logo
ಕನ್ನಡ ಸುದ್ದಿ  /  ಕ್ರಿಕೆಟ್  /  53 ರನ್ ಕೊಟ್ಟ 24.75 ಕೋಟಿ ಪಡೆದ ಮಿಚೆಲ್ ಸ್ಟಾರ್ಕ್; ಪ್ರತಿ ಬಾಲ್​ ಮತ್ತು ಪಂದ್ಯಕ್ಕೆ ಈ ವೇಗಿ ಪಡೆಯುವ ವೇತನವೇಷ್ಟು?

53 ರನ್ ಕೊಟ್ಟ 24.75 ಕೋಟಿ ಪಡೆದ ಮಿಚೆಲ್ ಸ್ಟಾರ್ಕ್; ಪ್ರತಿ ಬಾಲ್​ ಮತ್ತು ಪಂದ್ಯಕ್ಕೆ ಈ ವೇಗಿ ಪಡೆಯುವ ವೇತನವೇಷ್ಟು?

Prasanna Kumar P N HT Kannada

Mar 24, 2024 06:16 PM IST

google News

53 ರನ್ ಚಚ್ಚಿಸಿಕೊಂಡ 24.75 ಕೋಟಿ ಒಡೆಯ ಮಿಚೆಲ್ ಸ್ಟಾರ್ಕ್

    • Mitchell Starc: ಕೋಲ್ಕತ್ತಾ ನೈಟ್​ ರೈಡರ್ಸ್ ಬೌಲರ್​ ಮಿಚೆಲ್ ಸ್ಟಾರ್ಕ್​ ಅವರು ತಮ್ಮ ಐಪಿಎಲ್ ಕಂಬ್ಯಾಕ್ ಪಂದ್ಯದಲ್ಲಿ ವಿಕೆಟ್ ಪಡೆಯದೆ 53 ರನ್ ಬಿಟ್ಟುಕೊಟ್ಟಿದ್ದಾರೆ. ಹಾಗಾದರೆ 24.75 ಕೋಟಿ ಐಪಿಎಲ್ ವೇತನ ಪಡೆಯುವ ಸ್ಟಾರ್ಕ್​ ಅವರು ಪ್ರತಿ ಎಸೆತ, ಪಂದ್ಯಕ್ಕೆ ಪಡೆಯುವ ವೇತನ ಎಷ್ಟು?
53 ರನ್ ಚಚ್ಚಿಸಿಕೊಂಡ 24.75 ಕೋಟಿ ಒಡೆಯ ಮಿಚೆಲ್ ಸ್ಟಾರ್ಕ್
53 ರನ್ ಚಚ್ಚಿಸಿಕೊಂಡ 24.75 ಕೋಟಿ ಒಡೆಯ ಮಿಚೆಲ್ ಸ್ಟಾರ್ಕ್ (AFP)

ಆಸ್ಟ್ರೇಲಿಯಾದ ಯಾರ್ಕರ್ ಸ್ಪೆಷಲಿಸ್ಟ್​ ಮಿಚೆಲ್ ಸ್ಟಾರ್ಕ್ (Mitchell Starc)​ ಅವರು ಐಪಿಎಲ್​ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ. 2023ರ ಡಿಸೆಂಬರ್​​ನಲ್ಲಿ ನಡೆದ ಮಿನಿ ಹರಾಜಿನಲ್ಲಿ 24.75 ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾದರು. ಆದರೆ 2024ರ ಐಪಿಎಲ್​ನಲ್ಲಿ ಅವರು ಕಣಕ್ಕಿಳಿದ ಮೊದಲ ಪಂದ್ಯದಲ್ಲಿ ತೀವ್ರ ನಿರಾಸೆ ಮೂಡಿಸಿದರು. ಸ್ಟಾರ್ಕ್ ಎಸೆದ 4 ಓವರ್​​ಗಳಲ್ಲಿ ವಿಕೆಟ್ ಪಡೆಯದೆ 53 ರನ್ ಬಿಟ್ಟು ಕೊಟ್ಟು ದುಬಾರಿಯಾದರು.

2016ರ ನಂತರ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ಗೆ ವಾಪಾಸ್ಸಾದ ಮಿಚೆಲ್ ಸ್ಟಾರ್ಕ್​, ತನ್ನ ಕಂಬ್ಯಾಕ್ ಪಂದ್ಯದಲ್ಲಿ ಅವರು ಅತ್ಯಂತ ದುಬಾರಿ ಬೌಲಿಂಗ್ ಪ್ರದರ್ಶನ ನೀಡಿದರು. ರನ್ ಸೋರಿಕೆ ಮಾಡಿದ್ದರ ಜೊತೆಗೆ ವಿಕೆಟ್ ಪಡೆಯದ ಮಿಚೆಲ್ ಸ್ಟಾರ್ಕ್​ ವಿರುದ್ಧ ಕೆಕೆಆರ್​ ಅಭಿಮಾನಿಗಳು ಕೋಪಗೊಂಡಿದ್ದಾರೆ. ಕಳಪೆ ಬೌಲಿಂಗ್​ ಮೂಲಕ ಕೆಕೆಆರ್ ಅನ್ನು ಸೋಲಿನ ದವಡೆಗೆ ಸಿಲುಕಿಸಿದ್ದ ಸ್ಟಾರ್ಕ್​ ವಿರುದ್ಧ ಪಡೆದ ಹಣಕ್ಕಾದರೂ ನ್ಯಾಯ ಕೊಡಬೇಕು ಎಂದು ಕಿಡಿಕಾರಿದ್ದಾರೆ.

ಓವರ್​ವೊಂದರಲ್ಲಿ 26 ರನ್ ನೀಡಿದ ಸ್ಟಾರ್ಕ್​

ಕೆಕೆಆರ್​​ ವಿರುದ್ಧದ ಪಂದ್ಯದಲ್ಲಿ ಕೊನೆಯ ಎರಡು ಓವರ್​​ಗಳಲ್ಲಿ ಸನ್​​ರೈಸರ್ಸ್​ ಹೈದರಾಬಾದ್ ಗೆಲ್ಲಲು 39 ರನ್ ಬೇಕಿತ್ತು. ಆಗ 19ನೇ ಓವರ್​ ಎಸೆಯಲು ಬಂದ ಮಿಚೆಲ್ ಸ್ಟಾರ್ಕ್​ ಬಿಟ್ಟುಕೊಟ್ಟಿದ್ದು 4 ಸಿಕ್ಸರ್​ ಸಹಿತ 26 ರನ್. ಇದರೊಂದಿಗೆ ಕೆಕೆಆರ್​ ಸೋಲಿನಂಚಿಗೆ ಬಂದು ಸಿಲುಕಿತ್ತು. ಅಲ್ಲದೆ, ಕೊನೆಯ ಓವರ್​​ನಲ್ಲಿ ಎಸ್​ಆರ್​ಹೆಚ್ ಗೆಲುವಿಗೆ ಕೇವಲ 13 ರನ್ ಬೇಕಾಯಿತು. ಅಂತಿಮ ಓವರ್​​ನಲ್ಲಿ ಹರ್ಷಿತ್ ರಾಣಾ 8 ರನ್ ಬಿಟ್ಟುಕೊಟ್ಟು 4 ರನ್​ಗಳ ರೋಚಕ ಗೆಲುವು ತಂದುಕೊಟ್ಟರು.

ಪ್ರತಿ ಎಸೆತ ಮತ್ತು ಪಂದ್ಯಕ್ಕೆ ಸ್ಟಾರ್ಕ್ ಪಡೆಯುವ ವೇತನವೆಷ್ಟು?

ಐಪಿಎಲ್​​ ಇತಿಹಾಸದಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಬಿಕರಿಯಾದ ಸ್ಟಾರ್ಕ್​ 24.75 ಕೋಟಿ ಪಡೆಯಲಿದ್ದಾರೆ. ಆದರೆ ಅವರು ಪ್ರತಿ ಎಸೆತ, ಪ್ರತಿ ಓವರ್​, ಪ್ರತಿ ಪಂದ್ಯಕ್ಕೆ ಎಷ್ಟು ಹಣ ಪಡೆಯುತ್ತಾರೆ ಎಂಬುದನ್ನು ತಿಳಿದರೆ ಅಚ್ಚರಿಯಾಗುವುದು ಖಚಿತ. ಆಸೀಸ್ ಮಾರಕ ವೇಗಿ 2024ರ ಆವೃತ್ತಿಯ ಲೀಗ್​ ಹಂತದಲ್ಲಿ 14 ಪಂದ್ಯಗಳನ್ನಾಡಲಿದ್ದು, 336 ಎಸೆತಗಳನ್ನು ಎಸೆಯಲಿದ್ದಾರೆ. ಪ್ರತಿ ಪಂದ್ಯದಲ್ಲಿ ನಾಲ್ಕು ಓವರ್​​ಗಳಂತೆ ಟೂರ್ನಿಯಲ್ಲಿ ಒಟ್ಟು 56 ಓವರ್​​ಗಳನ್ನು ಎಸೆಯಲಿದ್ದಾರೆ.

ಐಪಿಎಲ್ ಈ ಋತುವಿನಲ್ಲಿ ಸ್ಟಾರ್ಕ್ ಅವರು ಬೌಲ್ ಮಾಡುವ ಪ್ರತಿ ಎಸೆತಕ್ಕೆ 7,36,607 ರೂಪಾಯಿ ಗಳಿಸುತ್ತಾರೆ. ಒಂದು ವೇಳೆ ಕೆಕೆಆರ್​​ ಪ್ಲೇಆಫ್ ಮತ್ತು ಫೈನಲ್ಸ್ ಪ್ರವೇಶಿಸಿದರೆ ಇದರ ಸಂಖ್ಯೆ 6.44 ಲಕ್ಷಕ್ಕೆ ಇಳಿಯುತ್ತದೆ. ಇದು ಕೆಕೆಆರ್​​ ಪ್ಲೇಆಫ್‌ ಮತ್ತು ಫೈನಲ್ಸ್ ಪ್ರವೇಶಿಸಿದರೆ ಮಾತ್ರ ಸಂಭವಿಸುತ್ತದೆ. ಇನ್ನು ಪ್ರತಿ ಲೀಗ್​ ಪಂದ್ಯಕ್ಕೆ ಸ್ಟಾರ್ಕ್​ ಅವರು 1.76+ ಕೋಟಿ ರೂಪಾಯಿ ವೇತನ ಪಡೆಯುತ್ತಾರೆ. (ಇದು 14 ಲೀಗ್​ ಪಂದ್ಯಗಳಿಗೆ ಮಾಡಲಾದ ಲೆಕ್ಕಾಚಾರ)

ಪಿಎಸ್​ಎಲ್​ನಲ್ಲಿ ದುಬಾರಿ ಆಟಗಾರನಿಗಿಂತ ಹೆಚ್ಚು

ಮಿಚೆಲ್ ಸ್ಟಾರ್ಕ್​ ಅವರಿಗೆ ಒಂದು ಪಂದ್ಯದಲ್ಲಿ ಸಿಗುವ ವೇತನ ಪಾಕಿಸ್ತಾನ ಪ್ರೀಮಿಯರ್ ಲೀಗ್​ನ ದುಬಾರಿ ಆಟಗಾರನಿಂದ ಹೆಚ್ಚು ಎಂಬುದು ವಿಶೇಷ. ಸ್ಟಾರ್ಕ್​ ಒಂದು ಪಂದ್ಯಕ್ಕೆ 1.76+ ಕೋಟಿ ಪಡೆದರೆ, ಪಿಎಸ್​ಎಲ್​ನಲ್ಲಿ ದುಬಾರಿ ಆಟಗಾರನ ಬೆಲೆ 1.4 ಕೋಟಿ ರೂಪಾಯಿ. ಇದು ಸಂಪೂರ್ಣ ಟೂರ್ನಿ ಆಡಿದರೆ ಸಿಗುವ ಮೊತ್ತ. ದಾಖಲೆಯ ಮೊತ್ತ ಪಡೆಯುವ ಸ್ಟಾರ್ಕ್​ ಕಳೆದ ಪಂದ್ಯದಲ್ಲಿ ಎಸೆದ ನಾಲ್ಕು ಓವರ್​ಗಳಲ್ಲಿ 53 ರನ್ ಬಿಟ್ಟುಕೊಟ್ಟಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಅಭ್ಯಾಸದ ವೇಳೆ ಸ್ಟಾರ್ಕ್​ಗೆ​ ಚಚ್ಚಿದ್ದ ರಿಂಕು

ಕೋಲ್ಕತ್ತಾ ನೈಟ್​ ರೈಡರ್ಸ್ ತಂಡವು ಐಪಿಎಲ್​ನಲ್ಲಿ ತನ್ನ ಅಭಿಯಾನ ಆರಂಭಿಸುವುದಕ್ಕೂ ಮುನ್ನ ಅಭ್ಯಾಸ ವೇಳೆ 50 ಲಕ್ಷ ವೇತನ ಪಡೆಯುವ ರಿಂಕು ಸಿಂಗ್ ಅವರು 24.75 ಕೋಟಿ ಒಡೆಯ ಮಿಚೆಲ್ ಸ್ಟಾರ್ಕ್​ಗೆ ಬೆಂಡೆತ್ತಿದ್ದರು. ಆಸ್ಟ್ರೇಲಿಯಾ ವೇಗಿಯ ಬೌಲಿಂಗ್​​ನಲ್ಲಿ ಸಿಕ್ಸರ್​​ಗಳ ಸುರಿಮಳೆಗೈದಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಭ್ಯಾಸದ ವೇಳೆಯೇ ಹೀಗೆ ರನ್ ಬಿಟ್ಟುಕೊಟ್ಟರೆ ಪಂದ್ಯದಲ್ಲಿ ಇನ್ನು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂದು ಅಭಿಮಾನಿಗಳು ಅನುಮಾನ ಪಟ್ಟಿದ್ದರು. ಆದರೀಗ ಅಭಿಮಾನಿಗಳ ಅನುಮಾನ ನಿಜವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ