ಐಪಿಎಲ್ 2025 ಮೆಗಾ ಹರಾಜು ನಡೆಸಲು ಬಿಸಿಸಿಐಗೆ ಎದುರಾಯಿತು ಸಂಕಷ್ಟ; ಶ್ರೀಮಂತ ಕ್ರಿಕೆಟ್ ಮಂಡಳಿಗೇ ಯಾಕೀ ಕಷ್ಟ!
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2025 ಮೆಗಾ ಹರಾಜು ನಡೆಸಲು ಬಿಸಿಸಿಐಗೆ ಎದುರಾಯಿತು ಸಂಕಷ್ಟ; ಶ್ರೀಮಂತ ಕ್ರಿಕೆಟ್ ಮಂಡಳಿಗೇ ಯಾಕೀ ಕಷ್ಟ!

ಐಪಿಎಲ್ 2025 ಮೆಗಾ ಹರಾಜು ನಡೆಸಲು ಬಿಸಿಸಿಐಗೆ ಎದುರಾಯಿತು ಸಂಕಷ್ಟ; ಶ್ರೀಮಂತ ಕ್ರಿಕೆಟ್ ಮಂಡಳಿಗೇ ಯಾಕೀ ಕಷ್ಟ!

IPL 2025 Mega Auction: ಕೊನೆಯ ಐಪಿಎಲ್ ಹರಾಜು 2023 ರಲ್ಲಿ ದುಬೈನಲ್ಲಿ ನಡೆದಿತ್ತು. ಆದರೆ ಬಿಸಿಸಿಐ ಈ ಬಾರಿ ಸೌದಿ ಅರೇಬಿಯಾದ ರಿಯಾದ್ ಅಥವಾ ಜೆಡ್ಡಾದಲ್ಲಿ ಮೆಗಾ ಹರಾಜು ಆಯೋಜಿಸಲು ಚಿಂತನೆ ನಡೆಸಿದೆ. ಈ ಹಿಂದೆ ಲಂಡನ್ ಅನ್ನು ಶಾರ್ಟ್‌ಲಿಸ್ಟ್ ಮಾಡಿತ್ತು.

ಐಪಿಎಲ್ 2025 ಮೆಗಾ ಹರಾಜು ನಡೆಸಲು ಬಿಸಿಸಿಐಗೆ ಎದುರಾಯಿತು ಸಂಕಷ್ಟ
ಐಪಿಎಲ್ 2025 ಮೆಗಾ ಹರಾಜು ನಡೆಸಲು ಬಿಸಿಸಿಐಗೆ ಎದುರಾಯಿತು ಸಂಕಷ್ಟ

IPL 2025: ಐಪಿಎಲ್ 2025 ರ ಮೆಗಾ ಹರಾಜು (IPL 2025 Mega Auction) ಈ ವರ್ಷದ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಆರಂಭದಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಇದಕ್ಕಾಗಿ ಬಿಸಿಸಿಐ ಹೊಸ ನಿಯಮಗಳನ್ನು ಕೂಡ ಜಾರಿಗೆ ತಂದಿದೆ. ಏತನ್ಮಧ್ಯೆ, ಆಟಗಾರರ ಎರಡು ದಿನಗಳ ಮೆಗಾ ಹರಾಜಿನ ಮೊದಲು ಮಂಡಳಿಯ ಮುಂದೆ ಹೊಸ ಸಮಸ್ಯೆ ಉದ್ಭವಿಸಿದೆ. ಬಿಸಿಸಿಐ ಈ ಹರಾಜು ಪ್ರಕ್ರಿಯೆ ನಡೆಸಲು ಸ್ಥಳವನ್ನು ಹುಡುಕುವಲ್ಲಿ ತೊಂದರೆ ಎದುರಿಸುತ್ತಿದೆ. ಯಾವುದೇ ಸ್ಥಳವನ್ನು ಇನ್ನೂ ನಿರ್ಧರಿಸಲಾಗಿಲ್ಲ.

ಕೊನೆಯ ಐಪಿಎಲ್ ಹರಾಜು 2023ರಲ್ಲಿ ದುಬೈನಲ್ಲಿ ನಡೆದಿತ್ತು. ಆದರೆ, ಬಿಸಿಸಿಐ ಈ ಬಾರಿ ಸೌದಿ ಅರೇಬಿಯಾದ ರಿಯಾದ್ ಅಥವಾ ಜೆಡ್ಡಾದಲ್ಲಿ ಮೆಗಾ ಹರಾಜು ಆಯೋಜಿಸಲು ಚಿಂತನೆ ನಡೆಸಿದೆ. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಈ 2 ನಗರಗಳಲ್ಲಿ ಸ್ಥಳವನ್ನು ಕಂಡುಹಿಡಿಯುವುದು ಸವಾಲಾಗಿದೆ. ದುಬೈಗೆ ಹೋಲಿಸಿದರೆ ಸೌದಿ ತುಂಬಾ ದುಬಾರಿಯಾಗಿದೆ. ಆದಾಗ್ಯೂ, ವಿಶ್ವದ ಶ್ರೀಮಂತ ಲೀಗ್ ಎಂದು ಪರಿಗಣಿಸಲ್ಪಟ್ಟಿರುವ ಐಪಿಎಲ್ ಮತ್ತು ಶ್ರೀಮಂತ ಮಂಡಳಿಯಾದ ಬಿಸಿಸಿಐಗೆ ಸ್ಥಳಗಳ ವೆಚ್ಚದ ಬಗ್ಗೆ ಸಮಸ್ಯೆ ಇದೆಯಾ ಎಂಬ ಅನುಮಾನ ಕೂಡ ಹುಟ್ಟಿದೆ. ರಿಯಾದ್ ಅಥವಾ ಜೆಡ್ಡಾದಲ್ಲಿ ಯಾವುದೇ ಸ್ಥಳವನ್ನು ಅಂತಿಮಗೊಳಿಸಲಾಗದಿದ್ದರೆ, ನಂತರ ದುಬೈನಲ್ಲಿ ಹರಾಜು ನಡೆಯಲಿದೆ.

ಐಪಿಎಲ್ 2025 ರ ಮೆಗಾ ಹರಾಜಿಗಾಗಿ ಬಿಸಿಸಿಐ ಈ ಹಿಂದೆ ಲಂಡನ್ ಅನ್ನು ಶಾರ್ಟ್‌ಲಿಸ್ಟ್ ಮಾಡಿತ್ತು. ಆದರೆ ನವೆಂಬರ್‌ನಲ್ಲಿ ಅಲ್ಲಿ ಹವಾಮಾನವು ತುಂಬಾ ತಂಪಾಗಿರುತ್ತದೆ, ಇದು ದೊಡ್ಡ ಸವಾಲಾಗಬಹುದು. ಆದ್ದರಿಂದ, ಐಪಿಎಲ್ ಅಧಿಕಾರಿಗಳು ಅದನ್ನು ಪಟ್ಟಿಯಿಂದ ತೆಗೆದುಹಾಕಿದ್ದಾರೆ. ಈಗ 2 ದಿನಗಳ ಹರಾಜನ್ನು ಆಯೋಜಿಸಲು ಬಿಸಿಸಿಐ ಸ್ಥಳವನ್ನು ಹುಡುಕುತ್ತಿದೆ. ಈ ಹರಾಜಿನಲ್ಲಿ ಎಲ್ಲಾ ಐಪಿಎಲ್ ಅಧಿಕಾರಿಗಳು, ಫ್ರಾಂಚೈಸಿಗಳ ನಿಯೋಗ ಮತ್ತು ಪ್ರಸಾರಕರು ಹಾಜರಿರುವ ಕಾರಣ ಸ್ಥಳಾವಕಾಶವೂ ದೊಡ್ಡದಾಗಿರಲು ಬಿಸಿಸಿಐ ಸೂಕ್ತ ಜಾಗವನ್ನು ಆಯ್ಕೆ ಮಾಡಬೇಕು.

ಮೆಗಾ ಹರಾಜಿನ ಮೊದಲು ದೊಡ್ಡ ಬದಲಾವಣೆಗಳು

ಐಪಿಎಲ್ ಆಡಳಿತ ಮಂಡಳಿಯು ಸೆಪ್ಟೆಂಬರ್ 28 ರಂದು ಮೆಗಾ ಹರಾಜಿನ ನಿಯಮಗಳಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಬಾರಿ ಫ್ರಾಂಚೈಸಿಗಳ ಬೇಡಿಕೆ ಪರಿಗಣಿಸಿ ಧಾರಣ ನಿಯಮದ ಅಡಿಯಲ್ಲಿ 4ರಿಂದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇವರಲ್ಲಿ 5 ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿದರೆ, ಓರ್ವನ ಮೇಲೆ ರೈಟ್ ಟು ಮ್ಯಾಚ್ (RTM) ಕಾರ್ಡ್ ಬಳಸಿಕೊಳ್ಳಬಹುದು. ಜೊತೆಗೆ ಹರಾಜು ಪರ್ಸ್ ಕೂಡ ಏರಿಕೆಯಾಗಿದ್ದು, ಇದೇ ಮೊದಲ ಬಾರಿಗೆ ಪಂದ್ಯದ ಶುಲ್ಕ ಪಾವತಿಯೂ ಆರಂಭವಾಗಿದೆ.

ಧಾರಣ ನಿಯಮದ ಪ್ರಕಾರ, ಫ್ರಾಂಚೈಸಿಯು ಬೇಕಾದರೆ ಐವರು ಭಾರತೀಯರನ್ನು ಅಥವಾ ಐವರನ್ನು ವಿದೇಶಿ ಆಟಗಾರರನ್ನೂ ರಿಟೈನ್ ಮಾಡಿಕೊಳ್ಳಬಹುದು. ಅದಾಗ್ಯೂ ಅನ್​ಕ್ಯಾಪ್ಡ್ ಆಟಗಾರನನ್ನು ಉಳಿಸಿಕೊಳ್ಳಲು ಬಯಸಿದರೆ ಕೇವಲ ಇಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ 5ವರ್ಷಕ್ಕೂ ಹೆಚ್ಚು ಕಾಲ ಟೀಮ್ ಇಂಡಿಯಾ ಪರ ಆಡದ ಕ್ಯಾಪ್ಡ್ ಆಟಗಾರರನ್ನು ಅನ್ ಕ್ಯಾಪ್ಡ್ ಎಂದು ಪರಿಗಣಿಸುವ ನಿಯಮ ಬಂದಿದೆ. ಈ ನಿಯಮಕ್ಕೆ ಸಿಎಸ್​ಕೆ ಮಾಜಿ ನಾಯಕ ಎಂಎಸ್ ಧೋನಿ ಅನ್ವಯವಾಗುತ್ತಾರೆ.

Whats_app_banner