ಶೂ ಕೊಳ್ಳಲು ಕೂಡಾ ಹಣವಿರಲಿಲ್ಲ; ಸಂಕಷ್ಟದ ದಿನಗಳಲ್ಲಿ ನೆರವಾದ ಆಟಗಾರನ ಕುರಿತು ಶಾರ್ದುಲ್ ಠಾಕೂರ್ ಮಾತು
Mar 12, 2024 10:10 AM IST
ಸಂಕಷ್ಟದ ದಿನಗಳಲ್ಲಿ ನೆರವಾದ ಆಟಗಾರನ ಕುರಿತು ಶಾರ್ದುಲ್ ಠಾಕೂರ್ ಮಾತು
- Shardul Thakur: ರಣಜಿ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡುವ ಶಾರ್ದುಲ್ ಠಾಕೂರ್ ಹಾಗೂ ಕುಲಕರ್ಣಿ ನಡುವೆ ಉತ್ತಮ ಬಾಂಧವ್ಯವಿದೆ. ಭಾರತದ ಪ್ರಮುಖ ಆಲ್‌ರೌಂಡರ್ ಶಾರ್ದುಲ್, ತಮ್ಮ ವೃತ್ತಿಬದುಕಿನ ಸಂಕಷ್ಟದ ದಿನಗಳಲ್ಲಿ ಕುಲಕರ್ಣಿ ನೀಡಿದ ನೆರವಿನ ಬಗ್ಗೆ ಮಾತನಾಡಿದ್ದಾರೆ.
ಮುಂಬೈ ಮತ್ತು ವಿದರ್ಭ ತಂಡಗಳು ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕಾದಾಡುತ್ತಿವೆ. ದಾಖಲೆಯ 42ನೇ ಪ್ರಶಸ್ತಿ ಮೇಲೆ ಮುಂಬೈ ತಂಡ ಕಣ್ಣಿಟ್ಟಿದೆ. ಸದ್ಯ ಫೈನಲ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಮುಂಬೈ ಮುನ್ನಡೆಯಲ್ಲಿದೆ. ಈ ಬಾರಿಯ ರಣಜಿ ಟೂರ್ನಿಯ ಬಳಿಕ ಹಲವು ಕ್ರಿಕೆಟಿಗರು ನಿವೃತ್ತಿ ಪಡೆದಿದ್ದಾರೆ. ಮುಂಬೈ ತಂಡದ ಅನುಭವಿ ವೇಗದ ಬೌಲರ್ ಧವಳ್ ಕುಲಕರ್ಣಿ ಕೂಡಾ, ಟೂರ್ನಿಯ ಅಂತ್ಯದಲ್ಲಿ ನಿವೃತ್ತ ಪಡೆಯಲಿದ್ದಾರೆ. ಇದು ಮುಂಬೈ ತಂಡದ ಪಾಲಿಗೆ ಭಾವನಾತ್ಮಕ ಕ್ಷಣ.
ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ತಂಡದ ಅನುಭವಿ ಆಟಗಾರರು ವಿಫಲರಾದಾಗ, ಮುಂಬೈ ಪರ ಕ್ರೀಸ್‌ಕಚ್ಚಿ ಆಡಿದವರು ಶಾರ್ದುಲ್ ಠಾಕೂರ್. ಶಾರ್ದುಲ್ ಹಾಗೂ ಕುಲಕರ್ಣಿ ನಡುವೆ ಉತ್ತಮ ಬಾಂಧವ್ಯವಿದೆ. ಇದಕ್ಕೆ ಕಾರಣವೂ ಇದೆ. ಭಾರತದ ಪ್ರಮುಖ ಆಲ್‌ರೌಂಡರ್ ಆಗಿರುವ ಶಾರ್ದುಲ್, ತಮ್ಮ ವೃತ್ತಿಬದುಕಿನ ಆರಂಭಿಕ ಸಂಕಷ್ಟದ ದಿನಗಳಲ್ಲಿ ಕುಲಕರ್ಣಿ ನೀಡಿದ ನೆರವಿನ ಬಗ್ಗೆ ಮಾತನಾಡಿದ್ದಾರೆ.
“ಇದು ಕುಲಕರ್ಣಿಯ ಕೊನೆಯ ಪಂದ್ಯ. ಅವರಿಗೆ ಮಾತ್ರವಲ್ಲದೆ ನನಗೆ ಇದು ಅತ್ಯಂತ ಭಾವನಾತ್ಮಕ ಕ್ಷಣ. ಏಕೆಂದರೆ ನಾನು ಅವರನ್ನು ಬಾಲ್ಯದಿಂದಲೂ ನೋಡುತ್ತಾ ಬಂದಿದ್ದೇನೆ. ನನ್ನ ಬೌಲಿಂಗ್ ಕುರಿತಾಗಿಯೂ ಅವರು ನನಗೆ ಸಹಾಯ ಮಾಡಿದ್ದಾರೆ. ನನ್ನ ಬಳಿ ಶೂ ಕೊಂಡುಕೊಳ್ಳಲು ಹಣವಿಲ್ಲದಿದ್ದಾಗ, ಅವರು ನನಗೆ ಶೂಗಳನ್ನು ಕೊಡಿಸಿದರು. ಅವರು ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ” ಎಂದು ಠಾಕೂರ್ ಹೇಳಿದ್ದಾರೆ.
ಇದನ್ನೂ ಓದಿ | ಐಪಿಎಲ್ ಅಲ್ಲ, ಟಿ20 ವಿಶ್ವಕಪ್‌ಗೂ ಇಲ್ಲ; ಮೊಹಮ್ಮದ್ ಶಮಿ ಮತ್ತೆ ಮೈದಾನಕ್ಕಿಳಿಯುವ ದಿನ ತಿಳಿಸಿದ ಜಯ್ ಶಾ
“ನನಗೆ ಕಠಿಣ ಪರಿಸ್ಥಿತಿಗಳಲ್ಲಿ ಆಡಲು ಇಷ್ಟ. ಯಾಕಂದ್ರೆ ಅಂಥಾ ಪರಿಸ್ಥಿತಿಯಲ್ಲಿ ಬೆಳೆದು ಬಂದಿದ್ದೇನೆ. ನಾನು ಪಾಲ್ಘರ್‌ನಿಂದ ದೂರದ ಮುಂಬೈವರೆಗೆ ರೈಲಿನಲ್ಲಿ ಕಿಟ್ ಬ್ಯಾಗ್‌ನೊಂದಿಗೆ ಪ್ರಯಾಣಿಸುತ್ತಿದ್ದೆ. ಅದು ನನಗೆ ತುಂಬಾ ಕಲಿಸಿದೆ.ಸುಲಭವಲ್ಲ ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ ನಾನು ಕಠಿಣ ಪರಿಸ್ಥಿತಿ, ಸವಾಲಿನ ಪರಿಸ್ಥಿತಿಯನ್ನು ಎದುರಿಸಿದಾಗಲೆಲ್ಲಾ ಅದೇನೂ ಭಿನ್ನವಾಗಿರುವುದಿಲ್ಲ. ನಾನು ಬೆಳೆಯುತ್ತಿರುವಾಗಲೇ ಇದ್ದ ಮನಸ್ಥಿತಿಯನ್ನೇ ಇಲ್ಲೂ ಪ್ರಯೋಗಿಸುತ್ತೇನೆ” ಎಂದು ಶಾರ್ದುಲ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | ರಣಜಿ ಟ್ರೋಫಿ ಫೈನಲ್; ಅಜಿಂಕ್ಯಾ ರಹಾನೆ-ಮುಶೀರ್ ಖಾನ್ ಜೊತೆಯಾಟ, ವಿದರ್ಭ ವಿರುದ್ಧ ಮುನ್ನಡೆಯಲ್ಲಿ ಮುಂಬೈ
ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ ಮುಂಬೈ ತಂಡವು ಸುಸ್ಥಿತಿಯಲ್ಲಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಅಜಿಂಕ್ಯಾ ರಹಾನೆ ಬಳಗವು 260 ರನ್‌ಗಳ ಮುನ್ನಡೆಯಲ್ಲಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವಿಫಲವಾಗಿದ್ದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕನಾಟವಾಡಿದ ಅಜಿಂಕ್ಯಾ ರಹಾನೆ, ಅಜೇಯ 58 ರನ್‌ಗಳೊಂದಿಗೆ ಮೂರನೇ ದಿನಕ್ಕೆ ಬ್ಯಾಟಿಂಗ್ ಮಾಡಲಿದ್ದಾರೆ.
260 ರನ್‌ಗಳ ಮುನ್ನಡೆ
ಮೊದಲ ಇನ್ನಿಂಗ್ಸ್‌ನಲ್ಲಿ 224 ರನ್‌ಗಳಿಗೆ ಆಲೌಟ್ ಆಗಿದ್ದ ಮುಂಬೈ, ಸೋಮವಾರ ದಿನದ ಅಂತ್ಯದಲ್ಲಿ ವಿದರ್ಭ ವಿರುದ್ಧ 260 ರನ್‌ಗಳ ಮುನ್ನಡೆ ಸಾಧಿಸಿದೆ. ಮುಶೀರ್ ಖಾನ್ ಔಟಾಗದೆ 51 ರನ್ ಗಳಿಸಿದ್ದಾರೆ. ಅನುಭವಿ ನಾಯಕ ರಹಾನೆ, ಅಜೇಯರಾಗಿ ಉಳಿದಿದ್ದಾರೆ. ಸದ್ಯ, 42ನೇ ರಣಜಿ ಪ್ರಶಸ್ತಿಗೆ ಎದುರು ನೋಡುತ್ತಿರುವ ಮುಂಬೈ ತಂಡವು 141/2 ರನ್‌ಗಳೊಂದಿಗೆ ಎರಡನೇ ದಿನದಾಟ ಮುಗಿಸಿದೆ.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)