Explainer: ಗಬ್ಬಾ ಟೆಸ್ಟ್ ಡ್ರಾ; ಭಾರತ ಡಬ್ಲ್ಯುಟಿಸಿ ಫೈನಲ್ ಪ್ರವೇಶ ಸಾಧ್ಯವೇ? ಹೀಗಿದೆ ಅರ್ಹತಾ ಸನ್ನಿವೇಶ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯು, ಮೂರು ಪಂದ್ಯಗಳ ಬಳಿಕ 1-1 ಅಂತರದಲ್ಲಿ ಸಮಬಲಗೊಂಡಿದೆ. ಮುಂದೆ 2 ಪಂದ್ಯಗಳು ನಡೆಯಲಿವೆ. ಭಾರತ ಡಬ್ಲ್ಯುಟಿಸಿ ಫೈನಲ್ ಪ್ರವೇಶ ಸಾಧ್ಯವಾಗಲು ಮುಂದಿನ ಲೆಕ್ಕಾಚಾರಗಳೇನು? ತಂಡದ ಗೆಲುವಿನ ಜತೆಗೆ ಬೇರೆ ಯಾವ ತಂಡದ ಮೇಲೆ ಅವಲಂಬಿಸಬೇಕು ಎಂಬ ವಿವರ ಇಲ್ಲಿದೆ.
ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪ್ರವೇಶಿಸುವ ಭಾರತೀಯ ಕ್ರಿಕೆಟ್ ತಂಡದ ಹಾದಿ ತುಸು ಸಂಕೀರ್ಣವಾಗಿದೆ. ಗಬ್ಬಾ ಟೆಸ್ಟ್ ಆರಂಭದಿಂದಲೂ ನಿರಂತರವಾಗಿ ಮಳೆ ಅಡ್ಡಿಯಾಗಿ, ಪಂದ್ಯ ಪೂರ್ಣ ಪ್ರಮಾಣದಲ್ಲಿ ನಡೆಸುವುದು ಸಾಧ್ಯವಾಗಲಿಲ್ಲ. 5ನೇ ದಿನದಾಟದ ಅವಧಿಯಲ್ಲೂ ವರುಣ ಅಡ್ಡಿಯಾದ ಕಾರಣದಿಂದ ಪಂದ್ಯವನ್ನು ರದ್ದುಗೊಳಿಲಾಯ್ತು. ಈ ಫಲಿತಾಂಶದೊಂದಿಗೆ ಭಾರತ ಡಬ್ಲ್ಯುಟಿಸಿ ಫೈನಲ್ ಹಾದಿ ಕಠಿಣವಾಗಿದೆ. ಎರಡು ಫೈನಲಿಸ್ಟ್‌ಗಳ ಸ್ಥಾನಕ್ಕೆ ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳೊಂದಿಗೆ ಭಾರತ ಕಠಿಣ ಪೈಪೋಟಿ ನಡೆಸಬೇಕಿದೆ.
ಪಂದ್ಯ ಡ್ರಾ ಆಗಿರುವ ಹಿನ್ನೆಲೆಯಲ್ಲಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಕ್ಕೆ ತಲಾ 4 ಅಂಕಗಳನ್ನು ನೀಡಲಾಗಿದೆ. ಸದ್ಯ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಅಗ್ರಸ್ಥಾನದಲ್ಲಿದೆ. ಶೇಕಡಾವಾರು 63.33 ಅಂಕಗಳನ್ನು ಹೊಂದಿರುವ ಹರಿಣಗಳು, ಫೈನಲ್‌ಗೆ ಬಹುತೇಕ ಸಮೀಪವಿದೆ. 58.89 ಪಿಸಿಟಿ ಹೊಂದಿರುವ ಆಸೀಸ್ ಎರಡನೇ ಸ್ಥಾನದಲ್ಲಿದ್ದು, 55.88 ಅಂಕಗಳೊಂದಿಗೆ ಭಾರತ ತಂಡ ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಫೈನಲ್ ರೇಸ್‌ನಿಂದ ಹೊರಬಿದ್ದಿದ್ದು, ಐದನೇ ಸ್ಥಾನದಲ್ಲಿರುವ ಶ್ರೀಲಂಕಾಗೆ ಇನ್ನೂ ಅವಕಾಶಗಳಿವೆ.
ಸದ್ಯ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯು 1-1ರಲ್ಲಿ ಸಮಬಲಗೊಂಡಿದೆ. ಮುಂದೆ ಎರಡು ಪಂದ್ಯಗಳು ನಡೆಯಲಿವೆ. ಒಂದು ವೇಳೆ ಭಾರತ ತಂಡವು ಉಳಿದ ಎರಡೂ ಪಂದ್ಯಗಳನ್ನು ಗೆದ್ದರೆ (3-1), ರೋಹಿತ್ ಶರ್ಮಾ ಬಳಗವು ಇತರ ತಂಡಗಳ ಫಲಿತಾಂಶಗಳನ್ನು ಲೆಕ್ಕಿಸದೆ WTC ಫೈನಲ್ ಪ್ರವೇಶಿಸುತ್ತದೆ. ಒಂದು ವೇಳೆ ಸರಣಿಯಲ್ಲಿ ಭಾರತವು 2-1 ಅಂತರದಲ್ಲಿ ಗೆದ್ದರೆ, ಭಾರತವು ಶ್ರೀಲಂಕಾವನ್ನು ಅವಲಂಬಿಸಬೇಕಾಗುತ್ತದೆ. ಶ್ರೀಲಂಕಾ ತಂಡವು ತನ್ನ ಎರಡು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಕನಿಷ್ಠ 1-0 ಅಂತರದಲ್ಲಿ ಸೋಲಿಸಿದರೆ ಅಥವಾ ಆ ಸರಣಿ 1-1 ಅಂತರದಲ್ಲಿ ಕೊನೆಗೊಂಡರೆ, ಭಾರತ ತಂಡ ಫೈನಲ್ ಪ್ರವೇಶಿಸುತ್ತದೆ.
ಒಂದು ಪಂದ್ಯ ಸೋತರೂ ಲೆಕ್ಕಾಚಾರ ಭಿನ್ನ
ಒಂದು ವೇಳೆ ಮುಂಬರುವ ಎರಡು ಪಂದ್ಯಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಲಾ ಒಂದೊಂದು ಪಂದ್ಯವನ್ನು ಗೆದ್ದು ಸರಣಿಯು 2-2ರಲ್ಲಿ ಕೊನೆಗೊಂಡರೆ, ಆ ನಂತರದ ಲೆಕ್ಕಾಚಾರ ತುಸು ಭಿನ್ನವಾಗುತ್ತದೆ. ಹೀಗಾದಲ್ಲಿ ಶ್ರೀಲಂಕಾ ತಂಡವು ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದು ಭಾರತಕ್ಕೆ ನೆರವಾಗಬೇಕಾಗುತ್ತದೆ. ಅತ್ತ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಒಂದರಲ್ಲಿ ಗೆಲ್ಲಬೇಕು
ಹೀಗಾದರೂ ಅವಕಾಶವಿದೆ
ಒಂದು ವೇಳೆ ಬಾರ್ಡರ್-ಗವಾಸ್ಕರ್ ಸರಣಿಯು 2-2ರಲ್ಲಿ ಸಮಬಲದಲ್ಲಿ ಕೊನೆಗೊಂಡರೆ ಮತ್ತು ಶ್ರೀಲಂಕಾ ವಿರುದ್ಧದ ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆದ್ದರೆ, ಭಾರತಕ್ಕೆ ಪಾಕಿಸ್ತಾನದ ನೆರವು ಬೇಕು. ಪಾಕ್ ತಂಡವು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು 2-0 ಅಂತರದಲ್ಲಿ ಸೋಲಿಸಿದರೆ ಮಾತ್ರ ಭಾರತ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಬಹುದು.
ಶ್ರೇಯಾಂಕ ನಿರ್ಧಾರ ಹೇಗೆ?
ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ತಂಡಗಳ ಶ್ರೇಯಾಂಕ ನಿರ್ಧರಿಸಲು, ಪ್ರತಿ ತಂಡಗಳ ಗೆಲುವಿಗೆ 12 ಅಂಕಗಳನ್ನು ನೀಡಲಾಗುತ್ತದೆ. ಡ್ರಾ ಆದರೆ 4 ಮತ್ತು ಟೈ ಆದರೆ 6 ಅಂಕಗಳನ್ನು ನೀಡಲಗುತ್ತದೆ. ಶ್ರೇಯಾಂಕವನ್ನು ತಂಡಗಳು ಪಡೆದ ಅಂಕಗಳಿಂದ ನಿರ್ಧರಿಸುವುದಿಲ್ಲ. ಬದಲಿಗೆ ಪಾಯಿಂಟ್‌ಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.