ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್ ಇನ್; ಕೆನಡಾ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ XI
Jun 14, 2024 08:01 PM IST
ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್ ಇನ್; ಕೆನಡಾ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ XI
- India Playing XI: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಗುಂಪು ಹಂತದ 33ನೇ ಪಂದ್ಯದಲ್ಲಿ ಕೆನಡಾ ವಿರುದ್ಧ ಟೀಮ್ ಇಂಡಿಯಾ ಸೆಣಸಾಟ ನಡೆಸಲಿದ್ದು, ಎರಡು ಬದಲಾವಣೆಯನ್ನು ನಿರೀಕ್ಷಿಸಲಾಗಿದೆ.
ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ 2024 ಗುಂಪು ಹಂತದಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದು ಸೂಪರ್-8 ಪ್ರವೇಶಿಸಿರುವ ಭಾರತ (Team India) ತನ್ನ ಕೊನೆ ಲೀಗ್ ಪಂದ್ಯಕ್ಕೆ ಸಜ್ಜಾಗಿದೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ 3 ಪಂದ್ಯಗಳನ್ನಾಡಿದ್ದ ಭಾರತ, ತನ್ನ 4ನೇ ಲೀಗ್ ಪಂದ್ಯದಲ್ಲಿ ಕೆನಡಾ (India vs Canada) ಎದುರು ಸೆಣಸಾಟ ನಡೆಸಲಿದೆ. ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ನಿರೀಕ್ಷಿಸಲಾಗಿದೆ.
ಭಾರತ ತಂಡವು ಈಗಾಗಲೇ ಸೂಪರ್-8ರ ಘಟ್ಟಕ್ಕೆ ಪ್ರವೇಶಿಸಿದೆ. ಇದು ಕೇವಲ ಔಪಚಾರಿಕ ಪಂದ್ಯವಾಗಿದ್ದು, ಕೆನಡಾ ವಿರುದ್ಧದ ಪಂದ್ಯಕ್ಕೆ ಇಷ್ಟು ದಿನ ಬೆಂಚ್ ಕಾದಿದ್ದ ಆಟಗಾರರಿಗೆ ಅವಕಾಶ ನೀಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಮೂರು ಪಂದ್ಯಗಳಿಂದ ಅವಕಾಶಕ್ಕೆ ಕಾಯುತ್ತಿದ್ದ ಸಂಜು ಸ್ಯಾಮ್ಸನ್ ಮತ್ತು ಸ್ಪಿನ್ನರ್ ಕುಲ್ದೀಪ್ ಯಾದವ್ಗೆ ಆಡುವ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ. ಶಿವಂ ದುಬೆ ಮತ್ತು ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಬಹುದು.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಕುಲ್ದೀಪ್ ಯಾದವ್ ಅವರು ಆರಂಭಿಕ ಪಂದ್ಯಗಳಿಂದಲೇ ಅವಕಾಶ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಒಂದು ಅವಕಾಶ ಕೂಡ ನೀಡಿಲ್ಲ. ಇದೀಗ ಕೆನಡಾ ಎದುರಿನ ಪಂದ್ಯಕ್ಕೆ ಕುಲ್ದೀಪ್ ಚಾನ್ಸ್ ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಅವಕಾಶ ಗಿಟ್ಟಿಸಿಕೊಂಡರೆ ಇದು ಅವರಿಗೆ ಮೊದಲ ವಿಶ್ವಕಪ್ ಪಂದ್ಯವಾಗಲಿದೆ.
ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಸಂಜು ಸ್ಯಾಮ್ಸನ್ ಕೂಡ ಟಿ20 ವಿಶ್ವಕಪ್ನಲ್ಲಿ ಒಂದೇ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ವಿಕೆಟ್ ಕೀಪರ್ ರಿಷಭ್ ಪಂತ್ ಆಯ್ಕೆಯಾದ ಕಾರಣ ಸಂಜುಗೆ ಅವಕಾ ನೀಡಿಲ್ಲ. ಕೆನಡಾ ವಿರುದ್ಧ ಔಪಚಾರಿಕ ಪಂದ್ಯವಾದ ಕಾರಣ ಶಿವಂ ದುಬೆಗೆ ರೆಸ್ಟ್ ಮಾಡಿಸಿ ಸಂಜುಗೆ ಅವಕಾಶ ನೀಡಲು ನಾಯಕ ಮತ್ತು ಕೋಚ್ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ವಿರಾಟ್ ಕೊಹ್ಲಿಗೆ ಮೂರನೇ ಕ್ರಮಾಂಕ
ವಿರಾಟ್ ಕೊಹ್ಲಿ ಆರಂಭಿಕರಾಗಿ ಕೆಟ್ಟ ಪ್ರದರ್ಶನ ನೀಡುತ್ತಿರುವ ಕಾರಣ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆ ಇದೆ. ಆದರೆ ರೋಹಿತ್ ಶರ್ಮಾ ಅವರೊಂದಿಗೆ ರಿಷಭ್ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. ಒಂದ್ವೇಳೆ ಸಂಜುಗೆ ಅವಕಾಶ ಕೊಟ್ಟರೆ ರಿಷಭ್ ಪಂತ್ಗೂ ರೆಸ್ಟ್ ನೀಡಿ ಯಶಸ್ವಿ ಜೈಸ್ವಾಲ್ಗೆ ಪ್ಲೇಯಿಂಗ್ 11ನಲ್ಲಿ ಕಣಕ್ಕಿಳಿಸಲು ಸಹ ಚರ್ಚೆ ನಡೆದಿದೆ. ಆದರೆ, ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಡೋಣ.
ಕೆನಡಾ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ಇನ್ನಷ್ಟು ಟಿ20 ವಿಶ್ವಕಪ್ 2024 ಪಂದ್ಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ