ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಮಧ್ಯಪ್ರದೇಶ ವಿರುದ್ಧ ಗೆದ್ದ ಮುಂಬೈ ಚಾಂಪಿಯನ್, ರಜತ್ ಪಾಟೀದಾರ್ ಸ್ಫೋಟಕ ಆಟ ವ್ಯರ್ಥ
Dec 15, 2024 08:47 PM IST
ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಮಧ್ಯ ಪ್ರದೇಶ ವಿರುದ್ಧ ಗೆದ್ದ ಮುಂಬೈ ಚಾಂಪಿಯನ್, ರಜತ್ ಪಾಟೀದಾರ್ ಸ್ಫೋಟಕ ಆಟ ವ್ಯರ್ಥ
- Syed Mushtaq Ali Trophy: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಮುಂಬೈ 5 ವಿಕೆಟ್ಗಳ ಗೆಲುವು ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2024-25ರ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡದ ವಿರುದ್ಧ 5 ವಿಕೆಟ್ಗಳಿಂದ ಗೆದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಮುಂಬೈ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಮಧ್ಯಪ್ರದೇಶ ನೀಡಿದ್ದ 175 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಮುಂಬೈ ಸಾಂಘಿಕ ಪ್ರದರ್ಶನದೊಂದಿಗೆ ಎರಡನೇ ಟ್ರೋಫಿಗೆ ಮುತ್ತಿಕ್ಕಿತು. ಇನ್ನೂ 13 ಎಸೆತಗಳನ್ನು ಬಾಕಿ ಉಳಿಸಿ ಗೆಲುವಿನ ನಗೆ ಬೀರಿದೆ. ರಜತ್ ಪಾಟೀದಾರ್ ನೇತೃತ್ವದ ತಂಡದ ಚೊಚ್ಚಲ ಕಪ್ ಗೆಲ್ಲುವ ಕನಸು ಭಗ್ನಗೊಂಡಿದ್ದು, ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಚಿನ್ನಸ್ವಾಮಿಯಲ್ಲಿ ಟಾಸ್ ಗೆದ್ದ ಮುಂಬೈ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಮಧ್ಯಪ್ರದೇಶ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 174 ರನ್ ಪೇರಿಸಿತು. ರಜತ್ ಪಾಟೀದಾರ್ 40 ಎಸೆತಗಳಲ್ಲಿ ಅಜೇಯ 81 ರನ್ ಸಿಡಿಸಿ ಮಿಂಚಿದರೆ ಉಳಿದ ಆಟಗಾರರು ನಿರಾಸೆ ಮೂಡಿಸಿದರು. ಈ ಗುರಿ ಬೆನ್ನಟ್ಟಿದ ಮುಂಬೈ 17.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 180 ರನ್ ಪೇರಿಸಿ ಗೆದ್ದು ಬೀಗಿತು. ಟೂರ್ನಿಯುದ್ದಕ್ಕೂ ಅಬ್ಬರಿಸಿದ ಅಜಿಂಕ್ಯ ರಹಾನೆ ಮತ್ತೆ ಮಿಂಚಿದರು. ರಹಾನೆ 37 ರನ್, ಸೂರ್ಯಕುಮಾರ್ 478 ರನ್, ಸೂರ್ಯಂಶು ಹೆಗ್ಡೆ ಅಜೇಯ 36 ರನ್ ಚಚ್ಚಿ ಮಧ್ಯ ಪ್ರದೇಶ ಟ್ರೋಫಿ ಕನಸಿಗೆ ಅಡ್ಡಿಯಾದರು.
ರಜತ್ ಪಾಟೀದಾರ್ ಹೋರಾಟ ವ್ಯರ್ಥ
ಮೊದಲು ಬ್ಯಾಟಿಂಗ್ ಮಡಿದ ಮಧ್ಯಪ್ರದೇಶದ ಪರ ರಜತ್ ಪಾಟೀದಾರ್ ಮಾತ್ರ ಅಬ್ಬರದ ಪ್ರದರ್ಶನ ನೀಡಿದರು. ಆರಂಭಿಕರಾಗಿ ಕಣಕ್ಕಿಳಿದ ಅರ್ಪಿತ್ ಗೌಡ್ (3), ಹರ್ಷ ಗಾವ್ಲಿ (2) ಮೊದಲ ಎರಡು ಓವರ್ಗಳಲ್ಲೇ ವಿಕೆಟ್ ಒಪ್ಪಿಸಿದರು. ಇವರಿಬ್ಬರಿಗೆ ಶಾರ್ದೂಲ್ ಠಾಕೂರ್ ಗೇಟ್ ಪಾಸ್ ನೀಡಿದರು. ಸುಭ್ರಾಂಶು ಸೇನಾಪತಿ 23, ಹರ್‌ಪ್ರೀತ್ ಸಿಂಗ್ 15 ರನ್ ಸಿಡಿಸಿ ತಂಡಕ್ಕೆ ಆಸರೆಯಾಗಲು ಯತ್ನಿಸಿದರು. ಆದರೆ, ಶಿವಂ ದುಬೆ ಮತ್ತು ಅಥರ್ವ ಅಂಕೋಲೇಕರ್ ಈ ಇಬ್ಬರನ್ನೂ ಔಟ್ ಮಾಡಿದರು. ಇದರ ನಡುವೆ ರಜತ್ ಪಾಟೀದಾರ್ ಅಬ್ಬರಿಸಿ ಬೊಬ್ಬಿರಿದರು. ಕೇವಲ 40 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಹಿತ ಅಜೇಯ 81 ರನ್ ಚಚ್ಚಿದರು. ಮತ್ತೊಂದೆಡೆ ವೆಂಕಟೇಶ್ ಅಯ್ಯರ್ 17, ರಾಹುಲ್ ಬಾಥಮ್ 19 ರನ್ ಗಳಿಸಿ ನಿರಾಸೆ ಮೂಡಿಸಿದರು.
ಸೂರ್ಯ, ಸೂರ್ಯಾಂಶು ಅಬ್ಬರಕ್ಕೆ ಮಧ್ಯಪ್ರದೇಶ ತತ್ತರ
175 ರನ್ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡ ಆರಂಭದಲ್ಲೇ ಪೃಥ್ವಿ ಶಾ (10) ವಿಕೆಟ್ ಕಳೆದುಕೊಂಡರೆ, ನಾಯಕ ಶ್ರೇಯಸ್ ಅಯ್ಯರ್ 17 ರನ್ ಗಳಿಸಿ ನಿರಾಸೆ ಮೂಡಿಸಿದರು. ಇದರ ನಡುವೆಯೂ 37 ರನ್ ಸಿಡಿಸಿ ರಹಾನೆ ಮಿಂಚಿ ತಂಡಕ್ಕೆ ಆಸರೆಯಾದರು. ಅಲ್ಲದೆ, ಸೂರ್ಯಕುಮಾರ್ ಜತೆಗೆ ಅರ್ಧಶತಕದ ಜೊತೆಯಾಟ ಕೂಡ ಆಡಿದರು. ಮತ್ತೊಂದೆಡೆ ಸೂರ್ಯ ಬೆಂಕಿ ಬಿರುಗಾಳಿ ಬ್ಯಾಟಿಂಗ್ ನಡೆಸಿದರು. ಪರಿಣಾಮ 35 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ 48 ರನ್ ಚಚ್ಚಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿಟ್ಟರು. ಕೊನೆಯಲ್ಲಿ 15 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 36 ರನ್ ಬಾರಿಸಿ ಗೆಲುವಿನ ದಡ ಸೇರಿಸಿದರು. ಆದರೆ ಶಿವಂ ದುಬೆ 9 ರನ್ ಸಿಡಿಸಿದರು.