ಕ್ರಿಕೆಟ್ಗೆ ಸಿಗುವಷ್ಟು ಬೆಂಬಲ ಇತರೆ ಕ್ರೀಡೆಗಳಿಗೆ ಏಕಿಲ್ಲ; ಟಿ20 ವಿಶ್ವಕಪ್ ವಿಜಯಯಾತ್ರೆ ಬಗ್ಗೆ ಸೈನಾ ನೆಹ್ವಾಲ್ ಬೇಸರ
Saina Nehwal: ಭಾರತದಲ್ಲಿ ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ನಡುವಿನ ಅಸಮಾನತೆಯ ಕುರಿತು ಸ್ಟಾರ್ ಷಟ್ಲರ್ ಸೈನಾ ನೆಹ್ವಾಲ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜೂನ್ 29ರಂದು ಬಾರ್ಬಡೋಸ್ನಲ್ಲಿ ನಡೆದ ಟಿ20ಐ ವಿಶ್ವಕಪ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ 11 ವರ್ಷಗಳ ಐಸಿಸಿ ಪ್ರಶಸ್ತಿ ಬರ ಕೊನೆಗೊಳಿಸಿತು. ಕೆರಿಬಿಯನ್ನರ ನಾಡಿನಿಂದ 5 ದಿನಗಳ ನಂತರ ಭಾರತಕ್ಕೆ ಆಗಮಿಸಿದ ಮೆನ್ ಇನ್ ಬ್ಲ್ಯೂಗೆ ಅದ್ಧೂರಿ ಸ್ವಾಗತ ದೊರೆಯಿತು. ಮುಂಬೈನಲ್ಲಿ ನಡೆದ ವಿಜಯಯಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು.
ವಿಶ್ವಕಪ್ ಗೆಲುವು ರಾಷ್ಟ್ರವ್ಯಾಪಿ ಸಂಭ್ರಮಾಚರಣೆಗೆ ನಾಂದಿ ಹಾಡಿತು. ಅಭಿಮಾನಿಗಳು ಬೀದಿಗಳಲ್ಲಿ ಹರ್ಷೋದ್ಗಾರದಿಂದ ತುಂಬಿ ತುಳುಕುತ್ತಿದ್ದರು. ಇಡೀ ದೇಶವೇ ಆಟಗಾರರ ಸಾಧನೆಯನ್ನು ಕೊಂಡಾಡಿತು. ಮತ್ತೊಂದೆಡೆ ಬಿಸಿಸಿಐ, ವಿಶ್ವಕಪ್ ವಿಜೇತ ತಂಡದ ಸದಸ್ಯರಿಗೆ 125 ಕೋಟಿ ಭರ್ಜರಿ ಬಹುಮಾನ ಘೋಷಿಸಿತು. ಅಲ್ಲದೆ, ಹೆಚ್ಚುವರಿಯಾಗಿ ರಾಜ್ಯ ಸರ್ಕಾರಗಳು ಆಯಾ ಆಟಗಾರರಿಗೆ ನಗದು ಬಹುಮಾನ ಘೋಷಿಸಿತು.
ಕಳವಳ ವ್ಯಕ್ತಪಡಿಸಿದ ಸೈನಾ ನೆಹ್ವಾಲ್
ಆದರೆ, ಇತರೆ ಕ್ರೀಡಾಪಟುಗಳಿಗೆ ಬೇಸರ ತರಿಸಿತು. ಕ್ರಿಕೆಟ್ಗೆ ಸಿಗುವಷ್ಟು ಬೆಂಬಲ ನಮಗೇಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರಗಳು ಕೈಗೊಳ್ಳುವ ನಿರ್ಧಾರಗಳನ್ನೂ ಟೀಕಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ತಮ್ಮ ರಾಜ್ಯ ಕ್ರಿಕೆಟಿಗರಿಗೆ ನಗದು ಬಹುಮಾನವನ್ನು ನೀಡುವ ಕ್ರಮವನ್ನು ಭಾರತದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರ ಚಿರಾಗ್ ಶೆಟ್ಟಿ ಅವರಿಂದ ಟೀಕೆಗೆ ಗುರಿಯಾಯಿತು.
ಕ್ರಿಕೆಟಿಗರಿಗೆ ಮಾತ್ರ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಇತರೆ ಕ್ರೀಡಾಪಟುಗಳು ಸಹ ಇಂತಹ ಗೌರವಕ್ಕೆ ಅರ್ಹರು ಎಂದು ಚಿರಾಗ್ ಶೆಟ್ಟಿ ಹೇಳಿದ್ದರು. ಇದೀಗ ಚಿರಾಗ್ ಶೆಟ್ಟಿಗೆ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ಕೂಡ ಪರ ಧ್ವನಿ ಎತ್ತಿದ್ದಾರೆ. ಭಾರತದಲ್ಲಿ ಇತರ ಕ್ರೀಡೆಗಳಿಗೆ ಹೋಲಿಸಿದರೆ ಕ್ರಿಕೆಟ್ ಅಸಮತೋಲಿತ ಗಮನವನ್ನು ಪಡೆಯುತ್ತಿದೆ ಎಂದು ಸೈನಾ ಕಳವಳ ವ್ಯಕ್ತಪಡಿಸಿದ್ದಾರೆ.
ಇತರ ವಿವಿಧ ವಿಭಾಗಗಳಲ್ಲಿನ ಕ್ರೀಡಾಪಟುಗಳು ದೈಹಿಕವಾಗಿ ಹೆಚ್ಚು ಕಠಿಣರಾಗಿದ್ದಾರೆ. ಕ್ರಿಕೆಟ್ ಆಟಗಾರರಿಗೆ ಸಿಕ್ಕಂತಹ ಮಾನ್ಯತೆ ಮತ್ತು ಬೆಂಬಲಕ್ಕೆ ಅವರು ಸಹ ಅರ್ಹರು ಎಂದು ಅವರು ಒತ್ತಿ ಹೇಳಿದ್ದಾರೆ. ‘ಸೈನಾ ಏನು ಮಾಡುತ್ತಿದ್ದಾರೆ, ಕುಸ್ತಿಪಟುಗಳು, ಬಾಕ್ಸರ್ಗಳು ಏನು ಮಾಡುತ್ತಿದ್ದಾರೆ. ನೀರಜ್ ಚೋಪ್ರಾ ಏನು ಮಾಡುತ್ತಿದ್ದಾರೆ ಎಂದು ಪ್ರತಿಯೊಬ್ಬರೂ ತಿಳಿದುಕೊಳ್ಳಲು ಬಯಸುತ್ತಾರೆ. ಪ್ರತಿಯೊಬ್ಬರಿಗೂ ಕ್ರೀಡಾಪಟುಗಳ ಬಗ್ಗೆ ತಿಳಿದಿದೆ. ಏಕೆಂದರೆ, ನಾವು ನಿರಂತರವಾಗಿ ಪ್ರದರ್ಶನ ನೀಡಿದ್ದೇವೆ ಎಂದಿದ್ದಾರೆ.
ನಮ್ಮ ಆಟ ಮತ್ತು ಸಾಧನೆ ಬಗ್ಗೆ ಮಾಧ್ಯಮಗಳಲ್ಲೂ ಬಂದಿದೆ. ಆದರೆ, ಕ್ರೀಡಾ ಸಂಸ್ಕೃತಿ ಇಲ್ಲದ ಸಮಯದಲ್ಲಿ ನಾನು ಸಾಧಿಸಿದ್ದೇನೆ ಎಂಬುದು ಕನಸಿನಂತೆ ಭಾಸವಾಗುತ್ತಿದೆ’ ಎಂದು ಸೈನಾ ಅವರು, ನಿಖಿಲ್ ಸಿಂಹ ಪಾಡ್ಕಾಸ್ಟ್ನಲ್ಲಿ ಹೇಳಿದ್ದಾರೆ. ಭಾರತದಲ್ಲಿ ಬ್ಯಾಡ್ಮಿಂಟನ್ ಪ್ರಸಿದ್ಧಿ ಪಡೆಯಲು ಸೈನಾ ಸಾಧನೆಯು ಪ್ರಮುಖ ಕಾರಣ. ಅವರು ಪದಾರ್ಪಣೆ ಮಾಡಿದ ಅವಧಿಯಲ್ಲಿ ಬ್ಯಾಡ್ಮಿಂಟನ್ ಹೆಚ್ಚು ಪ್ರಸಿದ್ಧಿ ಪಡೆದಿರಲಿಲ್ಲ.
ಬೇಸರ ತರಿಸಿದೆ ಎಂದ ಸೈನಾ
ಕ್ರಿಕೆಟ್ ಮಾತ್ರ ಎಲ್ಲರ ಗಮನ ಸೆಳೆಯುತ್ತಿರುವುದು ನಿಜಕ್ಕೂ ಬೇಸರ ತರಿಸಿದೆ. ಬಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್, ಟೆನಿಸ್ ಮತ್ತು ಇತರ ಕ್ರೀಡೆಗಳಲ್ಲಿ ದೈಹಿಕವಾಗಿ ತುಂಬಾ ಕಷ್ಟಪಡಬೇಕು. ಆದರೆ ಯಾವುದಕ್ಕೂ ಬೆಂಬಲವೇ ಸಿಗುತ್ತಿಲ್ಲ. ಕ್ರೀಡೆಯಲ್ಲಿ ಕೌಶಲ್ಯವು ಹೆಚ್ಚು ಮುಖ್ಯ ಎಂದು ವೈಯಕ್ತಿಕವಾಗಿ ನಂಬುತ್ತೇನೆ. ಕ್ರಿಕೆಟ್ ಅನ್ನು ಟೀಕಿಸುವುದು ಭಾರತದಲ್ಲಿ ಅದರ ಜನಪ್ರಿಯತೆಯ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ. ಏಕೆಂದರೆ ಕ್ರೀಡೆಯು ಜನರ ಹೃದಯದಲ್ಲಿ ಅಚಲ ಸ್ಥಾನವನ್ನು ಹೊಂದಿದೆ ಎಂದು ಹೇಳಿದ್ದಾರೆ.
ನಾನು ಕ್ರಿಕೆಟ್ ಬಗ್ಗೆ ಕೆಟ್ಟದ್ದನ್ನು ಹೇಳಿದರೂ, ಅದಕ್ಕೆ ಸಿಗುವ ಸ್ಥಾನಮಾನ ಯಾವುದೇ ಕಾರಣಕ್ಕೂ ಕಡಿಮೆಯಾಗುವುದಿಲ್ಲ. ಏಕೆಂದರೆ ಅದನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚು. ನಾನು ಕೂಡ ಕ್ರಿಕೆಟ್ ಅನ್ನು ಇಷ್ಟಪಡುತ್ತೇನೆ. ಆದರೆ ಇತರ ಕ್ರೀಡೆಗಳಿಗೂ ಇಂತಹದ್ದೇ ಬೆಂಬಲ ಏಕೆ ಕೊಡುವುದಿಲ್ಲ. ಬೆಂಬಲವೇ ಇಲ್ಲದಿದ್ದರೆ, ಭಾರತವು ಹೇಗೆ ಕ್ರೀಡಾ ರಾಷ್ಟ್ರವಾಗಲು ಸಾಧ್ಯ? 60 ಒಲಿಂಪಿಕ್ ಪದಕ ಗೆಲ್ಲುವ ಚೀನಾವನ್ನು ಸೋಲಿಸಲು ಹೇಗೆ ಸಾಧ್ಯ ಎಂದು ಕ್ರೀಡಾಭಿಮಾನಿಗಳಿಗೆ ಪ್ರಶ್ನಿಸಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಮಹಿಳಾ ಸಿಂಗಲ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ ನೆಹ್ವಾಲ್, ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಲ್ಲದೆ, ಬ್ಯಾಡ್ಮಿಂಟನ್ನಲ್ಲಿ ವಿಶ್ವದ ನಂಬರ್ 1 ಶ್ರೇಯಾಂಕ ಸಾಧಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.