logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸೆಮೀಸ್‌ನಲ್ಲಿ ಭಾರತದ ಎದುರಾಳಿ ಯಾರು; ಮರುಕಳಿಸುತ್ತಾ 2022ರ ಫಲಿತಾಂಶ? ಹೀಗಿದೆ ಟಿ20 ವಿಶ್ವಕಪ್‌ ಸೆಮಿಫೈನಲ್‌ ವೇಳಾಪಟ್ಟಿ

ಸೆಮೀಸ್‌ನಲ್ಲಿ ಭಾರತದ ಎದುರಾಳಿ ಯಾರು; ಮರುಕಳಿಸುತ್ತಾ 2022ರ ಫಲಿತಾಂಶ? ಹೀಗಿದೆ ಟಿ20 ವಿಶ್ವಕಪ್‌ ಸೆಮಿಫೈನಲ್‌ ವೇಳಾಪಟ್ಟಿ

Jayaraj HT Kannada

Jun 25, 2024 12:51 PM IST

google News

ಹೀಗಿದೆ ಟಿ20 ವಿಶ್ವಕಪ್‌ ಸೆಮಿಫೈನಲ್‌ ವೇಳಾಪಟ್ಟಿ; ಸೆಮೀಸ್‌ನಲ್ಲಿ ಭಾರತದ ಎದುರಾಳಿ ಯಾರು

    • 2024ರ ಟಿ20 ವಿಶ್ವಕಪ್‌ ಸೆಮಿಫೈನಲ್ ಪಂದ್ಯಗಳ ಸೆಮಿಫೈನಲ್‌ ಪಂದ್ಯಗಳ ವೇಳಾಪಟ್ಟಿ ಅಂತಿಮವಾಗಿದೆ. ಭಾರತದ ಎದುರಾಳಿ ತಂಡ, ಪಂದ್ಯದ ಸಮಯ, ಸ್ಥಳ ಸೇರಿದಂತೆ ಸಂಪೂರ್ಣ ವಿವರಗಳು ಇಲ್ಲಿದೆ.
ಹೀಗಿದೆ ಟಿ20 ವಿಶ್ವಕಪ್‌ ಸೆಮಿಫೈನಲ್‌ ವೇಳಾಪಟ್ಟಿ; ಸೆಮೀಸ್‌ನಲ್ಲಿ ಭಾರತದ ಎದುರಾಳಿ ಯಾರು
ಹೀಗಿದೆ ಟಿ20 ವಿಶ್ವಕಪ್‌ ಸೆಮಿಫೈನಲ್‌ ವೇಳಾಪಟ್ಟಿ; ಸೆಮೀಸ್‌ನಲ್ಲಿ ಭಾರತದ ಎದುರಾಳಿ ಯಾರು

ಒಟ್ಟು 20 ತಂಡಗಳೊಂದಿಗೆ ಆರಂಭವಾದ ಐಸಿಸಿ ಟಿ20 ವಿಶ್ವಕಪ್‌ 2024ರ ಪಂದ್ಯಾವಳಿಯಲ್ಲಿ ಬರೋಬ್ಬರಿ 52 ಪಂದ್ಯಗಳ ಬಳಿಕ ಸೆಮಿಫೈನಲ್ ತಲುಪಿದ ನಾಲ್ಕು ತಂಡಗಳು ಅಂತಿಮವಾಗಿವೆ. 8 ತಂಡಗಳ ಸೂಪರ್‌ 8 ಹಂತದಲ್ಲಿ ನಾಲ್ಕು ತಂಡಗಳು ಹೊರಬಿದ್ದಿವೆ. ಮೊದಲ ಗುಂಪಿನಿಂದ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ತಂಡಗಳು ಹೊರಬಿದ್ದರೆ, ಎರಡನೇ ಗುಂಪಿನಿಂದ ವೆಸ್ಟ್‌ ಇಂಡೀಸ್‌ ಹಾಗೂ ಯುಎಸ್‌ಎ ತಂಡ ನಿರ್ಗಮಿಸಿವೆ. ಇದರೊಂದಿಗೆ ನಾಲ್ಕು ತಂಡಗಳ ನಡುವಿನ ಸೆಮಿಫೈನಲ್‌ ಹಣಾಹಣಿಗೆ ಅಖಾಡ ಸಿದ್ಧವಾಗಿದೆ. ಯುಎಸ್ಎ ವಿರುದ್ಧ ಭರ್ಜರಿ ಗೆಲುವಿನ ನಂತರ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಮೊದಲ ತಂಡವಾಗಿ ಸೆಮೀಸ್‌ ಅರ್ಹತೆ ಪಡೆಯಿತು. ಗ್ರೂಪ್ 1ರಿಂದ ದಕ್ಷಿಣ ಆಫ್ರಿಕಾ ಎರಡನೇ ತಂಡವಾಗಿ ಸೆಮೀಸ್‌ ಲಗ್ಗೆ ಹಾಕಿತು.

ಸೇಂಟ್ ಲೂಸಿಯಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 24 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡವು ವಿಶ್ವಕಪ್‌ನಲ್ಲಿ ಅಜೇಯ ದಾಖಲೆಯೊಂದಿಗೆ ಮೂರನೇ ತಂಡವಾಗಿ ಸೆಮಿಫೈನಲ್‌ ಟಿಕೆಟ್‌ ಪಡೆಯಿತು. ಅಲ್ಲಿಗೆ ಕೊನೆಯ ಒಂದು ತಂಡಕ್ಕಾಗಿ ನಡೆದ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯ ರೋಚಕತೆ ಸೃಷ್ಟಿಸಿತು. ಕಿಂಗ್ಸ್ ಟೌನ್‌ನಲ್ಲಿ ನಡೆದ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ ನಾಲ್ಕನೇ ತಂಡವಾಗಿ ಸೆಮಿಫೈನಲ್‌ ಪ್ರವೇಶಿಸಿತು. ಅಲ್ಲಿಗೆ ಬಾಂಗ್ಲಾದೇಶದೊಂದಿಗೆ ಆಸ್ಟ್ರೇಲಿಯಾ ಕೂಡಾ ಟೂರ್ನಿಯಿಂದ ಹೊರಬಿತ್ತು.

ಇದೀಗ ಎ ಗುಂಪಿನಿಂದ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಸೆಮೀಸ್‌ ಅರ್ಹತೆ ಪಡೆದರೆ, ಬಿ ಗುಂಪಿನಿಂದ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟಿಕೆಟ್‌ ಪಡೆದಿವೆ. ಹಾಗಿದ್ದರೆ, ಸೆಮಿಫೈನಲ್‌ ಪಂದ್ಯಗಳು ಯಾವಾಗ ನಡೆಯಲಿದೆ? ಭಾರತದ ಎದುರಾಳಿ ಯಾರು? ಎಂಬ ವಿವರ ಹೀಗಿದೆ.

ಟಿ20 ವಿಶ್ವಕಪ್ ಸೆಮಿಫೈನಲ್ ಸಂಪೂರ್ಣ ವೇಳಾಪಟ್ಟಿ

ಐಸಿಸಿ ಟೂರ್ನಮೆಂಟ್ ಸ್ವರೂಪದ ಪ್ರಕಾರ, ಆಯಾ ಸೂಪರ್ 8 ಗುಂಪುಗಳ ಅಗ್ರಸ್ಥಾನಿಯು ಮತ್ತೊಂದು ಗುಂಪಿನ ಎರಡನೇ ಸ್ಥಾನಿಯನ್ನು ಸೆಮಿಫೈನಲ್‌ನಲ್ಲಿ ಎದುರಿಸುತ್ತದೆ. ಅದರ ಪ್ರಕಾರ ಸೆಮಿಫೈನಲ್ ವೇಳಾಪಟ್ಟಿ ಹೀಗಿದೆ.

  • ಸೆಮಿಫೈನಲ್ 1: ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ, ಜೂನ್ 27, ಬೆಳಗ್ಗೆ 6:00 ಗಂಟೆ. (ಬ್ರಿಯಾನ್ ಲಾರಾ ಸ್ಟೇಡಿಯಂ, ತರೌಬಾ, ಟ್ರಿನಿಡಾಡ್)
  • ಸೆಮಿ ಫೈನಲ್ 2: ಭಾರತ vs ಇಂಗ್ಲೆಂಡ್, ಜೂನ್ 27, ರಾತ್ರಿ 8:00 ಗಂಟೆ (ಪ್ರಾವಿಡೆನ್ಸ್ ಸ್ಟೇಡಿಯಂ, ಗಯಾನಾ)

ಇದನ್ನೂ ಒದಿ‌ | ಒಂದು ಟೂರ್ನಿ, 2 ಬಾರಿ ಡಕೌಟ್, ಕಳಪೆ ಸರಾಸರಿ; ಟಿ20 ವಿಶ್ವಕಪ್‌ನಲ್ಲಿ ಅನಗತ್ಯ ದಾಖಲೆ ಬರೆದ ವಿರಾಟ್ ಕೊಹ್ಲಿ

ಮೊದಲ ಸೆಮಿಫೈನಲ್ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಜೂನ್‌ 27ರ ಗುರುವಾರ ಬೆಳಗ್ಗೆ 6:00 ಗಂಟೆಗೆ ಆರಂಭವಾಗಲಿದೆ. ಎರಡನೇ ಸೆಮಿಫೈನಲ್ ಪಂದ್ಯವು ಅದೇ ದಿನ ರಾತ್ರಿ 8:00 ಗಂಟೆಗೆ ನಡೆಯಲಿದೆ.

ಭಾರತ - ಇಂಗ್ಲೆಂಡ್‌ ಮುಖಾಮುಖಿ

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇದು ಏಳನೇ ಬಾರಿ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಈವರೆಗೆ ಭಾರತವು ಆಂಗ್ಲರ ವಿರುದ್ಧ 4-2 ಅಂತರದಲ್ಲಿ ಮುನ್ನಡೆ ಸಾಧಿಸಿದೆ. 2022ರ ಆವೃತ್ತಿಯ ಸೆಮಿ ಕದನದಲ್ಲಿಯೂ ಜೋಸ್ ಬಟ್ಲರ್ ಪಡೆಯ ವಿರುದ್ಧ ಭಾರತ ಕಣಕ್ಕಿಳಿದಿತ್ತು. ಆದರೆ 10 ವಿಕೆಟ್‌ಗಳಿಂದ ಹೀನಾಯವಾಗಿ ಸೋತಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ