ಕೆಕೆಆರ್ 13 ಕೋಟಿ ಕೊಟ್ಟು ಉಳಿಸಿಕೊಂಡ ಬೆನ್ನಲ್ಲೇ ಐಷಾರಾಮಿ ಬಂಗಲೆ ಖರೀದಿಸಿದ ರಿಂಕು ಸಿಂಗ್; ಹೊಸ ಮನೆ ಪ್ರವೇಶಿಸಿದ ಕ್ರಿಕೆಟರ್
Rinku Singh: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ರಿಂಕು ಸಿಂಗ್ ಅವರು ಅಲಿಗಢ್‌ನ ಗೋಲ್ಡನ್ ಎಸ್ಟೇಟ್‌ನ ಓಝೋನ್ ಸಿಟಿಯಲ್ಲಿ ಬೃಹತ್ ಬಂಗಲೆಯೊಂದನ್ನು ಖರೀದಿಸುವ ಮೂಲಕ ತನ್ನ ದೀರ್ಘ ಕಾಲದ ಕನಸನ್ನು ಈಡೇರಿಸಿಕೊಂಡಿದ್ದಾರೆ. ಕೆಕೆಆರ್ 13 ಕೋಟಿಗೆ ರಿಟೇನ್ ಮಾಡಿಕೊಂಡ ನಂತರ ಮನೆ ಖರೀದಿಸಿದ್ದು ವಿಶೇಷ.
ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ರಿಂಕು ಸಿಂಗ್ (Rinku Singh) ಅವರನ್ನು 2025ರ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಮೆಗಾ ಹರಾಜಿಗೂ (IPL Auction) ಮುನ್ನವೇ 13 ಕೋಟಿ ರೂಪಾಯಿಗೆ ಮೊದಲ ಆಯ್ಕೆಯಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಉಳಿಸಿಕೊಂಡಿದೆ. ಇದರ ಬೆನ್ನಲ್ಲೇ ರಿಂಕು ಸಿಂಗ್, ತನ್ನ ಜೀವನದ ಬಹುದೊಡ್ಡ ಕನಸೊಂದನ್ನು ಈಡೇರಿಸಿಕೊಂಡಿದ್ದಾರೆ. ಹೌದು, ಅಲಿಗಢ್‌ನ ಗೋಲ್ಡನ್ ಎಸ್ಟೇಟ್‌ನ ಓಝೋನ್ ಸಿಟಿಯಲ್ಲಿ ಬೃಹತ್ ಬಂಗಲೆಯೊಂದನ್ನು ಖರೀದಿಸುವ ಮೂಲಕ ತನ್ನ ದೀರ್ಘ ಕಾಲದ ಕನಸನ್ನು ಈಡೇರಿಸಿಕೊಂಡಿದ್ದಾರೆ. 500 ಚದರ ಗಜಗಳ ಆಸ್ತಿಯ ನೋಂದಣಿ ಇತ್ತೀಚೆಗೆ ಪೂರ್ಣಗೊಂಡಿತು.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗುವುದಕ್ಕೂ ಮುನ್ನ ರಿಂಕು ಸಾಂಪ್ರದಾಯಿಕ ಪೂಜೆ ಮತ್ತು ವಿಧ್ಯುಕ್ತವಾದ ರಿಬ್ಬನ್-ಕಟಿಂಗ್ನೊಂದಿಗೆ ತನ್ನ ಕುಟುಂಬರ ಜೊತೆಗೆ ಹೊಸ ಮನೆಗೆ ಪ್ರವೇಶಿಸಿದರು. ಈಗ ಅವರ ಹೊಸ ವಿಳಾಸವು ಓಝೋನ್ ಸಿಟಿಯ ಗೋಲ್ಡನ್ ಎಸ್ಟೇಟ್ನಲ್ಲಿರುವ ಮನೆ ಸಂಖ್ಯೆ 38 ಆಗಿದೆ. ಹೊಸ ಅಧ್ಯಾಯಕ್ಕೆ ಕಾಲಿಟ್ಟ ರಿಂಕುಗೆ ಗಣ್ಯರು ಶುಭ ಹಾರೈಸಿದ್ದಾರೆ. ಓಝೋನ್ ಸಿಟಿಯ ಅಧ್ಯಕ್ಷ ಪ್ರವೀಣ್ ಮಂಗಳಾ ಅವರು ರಿಂಕು ಕುಟುಂಬಕ್ಕೆ ಅಧಿಕೃತವಾಗಿ ಮನೆಯ ಕೀಗಳನ್ನು ಹಸ್ತಾಂತರಿಸಿದರು. ತಂದೆ ಖಾಂಚಂದ್ ಮತ್ತು ಅವರ ತಾಯಿ ಬೀನಾ ದೇವಿ ಅವರು ಜೊತೆಗಿದ್ದರು.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೊರಡುವ ಎರಡು ದಿನಗಳ ಮೊದಲು ರಿಂಕು ಸಿಂಗ್ ಅಲಿಗಢ ತಲುಪಿದ್ದರು. ಮೊದಲಿಗೆ ತಹಸೀಲ್ದಾರ್ ನೋಂದಣಿ ಕಚೇರಿಗೆ ತೆರಳಿ ಮನೆ ನೋಂದಣಿ ಮಾಡಿಸಿಕೊಂಡರು. ಐಷಾರಾಮಿ ಬಂಗಲೆ ಖರೀದಿಸಿದ ರಿಂಕುಗೆ ಭವ್ಯ ಸ್ವಾಗತ ಸಿಕ್ಕಿತು. ಓಝೋನ್ ಫುಟ್‌ಬಾಲ್ ಕ್ಲಬ್‌ನ ವಿದ್ಯಾರ್ಥಿಗಳು 2,000 ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ದೀಪಗಳಿಂದಲೇ 'ಓಝೋನ್ ವೆಲ್ಕಮ್ಸ್ ರಿಂಕು ಸಿಂಗ್' ಎಂದು ಬರೆಯಲಾಗಿತ್ತು. ಆದರೆ, ಈ ಮನೆಯ ವೆಚ್ಚ ಮತ್ತು ಇನ್ನಷ್ಟು ವಿವರ ಇನ್ನೂ ಬಹಿರಂಗಗೊಂಡಿಲ್ಲ.
ರಿಂಕು ಸಿಂಗ್ ಐಪಿಎಲ್ ವೇತನ (ವರ್ಷವಾರು)
2017 - 10 ಲಕ್ಷ ರೂಪಾಯಿ
2018 - 80 ಲಕ್ಷ ರೂಪಾಯಿ
2019- 80 ಲಕ್ಷ ರೂಪಾಯಿ
2020 - 80 ಲಕ್ಷ ರೂಪಾಯಿ
2021 - 80 ಲಕ್ಷ ರೂಪಾಯಿ
2022 - 55 ಲಕ್ಷ ರೂಪಾಯಿ
2023 - 55 ಲಕ್ಷ ರೂಪಾಯಿ
2024 - 55 ಲಕ್ಷ ರೂಪಾಯಿ
2025 - 13 ಕೋಟಿ
ಐಪಿಎಲ್ನಲ್ಲಿ ರಿಂಕು ಸಿಂಗ್ ಪ್ರದರ್ಶನ
ಐಪಿಎಲ್ನಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ ರಿಂಕು ಸಿಂಗ್ ಅವರು ಭಾರತೀಯ ತಂಡಕ್ಕೂ ಪ್ರವೇಶಿಸಿದರು. 2017ರಲ್ಲೇ ಶ್ರೀಮಂತ ಲೀಗ್ಗೆ ಎಂಟ್ರಿಕೊಟ್ಟ ರಿಂಕು ಸಿಂಗ್, ಈವರೆಗೂ 45 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 893 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 30.79 ಹೊಂದಿರುವ ರಿಂಕು 4 ಅರ್ಧಶತಕ ಸಿಡಿಸಿದ್ದಾರೆ. 143.34ರ ಸ್ಟ್ರೈಕ್ರೇಟ್ ರನ್ ಗಳಿಸಿದ್ದಾರೆ. 2023ರ ಐಪಿಎಲ್ನಲ್ಲಿ ಯಶ್ ದಯಾಳ್ ಬೌಲಿಂಗ್ನಲ್ಲಿ ಕೊನೆಯ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿ ಕೆಕೆಆರ್ಗೆ ರೋಚಕ ಗೆಲುವು ತಂದುಕೊಟ್ಟಿದ್ದರು.