logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್: ಸ್ಟಾರ್ ಪ್ಲೇಯರ್ ಸರಣಿಯಿಂದಲೇ ಔಟ್

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್: ಸ್ಟಾರ್ ಪ್ಲೇಯರ್ ಸರಣಿಯಿಂದಲೇ ಔಟ್

Prasanna Kumar P N HT Kannada

Oct 06, 2024 11:00 AM IST

google News

ಭಾರತ ಟಿ20 ಕ್ರಿಕೆಟ್ ತಂಡ

    • Shivam Dube: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಶಿವಂ ದುಬೆ ಗಾಯದ ಬಗ್ಗೆ ಮಾಹಿತಿ ನೀಡಿದ್ದು, ಮೂರು ಪಂದ್ಯಗಳ ಸರಣಿಯಿಂದ ಅವರನ್ನು ಹೊರಗಿಡಲಾಗಿದೆ ಎಂದು ತಿಳಿಸಿದೆ. ದುಬೆ ಅವರಿಗೆ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಂಡಿದೆ.
ಭಾರತ ಟಿ20 ಕ್ರಿಕೆಟ್ ತಂಡ
ಭಾರತ ಟಿ20 ಕ್ರಿಕೆಟ್ ತಂಡ

IND vs BAN 1st T20I: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಇಂದು ಚಾಲನೆ ಸಿಗಲಿದೆ. ಅಕ್ಟೋಬರ್ 6 ಭಾನುವಾರದಿಂದ ಗ್ವಾಲಿಯರ್‌ನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಬಾಂಗ್ಲಾವನ್ನು ಮೊದಲ ಟಿ20 ಯಲ್ಲಿ ಎದುರಿಸಲಿದೆ. ಆದರೆ, ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ ಉಂಟಾಗಿದ್ದು, ಸ್ಟಾರ್ ಆಲ್‌ರೌಂಡರ್ ಶಿವಂ ದುಬೆ ಗಾಯದ ಸಮಸ್ಯೆಯಿಂದ ಸಂಪೂರ್ಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ದುಬೆ ಗಾಯದ ಬಗ್ಗೆ ಮಾಹಿತಿ ನೀಡಿದ್ದು, ಮೂರು ಪಂದ್ಯಗಳ ಸರಣಿಯಿಂದ ಅವರನ್ನು ಹೊರಗಿಡಲಾಗಿದೆ ಎಂದು ತಿಳಿಸಿದೆ. ದುಬೆ ಅವರಿಗೆ ಬೆನ್ನುನೋವಿನ ಸಮಸ್ಯೆ ಇದ್ದು, ಈ ಕಾರಣದಿಂದಾಗಿ ಅವರು ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಮಂಡಳಿ ತಿಳಿಸಿದೆ.

ಆದರೆ, ಶಿವಂ ದುಬೆ ಅವರಿಗೆ ಯಾವಾಗ ಮತ್ತು ಹೇಗೆ ಗಾಯವಾಯಿತು ಎಂಬುದನ್ನು ಬಿಸಿಸಿಐ ತಿಳಿಸಿಲ್ಲ. ಅಲ್ಲದೆ, ಸದ್ಯಕ್ಕೆ ಇದು ಎಷ್ಟು ಗಂಭೀರವಾಗಿದೆ ಎಂಬ ಮಾಹಿತಿ ಕೂಡ ಇಲ್ಲ. ದುಬೆ ಅವರು ಅವರು ಟೀಮ್ ಇಂಡಿಯಾದೊಂದಿಗೆ ಗ್ವಾಲಿಯರ್​ನಲ್ಲಿದ್ದರು ಮತ್ತು ಅಭ್ಯಾಸದಲ್ಲಿ ಭಾಗವಹಿಸುತ್ತಿದ್ದರು. ಸದ್ಯ ಬಿಸಿಸಿಐನ ಕೇಂದ್ರ ಒಪ್ಪಂದದ ಭಾಗವಾಗಿರುವ ಶಿವಂ ದುಬೆ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ವೈದ್ಯಕೀಯ ತಂಡದ ಅಡಿಯಲ್ಲಿ ಫಿಟ್‌ನೆಸ್‌ಗೆ ಮರಳಲು ಕೆಲಸ ಮಾಡುತ್ತಾರೆ.

ದುಬೆ ಬದಲಿಗೆ ತಿಲಕ್​ಗೆ ಸ್ಥಾನ

ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಭಾಗವಾಗಿದ್ದ ಶಿವಂ ದುಬೆ ಶ್ರೀಲಂಕಾ ಪ್ರವಾಸಕ್ಕೂ ಆಯ್ಕೆಯಾಗಿದ್ದರು. ಆದರೆ, ಸಿಂಹಳೀಯರ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ ತಂಡದಲ್ಲಿ ಸ್ಥಾನ ಪಡೆದರು. ಕಳೆದ ತಿಂಗಳು, ಶಿವಂ ದುಲೀಪ್ ಟ್ರೋಫಿ ಪಂದ್ಯದಲ್ಲೂ ಭಾಗವಹಿಸಿದ್ದರು, ಅಲ್ಲಿ ಅವರು 2 ಇನ್ನಿಂಗ್ಸ್‌ಗಳಲ್ಲಿ ಕೇವಲ 34 ರನ್ ಗಳಿಸಿದರು. ಹೀಗಾಗಿ ಇವರ ಇತ್ತೀಚಿನ ಫಾರ್ಮ್​ ಕೂಡ ಟೀಮ್ ಇಂಡಿಯಾದ ಚಿಂತೆಗೆ ಕಾರಣವಾಗಿತ್ತು.

ಸದ್ಯ ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಆಯ್ಕೆ ಸಮಿತಿಯು ಶಿವಂ ದುಬೆ ಬದಲಿಗೆ ಯುವ ಎಡಗೈ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ. ತಂಡಕ್ಕೆ ಆಯ್ಕೆಯಾಗದಿದ್ದಕ್ಕೆ ತಿಲಕ್ ಆರಂಭದಲ್ಲಿ ಬೇಸರ ವ್ಯಕ್ತಪಡಿಸಿದ್ದರು. 21 ವರ್ಷದ ತಿಲಕ್ ಫಿಟ್ ಇಲ್ಲದ ಕಾರಣ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರಲಿಲ್ಲ. ಇವರು ಈ ವರ್ಷದ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ ಪರ ಕೊನೆಯ ಪಂದ್ಯವನ್ನು ಆಡಿದ್ದರು. ಇತ್ತೀಚೆಗೆ, ಅವರು ದುಲೀಪ್ ಟ್ರೋಫಿಯಲ್ಲಿ ಎರಡು ಪಂದ್ಯಗಳನ್ನು ಆಡಿ ಶತಕವನ್ನೂ ಗಳಿಸಿದ್ದರು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ