ಇಬ್ಬರನ್ನು ಮಾತ್ರ ಉಳಿಸಿ ಬೃಹತ್ ಪರ್ಸ್‌ನೊಂದಿಗೆ ಐಪಿಎಲ್ ಮೆಗಾ ಹರಾಜಿಗೆ ತಯಾರಾದ ಪಂಜಾಬ್ ಕಿಂಗ್ಸ್; ಪಾಂಟಿಂಗ್ ತಂತ್ರವೇನು?
ಐಪಿಎಲ್ ಮೆಗಾ ಹರಾಜಿಗೆ ಮುಂಚಿತವಾಗಿ ಪಂಜಾಬ್ ಕಿಂಗ್ಸ್ ತಂಡ ಇಬ್ಬರನ್ನು ಮಾತ್ರ ಉಳಿಸಿಕೊಂಡಿದೆ. ಪ್ರಭ್‌ಸಿಮ್ರನ್ ಸಿಂಗ್ ಮತ್ತು ಶಶಾಂಕ್ ಸಿಂಗ್ ತಂಡದಲ್ಲಿ ಉಳಿದಿದ್ದು, ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲು ಕೋಚ್ ರಿಕಿ ಪಾಂಟಿಂಗ್ ತಂತ್ರ ರೂಪಿಸಿದ್ದಾರೆ.
ಐಪಿಎಲ್ 2025ರ ಆವೃತ್ತಿಗೂ ಮುನ್ನ ಈ ಬಾರಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿಗೂ ಮುನ್ನ ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮ ರಿಟೆನ್ಷನ್ ಪಟ್ಟಿಯನ್ನು ಸಲ್ಲಿಸಿವೆ. ಆ ಮೂಲಕ ಯಾವೆಲ್ಲಾ ಆಟಗಾರರು ತಂಡದಲ್ಲಿ ಉಳಿದುಕೊಂಡಿದ್ದಾರೆ ಹಾಗೂ ಯಾರನ್ನೆಲ್ಲಾ ತಂಡದಿಂದ ಕೈಬಿಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಐಪಿಎಲ್ ಮೆಗಾ ಹರಾಜಿಗೆ ಮುಂಚಿತವಾಗಿ ಪಂಜಾಬ್ ಕಿಂಗ್ಸ್ ತಂಡವು ಅಚ್ಚರಿಯ ರೀತಿಯಲ್ಲಿ ಕೇವಲ ಇಬ್ಬರು ಆಟಗಾರರನ್ನು ಮಾತ್ರ ತಂಡದಲ್ಲಿ ಉಳಿಸಿಕೊಂಡಿದೆ. ಹಲವು ಬಲಿಷ್ಠ ಆಟಗಾರರನ್ನು ತಂಡದಿಂದ ಹೊರಗಿಡಲಾಗಿದೆ. ತಂಡವು ಪ್ರಭ್‌ಸಿಮ್ರನ್ ಸಿಂಗ್ ಮತ್ತು ಶಶಾಂಕ್ ಸಿಂಗ್ ಅವರನ್ನು ಮಾತ್ರ ಉಳಿಸಿಕೊಂಡು ಅಚ್ಚರಿ ಮೂಡಿಸಿದೆ.
ತಂಡದ ಕೋಚ್ ಆಗಿ ರಿಕಿ ಪಾಂಟಿಂಗ್ ನೇಮಕವಾದ ಬಳಿಕ, ರಿಟೆನ್ಷನ್ ಕುರಿತ ಕೆಲವೊಂದು ಸುಳಿವುಗಳು ಸಿಕ್ಕಿದ್ದವು. ಅದರಂತೆ, ಇಂಗ್ಲೆಂಡ್ ಆಟಗಾರರನ್ನು ಉಳಿಸಿಕೊಳ್ಳಲು ಪಾಂಟಿಂಗ್ ಉತ್ಸುಕರಾಗಿಲ್ಲ ಎಂಬುದು ಖಚಿತವಾಗಿತ್ತು. ಈ ಹಿಂದೆ ಡೆಲ್ಲಿ ತಂಡದ ಕೋಚ್ ಆಗಿದ್ದ ಅವರು, ಮುಂದೆ ಹರಾಜಿನಲ್ಲಿ ಆಸೀಸ್ ಆಟಗಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ತಂಡಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆ ಇದೆ.
ಪಂಜಾಬ್ ಕಿಂಗ್ಸ್ ಉಳಿಸಿಕೊಂಡ ಆಟಗಾರರು
- 1. ಶಶಾಂಕ್ ಸಿಂಗ್: 5.5 ಕೋಟಿ ರೂಪಾಯಿ
- 2. ಪ್ರಭ್‌ಸಿಮ್ರಾನ್ ಸಿಂಗ್: 4 ಕೋಟಿ ರೂಪಾಯಿ
- ಉಳಿದಿರುವ ಪರ್ಸ್ ಮೊತ್ತ: 110.5 ಕೋಟಿ ರೂಪಾಯಿ
- ಹರಾಜಿನಲ್ಲಿ RTM ಕಾರ್ಡ್ ಬಳಕೆಗೆ ಅವಕಾಶ: ನಾಲ್ವರು ಆಟಗಾರರು
ಐಪಿಎಲ್ 2024ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ 14 ಪಂದ್ಯಗಳಲ್ಲಿ 354 ರನ್ ಗಳಿಸಿದ್ದ ಶಶಾಂಕ್, 164.65 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು. ತಂಡವು ತನ್ನನ್ನು ಉಳಿಸಿಕೊಂಡ ಕುರಿತು ಮಾತನಾಡಿದ ಅವರು, “ನನ್ನ ಮೇಲೆ ಮತ್ತೆ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ತಂಡಕ್ಕೆ ಕೃತಜ್ಞನಾಗಿದ್ದೇನೆ. ಕೋಚ್ ಪಾಂಟಿಂಗ್ ಅವರೊಂದಿಗೆ ಕೆಲಸ ಮಾಡಲು ಮತ್ತು ತಂಡದ ಯಶಸ್ಸಿಗೆ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ” ಎಂದು ಶಶಾಂಕ್ ಪ್ರತಿಕ್ರಿಯಿಸಿದ್ದಾರೆ.
ತಂಡವು ಕೈಬಿಟ್ಟ ಆಟಗಾರರ ಸಂಪೂರ್ಣ ಪಟ್ಟಿ
ಅರ್ಷದೀಪ್ ಸಿಂಗ್, ಮ್ಯಾಥ್ಯೂ ಶಾರ್ಟ್, ಜಿತೇಶ್ ಶರ್ಮಾ, ಸಿಕಂದರ್ ರಜಾ, ರಿಷಿ ಧವನ್, ಜಾನಿ ಬೇರ್‌ಸ್ಟೋ, ಲಿಯಾಮ್ ಲಿವಿಂಗ್‌ಸ್ಟನ್, ಅಥರ್ವ ಟೈಡೆ, ನಾಥನ್ ಎಲ್ಲಿಸ್, ಸ್ಯಾಮ್ ಕರನ್, ಕಗಿಸೊ ರಬಾಡ, ಹರ್‌ಪ್ರೀತ್ ಬ್ರಾರ್, ರಾಹುಲ್ ಚಹಾರ್, ಹರ್‌ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ಶಿವಂ ಸಿಂಗ್, ಹರ್ಷಲ್ ಪಟೇಲ್, ಕ್ರಿಸ್ ವೋಕ್ಸ್, ಅಶುತೋಷ್ ಶರ್ಮಾ, ವಿಶ್ವನಾಥ್ ಪ್ರತಾಪ್ ಸಿಂಗ್, ತನಯ್ ತ್ಯಾಗರಾಜನ್, ಪ್ರಿನ್ಸ್ ಚೌಧರಿ, ರಿಲೀ ರೋಸೊವ್.
ಮುಖ್ಯ ಕೋಚ್ ರಿಕಿ ಪಾಂಟಿಂಗ್ ಏನಂದ್ರು?
ತಂಡದ ರಿಟೆನ್ಷನ್ ತಂತ್ರಗಳ ಕುರಿತು ಮಾತನಾಡಿದ ಮುಖ್ಯ ಕೋಚ್ ರಿಕಿ ಪಾಂಟಿಂಗ್, “ಪ್ರಭ್‌ಸಿಮ್ರನ್ ನಾವು ಹೆಚ್ಚಿನ ನಿರೀಕ್ಷೆಗಳೊಂದಿಗೆ ಹೂಡಿಕೆ ಮಾಡಿದ ಆಟಗಾರ. ಶಶಾಂಕ್ ಅವರ ಕೌಶಲ್ಯಕ್ಕೆ ಹೆಚ್ಚು ಬೇಡಿಕೆ ಇದೆ. ಅವರ ಅಸಾಧಾರಣ ಪ್ರದರ್ಶನಗಳನ್ನು ನೋಡಿದರೆ ಅವರನ್ನು ಕಡೆಗಣಿಸುವುದು ಅಸಾಧ್ಯ. ಹರಾಜಿನಲ್ಲಿ ನಮ್ಮ ಇತರ ಕೆಲವು ಆಟಗಾರರನ್ನು ಮರಳಿ ಕರೆತರುವ ಗುರಿ ಇದೆ,” ಎಂದು ಪಾಂಟಿಂಗ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ, ಇಂಗ್ಲೆಂಡ್ ಆಲ್‌ರೌಂಡರ್‌ಗಳಾದ ಸ್ಯಾಮ್ ಕರನ್ ಮತ್ ಲಿವಿಂಗ್‌ಸ್ಟನ್, ಭಾರತದ ವೇಗಿ ಅರ್ಷದೀಪ್ ಸಿಂಗ್ ಅವರಂತಹ ಬಲಿಷ್ಠ ಆಟಗಾರರನ್ನು ರಿಲೀಸ್ ಮಾಡಿದ್ದು ಅಭಿಮಾನಿಗಳಿಗೂ ಅಚ್ಚರಿಯಾಗಿದೆ. ಈ ಕುರಿತಾಗಿ ಐಸಿಸಿ ರಿವ್ಯೂನಲ್ಲಿ ಸಂಜನಾ ಗಣೇಶನ್ ಅವರೊಂದಿಗಿನ ಸಂದರ್ಶನದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಪಾಂಟಿಂಗ್ ಮಾತನಾಡಿದ್ದಾರೆ. ಪಂಜಾಬ್ ತಂಡವನ್ನು ತಳಮಟ್ಟದಿಂದ ಹೊಸ ತಂಡವಾಗಿ ನಿರ್ಮಿಸುವ ಕುರಿತು ಪಾಂಟಿಂಗ್ ಉತ್ಸಾಹ ವ್ಯಕ್ತಪಡಿಸಿದ್ದಾರೆ.
ಪಂತ್, ಅಯ್ಯರ್ ಮೇಲೆ ಕಣ್ಣು
“ನಮ್ಮ ಕಾರ್ಯತಂತ್ರ ಸ್ಪಷ್ಟವಾಗಿದೆ. ನಾವು ಕೇವಲ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರೊಂದಿಗೆ, ಅತಿದೊಡ್ಡ ಪರ್ಸ್ ಮೊತ್ತದೊಂದಿಗೆ ಹರಾಜಿಗೆ ಪ್ರವೇಶಿಸುತ್ತಿದ್ದೇವೆ. ಇದು ಇಡೀ ತಂಡವನ್ನು ಹೊಸದಾಗಿ ನಿರ್ಮಿಸಲು ನಮಗೆ ಅವಕಾಶ ನೀಡುತ್ತದೆ” ಎಂದು ಪಾಂಟಿಂಗ್ ತಿಳಿಸಿದ್ದಾರೆ. ಸಾಕಷ್ಟು ರೋಮಾಂಚಕಾರಿ ಆಟಗಾರರು ಹರಾಜಿನಲ್ಲಿ ಲಭ್ಯವಿದ್ದಾರೆ. ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್, ಕೆಎಲ್ ರಾಹುಲ್ ಸೇರಿದಂತೆ ಕೆಲವು ಭಾರತೀಯೇತರ ಆಟಗಾರರನ್ನು ಹರಾಜಿಗಿಟ್ಟಿರುವುದು ನನಗೆ ಸ್ವಲ್ಪ ಆಶ್ಚರ್ಯವನ್ನುಂಟು ಮಾಡಿದೆ" ಎಂದಿದ್ದಾರೆ.
ಸದ್ಯ ಇತ್ತೀಚೆಗೆ ಪಾಂಟಿಂಗ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದ ಪಂಜಾಬ್ ತಂಡವು, ಬರೋಬ್ಬರಿ 110.5 ಕೋಟಿ ರೂಪಾಯಿಯೊಂದಿಗೆ ಹರಾಜಿಗೆ ಹೋಗಲಿದೆ. ಹೀಗಾಗಿ ತಂಡವು ಸಹಜವಾಗಿ ಬಲಿಷ್ಠ ಆಟಗಾರರಿಗೆ ಕೋಟಿ ಕೋಟಿ ಸುರಿಯಲಿದೆ. ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಇಬ್ಬರ ಮೇಲು ಪಾಂಟಿಂಗ್ ಕಣ್ಣಿಟ್ಟಿದ್ದಾರೆ. ಉಳಿದಂತೆ ಆಸೀಸ್ ಆಟಗಾರರನ್ನು ಖರೀದಿ ಮಾಡುವ ಸಾಧ್ಯತೆ ಇದೆ.