ಐಪಿಎಲ್ ಹರಾಜಿನಲ್ಲೂ ನಿರಾಸೆ, ಭಾರತ ತಂಡದಲ್ಲೂ ನಿರಾಸೆ; ಕನ್ನಡಿಗ ಕೆಎಲ್ ರಾಹುಲ್ಗೆ ಇದೆಂಥಾ ಗತಿ
Nov 25, 2024 01:07 PM IST
ಐಪಿಎಲ್ ಹರಾಜಿನಲ್ಲೂ ನಿರಾಸೆ, ಭಾರತ ತಂಡದಲ್ಲೂ ನಿರಾಸೆ; ಕನ್ನಡಿಗ ಕೆಎಲ್ ರಾಹುಲ್ಗೆ ಇದೆಂಥಾ ಗತಿ
- KL Rahul: ಐಪಿಎಲ್ 2025ರ ಮೆಗಾ ಹರಾಜಿನಲ್ಲೂ ಭಾರೀ ನಿರಾಸೆ ಅನುಭವಿಸಿದ ಕರ್ನಾಟಕದ ಆಟಗಾರ, ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮತ್ತೊಂದು ನಿರಾಸೆಗೆ ಒಳಗಾಗಿದ್ದಾರೆ.
ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅತ್ಯಂತ ದುರದೃಷ್ಟ ಆಟಗಾರ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ನವೆಂಬರ್ 24ರಂದು ನಡೆದ ಮೊದಲ ದಿನದ ಐಪಿಎಲ್ 2025ರ ಮೆಗಾ ಹರಾಜಿನಲ್ಲೂ ಭಾರೀ ನಿರಾಸೆ ಅನುಭವಿಸಿದ ಕರ್ನಾಟಕದ ಆಟಗಾರ, ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡದಲ್ಲಿ ಮತ್ತೊಂದು ನಿರಾಸೆಗೆ ಒಳಗಾಗಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ್ದ ಬ್ಯಾಟರ್, ಇದೀಗ ಎರಡನೇ ಟೆಸ್ಟ್ನಲ್ಲಿ ಈ ಸ್ಥಾನ ತ್ಯಾಗ ಮಾಡಬೇಕಾಗಿದೆ.
ಕೆಎಲ್ ರಾಹುಲ್ - ನಿರಾಸೆ 1
ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ 20 ಕೋಟಿಗೂ ಹೆಚ್ಚು ಮೊತ್ತ ಪಡೆಯುತ್ತಾರೆ ಎಂಬ ನಿರೀಕ್ಷೆ ಇತ್ತು. ಅಣಕು ಹರಾಜು, ಮಾಜಿ ಕ್ರಿಕೆಟಿಗರು, ಕ್ರಿಕೆಟ್ ತಜ್ಞರು ಸಹ ಇದೇ ರೀತಿ ಅಂದಾಜು ಮಾಡಿದ್ದರು. ಆದರೆ, ಕೇವಲ 14 ಕೋಟಿ ರೂಪಾಯಿಗೆ ಬಿಕರಿಯಾಗಿದ್ದು ಅಚ್ಚರಿ ಮೂಡಿಸಿದೆ ಎಂದು ಹಲವು ಹೇಳಿದ್ದಾರೆ. ವಿಕೆಟ್ ಕೀಪರ್, ಓಪನರ್, ಕ್ಯಾಪ್ಟನ್ನನ್ನು ಕಡಿಮೆ ಮೊತ್ತಕ್ಕೆ ಖರೀದಿಸಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆಟಗಾರರನ್ನ ತನ್ನ ತೆಕ್ಕೆಗೆ ಹಾಕಿಕೊಂಡಿದೆ. 20 ಕೋಟಿಗೂ ಅಧಿಕ ಮೊತ್ತ ಪಡೆಯಬೇಕಿದ್ದ ಆಟಗಾರ 14 ಕೋಟಿಗೆ ಸೇಲ್ ಆಗುವ ಮೂಲಕ ನಿರಾಸೆಗೊಂಡಿದ್ದಾರೆ.
ಕೆಎಲ್ ರಾಹುಲ್ - ನಿರಾಸೆ 2
ಹರಾಜಿಗೂ ಮುನ್ನ ಸಂದರ್ಶನವೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮತ್ತೊಮ್ಮೆ ಸೇರುವುದನ್ನು ಇಷ್ಟಪಡುತ್ತೇನೆ ಎಂದು ರಾಹುಲ್ ಹೇಳಿದ್ದರು. ನಾನು ಸ್ಥಳೀಯ ಆಟಗಾರ. ಬೆಂಗಳೂರು ಅದ್ಭುತ ನಗರ. ಇದು ನನಗೆ ಎಲ್ಲವನ್ನೂ ನೀಡಿದೆ. ಬೇರೆ ತಂಡದಲ್ಲಿ ಆಡಿದರೂ ನನ್ನನ್ನು ನಮ್ಮ ಹುಡುಗ ಎಂದು ಗುರುತಿಸಿ ಕರ್ನಾಟಕದ ಅಭಿಮಾನಿಗಳು ಬೆಂಬಲ ನೀಡುತ್ತಾರೆ. ಅದೇ ಆರ್ಸಿಬಿ ತಂಡದಲ್ಲಿದ್ದರೆ ಆ ಬೆಂಬಲ ಇನ್ನಷ್ಟು ಸಿಗುತ್ತದೆ ಎಂದಿದ್ದರು. ಅದರಂತೆ ಆರ್ಸಿಬಿ ಖರೀದಿ ಮಾಡುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ ನಿರಾಸೆಯಾಯಿತು. ಆದರೆ ರಾಹುಲ್ಗೆ ಇದು ಎರಡನೇ ನಿರಾಸೆ.
ಕೆಎಲ್ ರಾಹುಲ್ - ನಿರಾಸೆ 3
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನ ಎರಡು ಇನ್ನಿಂಗ್ಸ್ನಲ್ಲಿ ಮಿಂಚಿರುವ ಕೆಎಲ್ ರಾಹುಲ್, ಎರಡನೇ ಟೆಸ್ಟ್ನಲ್ಲಿ ಆರಂಭಿಕ ಸ್ಥಾನದಿಂದ ಮಧ್ಯಮ ಕ್ರಮಾಂಕಕ್ಕೆ ಕುಸಿಯಬೇಕಿದೆ. ಏಕೆಂದರೆ, ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ದು, ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ರಾಹುಲ್ ಮೊದಲ ಇನ್ನಿಂಗ್ಸ್ನಲ್ಲಿ 26, 2ನೇ ಇನ್ನಿಂಗ್ಸ್ನಲ್ಲಿ 77 ರನ್ ಬಾರಿಸಿದ್ದರು. ಇದೀಗ ರೋಹಿತ್ಗೆ ಆ ಸ್ಥಾನ ಬಿಟ್ಟುಕೊಟ್ಟು 3ನೇ ಸ್ಥಾನದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಒಂದು ವೇಳೆ ಗಿಲ್ ಫಿಟ್ ಆಗಿದ್ದರೆ ಆ ಸ್ಥಾನವೂ ಖಾಲಿ ಇರುವುದಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ಅಂಕಿ-ಅಂಶ ಅಷ್ಟಕಷ್ಟೆ.
ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 150 ರನ್ ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ಆಸ್ಟ್ರೇಲಿಯಾ 104 ರನ್ಗೆ ಸರ್ವಪತನ ಕಂಡು 46 ರನ್ಗಳ ಹಿನ್ನಡೆ ಅನುಭವಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 487 ರನ್ ಗಳಿಸಿ ಎದುರಾಳಿಗೆ 534 ರನ್ಗಳ ಟಾರ್ಗೆಟ್ ನೀಡಿದೆ.