logo
ಕನ್ನಡ ಸುದ್ದಿ  /  ಕ್ರಿಕೆಟ್  /  92 ವರ್ಷಗಳಲ್ಲಿ ಯಾವತ್ತೂ ಎದುರಾಗದ ಅಪಾಯದಲ್ಲಿ ಟೀಮ್ ಇಂಡಿಯಾ: ಮಾನ ಉಳಿಸಿಕೊಳ್ಳಲು ಕೊನೇ ಅವಕಾಶ

92 ವರ್ಷಗಳಲ್ಲಿ ಯಾವತ್ತೂ ಎದುರಾಗದ ಅಪಾಯದಲ್ಲಿ ಟೀಮ್ ಇಂಡಿಯಾ: ಮಾನ ಉಳಿಸಿಕೊಳ್ಳಲು ಕೊನೇ ಅವಕಾಶ

Prasanna Kumar P N HT Kannada

Oct 28, 2024 10:08 AM IST

google News

ಭಾರತ ಕ್ರಿಕೆಟ್ ತಂಡ

    • ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಗುವ ಅಪಾಯದಲ್ಲಿದೆ. ಭಾರತ ಕ್ರಿಕೆಟ್ ತಂಡವು ತನ್ನ ಸುದೀರ್ಘ ಇತಿಹಾಸದಲ್ಲಿ ಹಲವು ಬಾರಿ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಅನ್ನು ಎದುರಿಸಿದೆ, ಆದರೆ ಇಲ್ಲಿಯವರೆಗೆ ತವರಿನಲ್ಲಿ ಮೂರು ಅಥವಾ ಹೆಚ್ಚಿನ ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈ ಮುಜುಗರವನ್ನು ಎದುರಿಸಬೇಕಾಗಿ ಬಂದಿಲ್ಲ.
ಭಾರತ ಕ್ರಿಕೆಟ್ ತಂಡ
ಭಾರತ ಕ್ರಿಕೆಟ್ ತಂಡ

ಕಳೆದ 2 ವಾರಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಚಿತ್ರಣವೇ ಬದಲಾಗಿದೆ. ವಿಶ್ವದ ಬಲಿಷ್ಠ ಟೆಸ್ಟ್ ತಂಡ ಎಂದೇ ಬಿಂಬಿತವಾಗಿದ್ದ ಭಾರತ ಏಕಾಏಕಿ ತವರಿನಲ್ಲಿ ಸರಣಿ ಸೋಲಬೇಕಾಯಿತು. ಅದೂ ಕೂಡ ನ್ಯೂಜಿಲೆಂಡ್ ಕೈಯಲ್ಲಿ, ಕಳೆದ 60-70 ವರ್ಷಗಳಲ್ಲಿ ಭಾರತದಲ್ಲಿ ಕೇವಲ 2 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದ ತಂಡದ ವಿರುದ್ಧ. ಕಿವೀಸ್ ಪಡೆ ಅದ್ಭುತ ಪ್ರದರ್ಶನದಿಂದ ಇತಿಹಾಸ ಸೃಷ್ಟಿಸಿತು. ಆದರೆ ಈಗ ಭಾರತ ತನ್ನ 92 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಕಾಣದ ಬಿಕ್ಕಟ್ಟನ್ನು ಎದುರಿಸುತ್ತಿದೆ.

92 ವರ್ಷಗಳ ಭಾರತೀಯ ಕ್ರಿಕೆಟ್‌ನಲ್ಲಿ ಎಂದಿಗೂ ಎದುರಾಗದ ಅಪಾಯ ಇದೀಗ ರೋಹಿತ್ ಪಡೆಯ ಮುಂದಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಿತು. ಇದನ್ನು ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಗೆದ್ದಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ, ಟೀಮ್ ಇಂಡಿಯಾ ಕೇವಲ 46 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ತವರಿನಲ್ಲಿ ಅದರ ಕಡಿಮೆ ಸ್ಕೋರ್ ಆಗಿದೆ. ನಂತರ ಪುಣೆ ಟೆಸ್ಟ್‌ನಲ್ಲಿ 3 ದಿನಗಳಲ್ಲಿ ನ್ಯೂಜಿಲೆಂಡ್ 113 ರನ್‌ಗಳಿಂದ ಸರಣಿಯನ್ನು ಗೆದ್ದುಕೊಂಡಿತು. ಈ ಮೂಲಕ 2012ರ ನಂತರ ಸತತ 18 ಸರಣಿಗಳಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದ ಟೀಂ ಇಂಡಿಯಾ ಮೊದಲ ಬಾರಿ ತವರಿನಲ್ಲಿ ಸರಣಿ ಸೋತಿದೆ.

‘ತವರಿನಲ್ಲಿ ಕ್ಲೀನ್ ಸ್ವೀಪ್ ಎದುರಿಸಿಲ್ಲ’

ಈಗ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಗುವ ಅಪಾಯದಲ್ಲಿದೆ. ಭಾರತ ಕ್ರಿಕೆಟ್ ತಂಡವು ತನ್ನ ಸುದೀರ್ಘ ಇತಿಹಾಸದಲ್ಲಿ ಹಲವು ಬಾರಿ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಅನ್ನು ಎದುರಿಸಿದೆ, ಆದರೆ ಇಲ್ಲಿಯವರೆಗೆ ತವರಿನಲ್ಲಿ ಮೂರು ಅಥವಾ ಹೆಚ್ಚಿನ ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈ ಮುಜುಗರವನ್ನು ಎದುರಿಸಬೇಕಾಗಿ ಬಂದಿಲ್ಲ. ಒಂದೋ ಟೆಸ್ಟ್ ಪಂದ್ಯ ಡ್ರಾ ಅಥವಾ ಟೀಂ ಇಂಡಿಯಾ ಒಂದೋ ಎರಡೋ ಪಂದ್ಯ ಗೆದ್ದಿದೆ. 2000 ರಲ್ಲಿ ದಕ್ಷಿಣ ಆಫ್ರಿಕಾದ ಕೈಯಲ್ಲಿ ಕ್ಲೀನ್ ಸ್ವೀಪ್ ಅನ್ನು ಎದುರಿಸಬೇಕಾಗಿತ್ತು, ಆದರೆ ಆ ಸರಣಿಯು ಕೇವಲ 2 ಪಂದ್ಯಗಳಾಗಿತ್ತು.

ಮುಂಬೈ ಟೆಸ್ಟ್ ಮೇಲೆ ಎಲ್ಲರ ಕಣ್ಣು

ಇದೀಗ ಮೊದಲ ಬಾರಿಗೆ 0-3 ಅಂತರದಲ್ಲಿ ಸರಣಿ ಕಳೆದುಕೊಳ್ಳುವ ಅಪಾಯವಿದ್ದು, ಭಾರತೀಯ ಕ್ರಿಕೆಟ್‌ನ ಹಲವು ಸುವರ್ಣ ಅಧ್ಯಾಯಗಳನ್ನು ಬರೆದ ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಂ ಈ ಅಹಿತಕರ ಘಟನೆಗೆ ಸಾಕ್ಷಿಯಾಗಬಹುದು. ಸರಣಿಯ ಈ ಕೊನೆಯ ಟೆಸ್ಟ್ ಪಂದ್ಯವು ನವೆಂಬರ್ 1 ರಿಂದ ಪ್ರಾರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ಗೌತಮ್ ಗಂಭೀರ್ ಮತ್ತೆ ತಮ್ಮ ತಂಡದಲ್ಲಿ ಆ ಚೈತನ್ಯ ತುಂಬಬೇಕಿದೆ. ತಂಡ ಮೊದಲಿನಂತೆಯೇ ಮೈದಾನಕ್ಕಿಳಿದು ಕೊನೆಯ ಪಂದ್ಯವನ್ನು ಗೆದ್ದು ತನ್ನ ಗೌರವ ಉಳಿಸಿಕೊಳ್ಳಬೇಕಿದೆ. ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಭರವಸೆಯನ್ನು ಉಳಿಸಿಕೊಳ್ಳಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ