ಐಪಿಎಲ್ 2025 ಆಟಗಾರರ ಹರಾಜಿಗೆ ದಿನಾಂಕ ನಿಗದಿ: ಸೌದಿ ಅರೇಬಿಯಾದ ಜೆದ್ದಾದಲ್ಲಿ ಆಕ್ಷನ್, 1574 ಆಟಗಾರರು ನೋಂದಣಿ
Nov 06, 2024 06:42 AM IST
ಐಪಿಎಲ್ 2025 ಆಟಗಾರರ ಹರಾಜಿಗೆ ದಿನಾಂಕ ನಿಗದಿ: ಸೌದಿ ಅರೇಬಿಯಾದ ಜೆದ್ದಾದಲ್ಲಿ ಆಕ್ಷನ್
- IPL 2025 Mega Auction: ಐಪಿಎಲ್ 2025ರ ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯಲಿದೆ. ಒಟ್ಟು 1,574 ಆಟಗಾರರು ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ವಿದೇಶಿ ಆಟಗಾರರ ಸಂಖ್ಯೆ 409.
ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ಪ್ಲೇಯರ್ ಆಕ್ಷನ್ ನಡೆಯಲಿದೆ. ಎರಡು ದಿನಗಳ ಕಾಲ ಸುದೀರ್ಘವಾಗಿ ನಡೆಯುವ ಮೆಗಾ ಈವೆಂಟ್, ಈ ಹಿಂದಿನ ವರದಿಗಳ ಪ್ರಕಾರ ರಿಯಾದ್‌ನಲ್ಲಿ ನಡೆಯಬೇಕಿತ್ತು. ಆದರೆ ಈಗ ಕೊನೆಯ ಕ್ಷಣದಲ್ಲಿ ಸ್ಥಳವನ್ನು ಬದಲಿಸಲಾಗಿದೆ. ಇದೇ ಮೊದಲ ಬಾರಿಗೆ ಭಾನುವಾರ ಮತ್ತು ಸೋಮವಾರ ಐಪಿಎಲ್ ಮೆಗಾ ಹರಾಜು ನಡೆಯುತ್ತಿದೆ. ನಿರೀಕ್ಷೆಯಂತೆಯೇ ದಿನಾಂಕ ನಿಗದಿಪಡಿಸಲಾಗಿದ್ದು, ಹರಾಜು ದಿನಗಳಂದೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪರ್ತ್ ಟೆಸ್ಟ್‌ನ ಮೂರನೇ ಮತ್ತು ನಾಲ್ಕನೇ ದಿನದಾಟ ನಡೆಯಲಿದೆ.
ಸತತ ಎರಡನೇ ವರ್ಷ ಐಪಿಎಲ್ ಹರಾಜು ವಿದೇಶದಲ್ಲಿ ನಡೆಯುತ್ತಿದೆ. ಅದಕ್ಕೂ ಹಿಂದೆ ಭಾರತದಲ್ಲೇ ವಿವಿಧ ನಗರಗಳಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು. ಈ ಬಾರಿ ಒಟ್ಟು 1,574 ಆಟಗಾರರು ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 1,165 ಭಾರತೀಯರಾದರೆ, 409 ವಿದೇಶಿ ಆಟಗಾರರು. ಈ ಪಟ್ಟಿಯಲ್ಲಿ 320 ಕ್ಯಾಪ್ಡ್ ಆಟಗಾರರು, ದಾಖಲೆಯ 1224 ಅನ್‌ಕ್ಯಾಪ್ಡ್ ಆಟಗಾರರು ಸೇರಿದ್ದಾರೆ. ಉಳಿದ 30 ಮಂದಿ ಅಸೋಸಿಯೇಟ್ ರಾಷ್ಟ್ರಗಳ ಆಟಗಾರರು ಎಂದು ಐಪಿಎಲ್ ಪ್ರಕಟಣೆ ತಿಳಿಸಿದೆ.
ಮೂಲಗಳ ಪ್ರಕಾರ, ಐಪಿಎಲ್ ಮೆಗಾ ಹರಾಜು ಅಬಾಡಿ ಅಲ್ ಜೋಹರ್ ಅರೆನಾದಲ್ಲಿ ನಡೆಯಲಿದ್ದು, ಎಲ್ಲಾ ಫ್ರಾಂಚೈಸಿ ಮಾಲೀಕರು ಮತ್ತು ಅಧಿಕಾರಿಗಳು ಇದಕ್ಕೆ ಸಮೀಪದ ಹೋಟೆಲ್ ಶಾಂಗ್ರಿ-ಲಾದಲ್ಲಿ ತಂಗಲಿದ್ದಾರೆ. ಹೋಟೆಲ್ ಶಾಂಗ್ರಿ-ಲಾ ಹರಾಜು ಸ್ಥಳಕ್ಕೆ ಹತ್ತಿರದಲ್ಲಿದೆ. ಹರಾಜನ್ನು ಅದ್ಧೂರಿಯಾಗಿಸಲು ಮತ್ತು ಯಶಸ್ವಿಗೊಳಿಸಲು ಸೂಕ್ತ ಯೋಜನೆ ರೂಪಿಸಲಾಗಿದೆ.
ಯಾವ ದೇಶದಿಂದ ಎಷ್ಟು ಆಟಗಾರರು?
ಭಾರತದದ 48 ಕ್ಯಾಪ್ಡ್ ಆಟಗಾರರು ಮತ್ತು 272 ವಿದೇಶಿ ಕ್ಯಾಪ್ಡ್ ಆಟಗಾರರು ಹರಾಜಿಗೆ ನೋಂದಾಯಿಸಿದ್ದಾರೆ. ಹರಾಜಿಗೆ ದಕ್ಷಿಣ ಆಫ್ರಿಕಾದಿಂದ ಗರಿಷ್ಠ ಸಂಖ್ಯೆಯ ವಿದೇಶಿ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಒಟ್ಟು 91 ಸೌತ್ ಆಫ್ರಿಕಾದ ಆಟಗಾರರು ಮೆಗಾ ಹರಾಜಿಗೆ ಲಭ್ಯರಾಗಿದ್ದಾರೆ.
ಆಸ್ಟ್ರೇಲಿಯಾದ 76 ಆಟಗಾರರು, ಇಂಗ್ಲೆಂಡ್‌ನ 52 ಆಟಗಾರರು, ನ್ಯೂಜಿಲೆಂಡ್‌ನ 39 ಆಟಗಾರರು, ಶ್ರೀಲಂಕಾದ 29 ಆಟಗಾರರು, ಅಫ್ಘಾನಿಸ್ತಾನದ 29 ಆಟಗಾರರು ಮತ್ತು ವೆಸ್ಟ್ ಇಂಡೀಸ್‌ನ 33 ಆಟಗಾರರು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಹರಾಜಿನಲ್ಲಿ ವಿವಿಧ ತಂಡಗಳ ಪಾಲಾಗುವ ನಿರೀಕ್ಷೆಯಲ್ಲಿದ್ದಾರೆ.
ಅಕ್ಟೋಬರ್ 31 ರಂದು, ಐಪಿಎಲ್‌ನಲ್ಲಿ ಭಾಗಿಯಾಗುವ ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರನ್ನು ಘೋಷಿಸಿದವು. ಎಲ್ಲಾ ಹತ್ತು ತಂಡಗಳು ಒಟ್ಟು 46 ಆಟಗಾರರನ್ನು ಉಳಿಸಿಕೊಂಡಿದ್ದು, ಇದಕ್ಕಾಗಿ ಒಟ್ಟು 558.5 ಕೋಟಿ ರೂ. ಖರ್ಚು ಮಾಡಿವೆ. 25 ಆಟಗಾರರ ತಂಡವನ್ನು ರಚಿಸಲು ಪ್ರತಿ ತಂಡಕ್ಕೆ ಮೆಗಾ ಹರಾಜಿನಲ್ಲಿ ಒಟ್ಟು 120 ಕೋಟಿ ರೂ.ಗಳ ಪರ್ಸ್ ಮಿತಿ ನಿಗದಿಪಡಿಸಲಾಗಿದೆ.
ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಉದ್ಘಾಟನಾ ಐಪಿಎಲ್ ವಿಜೇತ ರಾಜಸ್ಥಾನ್ ರಾಯಲ್ಸ್ ತಲಾ ಆರು ಆಟಗಾರರನ್ನು ಉಳಿಸಿಕೊಂಡಿವೆ. ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಲಾ ಐದು ಆಟಗಾರರನ್ನು ಉಳಿಸಿಕೊಂಡಿವೆ. ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರು ಮತ್ತು ಪಂಜಾಬ್ ಕಿಂಗ್ಸ್ ಇಬ್ಬರು ಆಟಗಾರರನ್ನು ಉಳಿಸಿಕೊಂಡಿವೆ.
ಉಳಿಸಿಕೊಂಡ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ
- ಕೋಲ್ಕತಾ ನೈಟ್ ರೈಡರ್ಸ್: ರಿಂಕು ಸಿಂಗ್, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಆಂಡ್ರೆ ರಸೆಲ್, ಹರ್ಷಿತ್ ರಾಣಾ, ರಮಣ್ದೀಪ್ ಸಿಂಗ್
- ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೇರ್, ಸಂದೀಪ್ ಶರ್ಮಾ,
- ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಮಥೀಶಾ ಪಥಿರಾನಾ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ
- ಗುಜರಾತ್ ಟೈಟಾನ್ಸ್: ರಶೀದ್ ಖಾನ್, ಶುಭ್ಮನ್ ಗಿಲ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್
- ಲಕ್ನೋ ಸೂಪರ್ ಜೈಂಟ್ಸ್: ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಆಯುಷ್ ಬದೋನಿ
- ಮುಂಬೈ ಇಂಡಿಯನ್ಸ್: ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ತಿಲಕ್ ವರ್ಮಾ
- ಸನ್‌ಸರ್ಸ್ ಹೈದರಾಬಾದ್: ಪ್ಯಾಟ್ ಕಮಿನ್ಸ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಕ್ ಕ್ಲಾಸೆನ್, ಟ್ರಾವಿಸ್ ಹೆಡ್
- ಡೆಲ್ಲಿ ಕ್ಯಾಪಿಟಲ್ಸ್: ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್
- ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಯಶ್ ದಯಾಳ್
- ಪಂಜಾಬ್ ಕಿಂಗ್ಸ್: ಶಶಾಂಕ್ ಸಿಂಗ್, ಪ್ರಭ್‌ಸಿಮ್ರನ್ ಸಿಂಗ್
ಇದನ್ನೂ ಓದಿ | ಕೆಕೆಆರ್ 13 ಕೋಟಿ ಕೊಟ್ಟು ಉಳಿಸಿಕೊಂಡ ಬೆನ್ನಲ್ಲೇ ಐಷಾರಾಮಿ ಬಂಗಲೆ ಖರೀದಿಸಿದ ರಿಂಕು ಸಿಂಗ್; ಹೊಸ ಮನೆ ಪ್ರವೇಶಿಸಿದ ಕ್ರಿಕೆಟರ್