ರುಬ್ಬಿದ ರೆಡ್ಡಿ, ರಗಡ್ ರಿಂಕು; ಎರಡನೇ ಟಿ20ಐ ಪಂದ್ಯದಲ್ಲೂ ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಗೆಲುವು; ಸರಣಿ ಕೈವಶಕ್ಕೆ ಕಾರಣಗಳಿವು
India vs Bangladesh: ಎರಡನೇ ಟಿ20ಐ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ 56 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ 2-0 ಅಂತರದಲ್ಲಿ ಸರಣಿಯನ್ನೂ ಗೆದ್ದುಕೊಂಡಿದೆ.
ಬಾಂಗ್ಲಾದೇಶ ವಿರುದ್ಧ ನಡೆದ 2ನೇ ಟಿ20ಐ ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ 86 ರನ್ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಸೂರ್ಯಕುಮಾರ್ ಯಾದವ್ ಪಡೆ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಕೈವಶ ಮಾಡಿಕೊಂಡಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಗೆದ್ದು ಸರಣಿ ಉಳಿಸಿಕೊಳ್ಳುವ ತವಕದಲ್ಲಿದ್ದ ಪ್ರವಾಸಿಗರಿಗೆ ಭಾರೀ ನಿರಾಸೆಯಾಗಿದೆ. ಮತ್ತೊಂದೆಡೆ ಭಾರತ ಟೆಸ್ಟ್ ಸರಣಿ ಜೊತೆಗೆ ಟಿ20ಐ ಸರಣಿಯನ್ನೂ ಭಾರತ ವಶಪಡಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 9 ವಿಕೆಟ್ ನಷ್ಟಕ್ಕೆ 221 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ.
ನಿತೀಶ್ ರೆಡ್ಡಿ ಮತ್ತು ರಿಂಕು ಸಿಂಗ್ ಶತಕದ ಜೊತೆಯಾಟ
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಆರಂಭದಲ್ಲಿ 3 ವಿಕೆಟ್ ಕಳೆದುಕೊಂಡಿತು. ಸಂಜು ಸ್ಯಾಮ್ಸನ್ 10, ಅಭಿಷೇಕ್ ಶರ್ಮಾ 15, ಸೂರ್ಯಕುಮಾರ್ 8 ರನ್ ಗಳಿಸಿ ಬೇಗನೇ ವಿಕೆಟ್ ಒಪ್ಪಿಸಿದರು. ಹೀಗಾಗಿ ಪವರ್ಪ್ಲೇನಲ್ಲೇ 3 ವಿಕೆಟ್ ನಷ್ಟದ ಬೆನ್ನಲ್ಲೇ ಬೃಹತ್ ಸ್ಕೋರ್ ಕಲೆ ಹಾಕುವುದು ಕಷ್ಟವೆಂದೇ ಹೇಳಲಾಗಿತ್ತು. ಈ ಹಂತದಲ್ಲಿ ಒಂದಾದ ನಿತೀಶ್ ರೆಡ್ಡಿ-ರಿಂಕು ಸಿಂಗ್ ಬಾಂಗ್ಲಾ ಬೌಲರ್ಸ್ಗೆ ಬೆಂಡೆತ್ತಿ ಆಸರೆಯಾದರು. ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು. ನಿತೀಶ್ ತಾನಾಡಿದ ಎರಡನೇ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದರು. 34 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 74 ರನ್ ಸಿಡಿಸಿ ಮಿಂಚಿದರು. ಮತ್ತೊಂದೆಡೆ ರಿಂಕು ಸಿಂಗ್ 29 ಎಸೆತಗಳಿಗೆ 5 ಬೌಂಡರಿ, 3 ಸಿಕ್ಸರ್ ಸಹಿತ 53 ರನ್ ಚಚ್ಚಿದರು. ಈ ಜೋಡಿ 4ನೇ ವಿಕೆಟ್ಗೆ 104 ರನ್ ಜೊತೆಯಾಟ ಆಡಿದರು.
ಹಾರ್ದಿಕ್ ಪಾಂಡ್ಯ ಮತ್ತೊಂದು ಉತ್ತಮ ಇನ್ನಿಂಗ್ಸ್
ನಿತೀಶ್ ರೆಡ್ಡಿ ಮತ್ತು ರಿಂಕು ಜೊತೆಗೆ ಹಾರ್ದಿಕ್ ಪಾಂಡ್ಯ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದರು. ಮೊದಲ ಟಿ20 ಪಂದ್ಯದಲ್ಲಿ 39 ರನ್ಗಳ ಅಜೇಯ ಆಟವಾಡಿದ್ದ ಹಾರ್ದಿಕ್, 2ನೇ ಪಂದ್ಯದಲ್ಲೂ ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ನೆರವಾದರು. 19 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 32 ಚಚ್ಚಿದರು. ಉಳಿದಂತೆ ರಿಯಾನ್ ಪರಾಗ್ ಕೂಡ ಆಕ್ರಮಣಕಾರಿ ಆಟಕ್ಕೆ 15 ರನ್ಗಳ ಕಾಣಿಕೆ ನೀಡಿದರು. ಬ್ಯಾಟಿಂಗ್ನಲ್ಲಿ ಪರಾಕ್ರಮ ನಡೆಸಿದ ಭಾರತ ಬೌಲಿಂಗ್ನಲ್ಲೂ ಧೂಳೆಬ್ಬಿಸಿತು. ಮೊದಲ ಪಂದ್ಯವನ್ನು ಸೋತಿದ್ದ ಬಾಂಗ್ಲಾದೇಶ, ಎರಡನೇ ಟಿ20ಐ ಪಂದ್ಯದಲ್ಲೂ ರನ್ ಗಳಿಸಲು ವಿಫಲವಾಯಿತು. ಇದರೊಂದಿಗೆ ಟೆಸ್ಟ್ ಬಳಿಕ ಚುಟುಕು ಸರಣಿಯನ್ನೂ ಕಳೆದುಕೊಂಡಿತು.
ಬಾಂಗ್ಲಾ ವಿರುದ್ಧ ದಂಡಯಾತ್ರೆ ನಡೆಸಿದ ಭಾರತೀಯ ಬೌಲರ್ಸ್
ಬ್ಯಾಟಿಂಗ್ ಜೊತೆಗೆ ಭಾರತೀಯ ಬೌಲರ್ಗಳೂ ಪರಾಕ್ರಮ ಮೆರೆದರು. ಬಾಂಗ್ಲಾ ಪವರ್ಪ್ಲೇನಲ್ಲೇ ಮೊದಲ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಪರ್ವೇಜ್ ಹೊಸೈನ್ ಎಮಾನ್ 16, ಲಿತ್ತನ್ ದಾಸ್ 14, ನಜ್ಮುಲ್ ಹೊಸೈನ್ ಶಾಂಟೊ 11 ರನ್ ಗಳಿಸಿ ಬೇಗನೇ ಔಟಾದರು. ಪವರ್ಪ್ಲೇ ಬಳಿಕ ಬಾಂಗ್ಲಾ ಬ್ಯಾಟರ್ಗಳು ಕ್ರೀಸ್ ಕಚ್ಚಿ ನಿಂತು ಆಡಲಿಲ್ಲ. ಮೊಹಮದ್ದುಲ್ಲಾ 41 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರನೂ ಉತ್ತಮ ಪ್ರದರ್ಶನ ನೀಡಲಿಲ್ಲ. ಪರಿಣಾಮ ಸೋಲು ಕಾಣುವಂತಾಯಿತು. ಬ್ಯಾಟಿಂಗ್ನಲ್ಲಿ ರೌದ್ರಾವತಾರ ನಡೆಸಿದ ನಿತೀಶ್ ರೆಡ್ಡಿ ಬೌಲಿಂಗ್ನಲ್ಲೂ 2 ವಿಕೆಟ್ ಉರುಳಿಸಿ ಗಮನ ಸೆಳೆದರು. ವರುಣ್ ಚಕ್ರವರ್ತಿ 2 ವಿಕೆಟ್, ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ಅಭಿಷೇಕ್, ಮಯಾಂಕ್ ಯಾದವ್, ರಿಯಾನ್ ಪರಾಗ್ ತಲಾ 1 ವಿಕೆಟ್ ಪಡೆದರು.