘೋಷಿಸಿದ ತಕ್ಷಣ, ನಾವು ನಮ್ಮ ಸಿದ್ಧತೆಗಳನ್ನು ಪ್ರಾರಂಭಿಸುತ್ತೇವೆ” ಎಂದು ನಖ್ವಿ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ