ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ ಪಂದ್ಯದ ಪಿಚ್ ವರದಿ; ಗೆಲುವು ಭಾರತದ್ದೇ ಎನ್ನುತ್ತೆ ಈ ದಾಖಲೆಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್: ಭಾರತ Vs ಪಾಕಿಸ್ತಾನ ಪಂದ್ಯದ ಪಿಚ್ ವರದಿ; ಗೆಲುವು ಭಾರತದ್ದೇ ಎನ್ನುತ್ತೆ ಈ ದಾಖಲೆಗಳು

ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ ಪಂದ್ಯದ ಪಿಚ್ ವರದಿ; ಗೆಲುವು ಭಾರತದ್ದೇ ಎನ್ನುತ್ತೆ ಈ ದಾಖಲೆಗಳು

ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಕಣಕ್ಕಿಳಿಯಲಿದೆ. ದುಬೈನಲ್ಲಿ ನಡೆಯಲಿರುವ ರೋಚಕ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ನಡುವಿನ ಹೆಡ್ ಟು ಹೆಡ್ ದಾಖಲೆ, ಸಂಭಾವ್ಯ ತಂಡ ಮತ್ತು ಪಿಚ್ ರಿಪೋರ್ಟ್ ನೋಡೋಣ.

ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ ಪಿಚ್ ವರದಿ; ಗೆಲುವು ಭಾರತದ್ದೇ ಎನ್ನುತ್ತೆ ಈ ದಾಖಲೆಗಳು
ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ ಪಿಚ್ ವರದಿ; ಗೆಲುವು ಭಾರತದ್ದೇ ಎನ್ನುತ್ತೆ ಈ ದಾಖಲೆಗಳು (AP)

ಮಹಿಳೆಯರ ಟಿ20 ವಿಶ್ವಕಪ್ ಗೆಲ್ಲುವ ಫೇವರೆಟ್ ತಂಡಗಳಲ್ಲಿ ಒಂದಾಗಿರುವ ಭಾರತ ವನಿತೆಯರ ಕ್ರಿಕೆಟ್‌ ತಂಡವು, ನ್ಯೂಜಿಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲೇ ಮುಗ್ಗರಿಸಿತು. ಕಿವೀಸ್‌ ವಿರುದ್ಧ 58 ರನ್‌ಗಳ ಹೀನಾಯ ಸೋಲನುಭವಿಸಿದ ಹರ್ಮನ್‌ಪ್ರೀತ್‌ ಕೌರ್‌ ಬಳಗವು, ಮುಂದಿನ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ದುಬೈನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ತಂಡವು, ಟೂರ್ನಿಯ ಎರಡನೇ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ. ಗುಂಪು ಹಂತದ ಪ್ರತಿ ಪಂದ್ಯಗಳನ್ನೂ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ತಂಡವು, ಅಕ್ಟೋಬರ್‌ 6ರ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ. ತಂಡದ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.

ಏಷ್ಯಾಕಪ್‌ ಚಾಂಪಿಯನ್ ಶ್ರೀಲಂಕಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ಭಾರಿ ಆತ್ಮವಿಶ್ವಾಸದಲ್ಲಿ ಬೀಗುತ್ತಿದೆ. ಆದರೆ, ಭಾರತವು ಮೊದಲ ಸೋಲಿನ ಬಳಿಕ ಪಾಕ್‌ ವಿರುದ್ಧದ ಗೆಲುವು ಅನಿವಾರ್ಯವಾಗಿದೆ. ಈ ಪಂದ್ಯದಲ್ಲಿ ಭಾರತವೇನಾದರೂ ಸೋತರೆ, ಟೂರ್ನಿಯಿಂದ ಕೌರ್‌ ಪಡೆ ಹೊರಬೀಳುವ ಸಾಧ್ಯತೆ ಇದೆ. ಅತ್ತ ಪಾಕ್‌ ತಂಡವು ಸೆಮಿಫೈನಲ್‌ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲಿದೆ.

ಭಾರತ ವಿರುದ್ಧ ಪಾಕಿಸ್ತಾನ ಮುಖಾಮುಖಿ ದಾಖಲೆ

ಟಿ20 ಸ್ವರೂಪದಲ್ಲಿ ಪಾಕಿಸ್ತಾನ ವಿರುದ್ಧ ಭಾರತವು ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಈವರೆಗೆ ಚುಟುಕು ಸ್ವರೂಪದಲ್ಲಿ ಪಾಕಿಸ್ತಾನ 3 ಬಾರಿ ಜಯ ಸಾಧಿಸಿದರೆ, ಭಾರತವು ಪಾಕ್‌ ವಿರುದ್ದ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಪಾಕಿಸ್ತಾನ ವಿರುದ್ಧದ ಕೊನೆಯ ಎಂಟು ಪಂದ್ಯಗಳಲ್ಲಿ ಭಾರತ ಏಳರಲ್ಲಿ ಗೆದ್ದಿದೆ. ಇದರಲ್ಲಿ ಏಷ್ಯಾಕಪ್‌ನಲ್ಲಿ ಒಲಿದ ಗೆಲುವು ಕೊನೆಯದ್ದು. ಡಂಬುಲ್ಲಾದಲ್ಲಿ ನಡೆದ ಆ ಪಂದ್ಯದಲ್ಲಿ ಭಾರತ ಸುಲಭ ಜಯ ಸಾಧಿಸಿತ್ತು. ಕಳೆದ ವರ್ಷ ಕೇಪ್‌ಟೌನ್‌ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತವು 150 ರನ್‌ ಚೇಸಿಂಗ್ ಮಾಡಿ ಗೆದ್ದಿತ್ತು. ಜೆಮಿಮಾ ರೊಡ್ರಿಗಸ್ ಪಂದ್ಯದಲ್ಲಿ ಮಿಂಚಿದ್ದರು. ಒಟ್ಟಾರೆಯಾಗಿ, ಟಿ20 ವಿಶ್ವಕಪ್‌ನಲ್ಲಿ ಭಾರತವು ಪಾಕ್‌ ವಿರುದ್ಧ 5 ಬಾರಿ ಗೆದ್ದರೆ, ಪಾಕ್ ಕೇವಲ 2 ಬಾರಿ ಮಾತ್ರ ಜಯ ಒಲಿಸಿಕೊಂಡಿದೆ.

ದುಬೈ ಪಿಚ್ ರಿಪೋರ್ಟ್

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಇದೇ ಮೈದಾನದಲ್ಲಿ ಕಿವೀಸ್‌ ವಿರುದ್ಧ ವನಿತೆಯರು ಸೋತಿದ್ದರು. ಈ ವಿಶ್ವಕಪ್‌ನಲ್ಲಿ ಈವರೆಗೆ ಎರಡು ಪಂದ್ಯಗಳಿಗೆ ಮೈದಾನ ಆತಿಥ್ಯ ವಹಿಸಿದೆ. ಪಿಚ್‌ ಸ್ವಲ್ಪ ನಿಧಾನಗತಿಯಲ್ಲಿ ವರ್ತಿಸುವುದರಿಂದ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಬಲ್ಲರು. ಬ್ಯಾಟರ್‌ಗಳು ತಂತ್ರ ರೂಪಿಸಿಕೊಂಡು ಆಡಿದರೆ ರನ್‌ ಗಳಿಸಬಹುದು.

ಭಾರತ ಸಂಭಾವ್ಯ ತಂಡ

ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್‌ ಕೀಪರ್), ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್, ಆಶಾ ಸೋಭಾನಾ, ರೇಣುಕಾ ಸಿಂಗ್.

ಪಾಕಿಸ್ತಾನ ಸಂಭಾವ್ಯ ತಂಡ

ಮುನೀಬಾ ಅಲಿ (ವಿಕೆಟ್‌ ಕೀಪರ್), ಗುಲ್ ಫಿರೋಜಾ, ಸಿದ್ರಾ ಅಮೀನ್, ಒಮೈಮಾ ಸೊಹೈಲ್, ನಿದಾ ದಾರ್, ತುಬಾ ಹಸನ್, ಫಾತಿಮಾ ಸನಾ (ನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.

Whats_app_banner