logo
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್‌ನಲ್ಲಿ ಖಾತೆ ತೆರೆದ ಭಾರತ ವನಿತೆಯರು; ಪಾಕಿಸ್ತಾನ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ

ಟಿ20 ವಿಶ್ವಕಪ್‌ನಲ್ಲಿ ಖಾತೆ ತೆರೆದ ಭಾರತ ವನಿತೆಯರು; ಪಾಕಿಸ್ತಾನ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ

Jayaraj HT Kannada

Oct 06, 2024 08:37 PM IST

google News

ಟಿ20 ವಿಶ್ವಕಪ್‌ನಲ್ಲಿ ಖಾತೆ ತೆರೆದ ಭಾರತ; ಪಾಕಿಸ್ತಾನ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ

    • India Women vs Pakistan Women: ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ವನಿತೆಯರ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಅಂಕಪಟ್ಟಿಯಲ್ಲಿ ಖಾತೆ ತೆರೆಯುವ ಮೂಲಕ ಸೆಮಿಫೈನಲ್‌ ಆಸೆ ಉಳಿಸಿಕೊಂಡಿದೆ.
ಟಿ20 ವಿಶ್ವಕಪ್‌ನಲ್ಲಿ ಖಾತೆ ತೆರೆದ ಭಾರತ; ಪಾಕಿಸ್ತಾನ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ
ಟಿ20 ವಿಶ್ವಕಪ್‌ನಲ್ಲಿ ಖಾತೆ ತೆರೆದ ಭಾರತ; ಪಾಕಿಸ್ತಾನ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ (ANI)

ಭಾರತ ವನಿತೆಯರ ಕ್ರಿಕೆಟ್‌ ತಂಡವು ಟಿ20 ವಿಶ್ವಕಪ್‌ನಲ್ಲಿ (ICC Women's T20 World Cup) ಮೊದಲ ಜಯ ಒಲಿಸಿಕೊಂಡಿದೆ. ದುಬೈನಲ್ಲಿ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ (India Women vs Pakistan Women) 6 ವಿಕೆಟ್ ಗಳಿಂದ ಗೆದ್ದ ಹರ್ಮನ್‌ಪ್ರೀತ್‌ ಕೌರ್‌ ಬಳಗವು ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ವೇಗದ ಬೌಲರ್ ಅರುಂಧತಿ ರೆಡ್ಡಿ ಮತ್ತು ಕನ್ನಡತಿ ಶ್ರೇಯಂಕಾ ಪಾಟೀಲ್ ಬೌಲಿಂಗ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಪಾಕ್‌ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಗೆಲುವು ಅನಿವಾರ್ಯವಾಗಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ 8 ವಿಕೆಟ್‌ ಕಳೆದುಕೊಂಡು 105 ರನ್‌ ಗಳಿಸಿತು. ಗುರು ಬೆನ್ನಟ್ಟಿದ ಭಾರತ, ಕೇವಲ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ ಗೆಲುವಿನ ದಡ ಸೇರಿತು.

ನಾಯಕಿ ಹರ್ಮನ್ ಪ್ರೀತ್ ಕೌರ್ 24 ಎಸೆತಗಳಲ್ಲಿ 29 ರನ್ ಗಳಿಸಿದರು. ಆದರೆ, ತಂಡದ ಗೆಲುವಿಗೆ ಕೇವಲ ಎರಡು ದಿನಗಳು ಬೇಕಾಗಿದ್ದಾಗ ಕೌರ್ ಗಾಯಗೊಂಡು ಮೈದಾನದಿಂದ ನಿರ್ಗಮಿಸಿದರು. ಕೊನೆಗೆ ಸಜೀವನ್ ಸಜನಾ ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ತಂಡವನ್ನುಗೆಲುವಿನ ದಡ ಸೇರಿಸಿದರು.

ಅಂಕಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಹಿಂದೆ

ಪಂದ್ಯದಲ್ಲಿ ತಂಡವು ರೋಚಕ ಜಯ ಸಾಧಿಸಿದರೂ, ಅಂಕಪಟ್ಟಿಯಲ್ಲಿ ಭಾರತ ತಂಡ ಪಾಕಿಸ್ತಾನಕ್ಕಿಂತ ಕೆಳಗೆ ಉಳಿದಿದೆ. ಭಾರತವು -1.217 ಕಳಪೆ ನೆಟ್ ರನ್ ರೇಟ್‌ನೊಂದಿಗೆ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ತನ್ನ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದ್ದ ಪಾಕಿಸ್ತಾನ 0.555 ನೆಟ್ ರನ್ ರೇಟ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ. ತಮ್ಮ ಆರಂಭಿಕ ಗುಂಪು ಪಂದ್ಯಗಳನ್ನು ಗೆದ್ದ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಮೊದಲ ಎರಡು ಸ್ಥಾನಗಳಲ್ಲಿವೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನಕ್ಕೆ ನಿರೀಕ್ಷೆಯಂತೆ ಬೃಹತ್‌ ಮೊತ್ತ ಕಲೆ ಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಭಾರತವು 15ನೇ ಓವರ್‌ನಲ್ಲಿ ಪಾಕಿಸ್ತಾನವನ್ನು 71 ರನ್‌ ವೇಳೆಗೆ 7 ವಿಕೆಟ್‌ ಪಡೆದು ಕಟ್ಟಿಹಾಕಿತು. ತಂಡದ ಪರ ಗರಿಷ್ಠ ರನ್‌ ಗಳಿಸಿದವರು ನಿದಾ ದಾರ್.‌ ಅವರ ಗಳಿಕೆ 28 ರನ್. ಡೆತ್ ಓವರ್‌ಳಲ್ಲಿ 14 ರನ್ ಗಳಿಸಿದ ಸಯೀದಾ ಅರೂಬ್ ಶಾ ಅವರೊಂದಿಗೆ ನಿದಾ ದಾರ್‌ 28 ರನ್‌ಗಳ ಜೊತೆಯಾಟವಾಡಿದರು. ಹೀಗಾಗಿ ತಂಡದ ಮೊತ್ತ ಶತಕದ ಗಡಿ ದಾಟಿತು.

ನಿಧಾನಗತಿಯ ಚೇಸಿಂಗ್

ಚೇಸಿಂಗ್‌ ವೇಳೆ ಭಾರತೀಯ ನಾರಿಯರು ನಾಜೂಕಾಗಿ ಬ್ಯಾಟಿಂಗ್‌ ನಡೆಸಿದರು. ಸ್ಮೃತಿ ಮಂಧಾನ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು. ಆದರೆ ಶಫಾಲಿ ವರ್ಮಾ 35 ಎಸೆತಗಳಲ್ಲಿ 32 ರನ್ ಗಳಿಸುವ ಮೂಲಕ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಜೆಮಿಮಾ ರೊಡ್ರಿಗಸ್ 23 ರನ್‌ ಗಳಿಸಿ ಔಟಾಗುತ್ತಿದ್ದಂತೆಯೇ ರಿಚಾ ಘೋಷ್ ಕೂಡಾ ಗೋಲ್ಡನ್‌ ಡಕ್‌ ಆದರು. ಅಂತಿಮವಾಗಿ ನಾಯಕಿಯಾಟವಾಡಿದ ಕೌರ್‌ 29 ರನ್‌ ಪೇರಿಸಿದರು.

ಭಾರತವು ತನ್ನ ಮುಂದಿನ ಪಂದ್ಯದಲ್ಲಿ ಅಕ್ಟೋಬರ್‌ 09ರಂದು ಶ್ರೀಲಂಕಾವನ್ನು ಎದುರಿಸಲಿದೆ.‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ