IND vs BAN: 92 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು: ಟೀಮ್ ಇಂಡಿಯಾದಿಂದ ಎಂದಿಗೂ ಮಾಡದ ಸಾಧನೆ
ಟೀಮ್ ಇಂಡಿಯಾ ಬೌಲಿಂಗ್ ಮಾಡುವಾಗ ನಾಯಕ ಸೂರ್ಯಕುಮಾರ್ ಯಾದವ್ ಅವರು ಏಳು ಬೌಲರ್‌ಗಳಿಗೆ ಬೌಲಿಂಗ್ ಮಾಡಲು ಅವಕಾಶ ನೀಡಿದರು. ಅರ್ಷದೀಪ್ ಸಿಂಗ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್ ಮತ್ತು ಅಭಿಷೇಕ್ ಶರ್ಮಾ ಚೆಂಡೆಸೆದರು.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ (ಅಕ್ಟೋಬರ್ 9) ನಡೆದ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ 86 ರನ್‌ಗಳ ಜಯ ಸಾಧಿಸಿದ ಭಾರತ ಕ್ರಿಕೆಟ್ ತಂಡವು ಹಿಂದೆಂದೂ ಮಾಡದ ಸಾಧನೆಯನ್ನು ಮಾಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯರು ನಿತೇಶ್ ಕುಮಾರ್ ರೆಡ್ಡಿ ಮತ್ತು ರಿಂಕು ಸಿಂಗ್ ಅವರ ಅರ್ಧಶತಕಗಳ ನೆರವಿನಿಂದ 221 ರನ್ ಗಳ ಬೃಹತ್ ಮೊತ್ತವನ್ನು ಕಲೆ ಹಾಕಿದರು. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶದ ಬ್ಯಾಟಿಂಗ್ ಘಟಕವು 20 ಓವರ್‌ಗಳಲ್ಲಿ 135 ರನ್ ಗಳಿಸಲಷ್ಟೆ ಶಕ್ತವಾಯಿತು.
ಅಚ್ಚರಿ ಎಂದರೆ ಭಾರತ ಬೌಲಿಂಗ್ ಮಾಡುವಾಗ ನಾಯಕ ಸೂರ್ಯಕುಮಾರ್ ಯಾದವ್ ಅವರು ಏಳು ಬೌಲರ್‌ಗಳಿಗೆ ಬೌಲಿಂಗ್ ಮಾಡಲು ಅವಕಾಶ ನೀಡಿದರು. ಅರ್ಷದೀಪ್ ಸಿಂಗ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್ ಮತ್ತು ಅಭಿಷೇಕ್ ಶರ್ಮಾ ಚೆಂಡೆಸೆದರು. ಹೀಗೆ ಭಾರತದ ಬೌಲಿಂಗ್ ಪ್ರದರ್ಶನದಲ್ಲಿ ಅಪರೂಪದ ದೃಶ್ಯ ಕಂಡುಬಂತು. ಇಷ್ಟೇ ಅಲ್ಲದೆ ಬೌಲಿಂಗ್ ಮಾಡಿದ ಎಲ್ಲರೂ ಕನಿಷ್ಠ ಒಂದು ವಿಕೆಟ್ ಪಡೆದರು.
ಇತಿಹಾಸದಲ್ಲಿ ಯಾವುದೇ ಭಾರತೀಯ ತಂಡವು ಆಟದ ಯಾವುದೇ ಸ್ವರೂಪದಲ್ಲಿ ಇನ್ನಿಂಗ್ಸ್‌ನಲ್ಲಿ ಏಳು ಬೌಲರ್‌ಗಳಿಂದ ವಿಕೆಟ್ ಪಡೆದ ಮೊದಲ ನಿದರ್ಶನ ಇದಾಗಿದೆ. ಭಾರತೀಯ ಕ್ರಿಕೆಟ್ ತಂಡವು 92 ವರ್ಷಗಳ ಹಿಂದೆ (1932) ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರೂ, ಇಂದಿನ ಟೆಸ್ಟ್, ಏಕದಿನ ಅಥವಾ ಟಿ20ಗಳಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ ಏಳು ವಿಭಿನ್ನ ಬೌಲರ್‌ಗಳು ವಿಕೆಟ್ ಪಡೆದಿಲ್ಲ.
ವಾಸ್ತವವಾಗಿ, ಈ ಅಪರೂಪದ ಸಾಧನೆಯನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ ನಾಲ್ಕು ಬಾರಿ ಮತ್ತು ಏಕದಿನಗಳಲ್ಲಿ 10 ಬಾರಿ ಮಾಡಲಾಗಿದೆ. ಇದು ಟಿ20 ಆಟದಲ್ಲಿ ಸಂಭವಿಸಿದ 9 ನೇ ಘಟನೆಯಾಗಿದೆ. ಇಲ್ಲಿಯವರೆಗೆ, ಯಾವುದೇ ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಂಟು ಬೌಲರ್‌ಗಳು ಇನ್ನಿಂಗ್ಸ್‌ನಲ್ಲಿ ವಿಕೆಟ್ ಪಡೆದ ಉದಾಹರಣೆಯೂ ಇಲ್ಲ.
ಭರ್ಜರಿ ಗೆಲುವು, ಸರಣಿ ಜಯ
ಇನ್ನು ಬಾಂಗ್ಲಾದೇಶದ ವಿರುದ್ಧ ಟೀಮ್ ಇಂಡಿಯಾ 86 ರನ್‌ಗಳ ಜಯ ಸಾಧಿಸಿದೆ. ಇದು ಬಾಂಗ್ಲಾದೇಶ ವಿರುದ್ಧದ ಅತಿದೊಡ್ಡ ಟಿ20 ಗೆಲುವು. ಈ ಕ್ಯಾಲೆಂಡರ್ ವರ್ಷದಲ್ಲಿ ಟೀಮ್ ಇಂಡಿಯಾದ ಗೆಲುವಿನ ಶೇಕಡಾವಾರು 95.23 ಆಗಿದ್ದು ಇದು ವಿಶ್ವದಲ್ಲೇ ಅತ್ಯುತ್ತಮ ಅಂಕಿ-ಅಂಶವಾಗಿದೆ.
ಭಾರತ ಪರ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ನಿತೀಶ್ ರೆಡ್ಡಿ ಅವರು ಕೇವಲ 34 ಎಸೆತಗಳಲ್ಲಿ ಅದ್ಭುತ 74 ರನ್ ಸಿಡಿಸಿದರು. ತಮ್ಮ 74 ರನ್‌ಗಳಿಗೆ 217.65 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಮಾಡಿದರು. ಈ ಮೂಲಕ ಯಶಸ್ವಿ ಜೈಸ್ವಾಲ್ ದಾಖಲೆ ಅಳಿಸಿ 50 ರನ್ ಗಡಿಯನ್ನು ಮುಟ್ಟಿದ ನಂತರ ರೋಹಿತ್ ಶರ್ಮಾ ಅವರೊಂದಿಗೆ ಗಣ್ಯರ ಪಟ್ಟಿಗೆ ಸೇರಿದ್ದಾರೆ. ನಿತೀಶ್ ಈಗ ಟಿ20I ಗಳಲ್ಲಿ ಅರ್ಧಶತಕ ಗಳಿಸಿದ ನಾಲ್ಕನೇ ಕಿರಿಯ ಭಾರತೀಯರಾಗಿದ್ದಾರೆ. ಅವರ ವಯಸ್ಸು 21 ವರ್ಷ 136 ದಿನಗಳಾಗಿವೆ.
ವರದಿ: ವಿನಯ್ ಭಟ್.
ಇದನ್ನೂ ಓದಿ | ರುಬ್ಬಿದ ರೆಡ್ಡಿ, ರಗಡ್ ರಿಂಕು; ಎರಡನೇ ಟಿ20ಐ ಪಂದ್ಯದಲ್ಲೂ ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಗೆಲುವು; ಸರಣಿ ಕೈವಶಕ್ಕೆ ಕಾರಣಗಳಿವು