ಭಾರತ vs ಶ್ರೀಲಂಕಾ 2ನೇ ಏಕದಿನ ಪಂದ್ಯಕ್ಕೂ ಮಳೆ ಅಡ್ಡಿ ಸಾಧ್ಯತೆ; ಕೊಲೊಂಬೊ ಪಿಚ್, ಹವಾಮಾನ ವರದಿ
Aug 04, 2024 07:46 AM IST
ಭಾರತ vs ಶ್ರೀಲಂಕಾ 2ನೇ ಏಕದಿನಕ್ಕೂ ಗುಡುಗು ಸಹಿತ ಮಳೆ ಅಡ್ಡಿ ಸಾಧ್ಯತೆ; ಕೊಲೊಂಬೊ ಪಿಚ್, ಹವಾಮಾನ ವರದಿ ಇಲ್ಲಿದೆ
- India vs Sri Lanka 2nd ODI: ಆಗಸ್ಟ್ 4ರ ಭಾನುವಾರ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಕೊಲೊಂಬೊದ ಆರ್ ಪ್ರೇಮದಾಸ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ಜರುಗಲಿದೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯಕ್ಕೆ ಭಾರತ ತಂಡ ಸಜ್ಜಾಗಿದೆ. ಆಗಸ್ಟ್ 4 ರಂದು ಕೊಲೊಂಬೊದ ಪ್ರೇಮದಾಸ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಇದೇ ಕ್ರೀಡಾಂಗಣದಲ್ಲಿ ಜರುಗಿದ್ದ ಮೊದಲ ಏಕದಿನ ಪಂದ್ಯವು ರೋಚಕ ಟೈನಲ್ಲಿ ಅಂತ್ಯಗೊಂಡಿತ್ತು. ಈಗ ಭಾನುವಾರವೂ ಅಂತಹದ್ದೇ ರೋಚಕ ಪಂದ್ಯಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಮತ್ತೊಂದೆಡೆ ಭಾರತ ಉಳಿದ 2 ಪಂದ್ಯಗಳಲ್ಲೂ ಗೆದ್ದು ಸರಣಿ ಕೈ ವಶ ಮಾಡಿಕೊಳ್ಳುವ ಇರಾದೆಯಲ್ಲಿದೆ.
ಎರಡನೇ ಪಂದ್ಯದಲ್ಲಿ ಗೆದ್ದು ಲಂಕಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ 100ನೇ ಗೆಲುವು ದಾಖಲಿಸುವ ಇರಾದೆ ಹೊಂದಿದೆ. ಆದರೆ, ಭಾರತೀಯ ಬ್ಯಾಟರ್ಗಳು ತಮ್ಮ ನಿರೀಕ್ಷೆಗೆ ತಕ್ಕಂತೆ ಆಡಬೇಕಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ ಫೈನಲ್ ನಂತರ ಒಡಿಐಗೆ ಮರಳಿದ ಸ್ಟಾರ್ ಆಟಗಾರರ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವರು ಹಳೆಯ ಖದರ್ಗೆ ಮರಳಬೇಕಿದೆ. ಆದರೆ, ರೋಹಿತ್ ಶರ್ಮಾ ಮಾತ್ರ ತಮ್ಮ ಸ್ಪೋಟಕ ಆಟವನ್ನು ಮುಂದುವರೆಸಿದರು.
ಶ್ರೀಲಂಕಾ ವಿರುದ್ಧದ ಟಿ20ಐ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡ ಭಾರತ, ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳುವ ಗುರಿ ಹೊಂದಿದೆ. ಆದರೆ ಸಿಂಹಳೀಯರ ವಿರುದ್ಧ ಗೆಲ್ಲುವ ಫೇವರಿಟ್ ತಂಡವಾಗಿರುವ ಭಾರತವೇ ತತ್ತರಿಸಿದ್ದು ಅಚ್ಚರಿ ತಂದಿದೆ. ಹಾಗಂತ ಲಂಕಾ ತಂಡವನ್ನು ಯಾವುದರಲ್ಲೂ ಕಡೆಗಣಿಸುವಂತಿಲ್ಲ. ಅನುಭವಿಗಳನ್ನು ಮೀರಿಸುವ ತಂಡವಾಗಿ ಬೆಳೆದಿದ್ದು, ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಹಾಗಾಗಿ ಎರಡನೇ ಏಕದಿನದಲ್ಲಿ ಭಾರತ ಎಚ್ಚರಿಕೆಯಿಂದ ಆಡಬೇಕಿದೆ.
ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತ ತಂಡ ನಂಬರ್ 1 ಸ್ಥಾನದಲ್ಲಿದ್ದರೆ, ಶ್ರೀಲಂಕಾ 7ನೇ ಸ್ಥಾನದಲ್ಲಿದೆ. ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ರಾಹುಲ್, ಅಯ್ಯರ್ ಉತ್ತಮ ಪ್ರದರ್ಶನ ತೋರುವುದು ಅನಿವಾರ್ಯ. ಆದರೆ ಕಳೆದ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ಟೀಮ್ ಮ್ಯಾನೇಜ್ಮೆಂಟ್ ನಂಬಿಕೆ ಉಳಿಸಿಕೊಂಡರು. ಈ ಪಂದ್ಯದಲ್ಲೂ ಅದೇ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ಶತಕ ಸಾಧನೆಗೆ ಭಾರತ ತವಕ
ಶ್ರೀಲಂಕಾ ವಿರುದ್ಧ ಈವರೆಗೆ ಆಡಿರುವ 169 ಏಕದಿನ ಪಂದ್ಯಗಳಲ್ಲಿ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಭಾರತ 99 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದೀಗ ಭಾನುವಾರದ ಪಂದ್ಯ ಗೆದ್ದರೆ, ಶತಕ ಸಾಧನೆ ಮಾಡಿದಂತಾಗುತ್ತದೆ. ಶ್ರೀಲಂಕಾ ವಿರುದ್ಧ ಭಾರತ ಆಡಿರುವ ಕೊನೆಯ 5 ಪಂದ್ಯಗಳಲ್ಲಿಯೂ 4 ರಲ್ಲಿ ಜಯ ಸಾಧಿಸಿದೆ. ಈ ಪೈಕಿ ಎರಡು ಬಾರಿ 300ಕ್ಕೂ ಅಧಿಕ ರನ್‌ಗಳ ಅಂತರದಿಂದ ಗೆದ್ದು ಬೀಗಿದೆ.
ಕೊಲಂಬೋ ಪಿಚ್ ವರದಿ
ಮೊದಲ ಏಕದಿನ ಪಂದ್ಯದಲ್ಲಿ ಪ್ರೇಮದಾಸದ ಪಿಚ್ ಸ್ಪಿನ್ನರ್ ಮತ್ತು ವೇಗಿಗಳು ಇಬ್ಬರೂ ಪ್ರಾಬಲ್ಯ ಸಾಧಿಸಿದ್ದಾರೆ. ವೇಗಿಗಳು ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದರೂ, ನಿಧಾನಗತಿಯ ಬೌಲರ್‌ಗಳು ಮ್ಯಾಜಿಕ್ ಮಾಡಲಿದ್ದಾರೆ. ಕೊಲಂಬೊದ ಪ್ರೇಮದಾಸ ಕ್ರೀಡಾಂಗಣವು 2020ರಿಂದ 20 ಏಕದಿನ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮತ್ತು ಚೇಸಿಂಗ್ ಮಾಡಿದ ತಂಡಗಳು ತಲಾ 9 ಪಂದ್ಯಗಳಲ್ಲಿ ಗೆದ್ದಿವೆ. ಟಾಸ್ ಗೆದ್ದ ತಂಡವು ಈ ಅವಧಿಯಲ್ಲಿ 16 ಬಾರಿ ಬ್ಯಾಟಿಂಗ್ ಆಯ್ಕೆ ಮಾಡಿವೆ. ಅಚ್ಚರಿಯ ಅಂಶವೆಂದರೆ, ಇಲ್ಲಿ ಟಾಸ್ ಗೆದ್ದ ತಂಡವು ಪಂದ್ಯದಲ್ಲಿ ಗೆದ್ದಿರುವುದು ಕೇವಲ 5 ಬಾರಿ ಮಾತ್ರ. ಉಳಿದ 13 ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡವೇ ಸೋತಿದೆ. 2 ಟೈ ಆಗಿದೆ.
2020ರಿಂದ ಕೊಲಂಬೊದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳ ಸರಾಸರಿ ಮೊತ್ತ 244 ರನ್. ಕಳೆದ ವರ್ಷ ನಡೆದ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿರುವುದು, ಈ ಅವಧಿಯಲ್ಲಿ ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡದ ಗರಿಷ್ಠ ಮೊತ್ತವಾಗಿದೆ. ಅದೇ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ ಕೇವಲ 50 ರನ್ಗಳಿಗೆ ಆಲೌಟ್ ಆಗಿತ್ತು. ಅದು ಇಲ್ಲಿ ದಾಖಲಾದ ಅತಿ ಕಡಿಮೆ ಮೊತ್ತವಾಗಿದೆ.
ಹವಾಮಾನ ವರದಿ
ಭಾನುವಾರ ಮಧ್ಯಾಹ್ನ ಕೊಲಂಬೊದ ಹವಾಮಾನ ಮುನ್ಸೂಚನೆಯು ಗುಡುಗು ಸಹಿತ ಮಳೆಯಾಗುತ್ತದೆ ಎಂದು ಹೇಳುತ್ತಿದೆ. ಗರಿಷ್ಠ ತಾಪಮಾನವು 28 ಸೆಲ್ಸಿಯಸ್ ಡಿಗ್ರಿ ತಲುಪುವ ನಿರೀಕ್ಷೆಯಿದೆ. ಗಂಟೆಗೆ ಸುಮಾರು 19 ಕಿಮೀ ವೇಗದಲ್ಲಿ ಸಾಧಾರಣ ಗಾಳಿ ಬೀಸಲಿದೆ. ದಿನವಿಡೀ ಹವಾಮಾನ ಪರಿಸ್ಥಿತಿಗಳ ಬಗ್ಗೆ ಎಚ್ಚರದಿಂದಿರಬೇಕಾಗಿದೆ.
ಭಾರತ ಸಂಭಾವ್ಯ ಪ್ಲೇಯಿಂಗ್ 11
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.
ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್ 11
ಪಾಥಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ (ನಾಯಕ), ಜನಿತ್ ಲಿಯಾನಗೆ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಚಾಮಿಕಾ ಕರುಣಾರತ್ನೆ, ಅಕಿಲ ಧನಂಜಯ, ಅಸಿತ ಫೆರ್ನಾಂಡೊ.India vs Sri Lanka 2nd ODI