ಈ ಬೌಲರ್‌ಗಳನ್ನು ಇಟ್ಕೊಂಡು ಆರ್‌ಸಿಬಿ ಕಪ್ ಗೆಲ್ಲೋದು ಅಸಾಧ್ಯ; ಮೈಕೆಲ್ ವಾನ್, ಟಾಮ್ ಮೂಡಿ ಕಟು ಟೀಕೆ
Mar 30, 2024 03:25 PM IST
ಈ ಬೌಲರ್‌ಗಳನ್ನು ಇಟ್ಕೊಂಡು ಆರ್‌ಸಿಬಿ ಕಪ್ ಗೆಲ್ಲೋದು ಅಸಾಧ್ಯ ಎಂದು ಮಾಜಿ ಕ್ರಿಕೆಟಿಗರು
- ಕೆಕೆಆರ್ ವಿರುದ್ಧ ಆರ್‌ಸಿಬಿ ತಂಡ ಹೀನಾಯ ಸೋಲು ಕಾಣುತ್ತಿದ್ದಂತೆ, ತಂಡದ ಬೌಲಿಂಗ್ ಯುನಿಟ್ ಕುರಿತು ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಸದ್ಯದ ಬೌಲರ್‌ಗಳನ್ನು ಆಡಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗರು ಹೇಳಿದ್ದಾರೆ.
ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವು ಸತತ ಎರಡನೇ ಸೋಲಿಗೆ ಶರಣಾಗಿದೆ. ಮಾರ್ಚ್ 29ರ ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್‌ಗಳ ಹೀನಾಯ ಸೋಲು ಕಂಡಿತು. ಇದು ಪ್ರಸಕ್ತ ಆವೃತ್ತಿಯಲ್ಲಿ ತವರಿನಲ್ಲಿ ತಂಡದ ಮೊದಲ ಸೋಲು. ಕೆಕೆಆರ್ ವಿರುದ್ಧ ತವರು ನೆಲದಲ್ಲಿ ಗೆಲ್ಲಲು ಹರಸಾಹಸ ಪಡುತ್ತಿರುವ ಫಾಫ್ ಡುಪ್ಲೆಸಿಸ್ ಬಳಗಕ್ಕೆ, ಇನ್ನೂ ಗೆಲುವು ಮರೀಚಿಕೆಯಾಗಿದೆ. ಆರ್‌ಸಿಬಿ ನೀಡಿದ 183 ರನ್‌ಗಳ ಗುರಿ ಬೆನ್ನತ್ತಿದ ಕೆಕೆಆರ್ ಪರ, ವೆಂಕಟೇಶ್ ಅಯ್ಯರ್ ಮತ್ತು ಸುನಿಲ್ ನರೈನ್ ಅಬ್ಬರಿಸಿದರು. ಸ್ಫೋಟಕ ಆಟವಾಡಿದ ಕೋಲ್ಕತ್ತಾ, ಆರ್‌ಸಿಬಿ ಬಿರುದ್ಧ ಜಯದ ನಾಗಾಲೋಟ ಮುಂದುವರೆಸಿತು.
ಟೂರ್ನಿಯ ಆರಂಭಕ್ಕೂ ಮುನ್ನವೇ, ಆರ್‌ಸಿಬಿ ತಂಡದ ಬೌಲಿಂಗ್ ಲೈನಪ್ ಭಾರಿ ಟೀಕೆಗೆ ಒಳಗಾಗಿತ್ತು. ತಂಡದಲ್ಲಿ ಉತ್ತಮ ಗುಣಮಟ್ಟದ ಸ್ಪಿನ್ನರ್ ಇಲ್ಲ ಎಂಬುದೇ ತಂಡದ ದೌರ್ಬಲ್ಯವಾಗಿದೆ. ಅದಕ್ಕೆ ಪುಷ್ಠಿ ನೀಡುವಂತೆ, ಶ್ರೇಯಸ್ ಅಯ್ಯರ್ ಬಳಗದ ಬ್ಯಾಟರ್‌ಗಳ ಸದ್ದಡಗಿಸಲು ಫಾಫ್ ಪಡೆಯ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ. ಸುನಿಲ್ ನರೈನ್ ಕೇವಲ 22 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 47 ರನ್ ಗಳಿಸಿ ಅಬ್ಬರಿಸಿದರು. ಸಾಲ್ಟ್ 20 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ ಸಹಿತ 30 ರನ್ ಸಿಡಿಸಿದರು. ವೆಂಕಟೇಶ್ ಅಯ್ಯರ್ ಕೂಡಾ ಅಬ್ಬರಿಸಿಸುವ ಮೂಲಕ, ಕೇವಲ 16.5 ಓವರ್‌ಗಳಲ್ಲಿ ಕೆಕೆಆರ್ ಗುರಿ ತಲುಪಿತು.
ಕೆಕೆಆರ್ ವಿರುದ್ಧದ ಸೋಲಿನೊಂದಿಗೆ, ಫಾಫ್ ನೇತೃತ್ವದ ತಂಡವು ಐಪಿಎಲ್ 2024ರ ಅಂಕಪಟ್ಟಿಯಲ್ಲಿ ನೆಗೆಟಿವ್ ನೆಟ್ ರನ್ ರೇಟ್ (-0.711)ನೊಂದಿಗೆ ಆರನೇ ಸ್ಥಾನಕ್ಕೆ ಕುಸಿದಿದೆ. ತಂಡವು ಮುಂದೆ ಏಪ್ರಿಲ್ 2ರಂದು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ | ಕಳಪೆ ಬೌಲಿಂಗ್ಗೆ ಬೆಲೆತೆತ್ತ ಆರ್ಸಿಬಿಗೆ 2ನೇ ಸೋಲು; ಕೋಲ್ಕತ್ತಾ ನೈಟ್ ರೈಡರ್ಸ್ಗೆ 7 ವಿಕೆಟ್ ಭರ್ಜರಿ ಜಯ
ಟೂರ್ನಿಯಲ್ಲಿ ಸಿಎಸ್‌ಕೆ ವಿರುದ್ಧ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ಆರ್‌ಸಿಬಿ, ಆ ಬಳಿಕ ಪಂಜಾಬ್ ವಿರುದ್ಧದ ತವರಿನ ಪಂದ್ಯದಲ್ಲಿ ಗೆದ್ದಿತ್ತು. ಆ ಬಳಿಕ ಮೂರನೇ ಪಂದ್ಯದಲ್ಲಿ ಮತ್ತೆ ಸೋಲು ಕಂಡಿದೆ. ಇದರ ಬೆನ್ನಲ್ಲೇ, ಕ್ರಿಕೆಟ್ ಪಂಡಿತರು ಆರ್‌ಸಿಬಿ ಬೌಲಿಂಗ್ ಯುನಿಟ್ ಕುರಿತು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಈ ತಂಡದೊಂದಿಗೆ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಆರ್‌ಸಿಬಿ ಬೌಲಿಂಗ್ ದಾಳಿಯನ್ನು ಟೀಕಿಸಿದ ವಾನ್ ಮತ್ತು ಮೂಡಿ
ಈ ಬೌಲಿಂಗ್ ಲೈನಪ್ ಇಟ್ಕೊಂಡು ಆರ್‌ಸಿಬಿ ಟ್ರೋಫಿ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ. “ಇಂಥಾ ಬೌಲಿಂಗ್ ದಾಳಿಯೊಂದಿಗೆ ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿ ಗೆಲ್ಲುವುದು ಅಸಾಧ್ಯ,” ಎಂದು ವಾನ್ ಟ್ವೀಟ್ ಮಾಡಿದ್ದಾರೆ.
ವಿದೇಶಿ ಬೌಲರ್ ಬದಲಾವಣೆಗೆ ಟಾಮ್ ಮೂಡಿ ಸಲಹೆ
ಅತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಜಿ ಮುಖ್ಯ ಕೋಚ್ ಟಾಮ್ ಮೂಡಿ ಕೂಡ ಆರ್‌ಸಿಬಿ ತಂಡದ ಬೌಲಿಂಗ್ ಅನ್ನು ಟೀಕಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ತಂಡವು ಇಬ್ಬರು ವಿದೇಶಿ ವೇಗಿಗಳನ್ನು ಬಳಸಬೇಕೆಂದು ಸಲಹೆ ನೀಡಿದ್ದಾರೆ. ಪ್ರಸ್ತುತ, ಆರ್‌ಸಿಬಿ ತಂಡವು ಅಲ್ಜಾರಿ ಜೋಸೆಫ್ ಅವರನ್ನು ಮಾತ್ರ ವಿದೇಶಿ ಬೌಲರ್ ಆಯ್ಕೆಯಾಗಿ ಬಳಸುತ್ತಿದೆ. ಆರ್‌ಸಿಬಿಯು ಲಾಕಿ ಫರ್ಗ್ಯುಸನ್ ಹಾಗೂ ರೀಸ್ ಟಾಪ್ಲಿ ಅವರನ್ನು ಆಡಿಸಬೇಕು ಎಂದು ಮೂಡಿ ಸಲಹೆ ನೀಡಿದ್ದಾರೆ.
ಇದೇ ವೇಳೆ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೂಡಾ, ಆರ್‌ಸಿಬಿ ತಂಡದಲ್ಲಿ ಬೌಲಿಂಗ್‌ನಲ್ಲಿ ಮಾಡಬೇಕಿರುವ ಬದಲಾವಣೆ ಕುರಿತು ಸಲಹೆ ನೀಡಿದ್ದಾರೆ. ಕೆಕೆಆರ್ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಬೌಲಿಂಗ್ ಮಾಡದಂತೆ ನಾಯಕ ಫಾಫ್ ಡು ಪ್ಲೆಸಿಸ್ ತೆಗೆದುಕೊಂಡ ನಿರ್ಧಾರವನ್ನು ಇರ್ಫಾನ್ ಟೀಕಿಸಿದ್ದಾರೆ.
“ಪವರ್ ಪ್ಲೇನಲ್ಲಿ ಮ್ಯಾಕ್ಸ್‌ವೆಲ್ ಅವರಿಂದ ಬೌಲಿಂಗ್ ಮಾಡಿಸಬೇಕಿತ್ತು. ಪವರ್ ಪ್ಲೇನಲ್ಲಿ ಕೆಕೆಆರ್ ಅನುಕುಲ್ ಅವರನ್ನು ಬೌಲ್ ಮಾಡಿಸಿ ಯಶಸ್ಸು ಪಡೆಯಿತು,” ಎಂದು ಪಠಾಣ್ ಟ್ವೀಟ್ ಮಾಡಿದ್ದಾರೆ.