7,720 ದಿನ, 188 ಪಂದ್ಯ, 704 ವಿಕೆಟ್; 21 ವರ್ಷಗಳ ಟೆಸ್ಟ್ ಕರಿಯರ್ಗೆ ಗೆಲುವಿನೊಂದಿಗೆ ಗುಡ್ಬೈ ಹೇಳಿದ ಜೇಮ್ಸ್ ಆ್ಯಂಡರ್ಸನ್
Jul 12, 2024 07:03 PM IST
7,720 ದಿನ, 188 ಪಂದ್ಯ, 704 ವಿಕೆಟ್; 21 ವರ್ಷಗಳ ಟೆಸ್ಟ್ ಕರಿಯರ್ಗೆ ಗೆಲುವಿನೊಂದಿಗೆ ಗುಡ್ಬೈ ಹೇಳಿದ ಜೇಮ್ಸ್ ಆ್ಯಂಡರ್ಸನ್
- James Anderson retire: ಇಂಗ್ಲೆಂಡ್ ತಂಡದ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ. ಲಾರ್ಡ್ಸ್ನಲ್ಲಿ ವೆಸ್ಟ್ ಇಂಡೀಸ್ ಎದುರು ಗೆದ್ದ ಇಂಗ್ಲೆಂಡ್ ಜಿಮ್ಮಿಗೆ ಸ್ಮರಣೀಯ ವಿದಾಯ ನೀಡಿದೆ.
ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ (Lords Cricket Stadium) ಜರುಗಿದ ವೆಸ್ಟ್ ಇಂಡೀಸ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ (England vs West Indies), ಇನ್ನಿಂಗ್ಸ್ ಹಾಗೂ 114 ರನ್ಗಳ ಗೆಲುವು ಸಾಧಿಸಿದೆ. ಆ ಮೂಲಕ ಸಾರ್ವಕಾಲಿಕ ಶ್ರೇಷ್ಠ ಹಾಗೂ ಇಂಗ್ಲೆಂಡ್ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರಿಗೆ ಸ್ಟೋಕ್ಸ್ ಪಡೆ ಗೆಲುವಿನ ವಿದಾಯ ನೀಡಿದೆ. 21 ವರ್ಷ, 1 ತಿಂಗಳು, 19 ದಿನಗಳ ಕಾಲ ಟೆಸ್ಟ್ ಕ್ರಿಕೆಟ್ಗೆ ಆಂಗ್ಲರ ಪರ ಸೇವೆ ಸಲ್ಲಿಸಿದ್ದ ಜಿಮ್ಮಿ, ಸುದೀರ್ಘ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ.
ಟೆಸ್ಟ್ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ್ದ ಲಾರ್ಡ್ಸ್ ಮೈದಾನದಲ್ಲೇ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಆರಂಭಕ್ಕೂ ಮೊದಲೇ ಆ್ಯಂಡರ್ಸನ್ ಇದು ನನ್ನ ಕೊನೆಯ ಪಂದ್ಯ ಎಂದು ಘೋಷಿಸಿದ್ದರು. 2003ರ ಮೇ 22ರಂದು ಲಾರ್ಡ್ಸ್ನಲ್ಲೇ ಜಿಂಬಾಬ್ವೆ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಈಗ 2024 ಜುಲೈ 10ರಂದು ಆರಂಭಗೊಂಡ ಟೆಸ್ಟ್ ಪಂದ್ಯವು ಅವರ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.
ಕೊನೆಯ ಪಂದ್ಯದಲ್ಲೂ ವಿಕೆಟ್ ಬೇಟೆ
ಮೂರೇ ದಿನಕ್ಕೆ ಮುಕ್ತಾಯಗೊಂಡ ಈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್, ಅಮೋಘ ಗೆಲುವು ದಾಖಲಿಸಲು ಜೇಮ್ಸ್ ಆ್ಯಂಡರ್ಸನ್ ಪ್ರಮುಖ ಪಾತ್ರವಹಿಸಿದರು. ಅಲ್ಲದೆ, ವಿಕೆಟ್ ಬೇಟೆಯಾಡುವ ಮೂಲಕ ಗಮನ ಸೆಳೆದರು. ಒಟ್ಟಾರೆ 22 ವರ್ಷಗಳ ಕಾಲ (2002ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ) ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಜೇಮ್ಸ್, ತನ್ನ ಕೊನೆ ಟೆಸ್ಟ್ನಲ್ಲೂ ನಾಲ್ಕು ವಿಕೆಟ್ ಕಿತ್ತರು. ಮೊದಲ ಇನ್ನಿಂಗ್ಸ್ನಲ್ಲಿ 1 ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸಿದರು. ಇದರೊಂದಿಗೆ ಅವರ ಟೆಸ್ಟ್ ಸಂಖ್ಯೆ 704ಕ್ಕೆ ಏರಿತು.
ಟೆಸ್ಟ್ ಪಂದ್ಯದ ಸಂಕ್ಷಿಪ್ತ ವಿವರ
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್: 121/10 (ಗಸ್ ಆಟ್ಕಿನ್ಸನ್ 45/7)
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 371/10 (ಜಾಕ್ ಕ್ರಾವ್ಲಿ 76, ಓಲ್ಲಿ ಪೋಪ್ 57, ರೂಟ್ 68, ಹ್ಯಾರಿ ಬ್ರೂಕ್ 50, ಜೆಮಿ ಸ್ಮಿತ್ 70)
ವೆಸ್ಟ್ ಇಂಡೀಸ್ 2ನೇ ಇನ್ನಿಂಗ್ಸ್: 136/10 (ಗಸ್ ಆಟ್ಕಿನ್ಸನ್ 61/5, ಜೇಮ್ಸ್ ಆ್ಯಂಡರ್ಸನ್ 32/3)
ಜೇಮ್ಸ್ ಆ್ಯಂಡರ್ಸನ್ ವೃತ್ತಿಜೀವನ
ಆ್ಯಂಡರ್ಸನ್ ಅವರ ಟೆಸ್ಟ್ ವೃತ್ತಿಜೀವನ ಅಮೋಘವಾಗಿದೆ. ಲಾಂಗೆಸ್ಟ್ ಫಾರ್ಮಾಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಅತ್ಯಧಿಕ ಟೆಸ್ಟ್ ಪಡೆದ ಬೌಲರ್ಗಳ ಪೈಕಿ ವಿಶ್ವದ ಮೂರನೇ ಬೌಲರ್ ಆಗಿದ್ದಾರೆ. ಮೊದಲ ಎರಡು ಸ್ಥಾನಗಳಲ್ಲಿ ಮುತ್ತಯ್ಯ ಮುರಳೀಧರನ್ (800), ಶೇನ್ ವಾರ್ನ್ (708) ಸ್ಥಾನ ಪಡೆದಿದ್ದಾರೆ. ಇವರಿಬ್ಬರೂ ಸ್ಪಿನ್ನರ್ಗಳು. ಈ ಹಿಂದೆಯೇ ಏಕದಿನ, ಟಿ20ಐ ಕ್ರಿಕೆಟ್ಗೆ ವಿದಾಯ ಹೇಳಿದ್ದ ಜಿಮ್ಮಿ, ಟೆಸ್ಟ್‌ನಲ್ಲಿ 700 ವಿಕೆಟ್ ಕಬಳಿಸಿದ ಏಕೈಕ ವೇಗಿಯೂ ಆಗಿದ್ದಾರೆ.
ಸಚಿನ್ ತೆಂಡೂಲ್ಕರ್ ನಂತರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದ ದಾಖಲೆ ಹೊಂದಿರುವ 41 ವರ್ಷದ ವೇಗಿ 188 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 265 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್, 350 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಒಟ್ಟು 704 ವಿಕೆಟ್ ಕಿತ್ತಿದ್ದಾರೆ. 26.45 ಬೌಲಿಂಗ್ ಸರಾಸರಿ, 2.79ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಇನ್ನಿಂಗ್ಸ್ವೊಂದರಲ್ಲಿ ಬೆಸ್ಟ್ ಬೌಲಿಂಗ್ 42/7. ಪಂದ್ಯವೊಂದರಲ್ಲಿ ಬೆಸ್ಟ್ ಬೌಲಿಂಗ್ 71/11. ಅವರು 32 ಸಲ ಐದು ವಿಕೆಟ್ಗಳ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಮೂರು ಸಲ 10 ವಿಕೆಟ್ಗಳ (ಎರಡು ಇನ್ನಿಂಗ್ಸ್ಗಳಲ್ಲೂ ಸೇರಿ) ಗೊಂಚಲು ಪಡೆದಿದ್ದಾರೆ. ಅವರ ಟೆಸ್ಟ್ ವೃತ್ತಿಜೀವನದಲ್ಲಿ 40037 ಎಸೆತಗಳನ್ನು ಎಸೆದಿದ್ದಾರೆ.
ಟಿ20ಐ, ಏಕದಿನದಲ್ಲಿ ಜಿಮ್ಮಿ ದಾಖಲೆ ಹೇಗಿದೆ?
ಟೆಸ್ಟ್ ಮಾತ್ರವಲ್ಲ, ಏಕದಿನ ಕ್ರಿಕೆಟ್ನಲ್ಲೂ ಜಿಮ್ಮಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 2002ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಆ್ಯಂಡರ್ಸನ್, 2015ರ ತನಕ ಕಾಣಿಸಿಕೊಂಡರು. 269 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದ್ದು, 269 ವಿಕೆಟ್ ಉರುಳಿಸಿದ್ದಾರೆ. ಇನ್ನು 2007ರಲ್ಲಿ ಟಿ20ಐ ಕ್ರಿಕೆಟ್ಗೆ ಪದಾರ್ಪಣೆಗೈದ ವೇಗಿ 18 ವಿಕೆಟ್ ಪಡೆದರು. 2 ವರ್ಷ ಮಾತ್ರ ಅವರು ಟಿ20ಐನಲ್ಲಿ ಕಾಣಿಸಿಕೊಂಡರು.