ದೆಹಲಿಗೆ ಪ್ರಯಾಣ ಬೆಳೆಸಿದ ಭಾರತೀಯ ತಂಡ; ಮೊದಲು ಪ್ರಧಾನಿ ಜೊತೆ ಸಭೆ, ನಂತರ ತೆರೆದ ಬಸ್‌ನಲ್ಲಿ ಮೆರವಣಿಗೆ
Indian Cricket Team : ಚಂಡಮಾರುತದಿಂದ ವೆಸ್ಟ್ ಇಂಡೀಸ್ನ ಬಾರ್ಬಡೋಸ್‌ನಲ್ಲೇ ಸಿಲುಕಿದ್ದ ಭಾರತೀಯ ಕ್ರಿಕೆಟ್ ತಂಡವು, ಗುರುವಾರ (ಜೂನ್ 4) ಬೆಳಿಗ್ಗೆ ದೆಹಲಿಗೆ ತಲುಪಲಿದೆ.
ವೆಸ್ಟ್ ಇಂಡೀಸ್ನ ಬಾರ್ಬಡೋಸ್‌ನಲ್ಲಿ ಜರುಗಿದ ಟಿ20 ವಿಶ್ವಕಪ್ 2024 ಫೈನಲ್ (T20 World Cup 2024) ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 7 ರನ್ಗಳಿಂದ ಮಣಿಸಿದ ಭಾರತ ತಂಡ 2ನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿದೆ. ಜೂನ್ 29ರಂದು ನಡೆದ ಫೈನಲ್ ನಂತರ ಚಂಡಮಾರುತದಿಂದ 3 ದಿನಗಳ ಕಾಲ ಬಾರ್ಬಡೋಸ್‌ನಲ್ಲೇ ಸಿಲುಕಿರುವ ಭಾರತೀಯ ಕ್ರಿಕೆಟ್ ತಂಡ (Indian Cricket Team) ಬುಧವಾರ ಸಂಜೆ (ಸ್ಥಳೀಯ ಕಾಲಮಾನ) ದೆಹಲಿಗೆ ಹಾರಲಿದೆ. ಬೆಳಗ್ಗೆ ಆಟಗಾರರು ದೆಹಲಿಗೆ ಬಂದಿಳಿಯುವ ಸಾಧ್ಯತೆ ಇದೆ.
ನ್ಯೂಜೆರ್ಸಿಯಿಂದ (ಯುಎಸ್‌ಎ) ಬರಬೇಕಿದ್ದ ಚಾರ್ಟರ್ ಫ್ಲೈಟ್ ಬಾರ್ಬಡೋಸ್ ತಲುಪಲು ತಡವಾದ ಕಾರಣ ಭಾರತ ತಂಡದ ತವರಿಗೆ ಮರಳುವುದು ಇನ್ನಷ್ಟು ವಿಳಂಬವಾಯಿತು. ಭಾನುವಾರವೇ ಭಾರತಕ್ಕೆ ತೆರಳಬೇಕಿತ್ತು. ಆದರೆ ದ್ವೀಪರಾಷ್ಟ್ರಕ್ಕೆ ಚಂಡಮಾರುತ ಅಪ್ಪಳಿಸಿದ ಕಾರಣ ಎಲ್ಲಾ ವಿಮಾನ ಸೇವೆಗಳನ್ನು ರದ್ದುಗೊಳಿಸಲಾಯಿತು. ಗಂಟೆಗೆ 130 ಕಿಲೋ ಮೀಟರ್ಗೂ ವೇಗವಾಗಿ ಗಾಳಿ ಬೀಸುತ್ತಿತ್ತು. ಹೀಗಾಗಿ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿತ್ತು. ಬಾರ್ಬಡೋಸ್‌ನಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿತ್ತು.
ಹೀಗಾಗಿ, ಬುಧವಾರ ಬೆಳಿಗ್ಗೆ (ಭಾರತೀಯ ಕಾಲಮಾನ) ಬಾರ್ಬಡೋಸ್‌ನಿಂದ ಭಾರತದ ನಿರ್ಗಮನದಲ್ಲಿ ಮತ್ತಷ್ಟು ವಿಳಂಬವಾಗಿದೆ. ಈ ಬಗ್ಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ. ಆಟಗಾರರು, ಅವರ ಕುಟುಂಬಸ್ಥರು, ಬಿಸಿಸಿಐ ಅಧಿಕಾರಿಗಳು, ಕೋಚಿಂಗ್ ಸಿಬ್ಬಂದಿಯು ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಶೇಷ ವಿಮಾನದಲ್ಲಿ ಭಾರತಕ್ಕೆ ಬರಲಿದ್ದಾರೆ. ಭಾರತಕ್ಕೆ ಬಂದ ಬೆನ್ನಲ್ಲೇ ಭಾರತೀಯ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
ಅದಾದ ನಂತರ 2007ರ ಟಿ20 ವಿಶ್ವಕಪ್‌ನಂತೆ ಮುಂಬೈನಲ್ಲಿ ಟೀಮ್ ಇಂಡಿಯಾವನ್ನು ತೆರೆದ ಬಸ್‌ನಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿದೆ. ಮೊದಲ ಬಾರಿಗೆ 2007ರಲ್ಲಿ ಚಾಂಪಿಯನ್ ಆಗಿತ್ತು. 2007ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ, ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದಾಗ ಇಡೀ ತಂಡವು ತೆರೆದ ಬಸ್‌ನಲ್ಲಿ ಮುಂಬೈ ನಗರವನ್ನು ಸುತ್ತಿತು. ಈ ವೇಳೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು.
ಚಂಡಮಾರುತದ ದೃಶ್ಯ ಅನುಷ್ಕಾಗೆ ತೋರಿಸಿದ ವಿರಾಟ್
ದ್ವೀಪರಾಷ್ಟ್ರಕ್ಕೆ ಬೆರಿಲ್ ಚಂಡಮಾರುತ ಅಪ್ಪಳಿಸಿತ್ತು. ಹೋಟೆಲ್ನಲ್ಲಿ ತಂಗಿದ್ದ ವಿರಾಟ್, ಚಂಡಮಾರುತದ ದೃಶ್ಯವನ್ನು ವಿಡಿಯೋ ಕಾಲ್ ಮೂಲಕ ಪತ್ನಿ ಅನುಷ್ಕಾ ಶರ್ಮಾಗೆ ತೋರಿಸಿದ್ದಾರೆ. ಹೊಟೇಲ್ ಕಿಟಕಿಯಿಂದ ಸಮುದ್ರದಲ್ಲಿ ಅಪ್ಪಳಿಸುತ್ತಿರುವ ಭಾರಿ ಗಾತ್ರದ ಅಲೆಗಳನ್ನು ಮತ್ತು ಪರಿಸ್ಥಿತಿ ಹೇಗಿದೆ ಎಂಬುದನ್ನು ಪತ್ನಿ ಅನುಷ್ಕಾಗೆ ವಿಡಿಯೋ ಕಾಲ್ ಮೂಲಕ ತೋರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಟಿ20 ವಿಶ್ವಕಪ್ ಫೈನಲ್ ಸಂಕ್ಷಿಪ್ತ ಸ್ಕೋರ್
ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 176 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ 7 ರನ್ಗಳಿಂದ ಶರಣಾಯಿತು. 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಕೊನೆಯಲ್ಲಿ 30 ಎಸೆತಗಳಿಗೆ 30 ರನ್ ಬೇಕಿತ್ತು. ಕ್ರೀಸ್ನಲ್ಲಿ ಕ್ಲಾಸೆನ್, ಮಿಲ್ಲರ್ ಇದ್ದರೂ ಸ್ಕೋರ್ ಮಾಡಲು ವಿಫಲರಾರು. ಟೀಮ್ ಇಂಡಿಯಾ ಟೈಟ್ ಬೌಲಿಂಗ್ ನಡೆಸಿತು.