ಭರ್ಜರಿ 10 ಸಿಕ್ಸರ್ ಸಹಿತ 114 ರನ್; ಸ್ಫೋಟಕ ಶತಕ ಸಿಡಿಸಿ ಎಲ್ಲರ ಬಾಯಿ ಮುಚ್ಚಿಸಿದ ಇಶಾನ್ ಕಿಶನ್!
Aug 17, 2024 09:27 AM IST
ಬುಚ್ಚಿಬಾಬು ಟೂರ್ನಿಯಲ್ಲಿ ಸ್ಫೋಟಕ ಶತಕ ಸಿಡಿಸಿ ಸಂಭ್ರಮಿಸಿದ ಇಶಾನ್ ಕಿಶನ್.
Ishan Kishan: ಸುದೀರ್ಘ ಸಮಯದ ನಂತರ ದೇಶೀಯ ಕ್ರಿಕೆಟ್‌ನಲ್ಲಿ ಜಾರ್ಖಂಡ್ ಪರ ಆಡುತ್ತಿರುವ ಇಶಾನ್ ಇದೀಗ ಈ ಶತಕದ ಇನ್ನಿಂಗ್ಸ್‌ನೊಂದಿಗೆ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಲು ಸಜ್ಜಾಗುತ್ತಿದ್ದಾರೆ.
ಜಾರ್ಖಂಡ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ (Ishan Kishan) ದೇಶೀಯ ಕ್ರಿಕೆಟ್ ಬುಚ್ಚಿ ಬಾಬು ಟೂರ್ನಿಯಲ್ಲಿ (Buchi Babu Tournament) ಶತಕ ಬಾರಿಸುವ ಮೂಲಕ ಬಲಿಷ್ಠ ಪುನರಾಗಮನ ಮಾಡಿದ್ದಾರೆ. ಮಧ್ಯಪ್ರದೇಶ ವಿರುದ್ಧ (Madhya Pradesh vs Jharkhand) ತಿರುನಲ್ವೇಲಿಯಲ್ಲಿ ನಡೆದ ಪಂದ್ಯದ ಎರಡನೇ ದಿನ ಬಿರುಸಿನ ಶತಕ ಸಿಡಿಸಿದ್ದಾರೆ. ಜಾರ್ಖಂಡ್ ಪರ ಬಿರುಸಿನ ಆಟವಾಡಿದ ತಂಡದ ನಾಯಕ ಕಿಶನ್ 114 ರನ್ ಗಳಿಸಿ ಔಟಾದರು.
ಇಶಾನ್ ಶತಕ ಸಿಡಿಸಲು ತೆಗೆದುಕೊಂಡಿದ್ದು ಕೇವಲ 86 ಎಸೆತ. ತಮ್ಮ ಸಾಂಪ್ರದಾಯಿಕ ಶೈಲಿಯಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ಸಿಡಿಸಿದ್ದು ಅದ್ಭುತವಾಗಿತ್ತು. ಸುದೀರ್ಘ ಸಮಯದ ನಂತರ ದೇಶೀಯ ಕ್ರಿಕೆಟ್‌ನಲ್ಲಿ ಜಾರ್ಖಂಡ್ ಪರ ಆಡುತ್ತಿರುವ ಇಶಾನ್ ಇದೀಗ ಈ ಶತಕದ ಇನ್ನಿಂಗ್ಸ್‌ನೊಂದಿಗೆ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಲು ಸಜ್ಜಾಗುತ್ತಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಆಡದ ಕಾರಣ, ಇಶಾನ್ ಕಿಶನ್ ಟೀಮ್ ಇಂಡಿಯಾವನ್ನು ತೊರೆಯಬೇಕಾಯಿತು. ಜೊತೆಗೆ ತಮ್ಮ ಕೇಂದ್ರ ಒಪ್ಪಂದವನ್ನು ಸಹ ಕಳೆದುಕೊಂಡರು. ಆದರೀಗ ತಮ್ಮ ನಿರ್ಧಾರವನ್ನು ಬದಲಾಯಿಸಿ ಜಾರ್ಖಂಡ್‌ಗಾಗಿ ಆಡಲು ನಿರ್ಧರಿಸಿದ್ದಾರೆ. ಹಾಗಂತ ಇಶಾನ್ಗೆ ಕಿಶನ್ ಟೀಮ್ ಇಂಡಿಯಾಗೆ ಮರಳುವುದು ಸುಲಭವಲ್ಲ. ದೇಶೀಯ ಮಟ್ಟದಲ್ಲಿ ನಿರಂತರವಾಗಿ ರನ್ ಗಳಿಸಿದರೆ ಮಾತ್ರ ಅದು ಸಾಧ್ಯ.
25 ಎಸೆತಗಳ ಅಂತರದಲ್ಲಿ ಶತಕ
ಕಿಶನ್ ಎರಡನೇ ದಿನದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಎಡಗೈ ಬ್ಯಾಟರ್ ನಿಧಾನವಾಗಿ ಬ್ಯಾಟಿಂಗ್ ನಡೆಸಿದರು. 61 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಆದರೆ ಇದಾದ 25 ಎಸೆತಗಳಲ್ಲೇ ಸೆಂಚುರಿ ಪೂರೈಸಿದರು. 86 ಎಸೆತಗಳಲ್ಲಿ 100ರ ಗಡಿ ದಾಟಿದ ಇಶಾನ್ ಅವರ ಸ್ಫೋಟಕ ಇನ್ನಿಂಗ್ಸ್ನಲ್ಲಿ 9 ಸಿಕ್ಸರ್, 5 ಬೌಂಡರಿಗಳು ಇದ್ದವು. ಇಶಾನ್ ವಿಕೆಟ್ ಒಪ್ಪಿಸುವಾಗ 107 ಎಸೆತಗಳಲ್ಲಿ 5 ಬೌಂಡರಿ, 10 ಸಿಕ್ಸರ್ಗಳ ಸಹಾಯದಿಂದ 114 ರನ್ ಗಳಿಸಿ ಔಟಾದರು.
ದಕ್ಷಿಣ ಆಫ್ರಿಕಾ ಪ್ರವಾಸದಿಂದ ವಿವಾದ
ಇಶಾನ್ ಕಿಶನ್ ಕಳೆದ ವರ್ಷಾಂತ್ಯದಲ್ಲಿ ಟೀಮ್ ಇಂಡಿಯಾ ಜೊತೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದರು. ಆಗ ಇಶಾನ್ ಸ್ಫೋಟಕ ಫಾರ್ಮ್ನಲ್ಲಿದ್ದರು, ಆದರೆ ಇದರ ಹೊರತಾಗಿಯೂ ಅವರಿಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗಲಿಲ್ಲ. ಹೀಗಿರುವಾಗ ಪ್ರವಾಸದ ಮಧ್ಯೆ ಕ್ರಿಕೆಟ್‌ನಿಂದ ಬಿಡುವು ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ತವರಿಗೆ ವಾಪಸ್ ಮರಳಿದ್ದರು.
ಈ ವೇಳೆ ಅಂದಿನ ಕೋಚ್ ರಾಹುಲ್ ದ್ರಾವಿಡ್ ರಣಜಿ ಟ್ರೋಫಿಯಲ್ಲಿ ಆಡುವಂತೆ ಕೇಳಿಕೊಂಡರೂ ಇಶಾನ್ ಕಿವಿಗೊಡಲಿಲ್ಲ. ಭಾರತಕ್ಕೆ ಮರಳಿದ ನಂತರ, ಕಿಶನ್ ಹಾರ್ದಿಕ್ ಪಾಂಡ್ಯ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ತಯಾರಿ ಆರಂಭಿಸಿದರು. ವಿವಾದ ಉಲ್ಬಣಗೊಂಡ ಪರಿಣಾಮ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಲಿಲ್ಲ. ಇದರೊಂದಿಗೆ ಅವರನ್ನು ಕೇಂದ್ರ ಗುತ್ತಿಗೆಯಿಂದಲೂ ತೆಗೆದುಹಾಕಲಾಗಿದೆ.
ಇಶಾನ್ ಕೂಡ ಅನೇಕ ಸಂದರ್ಭಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಆಟಗಾರನು ದೇಶೀಯ ಕ್ರಿಕೆಟ್ ಆಡದೆ ಟೀಮ್ ಇಂಡಿಯಾಕ್ಕೆ ಮರಳಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಕಟ್ಟುನಿಟ್ಟಾಗಿ ಹೇಳಿದೆ. ಇದೇ ಕಾರಣಕ್ಕೆ ಇಶಾನ್ ಬುಚ್ಚಿ ಬಾಬು ಟೂರ್ನಿಯಲ್ಲಿ ಜಾರ್ಖಂಡ್ ಪರ ಆಡಲು ನಿರ್ಧರಿಸಿದ್ದಾರೆ.
ವರದಿ: ವಿನಯ್ ಭಟ್
ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ ಎಂಎಸ್ ಧೋನಿ ದುಲೀಪ್ ಟ್ರೋಫಿ ಆಡಬಹುದೇ? ಇಲ್ಲಿದೆ ಉತ್ತರ