ಅಬ್ಬರಿಸಿದ ಅರ್ಷದೀಪ್, ಸಿಡಿದ ಪಾಂಡ್ಯಾ; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 7 ವಿಕೆಟ್‌ಗಳ ಸುಲಭ ಜಯ
Oct 06, 2024 10:32 PM IST
ಅಬ್ಬರಿಸಿದ ಅರ್ಷದೀಪ್; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 7 ವಿಕೆಟ್‌ಗಳ ಸುಲಭ ಜಯ
- India vs Bangladesh: ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ 19.5 ಓವರ್‌ಗಳಲ್ಲಿ 127 ರನ್ ಗಳಿಸಿ ಆಲೌಟ್ ಆಯ್ತು. ಸುಲಭ ಗುರಿ ಬೆನ್ನಟ್ಟಿದ ಭಾರತ, ಕೇವಲ 11.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದ ಭಾರತ ತಂಡ (India vs Bangladesh), ಇದೀಗ ಮೂರು ಪಂದ್ಯಗಳ ಟಿ20 ಸರಣಿಯಲ್ಲೂ ಶುಭಾರಂಭ ಮಾಡಿದೆ. ಬರೋಬ್ಬರಿ 14 ವರ್ಷಗಳ ನಂತರ ಗ್ವಾಲಿಯರ್‌ನಲ್ಲಿ ಕ್ರಿಕೆಟ್ ಪಂದ್ಯವಾಡಿದ ಟೀಮ್ ಇಂಡಿಯಾ, ಬಾಂಗ್ಲಾದೇಶ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಸುಲಭವಾಗಿ ಗುರಿ ಬೆನ್ನಟ್ಟಿದ ತಂಡ 49 ಎಸೆತಗಳನ್ನು ಉಳಿಸಿ ಗುರಿ ತಲುಪಿದೆ. ಇದರೊಂದಿಗೆ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸುವುದಲ್ಲದೆ, ಗ್ವಾಲಿಯರ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾ, ಅರ್ಷದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿ ಮಾರಕ ದಾಳಿಗೆ ನಲುಗಿತು. ಕೊನೆಗೆ 19.5 ಓವರ್‌ಗಳಲ್ಲಿ 127 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯ್ತು. ಸುಲಭ ಗುರಿ ಬೆನ್ನಟ್ಟಿದ ಭಾರತ, ಕೇವಲ 11.5 ಓವರ್‌ಗಳಲ್ಲಿ 3 ವಿಕೆಟ್ ಮಾತ್ರ ಕಳೆದುಕೊಂಡು 132 ರನ್ ಗಳಿಸಿ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಪ್ರವಾಸಿ ತಂಡದ ಪರ ಪರ್ವೇಜ್ ಹುಸೇನ್ ಎಮೋನ್ 9 ಎಸೆತಗಳಲ್ಲಿ 8 ರನ್ ಗಳಿಸಿದರು. ಅತ್ತ ಲಿಟ್ಟನ್ ದಾಸ್ 2 ಎಸೆತಗಳಲ್ಲಿ 4 ರನ್ ಗಳಿಸುವಷ್ಟರಲ್ಲಿ ಅರ್ಷದೀಪ್ ಸಿಂಗ್ ಇಬ್ಬರ ವಿಕೆಟ್ ಹಾರಿಸಿದರು. ನಾಯಕ ನಜ್ಮುಲ್ ಹುಸೇನ್ ಶಾಂಟೊ 25 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 27 ರನ್ ಗಳಿಸಿದರು. ಆದರೆ ವಾಷಿಂಗ್ಟನ್ ಸುಂದರ್ ಅವರ 12ನೇ ಓವರ್‌ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ತೌಹಿದ್ ಹ್ರಿದೋಯ್ 12 ರನ್, ಮಹಮದುಲ್ಲಾ 1 ಮತ್ತು ಜೇಕರ್ ಅಲಿ 8 ರನ್ ಕಲೆ ಹಾಕಿದರು. ತಂಡದ ಪರ ಅತಿ ಹೆಚ್ಚು ರನ್ ಗಳಿಸಿದವರು ಮೆಹಿದಿ ಹಸನ್ ಮಿರಾಜ್. ಇವರ ಗಳಿಕೆ 32 ಎಸೆತಗಳಲ್ಲಿ ಅಜೇಯ 35 ರನ್.
ವರುಣ್ ಚಕ್ರವರ್ತಿ ಅಬ್ಬರ
ವೇಗಿ ಅರ್ಷದೀಪ್ ಮತ್ತು 1066 ದಿನಗಳ ಬಳಿಕ ಭಾರತ ಟಿ20 ತಂಡಕ್ಕೆ ಮರಳಿದ ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಕಲೆ ಹಾಕಿದರು. ಟೀಮ್ ಇಂಡಿಯಾ ಪದಾರ್ಪಣೆ ಮಾಡಿದ ಮಯಾಂಕ್ ಯಾದವ್ ಕೂಡಾ ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ವಿಕೆಟ್ ಪಡೆದು ಮಿಂಚಿದರು. ಅವರು ಅನುಭವಿ ಆಟಗಾರ ಮಹಮದುಲ್ಲಾ ವಿಕೆಟ್ ಕಬಳಿಸಿದರು. ಹಾರ್ದಿಕ್ ಪಾಂಡ್ಯ ಹಾಗೂ ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು.
ಭಾರತದ ಸುಲಭ ಚೇಸಿಂಗ್
ಭಾರತೀಯ ಕ್ರಿಕೆಟ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಅಬ್ಬರ ಆರಂಭಿಸಿದರು. ಆದರೆ, 16 ರನ್ ಗಳಿಸಿದ್ದಾಗ ರನೌಟ್ ಆದರು. ಮೂರನೇ ಕ್ರಮಾಂಕದಲ್ಲಿ ಬಂದ ನಾಯಕ ಸೂರ್ಯಕುಮಾರ್ ಯಾದವ್ 3 ಸಿಕ್ಸರ್ ಸಹಿತ 29 ರನ್ ಸಿಡಿಸಿದರು. ಸಂಜು ಸ್ಯಾಮ್ 29 ರನ್ ಪೇರಿಸಿದರೆ, ಪದಾರ್ಪಣೆ ಪಂದ್ಯವಾಡಿದ ನಿತೀಶ್ ರೆಡ್ಡಿ 16 ರನ್ ಗಳಿಸಿದರು. ಕೇವಲ 16 ಎಸೆತ ಎದುರಿಸಿದ ಹಾರ್ದಿಕ್ ಪಾಂಡ್ಯ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 39 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.