ಹರ್ಷಿತ್ ರಾಣಾ ಪದಾರ್ಪಣೆ, ರವಿ ಬಿಷ್ಣೋಯ್ ಇನ್; ಬಾಂಗ್ಲಾದೇಶ ವಿರುದ್ಧದ 3ನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
Oct 12, 2024 12:12 PM IST
ಹರ್ಷಿತ್ ರಾಣಾ, ರವಿ ಬಿಷ್ಣೋಯ್ ಇನ್; ಬಾಂಗ್ಲಾದೇಶ ವಿರುದ್ಧದ 3ನೇ ಟಿ20 ಪಂದ್ಯಕ್ಕೆ ಭಾರತ ತಂಡ
- ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಈಗಾಗಲೇ 2-0 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಭಾರತ, ಹೈದರಾಬಾದ್‌ನಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯಕ್ಕೆ ಕೆಲವೊಂದು ಪ್ರಯೋಗ ಮಾಡಲು ಸಜ್ಜಾಗಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಹರ್ಷಿತ್ ರಾಣಾ ಪದಾರ್ಪಣೆ ಮಾಡಬಹುದು.
ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡ ಈಗಾಗಲೇ ಸರಣಿ ಜಯ ಸಾಧಿಸಿದೆ. ಅಕ್ಟೋಬರ್ 12ರ ಶನಿವಾರವಾದ ಇಂದು ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ನಡೆಯುತ್ತಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿ ಭಾರತ ತಂಡದ್ದು. ಈಗಾಗಲೇ ಆಡಿದ ಎರಡು ಪಂದ್ಯಗಳಲ್ಲಿ ಆಕ್ರಮಕಾರಿ ಆಟವಾಡಿರುವ ತಂಡ ಭರ್ಜರಿ ಜಯ ಒಲಿಸಿಕೊಂಡಿದೆ. ಅಲ್ಲದೆ ಯುವ ಆಟಗಾರರು ಸೊಗಸಾಗಿ ಆಡಿ ಮನಗೆದ್ದಿದ್ದಾರೆ. ಹೀಗಾಗಿ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ತಂಡವು ಆಡುವ ಬಳಗದಲ್ಲಿ ಕೆಲವೊಂದು ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ. ಕೆಲವೊಂದು ಹೊಸ ಆಟಗಾರರಿಗೆ ಮಣೆ ಹಾಕುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಬಹುದು.
ಟಿ20 ಸರಣಿಯ ಆರಂಭಕ್ಕೂ ಮುನ್ನ, ಭಾರತ ತಂಡ ತೀರಾ ಹೊಸದರಂತೆ ಕಾಣುತ್ತಿತ್ತು. ಹಲವು ಅನುಭವಿ ಹಾಗೂ ನಿಯಮಿತವಾಗಿ ಆಡುವ ಆಟಗಾರರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಆಗ ಬಾಂಗ್ಲಾದೇಶವು ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿತು. ಆದರೆ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತದ ಯುವ ಆಟಗಾರರು ಮೊದಲ ಪಂದ್ಯದಿಂದಲೇ ಅಮೋಘ ಪ್ರದರ್ಶನ ನೀಡಿದ್ದಾರೆ. ಆ ಮೂಲಕ ಅಭಿಮಾನಿಗಳಿಗಿದ್ದ ಎಲ್ಲಾ ಅನುಮಾನಗಳಿಗೆ ತೆರೆ ಬಿದ್ದಿದೆ.
ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮತ್ತು ವೇಗಿ ಮಯಾಂಕ್ ಯಾದವ್ ಗ್ವಾಲಿಯರ್‌ನಲ್ಲಿ ನಡೆದ ಮೊದಲ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇಬ್ಬರೂ ಆಡಿದ ಎರಡೂ ಪಂದ್ಯಗಳಲ್ಲಿ ನಿರ್ಣಾಯಕ ಪ್ರದರ್ಶನ ನೀಡಿದ್ದಾರೆ. ಆಡಿದ ಎರಡನೇ ಪಂದ್ಯದಲ್ಲೇ ನಿತೀಶ್ ಪಂದ್ಯಶ್ರೇಷ್ಠರಾಗಿ ಮಿಂಚಿದ್ದು ತಂಡದ ಉತ್ಸಾಹ ಹೆಚ್ಚಿಸಿದೆ.
ಎರಡನೇ ಟಿ20 ಪಂದ್ಯದಲ್ಲಿ ಭಾರತವು 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ನಿತೀಶ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ರಿಂಕು ಸಿಂಗ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 108 ರನ್‌ಗಳ ಜೊತೆಯಾಟವಾಡಿದರು. 34 ಎಸೆತಗಳಲ್ಲಿ 74 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.
ಭಾರತ ಕ್ರಿಕೆಟ್ ತಂಡದಲ್ಲಿ ವೇಗದ ಬೌಲಿಂಗ್ ಆಲ್‌ರೌಂಡರ್ ಕೊರತೆ ಇರುವುದು ಹಲವು ವರ್ಷಗಳಿಂದ ಕಾಣಿಸುತ್ತಿದೆ. ಒಂದು ವೇಳೆ ನಿತೀಶ್ ತಮ್ಮ ಬೌಲಿಂಗ್ ಅನ್ನು ಅಭಿವೃದ್ಧಿಪಡಿಸಿದರೆ, ಟೀಮ್ ಇಂಡಿಯಾದ ಕಾಯಂ ಸದ್ಯನಾಗಬಹುದು. ಹಾರ್ದಿಕ್ ಪಾಂಡ್ಯ ನಂತರ ಇವರು ಬಲಿಷ್ಠ ಆಲ್‌ರೌಂಡರ್ ಆಗಿ ಮಿಂಚಬಹುದು.
ಇದೀಗ ಮೂರನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಹೆಚ್ಚು ಬದಲಾವಣೆಗಳಾಗುವ ಸಾಧ್ಯತೆ ಇಲ್ಲ. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರ ಆರಂಭಿಕ ಜೋಡಿಯಾಗಿ ಎರಡೂ ಪಂದ್ಯಗಳಲ್ಲಿ ವಿಫಲವಾಗಿದೆ. ಆದರೂ, ಹೈದರಾಬಾದ್‌ನಲ್ಲಿ ಈ ಇಬ್ಬರು ಮತ್ತೆ ಕಣಕ್ಕಿಳಿಯಬಹುದು.
ತಂಡದಿಂದ ಇಬ್ಬರು ಹೊರಕ್ಕೆ
ಸರಣಿಯ ನಿರ್ಣಾಯಕ ಪಂದ್ಯವಾಗಿರುವುದರಿಂದ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್, ತಂಡದ ಬೆಂಚ್ ಸಾಮರ್ಥ್ಯ ಪರೀಕ್ಷಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ರವಿ ಬಿಷ್ಣೋಯ್, ತಿಲಕ್ ವರ್ಮಾ, ಜಿತೇಶ್ ಶರ್ಮಾ ಮತ್ತು ಹರ್ಷಿತ್ ರಾಣಾ; ಈ ನಾಲ್ವರಲ್ಲಿ ಯಾರಾದರೂ ಮೈದಾನಕ್ಕಿಳಿಯುವ ನಿರೀಕ್ಷೆಯಿದೆ. ವರುಣ್ ಚಕ್ರವರ್ತಿ ಮತ್ತು ಮಯಾಂಕ್ ಯಾದವ್ ಬದಲಿಗೆ ಬಿಷ್ಣೋಯ್ ಮತ್ತು ರಾಣಾ ಮೊದಲ ಆಯ್ಕೆಯ ಬದಲಿ ಆಟಗಾರರಾಗಿದ್ದಾರೆ. ಒಂದು ವೇಳೆ ಸಂಜು ಅವರನ್ನು ಕೈಬಿಡಲು ನಿರ್ಧರಿಸಿದರೆ ಜಿತೇಶ್ ತಂಡ ಸೇರಿಕೊಳ್ಳಬಹುದು. ಆದರೆ ಈ ಸಾಧ್ಯತೆ ತೀರಾ ಕಡಿಮೆ.
ಬಾಂಗ್ಲಾದೇಶ ವಿರುದ್ಧದ 3ನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (ನಾಯಕ), ರಿಯಾನ್ ಪರಾಗ್, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ.