logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬ್ಯಾಟಿಂಗ್‌ ಅಥವಾ ಚೇಸಿಂಗ್‌; ಅಹಮದಾಬಾದ್‌ನಲ್ಲಿ ನಡೆದ ಕಳೆದ 5 ಪಂದ್ಯಗಳ ಫಲಿತಾಂಶ ಹೀಗಿತ್ತು

ಬ್ಯಾಟಿಂಗ್‌ ಅಥವಾ ಚೇಸಿಂಗ್‌; ಅಹಮದಾಬಾದ್‌ನಲ್ಲಿ ನಡೆದ ಕಳೆದ 5 ಪಂದ್ಯಗಳ ಫಲಿತಾಂಶ ಹೀಗಿತ್ತು

Jayaraj HT Kannada

Nov 18, 2023 11:55 AM IST

google News

ನರೇಂದ್ರ ಮೋದಿ ಕ್ರೀಡಾಂಗಣ

    • Narendra Modi Stadium Ahmedabad: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಐದು ಪಂದ್ಯಗಳ ಫಲಿತಾಂಶ ಹೀಗಿವೆ.
ನರೇಂದ್ರ ಮೋದಿ ಕ್ರೀಡಾಂಗಣ
ನರೇಂದ್ರ ಮೋದಿ ಕ್ರೀಡಾಂಗಣ (PTI)

ಐತಿಹಾಸಿಕ ವಿಶ್ವಕಪ್‌ ಫೈನಲ್‌ (ICC ODI World Cup 2023 Final) ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ಸಜ್ಜಾಗಿದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಮೈದಾನದಲ್ಲಿ ಪರಸ್ಪರ ಸೆಣಸಲಿವೆ.

ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ ಬ್ಯಾಟರ್‌ಗಳಿಗೆ ಸಹಕಾರಿ. ಈ ಪಿಚ್‌ ಏಕದಿನ ಕ್ರಿಕೆಟ್‌ನಲ್ಲಿ ಸಮತೋಲಿತ ಆಟಕ್ಕೆ ವೇದಿಕೆಯಾಗುತ್ತದೆ. ಹಾಗಂತ ಬೌಲರ್‌ಗಳಿಗೆ ನೆರವಾಗುವುದಿಲ್ಲ ಎಂದಲ್ಲ. ಬೌಲರ್‌ಗಳು ಲೈನ್‌ ಮತ್ತು ಲೆಂತ್‌ ಕಾಪಾಡಿಕೊಂಡು ಬೌಲಿಂಗ್‌ ಮಾಡಿದರೆ, ಸಫಲತೆ ಪಡೆಯಬಹುದು. ಇದೇ ಮೈದಾನದಲ್ಲಿ ನಡೆದ ಇಂಡೋ-ಪಾಕ್‌ ವಿಶ್ವಕಪ್‌ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 200 ರನ್‌ ದಾಟಲು ಬಿಟ್ಟಿರಲಿಲ್ಲ.

ಅಹಮದಾಬಾದ್‌ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಐದು ಪಂದ್ಯಗಳ ಕುರಿತು ನೋಡೋಣ.

ಕ್ರೀಡಾಂಗಣದಲ್ಲಿ ಈವರೆಗೆ ಒಟ್ಟು 32 ಏಕದಿನ ಪಂದ್ಯಗಳು ನಡೆದಿವೆ. ಪ್ರಸಕ್ತ ಪಂದ್ಯಾವಳಿಯಲ್ಲಿ ಮೈದಾನದಲ್ಲಿ ಒಟ್ಟು ನಾಲ್ಕು ಪಂದ್ಯಗಳು ನಡೆದಿವೆ. ಮೈದಾನದಲ್ಲಿ ಮಿಶ್ರ ಫಲಿತಾಂಶಗಳು ಹೊರಬಂದಿವೆ. ಮೂರು ಪಂದ್ಯಗಳಲ್ಲಿ ಚೇಸಿಂಗ್‌ ನಡೆಸಿದ ತಂಡಗಳು ಸುಲಭ ಜಯ ಸಾಧಿಸಿದ್ದು, ಒಂದರಲ್ಲಿ ಮಾತ್ರ ಮೊದಲು ಬ್ಯಾಟಿಂಗ್‌ ನಡೆಸಿದ ತಂಡ ಗೆದ್ದು ಬೀಗಿದೆ. ಆ ತಂಡ ಆಸ್ಟ್ರೇಲಿಯಾ. ವಿಶೇಷವೆಂದರೆ ಇಲ್ಲಿ ನಡೆದ ಈ ನಾಲ್ಕೂ ಪಂದ್ಯಗಳಲ್ಲಿ ಯಾವುದೇ ತಂಡಗಳು 300 ರನ್‌ ಗಡಿ ದಾಟಿಲ್ಲ.

ವಿಶ್ವಕಪ್‌ ಟೂರ್ನಿಗೂ ಮುನ್ನ ಇಲ್ಲಿ ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಕೊನೆಯ ಏಕದಿನ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಭಾರತವು 96 ರನ್‌ಗಳಿಂದ ವೆಸ್ಟ್‌ ಇಂಡೀಸ್‌ ತಂಡವನ್ನು ಮಣಿಸಿತ್ತು. ಹೀಗಾಗಿ ಕೊನೆಯ ಐದು ಪಂದ್ಯಗಳ ಫಲಿತಾಂಶ ನೋಡುವುದಾದರೆ, ಎರಡು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡ ಗೆದ್ದರೆ, ಉಳಿದ ಮೂರರಲ್ಲಿ ಚೇಸಿಂಗ್‌ ನಡೆಸಿ ತಂಡ ಗೆದ್ದು ಬೀಗಿದೆ.

ಕೊನೆಯ ಐದು ಪಂದ್ಯಗಳ ಫಲಿತಾಂಶ

  • ನವೆಂಬರ್ 10ರಂದು ನಡೆದ ವಿಶ್ವಕಪ್‌ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳಿಂದ ಗೆಲುವು
  • ನವೆಂಬರ್‌ 4ರಂದು ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾಗೆ 33 ರನ್‌ ಗೆಲುವು
  • ಅಕ್ಟೋಬರ್‌ 14ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ 7ವಿಕೆಟ್‌ ಗೆಲುವು
  • ಅಕ್ಟೋಬರ್‌ 5ರಂದು ನಡೆದ ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ನ್ಯೂಜಿಲ್ಯಾಂಡ್‌ಗೆ 7 ವಿಕೆಟ್‌ ಗೆಲುವು
  • 2022ರ ಫೆಬ್ರವರಿ 11ರಂದು ನಡೆದ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಭಾರತಕ್ಕೆ‌ 96 ರನ್‌ಗಳ ಗೆಲುವು

ಪ್ರಸಕ್ತ ವಿಶ್ವಕಪ್‌ನಲ್ಲಿ ಅಹಮದಾಬಾದ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ ಒಂದು ಬಾರಿ ಮುಖಾಮುಖಿಯಾಗಿವೆ. ಉಭಯ ತಂಡಗಳು ಕೂಡಾ ತಮ್ಮ ಪಂದ್ಯಗಳಲ್ಲಿ ಗೆದ್ದಿವೆ. ಇದೀಗ ಮಹತ್ವದ ಫೈನಲ್‌ ಪಂದ್ಯದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಈ ಮೈದಾನದಲ್ಲಿ 315 ರನ್‌ ರಕ್ಷಣಾತ್ಮಕ ಸ್ಕೋರ್ ಆಗಬಹುದು. ಚೇಸಿಂಗ್ ಕಷ್ಟಕರವಾಗಿರುತ್ತದೆ ಎಂದು ಅಹಮದಾಬಾದ್ ಪಿಚ್ ಕ್ಯುರೇಟರ್ ಶುಕ್ರವಾರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಹೀಗಾಗಿ ಈ ಮೈದಾನದಲ್ಲಿ ಟಾಸ್‌ ಗೆಲ್ಲುವ ತಂಡವು ಬ್ಯಾಟಿಂಗ್‌ ಮಾಡಲು ಆದ್ಯತೆ ನೀಡುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ