logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಮುಖಾಮುಖಿಗೆ ದಿನಾಂಕ ಫಿಕ್ಸ್; ಬಿಸಿಸಿಐ ಅನುಮೋದನೆ ಕೋರಿದ ಪಿಸಿಬಿ

ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಮುಖಾಮುಖಿಗೆ ದಿನಾಂಕ ಫಿಕ್ಸ್; ಬಿಸಿಸಿಐ ಅನುಮೋದನೆ ಕೋರಿದ ಪಿಸಿಬಿ

Prasanna Kumar P N HT Kannada

Jul 03, 2024 09:22 PM IST

google News

ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಮುಖಾಮುಖಿಗೆ ದಿನಾಂಕ ಫಿಕ್ಸ್; ಬಿಸಿಸಿಐ ಅನುಮೋದನೆ ಕೋರಿದ ಪಿಸಿಬಿ

    • India vs Pakistan: ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಖಾಮುಖಿಗೆ ಲಾಹೋರ್ ಆತಿಥ್ಯ ವಹಿಸಲಿದೆ.
ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಮುಖಾಮುಖಿಗೆ ದಿನಾಂಕ ಫಿಕ್ಸ್; ಬಿಸಿಸಿಐ ಅನುಮೋದನೆ ಕೋರಿದ ಪಿಸಿಬಿ
ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಮುಖಾಮುಖಿಗೆ ದಿನಾಂಕ ಫಿಕ್ಸ್; ಬಿಸಿಸಿಐ ಅನುಮೋದನೆ ಕೋರಿದ ಪಿಸಿಬಿ

ಐಸಿಸಿ ಟಿ20 ವಿಶ್ವಕಪ್​ 2024 ಟೂರ್ನಿಯಲ್ಲಿ (ICC T20 World Cup 2024) ಮುಖಾಮುಖಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳು (India vs Pakistan) ಮತ್ತೊಮ್ಮೆ ಸೆಣಸಾಟಕ್ಕೆ ಸಜ್ಜಾಗಿವೆ. ಆದರೆ ಈ ವರ್ಷವಲ್ಲ! 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು, ಇಂಡೋ-ಪಾಕ್​ ತಂಡಗಳು ಮತ್ತೆ ಕಾದಾಟಕ್ಕೆ ಸಜ್ಜಾಗಿವೆ. ಈ ಟೂರ್ನಿಗೆ ಪಾಕಿಸ್ತಾನವೇ ಆತಿಥ್ಯ ವಹಿಸುತ್ತಿರುವುದು ವಿಶೇಷ. ಆದರೆ ಈ ಉಭಯ ತಂಡಗಳ ನಡುವಿನ ಫೈಟ್​ಗೆ ದಿನಾಂಕ ಫಿಕ್ಸ್ ಆಗಿದೆ.

ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್​ಗೆ ವಿದಾಯ ಹೇಳಿರುವ ರೋಹಿತ್​ ಮತ್ತು ಕೊಹ್ಲಿ ಅವರು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ ಮುಂದುವರೆಯಲಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋ-ಕೋ ಬ್ಯಾಟಿಂಗ್ ಐಕಾನ್​ಗಳಾಗಿ ಮುನ್ನಡೆಸಲಿದ್ದಾರೆ. ಮತ್ತೊಮ್ಮೆ ಪಾಕ್ ಎದುರು ಅಬ್ಬರಿಸಲು ಸಜ್ಜಾಗಿದ್ದಾರೆ. ಆದರೆ ಭಾರತ ತಂಡದ ಎದುರು ಪಾಕ್ ಆಡಲು ಪಿಸಿಬಿ, ಬಿಸಿಸಿಐ ಅನುಮತಿ ಕೋರಿದೆ.

ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ತಮ್ಮ ಕರಡನ್ನು ಸಲ್ಲಿಸಿದೆ. ಮಾರ್ಚ್ ಮೊದಲ ವಾರದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯವನ್ನು ಮುಂದೂಡಿದ ಪಿಸಿಬಿ ಲಾಹೋರ್​​ಗೆ ಆತಿಥ್ಯ ಹಕ್ಕುಗಳನ್ನು ನೀಡಿದೆ. ಮುಂದಿನ ವರ್ಷ ಮಾರ್ಚ್ 1 ರಂದು ಲಾಹೋರ್​​​ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯ ನಡೆಯಲಿದೆ.

ಬಿಸಿಸಿಐ ಅನುಮೋದನೆ ಕೋರಿದ ಪಿಸಿಬಿ

ಮಾರ್ಚ್ 10 ರಂದು ಐಸಿಸಿ ಟೂರ್ನಿಯ ಫೈನಲ್ ಪಂದ್ಯಕ್ಕೆ ಮೀಸಲು ದಿನವೆಂದು ಪರಿಗಣಿಸಲಾಗಿದೆ. ಸುದ್ದಿ ಸಂಸ್ಥೆ ಪಿಟಿಐ ಸಲ್ಲಿಸಿದ ವರದಿಯ ಪ್ರಕಾರ, ಪಿಸಿಬಿ ತನ್ನ ತಾತ್ಕಾಲಿಕ ವೇಳಾಪಟ್ಟಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಿಂದ ಇನ್ನೂ ಅನುಮೋದನೆ ಪಡೆದಿಲ್ಲ ಎಂದು ಐಸಿಸಿ ಮಂಡಳಿಯ ಹಿರಿಯ ಸದಸ್ಯರೊಬ್ಬರು ಬಹಿರಂಗಪಡಿಸಿದ್ದಾರೆ.

15 ಪಂದ್ಯಗಳ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಕರಡನ್ನು ಪಿಸಿಬಿ ಸಲ್ಲಿಸಿದ್ದು, ಲಾಹೋರ್​​ನಲ್ಲಿ 7, ಕರಾಚಿಯಲ್ಲಿ 3 ಮತ್ತು ರಾವಲ್ಪಿಂಡಿಯಲ್ಲಿ 5 ಪಂದ್ಯಗಳು ನಡೆಯಲಿವೆ ಎಂದು ಐಸಿಸಿ ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಕರಡು ಪ್ರಕಾರ, ಭಾರತ ತಂಡವು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್​​ನೊಂದಿಗೆ ಎ ಗುಂಪಿನಲ್ಲಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನಲ್ಲಿವೆ.

ಆರಂಭಿಕ ಪಂದ್ಯ ಕರಾಚಿಯಲ್ಲಿ ನಡೆಯಲಿದ್ದು, ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ಒಂದು ಕರಾಚಿ ಮತ್ತು ಲಾಹೋರ್​ನಲ್ಲಿ ನಡೆಯಲಿವೆ. ಫೈನಲ್ ಕೂಡ ಲಾಹೋರ್​​​ನಲ್ಲೇ ನಡೆಯಲಿದೆ. ಲಾಹೋರ್​​ನಲ್ಲಿ ಭಾರತ ಪಂದ್ಯಗಳು ಜರುಗಲಿವೆ (ಸೆಮಿಫೈನಲ್ ಸೇರಿದಂತೆ, ತಂಡ ಅರ್ಹತೆ ಪಡೆದರೆ) ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನವು ಕೊನೆಯ ಬಾರಿಗೆ 2023 ರಲ್ಲಿ ಪ್ರಮುಖ ಪಂದ್ಯಾವಳಿ ಏಷ್ಯಾಕಪ್​ ಅನ್ನು ಆಯೋಜಿಸಿತ್ತು. ಆದರೆ ಭಾರತ, ಪಾಕ್​ಗೆ ಪ್ರಯಾಣಿಸಲು ಸಾಧ್ಯವಾಗದ ಕಾರಣ ಹೈಬ್ರಿಡ್ ಮಾಡೆಲ್ ಅಡಿಯಲ್ಲಿ ಪಂದ್ಯಗಳನ್ನು ನಡೆಸಲಾಗಿತ್ತು.

ಹೈಬ್ರಿಡ್ ಮಾದರಿಯಲ್ಲಿ ಶ್ರೀಲಂಕಾದಲ್ಲಿ ಭಾರತ ತನ್ನ ಏಷ್ಯಾಕಪ್ ಪಂದ್ಯಗಳನ್ನು ಆಡಿತ್ತು. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ದೇಶಗಳ ಎಲ್ಲಾ ಮಂಡಳಿಯ ಮುಖ್ಯಸ್ಥರು (ಬಿಸಿಸಿಐ ಹೊರತುಪಡಿಸಿ) ಅವರಿಗೆ ತಮ್ಮ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ. ಆದರೆ ಬಿಸಿಸಿಐ ತನ್ನ ಸರ್ಕಾರವನ್ನು ಸಂಪರ್ಕಿಸಿ ಐಸಿಸಿಗೆ ಅಪ್​ಡೇಟ್ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ