logo
ಕನ್ನಡ ಸುದ್ದಿ  /  ಕರ್ನಾಟಕ  /  ಪೋಕ್ಸೋ ಪ್ರಕರಣದಲ್ಲಿ ಬಿಎಸ್​ವೈಗೆ ಬಿಗ್‌ ರಿಲೀಫ್‌, ಖುದ್ದು ಹಾಜರಿಗೆ ವಿನಾಯಿತಿ; ಪ್ರಜ್ವಲ್‌ ಅರ್ಜಿ ಹಿಂಪಡೆಯಲು ಹೈಕೋರ್ಟ್‌ ಅನುಮತಿ

ಪೋಕ್ಸೋ ಪ್ರಕರಣದಲ್ಲಿ ಬಿಎಸ್​ವೈಗೆ ಬಿಗ್‌ ರಿಲೀಫ್‌, ಖುದ್ದು ಹಾಜರಿಗೆ ವಿನಾಯಿತಿ; ಪ್ರಜ್ವಲ್‌ ಅರ್ಜಿ ಹಿಂಪಡೆಯಲು ಹೈಕೋರ್ಟ್‌ ಅನುಮತಿ

Prasanna Kumar P N HT Kannada

Jul 12, 2024 11:02 PM IST

google News

ಪೋಕ್ಸೋ ಪ್ರಕರಣದಲ್ಲಿ ಬಿಎಸ್​ವೈಗೆ ಬಿಗ್‌ ರಿಲೀಫ್‌, ಖುದ್ದು ಹಾಜರಿಗೆ ವಿನಾಯಿತಿ; ಪ್ರಜ್ವಲ್‌ ಅರ್ಜಿ ಹಿಂಪಡೆಯಲು ಹೈಕೋರ್ಟ್‌ ಅನುಮತಿ

    • POCSO Case: ಪೋಕ್ಸೋ ಪ್ರಕರಣದಲ್ಲಿ ಬಿಎಸ್​ ಯಡಿಯೂರಪ್ಪ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದ್ದು, ಹೈಕೋರ್ಟ್ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ.
ಪೋಕ್ಸೋ ಪ್ರಕರಣದಲ್ಲಿ ಬಿಎಸ್​ವೈಗೆ ಬಿಗ್‌ ರಿಲೀಫ್‌, ಖುದ್ದು ಹಾಜರಿಗೆ ವಿನಾಯಿತಿ; ಪ್ರಜ್ವಲ್‌ ಅರ್ಜಿ ಹಿಂಪಡೆಯಲು ಹೈಕೋರ್ಟ್‌ ಅನುಮತಿ
ಪೋಕ್ಸೋ ಪ್ರಕರಣದಲ್ಲಿ ಬಿಎಸ್​ವೈಗೆ ಬಿಗ್‌ ರಿಲೀಫ್‌, ಖುದ್ದು ಹಾಜರಿಗೆ ವಿನಾಯಿತಿ; ಪ್ರಜ್ವಲ್‌ ಅರ್ಜಿ ಹಿಂಪಡೆಯಲು ಹೈಕೋರ್ಟ್‌ ಅನುಮತಿ

ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ಮುಖಂಡ ಬಿಎಸ್ ಯಡಿಯೂರಪ್ಪ ಅವರಿಗೆ ಪೋಕ್ಸೋ ಪ್ರಕರಣದಲ್ಲಿ ಬಿಗ್‌ ರಿಲೀಫ್‌ ಸಿಕ್ಕಿದೆ. ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ) ಪ್ರಕರಣದ ಆರೋಪಿಯಾಗಿರುವ ಯಡಿಯೂರಪ್ಪ ಅವರಿಗೆ ವಿಚಾರಣಾ ನ್ಯಾಯಾಲಯ ನಿಗದಿಪಡಿಸಿರುವ ಇದೇ ತಿಂಗಳ 15 ರಂದು ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಹೈಕೋರ್ಟ್‌ ನಿರ್ದೇಶನ ನೀಡಿದೆ.

ತ್ವರಿತಗತಿ ನ್ಯಾಯಾಲಯ-1 ಇದೇ ತಿಂಗಳ 4ರಂದು ಸಮನ್ಸ್‌ ಹೊರಡಿಸಿ ಜುಲೈ 15ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ತಿಳಿಸಿತ್ತು. ಯಡಿಯೂರಪ್ಪ ಅವರಿಗೆ ಈಗ 81 ವರ್ಷ. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಪರಾಧ ವಿಭಾಗ ಜೂನ್‌ 27ರಂದು ತ್ವರಿತಗತಿ ನ್ಯಾಯಾಲಯದಲ್ಲಿ ಚಾರ್ಜ್‌ ಶೀಟ್‌ ಸಲ್ಲಿಸಿತ್ತು.

ತಮ್ಮ ವಿರುದ್ಧ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ದೂರನ್ನು ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಶುಕ್ರವಾರ ಶಾಸಕರು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎನ್.ದೀಕ್ಷಿತ್‌ ಅವರು ಶುಕ್ರವಾರ ವಿಚಾರಣೆ ನಡೆಸಿದರು.

ವಿಚಾರಣೆಯ ಸಂದರ್ಭದಲ್ಲಿ ಪ್ರಕರಣದ ಹೆಚ್ಚುವರಿ ವಿಶೇಷ ಪಾಸಿಕ್ಯೂಟರ್‌ ಬಿಎನ್ ಜಗದೀಶ್‌ ಅವರು, ಅಡ್ವೋಕೇಟ್‌ ಜನರಲ್‌ ಅವರು ಹೊರ ಹೋಗಿದ್ದಾರೆ. ಆದ್ದರಿಂದ ವಿಚಾರಣೆಯನ್ನು ಮುಂದೂಡುವಂತೆ ಕೋರಿದರು. ಯಡಿಯೂರಪ್ಪ ಪರ ಹಾಜರಾಗಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು ಈ ಪ್ರಕರಣ ಇದೇ ಮೊದಲ ಬಾರಿಗೆ ವಿಚಾರಣೆಗೆ ಬರುತ್ತಿಲ್ಲ. ಅನೇಕ ಬಾರಿ ವಿಚಾರಣೆ ನಡೆಯುತ್ತಿದೆ.

ಆದ್ದರಿಂದ ನಮ್ಮ ವಾದವನ್ನು ಘನ ನ್ಯಾಯಾಲಯ ಆಲಿಸಬೇಕು ಎಂದು ಆಗ್ರಹಪಡಿಸಿದರು. ಯಡಿಯೂರಪ್ಪ ಅವರ ವಿರುದ್ಧ ವಿಚಾರಣಾ ನ್ಯಾಯಾಲಯ ದೋಷಾರೋಪ ಪಟ್ಟಿ ಸ್ವೀಕರಿಸಿದ್ದು, ಸಂಜ್ಞೆಯ ಅಪರಾಧ ಎಂದು ಪರಿಗಣಿಸಿ ಅರ್ಜಿದಾರರ ಖುದ್ದು ಹಾಜರಾತಿಗೆ ಆದೇಶಿಸಿದೆ. ಹೀಗಾಗಿ ಅವರು ಇದೇ ತಿಂಗಳ 15ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ಎಂದರು.

ಈ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಯಡಿಯೂರಪ್ಪ ಅವರಿಗೆ ಈಗಾಗಲೇ ಮಧ್ಯಂತರ ಆದೇಶದ ಮೂಲಕ ರಕ್ಷಣೆ ನೀಡಲಾಗಿದೆ. ಆದ್ದರಿಂದ ಈ ಪ್ರಕರಣವನ್ನು ಹೈಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಳ್ಳುವವರೆಗೆ ಯಡಿಯೂರಪ್ಪ ಅವರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಆದೇಶ ಹೊರಡಿಸಿ ವಿಚಾರಣೆಯನ್ನು ಇದೇ ತಿಂಗಳ 26ಕ್ಕೆ ಮುಂದೂಡಿದರು.

ಅತ್ಯಾಚಾರ ಪ್ರಕರಣ, ಪ್ರಜ್ವಲ್‌ ರೇವಣ್ಣ ಅರ್ಜಿ ಹಿಂಪಡೆಯಲು ಹೈಕೋರ್ಟ್‌ ಅನುಮತಿ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ಮಾಜಿ ಲೋಕಸಭಾ ಸದಸ್ಯ ಪ್ರಜ್ವಲ್‌ ರೇವಣ್ಣ ಅವರು ತಮ್ಮ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆಯಲು ಹೈಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ.

ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಶಾಸಕರು ಮತ್ತು ಸಂಸದರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೃಷ್ಣ ಎನ್.ದೀಕ್ಷಿತ್‌ ಶುಕ್ರವಾರ ವಿಚಾರಣೆ ನಡೆಸಿದರು. ವಿಚಾರಣೆ ಸಂದರ್ಭ ಅರ್ಜಿದಾರರ ಪರ ವಕೀಲ ಜಿ.ಅರುಣ್‌ ಅರ್ಜಿ ಹಿಂಪಡೆಯಲು ನಿರ್ಧರಿಸಿದ್ದೇವೆ. ಆದ್ದರಿಂದ ಅರ್ಜಿಯನ್ನು ಹಿಂಪಡೆಯುವ ಅರ್ಜಿಯನ್ನು ಪುರಸ್ಕರಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡರು.

ಇವರ ಕೋರಿಕೆಯನ್ನು ಮಾನ್ಯ ಮಾಡಿದ ಘನ ನ್ಯಾಯಾಲಯ ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ. ಎಂದು ನ್ಯಾಯಮೂರ್ತಿಗಳು ಆದೇಶ ಹೊರಡಿಸಿದರು. ಈ ಸಂದರ್ಭದಲಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ರವಿವರ್ಮ ಕುಮಾರ್‌ ಉಪಸ್ಥಿತರಿದ್ದರು. ಪ್ರಜ್ವಲ್‌ ರೇವಣ್ಣ ವಿರುದ್ಧ ಹಾಸನದಲ್ಲಿ ಹಲವಾರು ಲೈಂಗಿಕ ಕಿರುಕುಳ ನೀಡಿದ ಆರೋಪಗಳು ದಾಖಲಾಗಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ