ಕಳಪೆ ಬೌಲಿಂಗ್ಗೆ ಬೆಲೆತೆತ್ತ ಆರ್ಸಿಬಿಗೆ 2ನೇ ಸೋಲು; ಕೋಲ್ಕತ್ತಾ ನೈಟ್ ರೈಡರ್ಸ್ಗೆ 7 ವಿಕೆಟ್ ಭರ್ಜರಿ ಜಯ
RCB vs KKR : ಕಳೆದ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ನಿಂದ ಬೆಲೆತೆತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ 7 ವಿಕೆಟ್ಗಳ ಹೀನಾಯ ಸೋಲು ಕಂಡಿತು.
ವಿರಾಟ್ ಕೊಹ್ಲಿ ಅವರ ಹೋರಾಟದ ಹೊರತಾಗಿಯೂ ಕೋಲ್ಕತ್ತಾ ನೈಟ್ ರೈಡರ್ಸ್ ಆಲ್ರೌಂಡ್ ಆಟದೆದುರು ಉಸಿರೆತ್ತದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನಲ್ಲಿ ಮೊದಲ ಸೋಲಿಗೆ ಶರಣಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೆಗಾ ಫೈಟ್ನಲ್ಲಿ ಕಳಪೆ ಫೀಲ್ಡಿಂಗ್, ಬೌಲಿಂಗ್ಗೆ ಭಾರಿ ಬೆಲೆತೆತ್ತ ಆರ್ಸಿಬಿ, 7 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿತು. ಲಯಕ್ಕೆ ಮರಳಿದ್ದ ಆರ್ಸಿಬಿ 2ನೇ ಸೋಲು ಅನುಭವಿಸಿದ್ದರೆ, ಕೆಕೆಆರ್ ಸತತ 2ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ, ಅದ್ಭುತ ಆರಂಭ ಪಡೆದರೂ ಅದೇ ಪ್ರದರ್ಶನವನ್ನು ಕೊನೆಯವರೆಗೂ ಮುಂದುವರೆಸಲು ವಿಫಲವಾಯಿತು. ವಿರಾಟ್ ಏಕಾಂಗಿ ಹೋರಾಟ ನಡೆಸಿದ ಪರಿಣಾಮ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಈ ಗುರಿ ಹಿಂಬಾಲಿಸಿದ ಕೋಲ್ಕತ್ತಾ, ಸಿಡಿಲಬ್ಬದ ಬ್ಯಾಟಿಂಗ್ ನಡೆಸಿತು. ಇನ್ನೂ 19 ಎಸೆತಗಳು ಬಾಕಿ ಇರುವಂತೆಯೇ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.
ಭರ್ಜರಿ ಆರಂಭ ಪಡೆದ ಕೆಕೆಆರ್
ಸವಾಲಿನ ಮೊತ್ತವನ್ನು ಚೇಸ್ ಮಾಡಿದ ಕೆಕೆಆರ್ಗೆ ಅತ್ಯುತ್ತಮ ಆರಂಭ ದೊರೆಯಿತು. ಸುನಿಲ್ ನರೇನ್ ಮತ್ತು ಫಿಲ್ ಸಾಲ್ಟ್ ಆಕ್ರಮಣಕಾರಿ ಆಟದೊಂದಿಗೆ ಪವರ್ಪ್ಲೇನಲ್ಲಿ 85 ರನ್ ಕಲೆ ಹಾಕಿತು. ಈ ಸ್ಕೋರ್ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಕೆಕೆಆರ್ ಬ್ಯಾಟಿಂಗ್ ಅಬ್ಬರಕ್ಕೆ ಆರ್ಸಿಬಿ ಬೌಲರ್ಗಳು ಕಡಿವಾಣ ಹಾಕಲು ವಿಫಲರಾದರು. ಆರು ಓವರ್ಗಳ ನಂತರ ಆರ್ಭಟಿಸುತ್ತಿದ್ದ ನರೇನ್ 22 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಸಹಿತ 47 ರನ್ ಚಚ್ಚಿದರು.
ನರೇನ್ ಬೆನ್ನಲ್ಲೇ 30ರನ್ ಗಳಿಸಿದ್ದ ಸಾಲ್ಟ್ ಕೂಡ ಔಟಾದರು. ಆದರೆ ಇಬ್ಬರು ಔಟಾಗಿದ್ದು ಕೆಕೆಆರ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಆರಂಭಿಕರು ಔಟಾದ ಬಳಿಕ ಮೂರನೇ ಕ್ರಮಾಂಕದಲ್ಲಿ ಆಡಿದ ವೆಂಕಟೇಶ್ ಅಯ್ಯರ್, ಆರ್ಸಿಬಿ ಮೇಲೆ ಸವಾರಿ ಮಾಡಿದರು. ಓಪನರ್ಸ್ ಭರ್ಜರಿ ಭದ್ರಬುನಾದಿ ಹಾಕಿಕೊಟ್ಟ ಕಾರಣ ವೆಂಕಿ, ಒತ್ತಡ ಮುಕ್ತರಾಗಿ ಬ್ಯಾಟ್ ಬೀಸಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಎಡಗೈ ಆಟಗಾರ, 30 ಎಸೆತಗಳಲ್ಲೇ 50ರ ಗಟಿ ದಾಟಿದರು.
ವೆಂಕಟೇಶ್ಗೆ ಸಖತ್ ಸಾಥ್ ನೀಡಿದ ಶ್ರೇಯಸ್ ಅಯ್ಯರ್ ಅಜೇಯ 39 ರನ್ ಕಲೆ ಹಾಕಿದರು. ಆಟಗಾರರ ಅದ್ಭುತ ಪ್ರದರ್ಶನದ ಕಾರಣ ಕೋಲ್ಕತ್ತಾ 16.5 ಓವರ್ಗಳಲ್ಲಿ ಆರ್ಸಿಬಿ ವಿರುದ್ಧ ಗೆದ್ದು ಬೀಗಿತು. ಮಯಾಂಕ್ ಡಾಗರ್, ವಿಜಯ್ ಕುಮಾರ್ ವೈಶಾಕ್ ಮತ್ತು ಯಶ್ ದಯಾಳ್ ತಲಾ ಒಂದೊಂದು ವಿಕೆಟ್ ಪಡೆದರು.
ವಿರಾಟ್ ಕೊಹ್ಲಿ ಹೋರಾಟ
ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು, ಫಾಫ್ ಡು ಪ್ಲೆಸಿಸ್ (8) ಬೇಗನೇ ಔಟಾದರೂ ಭರ್ಜರಿ ಆರಂಭ ಪಡೆಯಿತು. ವಿರಾಟ್ ಕೊಹ್ಲಿ ಮತ್ತು ಕ್ಯಾಮರೂನ್ ಗ್ರೀನ್ ಪವರ್ಪ್ಲೇನಲ್ಲಿ 61 ರನ್ ಕಲೆ ಹಾಕಿ ಉತ್ತಮ ಭದ್ರಬುನಾದಿ ಹಾಕಿಕೊಟ್ಟರು. ಜೊತೆಗೆ ಎರಡನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟವನ್ನೂ ಆಡಿದರು. ಆದರೆ ಸಿಡಿಯುತ್ತಿದ್ದ ಗ್ರೀನ್ (33), ಆಂಡ್ರೆ ರಸೆಲ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಕಳೆದ ಎರಡು ಪಂದ್ಯಗಳಿಂದ ವೈಫಲ್ಯ ಅನುಭವಿಸಿದ್ದ ಮ್ಯಾಕ್ಸ್ವೆಲ್ ಎರಡು ಜೀವದಾನ ಪಡೆದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾದರು. ಮ್ಯಾಕ್ಸಿ 28 ರನ್ ಗಳಿಸಿ ಸುನಿಲ್ ನರೇನ್ಗೆ ವಿಕೆಟ್ ಒಪ್ಪಿಸಿದರು. ರಜತ್ ಪಾಟೀದಾರ್ (3) ಮತ್ತೆ ನಿರಾಸೆ ಮೂಡಿಸಿದರು. ಮೊದಲ ಪಂದ್ಯದಲ್ಲಿ ಆರ್ಭಟಿಸಿದ್ದ ಅನೂಜ್ ರಾವತ್ 3 ರನ್ ಗಳಿಸಿ ಔಟಾದರು. ಆದರೆ ಸತತ ವಿಕೆಟ್ಗಳ ನಡುವೆಯೂ ಏಕಾಂಗಿ ಹೋರಾಟ ನಡೆಸಿದ ಕೊಹ್ಲಿ ಅಜೇಯರಾಗಿ ಉಳಿದರು.
ವಿರಾಟ್ 59 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಿತ 83 ರನ್ ಗಳಿಸಿ ತಂಡವನ್ನು ಮೊತ್ತವನ್ನು 180ರ ಗಡಿ ದಾಟಿಸಿದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ ಅಜೇಯ 20 ರನ್ ಗಳಿಸಿ ಸಾಥ್ ನೀಡಿದರು. ಕೆಕೆಆರ್ ಪರ ರಸೆಲ್ ಮತ್ತು ಹರ್ಷಿತ್ ರಾಣಾ ತಲಾ 2 ವಿಕೆಟ್, ಸುನಿಲ್ ನರೇನ್ 1 ವಿಕೆಟ್ ಪಡೆದರು. ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರ ಜತೆಗೆ ಕೆಕೆಆರ್ ಫೀಲ್ಡಿಂಗ್ನಲ್ಲೂ ಸುಮಾರು 20 ರನ್ಗಳವರೆಗೂ ರಕ್ಷಿಸಿತು.