logo
ಕನ್ನಡ ಸುದ್ದಿ  /  ಕ್ರಿಕೆಟ್  /  ಗಂಟೆಗಟ್ಟಲೆ ಬಂಡೆಗಲ್ಲಿನಂತೆ ನಿಂತು ಸುದೀರ್ಘ ಟೆಸ್ಟ್ ಇನ್ನಿಂಗ್ಸ್ ಆಡಿದ ಆಟಗಾರರಿವರು; 66 ವರ್ಷಗಳಿಂದ ಮುರಿಯಲಾಗದ ದಾಖಲೆ

ಗಂಟೆಗಟ್ಟಲೆ ಬಂಡೆಗಲ್ಲಿನಂತೆ ನಿಂತು ಸುದೀರ್ಘ ಟೆಸ್ಟ್ ಇನ್ನಿಂಗ್ಸ್ ಆಡಿದ ಆಟಗಾರರಿವರು; 66 ವರ್ಷಗಳಿಂದ ಮುರಿಯಲಾಗದ ದಾಖಲೆ

Jayaraj HT Kannada

Dec 18, 2024 05:57 PM IST

google News

ಗಂಟೆಗಟ್ಟಲೆ ಬಂಡೆಗಲ್ಲಿನಂತೆ ನಿಂತು ಸುದೀರ್ಘ ಟೆಸ್ಟ್ ಇನ್ನಿಂಗ್ಸ್ ಆಡಿದ ಆಟಗಾರರಿವರು

    • ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹನೀಫ್ ಮೊಹಮ್ಮದ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸುದೀರ್ಘ ಇನ್ನಿಂಗ್ಸ್ ಆಡಿದ ದಾಖಲೆ ಹೊಂದಿದ್ದಾರೆ. 66 ವರ್ಷಗಳಿಂದ ಈ ರೆಕಾರ್ಡ್‌ ಮುರಿಯಲಾಗಿಲ್ಲ. ಇವರು ಬ್ಯಾಟಿಂಗ್‌ ಮಾಡಿದ ಅವಧಿ, ಬರೋಬ್ಬರಿ 970 ನಿಮಿಷಗಳು.
ಗಂಟೆಗಟ್ಟಲೆ ಬಂಡೆಗಲ್ಲಿನಂತೆ ನಿಂತು ಸುದೀರ್ಘ ಟೆಸ್ಟ್ ಇನ್ನಿಂಗ್ಸ್ ಆಡಿದ ಆಟಗಾರರಿವರು
ಗಂಟೆಗಟ್ಟಲೆ ಬಂಡೆಗಲ್ಲಿನಂತೆ ನಿಂತು ಸುದೀರ್ಘ ಟೆಸ್ಟ್ ಇನ್ನಿಂಗ್ಸ್ ಆಡಿದ ಆಟಗಾರರಿವರು

ಕ್ರಿಕೆಟ್‌ನಲ್ಲಿ ದಿನಕಳೆದಂತೆ ಒಂದಲ್ಲಾ ಒಂದು ದಾಖಲೆಗಳು ಆಗುತ್ತಿರುತ್ತವೆ. ಅದರಲ್ಲಿ ಕೆಲವು ರೆಕಾರ್ಡ್‌ ಮತ್ತೊಂದು ದಿನ ಮುರಿದರೆ, ಇನ್ನೂ ಕೆಲವು ಹಳೆಯ ದಾಖಲೆಗಳನ್ನು ಹಲವು ವರ್ಷಗಳಿಂದ ಮುರಿಯಲು ಸಾಧ್ಯವಾಗಿಲ್ಲ. ಈಗೀಗ ಚುಟುಕು ಸ್ವರೂಪದ ಕ್ರಿಕೆಟ್‌ನತ್ತ ಯುವಕರು ಆಕರ್ಷಿತರಾಗುತ್ತಿದ್ದಾರೆ. ಆದರೆ, ಕ್ರಿಕೆಟ್‌ನ ಸುದೀರ್ಘ ಸ್ವರೂಪವಾಗಿರುವ ಟೆಸ್ಟ್ ಕ್ರಿಕೆಟ್ ತನ್ನ ಗುಣಮಟ್ಟ ಹಾಗೂ ಖದರ್‌ ಹಾಗೆಯೇ ಉಳಿಸಿಕೊಂಡಿದೆ. ಈಗಲೂ ಟೆಸ್ಟ್‌ ಕ್ರಿಕೆಟ್‌ಗೆ ಅದರದ್ದೇ ಆದ ಅಭಿಮಾನಿಗಳ ಬಳಗವಿದೆ. ಏಕೆಂದರೆ ಈ ಸ್ವರೂಪದಲ್ಲಿ ಆಡಲು ತಾಳ್ಮೆ ಬೇಕು. ಆಟಗಾರರ ಮನಸ್ಥಿತಿ ಕೂಡಾ ಉತ್ತಮವಾಗಿರಬೇಕು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಗಿರುವ ಹಲವು ದಾಖಲೆಗಳು ಇತಿಹಾಸದ ಪುಟ ಸೇರಿವೆ. ಅದರಲ್ಲಿ ಸುದೀರ್ಘ ಅವಧಿಗೆ ಬ್ಯಾಟಿಂಗ್‌ ಮಾಡಿದ ದಾಖಲೆ ಕೂಡಾ ಒಂದು. ಟೆಸ್ಟ್ ಕ್ರಿಕೆಟ್‌ ಇನ್ನಿಂಗ್ಸ್‌ನಲ್ಲಿ ದೀರ್ಘಕಾಲ ಕ್ರೀಸ್‌ನಲ್ಲಿದ್ದು ಆಡಿದ ಆಟಗಾರರು ಯಾರ್ಯಾರು ಎಂಬುದನ್ನು ನೋಡೋಣ. ದೀರ್ಘ ಇನ್ನಿಂಗ್ಸ್‌ಗಳನ್ನು ಆಡಿದ ಟಾಪ್‌ ಮೂವರು ಆಟಗಾರರ ವಿವರ ಇಲ್ಲಿದೆ.

ಹನೀಫ್ ಮೊಹಮ್ಮದ್

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹನೀಫ್ ಮೊಹಮ್ಮದ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಹೊತ್ತು ಸುದೀರ್ಘ ಇನ್ನಿಂಗ್ಸ್ ಆಡಿದ ದಾಖಲೆ ಹೊಂದಿದ್ದಾರೆ. ಹನೀಫ್ ಮೊಹಮ್ಮದ್ ಒಂದೇ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 970 ನಿಮಿಷಗಳ ಕಾಲ ಆಡಿದ್ದಾರೆ. ಅಂದರೆ ಸುಮಾರು 16 ಗಂಟೆಗಳು. 1958ರ ಜನವರಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ಆಡುತ್ತಿತ್ತು. ಈ ವೇಳೆ ಹನೀಫ್ ಅಪರೂಪದ ಸಾಧನೆ ಮಾಡಿದರು. ಆಗ ವಿಂಡೀಸ್‌ ಅತ್ಯಂತ ಬಲಿಷ್ಠ ತಂಡವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ 579 ರನ್ ಗಳಿಸಿದರೆ, ಪಾಕಿಸ್ತಾನ 106 ರನ್‌ಗಳಿಗೆ ಆಲೌಟ್ ಆಯ್ತು. ಪಾಕಿಸ್ತಾನ ಫಾಲೊ-ಆನ್‌ ಎದುರಿಸಿ ಎರಡನೇ ಇನ್ನಿಂಗ್ಸ್ ಆಡಿತು. ಆರಂಭಿಕ ಬ್ಯಾಟರ್ ಆಗಿ ಬಂದ‌ ಹನೀಫ್, ಇತಿಹಾಸ ನಿರ್ಮಿಸಿದರು.

ಭರ್ಜರಿ 337 ರನ್ ಗಳಿಸಿದ ಅವರು ಒಟ್ಟು 970 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ಬಂಡೆಗಲ್ಲಿನಂತೆ ನಿಂತರು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಅತಿ ಉದ್ದದ ಇನ್ನಿಂಗ್ಸ್ ಆಗಿದೆ. ಪಾಕಿಸ್ತಾನ 657 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಕೊನೆಗೆ ಪಂದ್ಯ ಡ್ರಾದಲ್ಲಿ ಅಂತ್ಯವಾಯ್ತು.

ಗ್ಯಾರಿ ಕರ್ಸ್ಟನ್

ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಗ್ಯಾರಿ ಕರ್ಸ್ಟನ್, ಟೆಸ್ಟ್ ಕ್ರಿಕೆಟ್‌ನಲ್ಲಿ ಸುದೀರ್ಘ ಇನ್ನಿಂಗ್ಸ್‌ ಆಡಿದ ಎರಡನೇ ಬ್ಯಾಟರ್.‌ 1999ರ ಡಿಸೆಂಬರ್ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಅವರು ಈ ಸಾಧನೆ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 366 ರನ್ ಗಳಿಸಿ ಡಿಕ್ಲೇರ್ ಮಾಡಿತು. ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 156 ರನ್ ಗಳಿಸಿತ್ತು. ಪಂದ್ಯದ ಫಾಲೋ-ಆನ್ ನಂತರ, ಗ್ಯಾರಿ ಕರ್ಸ್ಟನ್ ದಕ್ಷಿಣ ಆಫ್ರಿಕಾ ಪರ ಇನ್ನಿಂಗ್ಸ್ ಪ್ರಾರಂಭಿಸಿದರು. 642 ಎಸೆತಗಳನ್ನು ಎದುರಿಸಿ ಬರೋಬ್ಬರಿ 275 ರನ್ ಗಳಿಸಿದರು. ಒಟ್ಟು 878 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ನಿಂತರು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಸುದೀರ್ಘ ಇನ್ನಿಂಗ್ಸ್ ಆಗಿದೆ. ಆದರೆ ಆ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಅಲಿಸ್ಟೇರ್ ಕುಕ್

ಇಂಗ್ಲೆಂಡ್ ತಂಡದ ಮಾಜಿ ಬ್ಯಾಟರ್ ಅಲಿಸ್ಟೇರ್ ಕುಕ್, ಟೆಸ್ಟ್ ಕ್ರಿಕೆಟ್ ಕಂಡ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರು. ಇವರು ಇತಿಹಾಸದಲ್ಲಿ ಮೂರನೇ ಅತಿ ಸುದೀರ್ಘ ಇನ್ನಿಂಗ್ಸ್ ಆಡಿದ ದಾಖಲೆ ಹೊಂದಿದ್ದಾರೆ. 2015ರ ಅಕ್ಟೋಬರ್‌ಬಲ್ಲಿ ಅಬುಧಾಬಿಯಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಅವರು ದಾಖಲೆ ನಿರ್ಮಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 523 ರನ್ ಗಳಿಸಿ ಡಿಕ್ಲೇರ್ ಮಾಡಿತು. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ ಆರಂಭಿಕ ಆಟಗಾರ ಕುಕ್ ಒಬ್ಬರೇ 528 ಎಸೆತಗಳಲ್ಲಿ 263 ರನ್ ಸಿಡಿಸಿದರು. ಬರೋಬ್ಬರಿ 836 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ಗಟ್ಟಿಯಾಗಿ ಬೇರೂರಿ ಆಡಿದರು. ಇದು ಟೆಸ್ಟ್‌ ಇತಿಹಾಸದಲ್ಲಿ ಮೂರನೇ ಅತಿ ಸುದೀರ್ಘ ಅವಧಿಯ ಇನ್ನಿಂಗ್ಸ್ ಆಗಿ ಉಳಿದಿದೆ. ಈ ಪಂದ್ಯ ಕೂಡಾ ಡ್ರಾದಲ್ಲಿ ಕೊನೆಗೊಂಡಿತು.

ಭಾರತದ ಪರ ರಾಹುಲ್‌ ದ್ರಾವಿಡ್‌ ದಾಖಲೆ

ಭಾರತದ ಪರ ಸುದೀರ್ಘ ಇನ್ನಿಂಗ್ಸ್‌ ಆಡಿದ ದಾಖಲೆ ದಿ ವಾಲ್‌ ರಾಹುಲ್‌ ದ್ರಾವಿಡ್‌ ಹೆಸರಲ್ಲಿದೆ. ಪಾಕಿಸ್ತಾನ ವಿರುದ್ಧ 2004ರಲ್ಲಿ ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ದ್ರಾವಿಡ್‌ 740 ನಿಮಿಷಗಳ ಕಾಲ ಆಡಿದ್ದರು. ಅಲ್ಲದೆ 270 ರನ್‌ ಗಳಿಸಿದ್ದರು. ಆ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್‌ ಹಾಗೂ 131 ರನ್‌ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ